
ಭುವನೇಶ್ವರ: ಮದುವೆ ಮನೆಗೆ ಪಾರ್ಸೆಲ್ ಬಾಂಬ್ ಕಳುಹಿಸಿ ಮದುಮಗ ಹಾಗೂ ಆತನ ದೊಡ್ಡಮ್ಮನ ಸಾವಿಗೆ ಕಾರಣವಾದ ಒಡಿಶಾದ ಕಾಲೇಜೊಂದರ ಮಾಜಿ ಪ್ರಾಂಶುಪಾಲರೊಬ್ಬರಿಗೆ ಜೀವಾವಧಿ ಶಿಕ್ಷೆ ನೀಡಿ ಸ್ಥಳೀಯ ನ್ಯಾಯಾಲಯ ಆದೇಶಿಸಿದೆ. ಬೋಲಂಗಿರ್ ಜಿಲ್ಲೆಯ ಪಟ್ನಗಢದ ಜ್ಯೋತಿ ವಿಕಾಸ್ ಜೂನಿಯರ್ ಕಾಲೇಜಿನ ಮಾಜಿ ಪ್ರಾಂಶುಪಾಲ 56 ವರ್ಷದ ಪುಂಜಿಲಾಲ್ ಮೆಹರ್ ಶಿಕ್ಷೆಗೊಳಗಾದವರು. ಈ ದುರಂತದಲ್ಲಿ ಮದುಮಗ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಸೌಮ್ಯ ಶೇಖರ್ ಸಾಹು ಮತ್ತು ಅವರ ದೊಡ್ಡಮ್ಮ ಜೆಮಾಮಣಿ ಸಾಹು ಸಾವನ್ನಪ್ಪಿದ್ದರು.
7 ವರ್ಷದ ಹಿಂದೆ 2018ರ ಫೆಬ್ರವರಿ 23ರಂದು ನಡೆದ ಘಟನೆ ಇದಾಗಿದೆ. ತಮ್ಮ ಬದಲು ಮದುಮಗ ಸೌಮ್ಯ ಶೇಖರ್ ಸಾಹು ಅವರ ತಾಯಿಯನ್ನು ಪ್ರಾಂಶುಪಾಲರಾಗಿ ನೇಮಕ ಮಾಡಿದರು ಎಂಬ ವೃತ್ತಿ ದ್ವೇಷದಿಂದ ಪುಂಜಿಲಾಲ್ ಮೆಹರ್ ಆಕೆಯ ಮಗನ ಮದುವೆಗೆ ಗಿಫ್ಟ್ ರೂಪದಲ್ಲಿ ಪಾರ್ಸೆಲ್ ಬಾಂಬ್ ಕಳುಹಿಸಿದ್ದರು. ಅದು ಬಿಚ್ಚುವ ವೇಳೆ ಸ್ಪೋಟಗೊಂಡು ಸೌಮ್ಯ ಸಾಹು ಹಾಗೂ ಅವರ ದೊಡ್ಡಮ್ಮ ಗಾಯಗೊಂಡಿದ್ದರೆ, ಮದುಮಗಳಾದ ರೀಮಾ ಘಟನೆಯಲ್ಲಿ ಗಾಯಗೊಂಡಿದ್ದರು. ಭಾರತದ ಮೊದಲ ಪಾರ್ಸೆಲ್ ಬಾಂಬ್ ಸ್ಫೋಟ ಪ್ರಕರಣ ಇದಾಗಿತ್ತು.
ಸೌಮ್ಯ ಸಾಹುವಿನ ತಾಯಿಯನ್ನು ಪ್ರಾಂಶುಪಾಲರನ್ನಾಗಿ ನೇಮಿಸಿದ್ದಕ್ಕೆ, ಅವರ ಮೇಲಿನ ವೃತ್ತಿಪರ ಅಸೂಯೆಯಿಂದ ಮೆಹರ್ ಈ ಕೊಲೆಯನ್ನು ಮಾಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪುಂಜಿಲಾಲ್ ಮೆಹರ್ ವಿರುದ್ಧ ಕೊಲೆ, ಕೊಲೆ ಯತ್ನ ಮತ್ತು ಸ್ಫೋಟಕಗಳ ಬಳಕೆಯ ಆರೋಪ ಸಾಬೀತಾಗಿದ್ದು, ಆತ ತಪ್ಪಿತಸ್ಥನೆಂದು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಬೋಲಂಗೀರ್‌ನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಕೊಲೆ ಘೋರ ಅಪರಾಧ ಎಂಬ ಪ್ರಾಸಿಕ್ಯೂಷನ್‌ನ ವಾದವನ್ನು ಒಪ್ಪಿಕೊಂಡಿತು ಆದರೆ ಅದನ್ನು ಮರಣದಂಡನೆಗೆ ಅರ್ಹವಾದ ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ವರ್ಗೀಕರಿಸಲು ನಿರಾಕರಿಸಿತು. ಪ್ರಕರಣದ ಅಪರಾಧಿಗೆ 50,000 ರೂ. ದಂಡವನ್ನೂ ವಿಧಿಸಿತು.
ಈ ಘಟನೆ ಫೆಬ್ರವರಿ 23, 2018 ರಂದು ನಡೆದಿದ್ದು, ಸಾಹು ಅವರ ಮದುವೆಯಾದ ಕೆಲವು ದಿನಗಳ ನಂತರ ಅವರ ಕುಟುಂಬಕ್ಕೆ ಪಾರ್ಸೆಲ್ ರೂಪದಲ್ಲಿ ಉಡುಗೊರೆ ಸಿಕ್ಕಿತು. ಸಾಹು ಪಾರ್ಸೆಲ್ ತೆರೆಯುತ್ತಿದ್ದಂತೆ, ಅದರೊಳಗಿನ ಬಾಂಬ್ ಸ್ಫೋಟಗೊಂಡು, ಅವರು ಮತ್ತು ಅವರ ದೊಡ್ಡಮ್ಮ ಸ್ಥಳದಲ್ಲೇ ಸಾವನ್ನಪ್ಪಿದರು. ಸ್ಫೋಟದಲ್ಲಿ ಅವರ ಪತ್ನಿ ರೀಮಾ ಗಂಭೀರವಾಗಿ ಗಾಯಗೊಂಡಿದ್ದರು.
ಸ್ಫೋಟದ ತೀವ್ರತೆ ಎಷ್ಟು ಪ್ರಬಲವಾಗಿತ್ತೆಂದರೆ ಅವರ ಮನೆಯ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡವು. ಸಾಹುವಿನ ಪೋಷಕರನ್ನೂ ಸಹ ಈ ಘಟನೆ ತೀವ್ರ ಆಘಾತಕ್ಕೀಡು ಮಾಡಿತು. ಆರಂಭದಲ್ಲಿ ಈ ಪ್ರಕರಣವನ್ನು ಸ್ಥಳೀಯ ಪೊಲೀಸರು ನಿರ್ವಹಿಸುತ್ತಿದ್ದರು, ನಂತರ ಭಾರೀ ಗಲಾಟೆಯ ನಂತರ ರಾಜ್ಯ ಅಪರಾಧ ದಳಕ್ಕೆ ಪ್ರಕರಣವನ್ನು ಹಸ್ತಾಂತರಿಸಲಾಯಿತು.
ಆಗಿನ ಇನ್ಸ್‌ಪೆಕ್ಟರ್ ಜನರಲ್ ಅರುಣ್ ಬೋತ್ರಾ ನೇತೃತ್ವದ ಅಪರಾಧ ವಿಭಾಗದ ಪೊಲೀಸರಿಗೆ ವಿಚಾರಣೆಯ ನಂತರ ಈ ಪಾರ್ಸೆಲನ್ನು ಛತ್ತೀಸ್‌ಗಢದ ರಾಯ್‌ಪುರದಿಂದ ಕಳುಹಿಸಲಾಗಿದೆ ಎಂಬುದು ತಿಳಿದು ಬಂತು. ಇದಾದ ನಂತರ ಕೊಲೆಯ ಹಿಂದಿನ ಸಂಭಾವ್ಯ ಉದ್ದೇಶಗಳು ದ್ರೋಹ ಮತ್ತು ಆರ್ಥಿಕ ನಷ್ಟ ಎಂದು ಸೂಚಿಸುವ ಅನಾಮಧೇಯ ಪತ್ರವೂ ನಂತರದಲ್ಲಿ ಬೋಲಂಗೀರ್ ಪೊಲೀಸರಿಗೆ ಸಿಕ್ಕಿತ್ತು.
ಇದಾದ ನಂತರ ಫೆಬ್ರವರಿ 2019ರಲ್ಲಿ, ಅಪರಾಧ ವಿಭಾಗವು ಆರೋಪಿ ಮೆಹರ್‌ನನ್ನು ಬಂಧಿಸಿತು. ನಂತರ ವಿಚಾರಣೆ ನಡೆಸಿದಾಗ ವೃತ್ತಿಪರ ಅಸೂಯೆಯಿಂದ ಈ ಕೃತ್ಯ ಎಸಗಿರುವುದಾಗಿ ಆತ ಬಾಯ್ಬಿಟ್ಟಿದ್ದಾನೆ. ತನ್ನ ಬದಲು ಸಾಹು ಅವರ ತಾಯಿಯನ್ನು ಕಾಲೇಜು ಪ್ರಾಂಶುಪಾಲರಾಗಿ ಬದಲಾಯಿಸಿದ ನಂತರ ಕೋಪಗೊಂಡಿದ್ದಾಗಿ ಆತ ಹೇಳಿದ್ದ. ಅಲ್ಲದೇ ತನಿಖಾ ಸಂಸ್ಥೆಗಳ ಕೈಗೆ ಸಿಗದಂತೆ ತಪ್ಪಿಸಿಕೊಳ್ಳಲು ಆತ ಈ ಬಾಂಬ್ ಪ್ಯಾಕೇಜ್ ಪೋಸ್ಟ್ ಮಾಡಲು ಮೊಬೈಲ್ ಫೋನ್ ಮತ್ತು ರೈಲು ಟಿಕೆಟ್ ಇಲ್ಲದೆ ರಾಯ್‌ಪುರಕ್ಕೆ ಪ್ರಯಾಣಿಸಿ, ಅದೇ ದಿನ ಒಡಿಶಾಗೆ ಮರಳಿದ್ದ ಎಂದು ವಿಚಾರಣೆ ವೇಳೆ ಆತ ಹೇಳಿಕೊಂಡಿದ್ದ. ಒಟ್ಟಿನಲ್ಲಿ ಯಾರದೋ ಮೇಲಿನ ದ್ವೇಷದಿಂದ ಆಗಷ್ಟೇ ನವಜೀವನಕ್ಕೆ ಕಾಲಿರಿಸಿದ ವದು ಹಾಗೂ ವರರ ಬದುಕು ಕ್ಷಣದಲ್ಲಿ ಧ್ವಂಸಗೊಂಡಿದ್ದು ದುರಂತವೇ ಸರಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ