Hyderabad gang-rape case: ಅಪ್ರಾಪ್ತ ಆರೋಪಿಗಳನ್ನು ವಯಸ್ಕರಂತೆ ವಿಚಾರಣೆ ನಡೆಸಲು ಪೊಲೀಸರ ಕೋರಿಕೆ

By Sharath SharmaFirst Published Jun 9, 2022, 12:15 PM IST
Highlights

Hyderabad minor gang-rape case: ಹೈದರಾಬಾದ್‌ ಅಪ್ರಾಪ್ತ ಯುವಕಿಯ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳು ಅಪ್ರಾಪ್ತರಾಗಿದ್ದರೂ ಅವರನ್ನು ವಯಸ್ಕರಂತೆ ಪರಿಗಣಿಸಬೇಕು ಎಂದು ಹೈದರಾಬಾದ್‌ ಪೊಲೀಸರು ಕೋರಿದ್ದಾರೆ. ಈ ಸಂಬಂಧ ಬಾಲಾಪರಾಧಿ ನ್ಯಾಯಾಲಯ ಮನವಿಯನ್ನು ಪರಿಗಣಿಸಬಹುದು ಅಥವಾ ಪರಿಗಣಿಸದೇ ಇರಬಹುದು.

ಹೈದರಾಬಾದ್‌: ಹೈದರಾಬಾದ್‌ ಪೊಲೀಸ್‌ ಇಲಾಖೆ ಅಪ್ರಾಪ್ತ ಬಾಲಕಿಯ ಸಾಮೂಹಿಕ ಅತ್ಯಾಚಾರ ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸಿದೆ. ಇದೀಗ ಪ್ರಕರಣದಲ್ಲಿ ಭಾಗಿಯಾಗಿರುವ ಅಪ್ರಾಪ್ತ ಆರೋಪಿಗಳನ್ನು ಜುವನೈಲ್‌ ಕಾಯ್ದೆಯಾಚೆಗೆ ವಿಚಾರಣೆ ನಡೆಸಲು ನ್ಯಾಯಾಲಯಕ್ಕೆ ಮನವಿ ಮಾಡಿದೆ. ನ್ಯಾಯಾಲಯ ಈ ಬಗ್ಗೆ ಇನ್ನೂ ತೀರ್ಪು ನೀಡಿಲ್ಲ. ಅಪ್ರಾಪ್ತ ವಯಸ್ಕರಾದರೂ ಮಾಡಿರುವ ಕೃತ್ಯ ಘೋರವಾಗಿರುವ ಹಿನ್ನೆಲೆ ಅವರನ್ನು ದೊಡ್ಡವರು ಎಂದು ಪರಿಗಣಿಸಿ, ಎಲ್ಲ ಆರೋಪಿಗಳಂತೆ ಅವರನ್ನೂ ಪ್ರಾಸಿಕ್ಯೂಟ್‌ ಮಾಡಲು ಅನುಮತಿ ಕೊಡಿ ಎಂದು ಪೊಲೀಸರು ಕೋರಿದ್ದಾರೆ. ಜತೆಗೆ ಎಲ್ಲರೂ 17 ವರ್ಷದವರಾಗಿದ್ದು ಕೆಲ ತಿಂಗಳುಗಳಲ್ಲಿ 18 ವರ್ಷಕ್ಕೆ ಕಾಲಿಡಲಿದ್ದಾರೆ. ಬಾಲಾಪರಾಧಿ ನ್ಯಾಯಾಲಯ ಈ ಸಂಬಂಧ ನಿರ್ಧಾರ ತೆಗೆದುಕೊಳ್ಳಬೇಕಿದೆ. 

ಏನಿದು ಪ್ರಕರಣ?:

ಕಾರಿನಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳನ್ನು ಸಾಮೂಹಿಕ ಅತ್ಯಾಚಾರ (Gang rape) ಮಾಡಿದ ಘಟನೆ ಹೈದರಾಬಾದಿನಲ್ಲಿ ಕಳೆದ ಮೇ 28ರಂದು ನಡೆದಿದೆ. ಪ್ರಕರಣದಲ್ಲಿ ಆರೋಪಿಗಳು ಪ್ರಭಾವಿ ರಾಜಕಾರಣಿಗಳ ಮಕ್ಕಳಾಗಿದ್ದು, ಶಾಸಕನ ಮಗನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ನಂತರ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದ್ದು, ನಿನ್ನೆ ಗದಗದಲ್ಲಿ ಎಐಎಂಐಎಂ ಶಾಸಕನ ಮಗನನ್ನು ಬಂಧಿಸಲಾಗಿತ್ತು. ಪೊಲೀಸ್‌ ಮೂಲಗಳ ಮಾಹಿತಿ ಪ್ರಕಾರ ಮರ್ಸಿಡಿಸ್‌ ಕಾರಿನಲ್ಲಿ ಅಪ್ರಾಪ್ತ ಬಾಲಕಿಯನ್ನು ಎಳೆದೊಯ್ದು ನಂತರ ಇನ್ನೊಂದು ಕಾರಿನಲ್ಲಿ ಶಾಸಕನ ಮಗ ಮತ್ತು ಉಳಿದ ಆರೋಪಿಗಳು ಅತ್ಯಾಚಾರ ಮಾಡಿದ್ದಾರೆ. 

ಹೈದರಾಬಾದಿನ ಜುಬಿಲೀ ಹಿಲ್ಸ್‌ ಠಾಣೆಯಲ್ಲಿ (Hyderabad Jubilee Hills police station) ಜೂನ್‌ 1ರಂದು ಪ್ರಕರಣ ದಾಖಲಾಗಿದ್ದು ಆರೋಪಿಗಳ ವಿಚಾರಣೆ ಆರಂಭವಾಗಿದೆ. ಆರಂಭದಲ್ಲಿ ಸೆಕ್ಷನ್‌ 354ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಈಗ ಪೋಕ್ಸೊ ಕಾಯ್ದೆಯಡಿಯೂ ಎಫ್‌ಐಆರ್‌ (First Information Report) ಮಾಡಲಾಗಿದೆ. 

17 ವರ್ಷದ ಸಂತ್ರಸ್ತೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಪೋಕ್ಸೊ (Prevention of Children from Sexual Offences Act) ಜೊತೆ ಸೆಕ್ಷನ್‌ 376 (ಸಾಮೂಹಿಕ ಅತ್ಯಾಚಾರ) ಪ್ರಕರಣವನ್ನೂ ದಾಖಲಿಸಲಾಗಿದೆ. ಮೂವರು ಆರೋಪಿಗಳ ವಿರುದ್ಧ ಕೇಸ್‌ ಆಗಿದ್ದು, ಅವರಿಗಾಗಿ ಹುಡುಕಾಟ ನಡೆಯುತ್ತಿದೆ. 

ಇದನ್ನೂ ಓದಿ: ಅಯ್ಯೋ ವಿಧಿಯೇ... ಜನ್ಮದಾತನ ಬಳಿಯೂ ಹೆಣ್ಣು ಸುರಕ್ಷಿತಳಲ್ಲ: ಪೊಲೀಸರಿಂದ ತಂದೆಯ ಬಂಧನ

ಪೊಲೀಸ್‌ ಅಧಿಕಾರಿಗಳ ಪ್ರಕಾರ, ಶಾಸಕನ ಮಗ ಮತ್ತು ಅಲ್ಪಸಂಖ್ಯಾತ ಇಲಾಖೆಯ ಮುಖ್ಯಸ್ಥರ ಮಗ ಸಂತ್ರಸ್ತೆ ಭಾಗಿಯಾಗಿದ್ದ ಪಾರ್ಟಿಯಲ್ಲಿದ್ದರು. ಯುವತಿ ಶಾಸಕನ ಮಗನ ಹೆಸರನ್ನು ಮಾತ್ರ ಗುರುತಿಸಿದ್ದಳು, ಇನ್ನಿಬ್ಬರ ಹೆಸರು ಮತ್ತು ಪರಿಚಯ ಆಕೆಗಿರಲಿಲ್ಲ. ಆದರೆ ತನಿಖೆಯ ನಂತರ ಆರೋಪಿಗಳ ಗುರುತು ಪತ್ತೆ ಹಚ್ಚಿದ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿದ್ದಾರೆ. 

ಬಿಜೆಪಿ ಶಾಸಕನ ಮೇಲೆ ಪ್ರಕರಣ:

 

ಹೈದರಾಬಾದಿನಲ್ಲಿ ಕಳೆದ ತಿಂಗಳ ಅಂತ್ಯದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ (Hyderabad gang-rape case) ಸಂಬಂಧಿಸಿದಂತೆ ಸಂತ್ರಸ್ತೆಯ ಗುರುತು ಬಹಿರಂಗಪಡಿಸಿದ ಹಿನ್ನೆಲೆ ಬಿಜೆಪಿ ಶಾಸಕನ ಮೇಲೆ ಪ್ರಕರಣ ದಾಖಲಿಸಲಾಗಿದೆ. ಸುಪ್ರೀಂ ಕೋರ್ಟ್‌ (Supreme Court Order) ಆದೇಶದ ಅನ್ವಯ ಸಂತ್ರಸ್ತೆಯ ಹೆಸರು, ಭಾವಚಿತ್ರ, ವಿಡಿಯೋ, ವಿಳಾಸ ಸೇರಿದಂತೆ ಸಂತ್ರಸ್ತೆಗೆ ಸಂಬಂಧಿಸಿದ ಯಾವ ವಿಚಾರವನ್ನೂ ಬಹಿರಂಗ ಮಾಡುವಂತಿಲ್ಲ. ಸುಪ್ರೀಂ ಕೋರ್ಟ್‌ ತೀರ್ಪಿನ ವಿರುದ್ಧವಾಗಿ ಸಂತ್ರಸ್ತೆಯ ಗುರುತು ಬಹಿರಂಗ ಮಾಡಿದ ಆರೋಪದ ಮೇಲೆ ಇದೀಗ ಅಬಿಡ್‌ ಠಾಣೆಯ ಪೊಲೀಸರು ಬಿಜೆಪಿ ಶಾಸಕನ ಮೇಲೆ ಎಫ್‌ಐಆರ್‌ ದಾಖಲಿಸಿದ್ಧಾರೆ. 

ಇದನ್ನೂ ಓದಿ: Hyderabad gang-rape case: ಸಂತ್ರಸ್ತೆಯ ವಿಡಿಯೋ ಸೋರಿಕೆ, ಬಿಜೆಪಿ MLA ಮೇಲೆ ಎಫ್‌ಐಆರ್‌

ಬಿಜೆಪಿ ಶಾಸಕನ ಮೇಲೆ ಸೆಕ್ಷನ್‌ 228A (ಲೈಂಗಿಕ ದೌರ್ಜನ್ಯ ಸಂತ್ರಸ್ತೆಯ (Sexual offence victim) ಗುರುತನ್ನು/ಖಾಸಗಿತನವನ್ನು ಸಾರ್ವಜನಿಕ ವಲಯದಲ್ಲಿ ಹರಿ ಬಿಡುವುದನ್ನು ತಡೆಯುವ ಕಾಯ್ದೆ) ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. "ಹೈದರಾಬಾದಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆ ನಡೆಯುತ್ತಿರುವ ವೇಳೆ, ಸಂತ್ರಸ್ತೆಯ ಘನತೆಗೆ ಧಕ್ಕೆ ತರುವಂತೆ ಸಂತ್ರಸ್ತೆಯ ಗುರುತನ್ನು ಮಾಧ್ಯಮಕ್ಕೆ ಸೋರಿಕೆ ಮಾಡಿರುವುದು ಮತ್ತು ನ್ಯಾಯಾಂಗ ವ್ಯವಸ್ಥೆಯ ಆದೇಶದ ವಿರುದ್ಧ ಕೆಲಸ ಮಾಡಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದರಿಂದ ಸಂತ್ರಸ್ತೆಯ ಚಾರಿತ್ರ್ಯವಧೆಯಾಗಿದ್ದು, ಬಿಜೆಪಿ ಶಾಸಕರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ," ಎಂದು ಎಫ್‌ಐಆರ್‌ನಲ್ಲಿ (First Information Report) ನಮೂದಿಸಲಾಗಿದೆ.

(ಸಂತ್ರಸ್ತೆಯ ಹೆಸರು, ಗುರುತು ಅಥವಾ ಯಾವುದೇ ರೀತಿಯ ಐಡೆಂಟಿಟಿಯನ್ನೂ ಈ ಲೇಖನದಲ್ಲಿ ನೀಡಿಲ್ಲ. ಮಾನ್ಯ ಕೋರ್ಟ್‌ ನಿರ್ದೇಶನದಂತೆ ಸಂತ್ರಸ್ತೆಯ ಪರಿಚಯವನ್ನು ಗುಪ್ತವಾಗಿ ಇಡಲಾಗಿದೆ)

click me!