
ಬೆಂಗಳೂರು(ಜೂ.09): ‘ಪ್ರಿಯ ಬೆಸ್ಕಾಂ ಗ್ರಾಹಕರೇ, ನೀವು ನಿಮ್ಮ ವಿದ್ಯುತ್ ಬಿಲ್ ಪಾವತಿಸದ ಕಾರಣ ನಿಮ್ಮ ವಿದ್ಯುತ್ ಸಂಪರ್ಕವನ್ನು ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಕಡಿತಗೊಳಿಸಲಾಗುವುದು. ತಕ್ಷಣ ನಮ್ಮ ವಿದ್ಯುತ್ ಅಧಿಕಾರಿಯ (ಮೊಬೈಲ್ ಸಂಖ್ಯೆ) ಈ ಸಂಖ್ಯೆಗೆ ಕರೆ ಮಾಡಿ ವಿದ್ಯುತ್ ಶುಲ್ಕ ಪಾವತಿಸಿ’. ಹೀಗೆ ‘ಬೆಸ್ಕಾಂ’ ಹೆಸರಿನಲ್ಲಿ ಯಾವುದೇ ಖಾಸಗಿ ವ್ಯಕ್ತಿಗೆ ಸಂಪರ್ಕಿಸುವಂತೆ ಮೊಬೈಲ್ ಸಂದೇಶ ಅಥವಾ ಕರೆ ಬಂದರೆ ಎಚ್ಚರ!
ಏಕೆಂದರೆ, ದಕ್ಷಿಣ ಕರ್ನಾಟಕದ 8 ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಬೆಸ್ಕಾಂ ಹೆಸರಿನಲ್ಲಿ ಇಂತಹ ಸಂದೇಶಗಳನ್ನು ಕಳುಹಿಸಿ ಹಣ ದೋಚುತ್ತಿರುವ ಆನ್‌ಲೈನ್ ವಂಚನೆ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ವ್ಯವಸ್ಥಿತ ವಂಚನಾ ಜಾಲವೇ ಕೆಲಸ ಮಾಡುತ್ತಿರುವುದರಿಂದ ಗ್ರಾಹಕರು ಎಚ್ಚರ ವಹಿಸಿ ಬೆಸ್ಕಾಂ ಅಧಿಕೃತವಾಗಿ ಮಾಡಿರುವ ಪಾವತಿ ವ್ಯವಸೆÜ್ಥಗಳ ಮೂಲಕ ಮಾತ್ರವೇ ಶುಲ್ಕ ಪಾವತಿಸಿ ಎಂದು ಬೆಸ್ಕಾಂ ಮನವಿ ಮಾಡಿದೆ.
ಈ ಬಗ್ಗೆ ಸೈಬರ್ ಪೊಲೀಸರಿಗೂ ದೂರು ನೀಡಲಾಗಿದೆ. ಬೆಸ್ಕಾಂ ಹೆಸರಿನಲ್ಲಿ ಯಾವುದೇ ವ್ಯಕ್ತಿ ಫೋನ್ ಪೇ, ಗೂಗಲ್ ಪೇ ಮೂಲಕ ಶುಲ್ಕದ ಹಣ ಕಳುಹಿಸುವಂತೆ ಬೇಡಿಕೆ ಇಟ್ಟರೆ ಕೂಡಲೇ ಬೆಸ್ಕಾಂ ಸಹಾಯವಾಣಿ 1912 ಗೆ ಮಾಹಿತಿ ನೀಡಿ ಎಂದು ಬೆಸ್ಕಾಂ ಅಧಿಕಾರಿಗಳು ಮನವಿ ಮಾಡಿದ್ದಾರೆ.
ನಿರ್ದಿಷ್ಟ ಆಯ್ಕೆ ಮೂಲವೇ ಶುಲ್ಕ ಪಾವತಿಸಿ:
ಬೆಸ್ಕಾಂ ಬಿಲ್ ನೀಡಿದ ಬಳಿಕ ಪಾವತಿಗೆ 1 ತಿಂಗಳವರೆಗೆ ಸಮಯಾವಕಾಶ ಇರುತ್ತದೆ. ಜತೆಗೆ ಬಿಲ್ ಪಾವತಿಸುವಂತೆ ಬೆಸ್ಕಾಂನಿಂದ ಯಾರೂ ದೂರವಾಣಿ ಕರೆ ಮಾಡಲ್ಲ. ಹೀಗಾಗಿ ಯಾವುದೇ ಖಾಸಗಿ ವ್ಯಕ್ತಿಗೆ ಬೆಸ್ಕಾಂ ಶುಲ್ಕ ಸಂದಾಯ ಮಾಡಬೇಡಿ. ಬದಲಿಗೆ, ಬೆಸ್ಕಾಂ ಸೂಚಿಸಿರುವ ಪಾವತಿ ಕೇಂದ್ರಗಳಾದ ಬೆಂಗಳೂರು ಒನ್ ಕೇಂದ್ರ, ಬೆಸ್ಕಾಂ ಮಿತ್ರ ಆ್ಯಪ್, ಹತ್ತಿರದ ಬೆಸ್ಕಾಂ ಕಚೇರಿ, ಬೆಸ್ಕಾಂ ವೆಬ್‌ಸೈಟ್, ಗೂಗಲ್ ಪೇ, ಪೋನ್ ಪೇ ಆ್ಯಪ್‌ಗಳಲ್ಲಿ ಮಾತ್ರ ಪಾವತಿಸಬೇಕು. ಅನಧಿಕೃತ ವ್ಯಕ್ತಿಗಳಿಗೆ ಕರೆ ಅಥವಾ ಸಂದೇಶ ಬಂದರೆ ಕೂಡಲೇ ಬೆಸ್ಕಾಂ ಸಹಾಯವಾಣಿಗೆ ದೂರು ನೀಡಬೇಕು ಎಂದು ಬೆಸ್ಕಾಂನ ಗ್ರಾಹಕ ವ್ಯವಹಾರಗಳ ವಿಭಾಗದ ಪ್ರಧಾನ ವ್ಯವಸ್ಥಾಪಕ ಎಸ್.ಆರ್. ನಾಗರಾಜ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ