* ಖಾಲಿ ನಿವೇಶನಗಳ ಬಗ್ಗೆ ಸಬ್ ರಿಜಿಸ್ಟ್ರರ್ ಕಚೇರಿಗಳಲ್ಲಿ ಮಾಹಿತಿ ಸಂಗ್ರಹ
* ನಕಲಿ ಮಾಲೀಕರ ಹೆಸರಿನಲ್ಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ
* ವಿದೇಶದಲ್ಲಿ ನೆಲೆಸಿರುವವರ ಖಾಲಿ ನಿವೇಶನಗಳೇ ಟಾರ್ಗೆಟ್
ಬೆಂಗಳೂರು(ಜೂ.09): ಖಾಲಿ ನಿವೇಶನಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಮಹಿಳೆ ಸೇರಿದಂತೆ ಐವರನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಾಗಡಿ ರಸ್ತೆಯ ಅಗ್ರಹಾರ ದಾಸರಹಳ್ಳಿಯ ರೇಣುಗೋಪಾಲ್ ಅಲಿಯಾಸ್ ವೇಣುಗೋಪಾಲ್, ಗೌರಮ್ಮ ಅಲಿಯಾಸ್ ಟಿ.ಜಯಲಕ್ಷ್ಮಿ, ಶಂಕರ್ ಅಲಿಯಾಸ್ ಟಿ.ನಾಗರಾಜ್, ರಾಜಾಜಿನಗರದ ಎಂ.ಪ್ರಕಾಶ್ ಹಾಗೂ ವಿದ್ಯಾರಣ್ಯಪುರದ ಶಾಂತರಾಜ್ ಬಂಧಿತರಾಗಿದ್ದು, ಆರೋಪಿಗಳಿಂದ ನಕಲಿ ಆಧಾರ್, ಪ್ಯಾನ್, ಬ್ಯಾಂಕ್ ಪುಸ್ತಕ ಮತ್ತು ನೋಂದಾಯಿತ ಕಾಗದ ಪತ್ರ ವಶಪಡಿಸಿಕೊಳ್ಳಲಾಗಿದೆ.
2015ರಲ್ಲಿ ಯಲಹಂಕದ ಚಿಕ್ಕಬೆಟ್ಟಹಳ್ಳಿಯ ಶ್ರೀ ಸಾಯಿ ಲೇಔಟ್‌ನಲ್ಲಿ ಕುವೈತ್‌ನಲ್ಲಿ ನೆಲೆಸಿರುವ ಉದ್ಯಮಿ ಕಾರ್ತಿಕ್ ಅವರಿಗೆ ಸೇರಿದ ನಿವೇಶನವನ್ನು ಆರೋಪಿಗಳು ಕಬಳಿಸಿದ್ದರು. ಈ ಬಗ್ಗೆ ಕಾರ್ತಿಕ್ ಭಾಮೈದ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ರಿಯಲ್ ಎಸ್ಟೇಟ್ ಏಜೆಂಟ್ ರೇಣುಗೋಪಾಲ್, ನಗರ ವ್ಯಾಪ್ತಿಯ ಖಾಲಿ ನಿವೇಶನಗಳ ಬಗ್ಗೆ ಸಬ್ ರಿಜಿಸ್ಟ್ರರ್ ಕಚೇರಿಗಳಲ್ಲಿ ಮಾಹಿತಿ ಕಲೆ ಹಾಕುತ್ತಿದ್ದ. ಬಳಿಕ ಆ ನಿವೇಶನಗಳಿಗೆ ನಕಲಿ ಮಾಲೀಕರ ಹೆಸರಿನಲ್ಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಿದ್ದ. ಈ ಕೃತ್ಯಕ್ಕೆ ಹಣದಾಸೆಗೆ ಇನ್ನುಳಿದ ನಾಲ್ವರು ಸಾಥ್ ಕೊಟ್ಟಿದ್ದರು. ಅಂತೆಯೇ ಕುವೈತ್‌ನಲ್ಲಿ ನೆಲೆಸಿರುವ ಉದ್ಯಮಿ ಕಾರ್ತಿಕ್ ಅವರ ಖಾಲಿ ನಿವೇಶನಕ್ಕೂ ಆರೋಪಿಗಳು ಬೇಲಿ ಹಾಕಿದ್ದರು. ಆ ನಿವೇಶನಕ್ಕೆ ಸಂಬಂಧಿಸಿದ ಭೂ ದಾಖಲೆಗಳ ನಕಲಿ ಪ್ರತಿಯನ್ನು ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಪಡೆದ ಆರೋಪಿಗಳು, 2016ರಲ್ಲಿ ನಾಗರಾಜು ಮತ್ತು ಜಯಲಕ್ಷ್ಮಿ ಕಡೆಯಿಂದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ರೇಣುಗೋಪಾಲ್ ದಾನ ಪತ್ರ ಪಡೆದಂತೆ ದಾಖಲೆ ಸೃಷ್ಟಿಸಿದ್ದರು. ನಂತರ ರೇಣುಗೋಪಾಲ್, 2019ರಲ್ಲಿ ಬಿ.ಭಾಸ್ಕರ್ ಎಂಬಾತನಿಗೆ ಕ್ರಯ ಪತ್ರ ಮಾಡಿದ್ದ. ಅದನ್ನು 2020ರಲ್ಲಿ ಮುನಿಲಕ್ಷ್ಮಮ್ಮ ಮತ್ತು ಕುಶಾಲ್ ಅವರಿಗೆ ಭಾಸ್ಕರ್ ಮಾರಾಟ ಮಾಡಿದಂತೆ ದಾಖಲೆಗಳು ಸೃಷ್ಟಿಯಾಗಿದ್ದವು. ಅಂತೆಯೇ ಇದೇ ವರ್ಷದ ಜನವರಿಯಲ್ಲಿ ಕಾರ್ತಿಕ್ ನಿವೇಶನದಲ್ಲಿ ಮನೆ ಕಟ್ಟಲು ಮುನಿಲಕ್ಷ್ಮಮ್ಮ ದಂಪತಿ ಮುಂದಾಗಿದ್ದರು. ಈ ವಿಷಯ ತಿಳಿದ ಕಾರ್ತಿಕ್ ಭಾಮೈದ ರಂಜಿತ್, ನಿವೇಶನದ ಬಳಿಗೆ ಬಂದು ವಿಚಾರಿಸಿದಾಗ ವಂಚನೆ ವಿಚಾರ ಗೊತ್ತಾಗಿದೆ. ಕೂಡಲೇ ಈ ಬಗ್ಗೆ ವಿದ್ಯಾರಣ್ಯಪುರ ಠಾಣೆಗೆ ಅವರು ದೂರು ನೀಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖಾಲಿ ಸೈಟ್‌ಗೆ ಬೇಲಿ ಹಾಕುವ ಶೂರ
ಖಾಲಿ ಸೈಟ್‌ಗಳಿಗೆ ಬೇಲಿ ಹಾಕುವುದಕ್ಕೆ ರೇಣುಗೋಪಾಲ್ ಕುಖ್ಯಾತನಾಗಿದ್ದು, ಅದರಲ್ಲೂ ಅನಿವಾಸಿ ಭಾರತೀಯರಿಗೆ ಸೇರಿದ ನಿವೇಶನಗಳೇ ಆತನ ಗುರಿಯಾಗಿದ್ದವು. 2017-18ರಲ್ಲಿ ಕೆಂಗೇರಿಯ ವಳಗೇರಹಳ್ಳಿ ಸೈಟನ್ನು ಮಾರಾಟ ಮಾಡಿದ್ದ. ಈ ಪ್ರಕರಣ ಸಂಬಂಧ ಆತನನ್ನು ಕೆಂಗೇರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.