ಅಕ್ರಮ ಸಂಬಂಧ ಬಯಲು; ಹೆಂಡತಿಯ ಮೇಲೆ ಕಾರು ಹತ್ತಿಸಿದ ಸಿನೆಮಾ ನಿರ್ಮಾಪಕ

By Sharath Sharma Kalagaru  |  First Published Oct 27, 2022, 12:38 PM IST

Film Maker rams into wife: ಮುಂಬೈನ ಸಿನೆಮಾ ನಿರ್ಮಾಪಕನೊಬ್ಬ ಹೆಂಡತಿಯ ಮೇಲೆ ಕಾರು ಹರಿಸಿರುವ ಘಟನೆ ನಡೆದಿದೆ. ಇನ್ನೊಬ್ಬ ಮಹಿಳೆಯ ಜೊತೆ ಇದ್ದಾಗ ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದ ಮಿಶ್ರಾ ತಪ್ಪಿಸಿಕೊಳ್ಳುವ ಬರದಲ್ಲಿ ಹೆಂಡತಿಯ ಮೇಲೆ ಕಾರು ಹರಿಸಿದ್ದಾನೆ. 


ಮುಂಬೈ: ಪ್ರೇಯಸಿ ಜೊತೆ ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದ ಸಿನೆಮಾ ನಿರ್ಮಾಪಕ ಕಮಲ್‌ ಕಿಶೋರ್‌ ಮಿಶ್ರಾ ಹೆಂಡತಿಯ ಮೇಲೆ ಕಾರು ಹತ್ತಿಸಿದ್ದಾನೆ. ಅಪಾರ್ಟ್‌ಮೆಂಟ್‌ ಒಂದರ ಕಾರ್‌ ಪಾರ್ಕಿಂಗ್‌ ಏರಿಯಾದಲ್ಲಿ ಕಾರಿನೊಳಗೆ ಮಹಿಳೆಯೊಬ್ಬಳ ಜೊತೆ ಮಿಶ್ರಾ ಇದ್ದಿದ್ದನ್ನು ಹೆಂಡತಿ ನೋಡಿದ್ದಾಳೆ. ತಕ್ಷಣವೇ ಕಾರು ಬಳಿ ಓಡಿ ಹೋಗಿ ಕಾರಿನ ಬಾಗಿಲು ತೆಗೆಯಲು ಹೆಂಡತಿ ಯತ್ನಿಸುತ್ತಾಳೆ. ತಕ್ಷಣ ಕಾರನ್ನು ಮುಂದೆ ಚಲಿಸಿ ಅಲ್ಲಿ ತಪ್ಪಿಸಿಕೊಳ್ಳಲು ಯತ್ನಿಸುವ ಮಿಶ್ರಾ ಹೆಂಡತಿಯ ಕಾಲುಗಳ ಮೇಲೆ ಕಾರು ಹತ್ತಿಸಿಕೊಂಡು ಹೋಗಿದ್ದಾನೆ. ಪಾರ್ಕಿಂಗ್‌ನಲ್ಲಿದ್ದ ಜನ ಅವರನ್ನು ರಕ್ಷಿಸಲು ಯತ್ನಿಸಿದರಾದರೂ ಕಾರು ಆಕೆಯ ಮೇಲೆ ಹರಿದು ಹೋಗಿತ್ತು. ಮಿಶ್ರಾ ಪತ್ನಿ ಕಾಲುಗಳು, ಕೈ ಮತ್ತು ತಲೆಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಈ ಘಟನೆ ಅಕ್ಟೋಬರ್‌ 19ರಂದು ನಡೆದಿದ್ದು ಇಡೀ ದೃಶ್ಯಾವಳಿ ಅಪಾರ್ಟ್‌ಮೆಂಟ್‌ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಮಿಶ್ರಾ ಪತ್ನಿ ಅಂಧೇರಿ ಪಶ್ಚಿಮ ಪೊಲೀಸ್‌ ವಲಯದ ಅಂಬೋಲಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಂಬೋಲಿ ಪೊಲೀಸರು ಪ್ರಕರಣದ ಮಾಹಿತಿ ನೀಡಿದ್ದು, ಗಂಡನನ್ನು ಹುಡುಕಿಕೊಂಡು ಮಿಶ್ರಾ ಪತ್ನಿ ಹೋದಾಗ ಪಾರ್ಕಿಂಗ್‌ ಲಾಟ್‌ನಲ್ಲಿ ಇನ್ನೊಂದು ಮಹಿಳೆ ಜೊತೆ ಮಿಶ್ರಾ ಕಾರಿನಲ್ಲಿ ಕುಳಿತಿದ್ದ. ಅವನ್ನು ಪ್ರಶ್ನಿಸಲು ಹೋದಾಗ ಆತ ಅಲ್ಲಿಂದ ತಪ್ಪಿಸಿಕೊಳ್ಳಲು ಆಕೆಯ ಮೇಲೆ ಕಾರು ಹತ್ತಿಸಿಕೊಂಡು ಮುನ್ನಡೆದಿದ್ದಾನೆ. 

Tap to resize

Latest Videos

"ಆಕೆಯಿಂದ ತಪ್ಪಿಸಿಕೊಳ್ಳಲು ಮಿಶ್ರಾ ಯತ್ನಿಸುವ ವೇಳೆ ಆಕೆಯ ಮೇಲೆ ಕಾರು ಹರಿಸಿದ್ದಾನೆ. ಇದರಿಂದ ಅವರ ಕಾಲುಗಳು, ಕೈ ಮತ್ತು ತಲೆಗೆ ಗಾಯಗಳಾಗಿವೆ," ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದೂರಿನ ಆಧಾರದ ಮೇಲೆ ಕಮಲ್‌ ಕುಮಾರ್‌ ಮಿಶ್ರಾ ವಿರುದ್ಧ IPC 279, IPC 337 ಅಡಿ ಪ್ರಕರಣ ದಾಖಲಿಸಲಾಗಿದೆ. ಮಿಶ್ರಾಗೆ ಪೊಲೀಸರು ನೊಟೀಸ್‌ ನೀಡಿದ್ದು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ಕಮಲ್‌ ಮಿಶ್ರಾ ದೇಹತಿ ಡಿಸ್ಕೊ ಎಂಬ ಸಿನೆಮಾವನ್ನು ನಿರ್ಮಾಣ ಮಾಡಿದ್ದರು. 

ಹೆಂಡತಿ ಆತ್ಮಹತ್ಯೆ ವಿಡಿಯೋ ಮಾಡಿದ ಗಂಡ:

ಉತ್ತರ ಪ್ರದೇಶದಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು ಹೆಂಡತಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಗಂಡನೇ ವಿಡಿಯೋ ಮಾಡಿದ್ದಾನೆ. ನಂತರ ಆಕೆ ಸತ್ತ ಬಳಿಕ ವಿಡಿಯೋವನ್ನು ಆಕೆಯ ಕುಟುಂಬಸ್ಥರಿಗೆ ತೋರಿಸಿದ್ದಾನೆ. ಸಂಜಯ್‌ ಗುಪ್ತಾ ಎಂಬುವವನೇ ಹೆಂಡತಿಯ ಸಾವನ್ನು ವಿಡಿಯೋ ಮಾಡಿ ವಿಕೃತಿ ಮೆರೆದಿರುವ ಗಂಡ. ಮೃತಳನ್ನು ಶೋಭಿತಾ ಗುಪ್ತಾ ಎಂದು ಗುರುತಿಸಲಾಗಿದೆ. ಅವರಿಬ್ಬರಿಗೂ ಮದುವೆಯಾಗಿ ನಾಲ್ಕು ವರ್ಷಗಳಾಗಿತ್ತು. ಸಂಜಯ್‌ ಗುಪ್ತಾ ತನ್ನ ಪತ್ನಿ ರೂಮಿನ ಫ್ಯಾನ್‌ಗೆ ನೇಣು ಹಾಕಿ ಕೊಳ್ಳುವುದನ್ನು ಚಿತ್ರೀಕರಿಸಿದ್ದಾನೆ. ಆಕೆಯನ್ನು ತಡೆಯುವ ಪ್ರಯತ್ನವನ್ನೂ ಮಾಡಿಲ್ಲ. ನಂತರ ಆಕೆ ಮೃತಪಟ್ಟಿದ್ದಾಳೆ. 

ಆಕೆ ನೇಣು ಬಿಗಿದುಕೊಂಡ ನಂತರವೂ ಆತ ತಡೆಯಲು ಅಥವಾ ರಕ್ಷಿಸಲು ಪ್ರಯತ್ನಿಸಿಲ್ಲ. ವಿಡಿಯೋದಲ್ಲಿ ಆತ ಮಾತನಾಡುತ್ತಿರುವುದು ಕೇಳಿಸುತ್ತದೆ. "ಗ್ರೇಟ್‌, ಇದು ನಿನ್ನ ಮನಸ್ಥಿತಿ. ನೀನು ತುಂಬಾ ಬಡ ಮನಸ್ಥಿತಿಯನ್ನು ಹೊಂದಿದ್ದೀಯಾ," ಎನ್ನುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಆಕೆ ಆ ಹೊತ್ತಿಗೆ ಇನ್ನೇನು ಜೀವ ಬಿಡುವ ಹಂತದಲ್ಲಿದ್ದಳು.

ಇದನ್ನೂ ಓದಿ: Mumbai: "ಕ್ಯಾ ಐಟಂ..." ಎಂದು ಹದಿಹರೆಯದ ಬಾಲಕಿಗೆ ಕಿರುಕುಳ ನೀಡಿದ ವ್ಯಕ್ತಿಗೆ ಜೈಲು ಶಿಕ್ಷೆ..! 

ಶೋಭಿತಾ ತಂದೆ ರಾಜ್‌ ಕಿಶೋರ್‌ ಗುಪ್ತಾಗೆ ಸಂಜಯ್‌ ಕರೆ ಮಾಡಿ, ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮಾಹಿತಿ ನೀಡಿದ್ದಾನೆ. ಓಡೋಡಿ ಬಂದ ಪೋಷಕರು ಮಗಳು ಬೆಡ್‌ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡಿದೆ. ಆಕೆ ನೇಣು ಹಾಕಿಕೊಂಡ ನಂತರ ಸಿಪಿಆರ್‌ ಮಾಡಿರುವುದಾಗಿ ಸಂಜಯ್‌ ಗುಪ್ತಾ ಹೇಳಿದ್ದಾನೆ. ಆದರೆ ಅಷ್ಟರಲ್ಲಾಗಲೇ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಈ ಮೊದಲೂ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಳು ಆಗ ನಾನು ರಕ್ಷಿಸಿದ್ದೆ ಎಂದು ಸಂಜಯ್‌ ಗುಪ್ತಾ ಹೇಳಿದ್ದಾನೆ. ಆದರೆ ಶೋಭಿತಾ ಪೋಷಕರು, ಸಿಪಿಆರ್‌ ಮಾಡುವ ಬದಲು ಆಸ್ಪತ್ರೆಗೇಕೆ ಕರೆದೊಯ್ಯಲಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ನಂತರ ಆಕೆಯನ್ನು ಪೋಷಕರು ಆಸ್ಪತ್ರೆಗೆ ಕರೆದೊಯ್ದಾಗ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ. ನಂತರ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. 

ಇದನ್ನೂ ಓದಿ: ಮಂಡ್ಯ: ಮಳವಳ್ಳಿ ಬಾಲಕಿ ರೇಪ್ ಅಂಡ್ ಮರ್ಡರ್ ಕೇಸ್‌, ಜಾರ್ಜ್‌ಶೀಟ್ ಸಲ್ಲಿಕೆ

ಶೋಭಿತಾ ಸಾವಿನಲ್ಲಿ ಸಂಜಯ್‌ ಗುಪ್ತಾ ಪಾತ್ರವೇನು ಎಂಬುದರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆತ್ಮಹತ್ಯೆಗೆ ವೈವಾಹಿಕ ಕಲಹ ಕಾರಣವಾ ಅಥವಾ ಬೇರಾವುದೇ ಕಾರಣ ಇರಬಹುದು. ಆದರೆ ಒಬ್ಬ ವ್ಯಕ್ತಿ ಕಣ್ಣ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ ತಡೆಯುವ ಬದಲು ವಿಡಿಯೋ ಮಾಡುವಂತಾ ವಿಕೃತಿ ಸಂಜಯ್‌ ತೋರಿದ್ದಾನೆ. ಇದೊಂದೇ ಸಾಕು ಆತ ಆಕೆಯ ಸಾವಿಗೆ ಕಾರಣ ಎಂದು ಬಿಡಿಸಿ ಹೇಳಬೇಕಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಂಜಯ್‌ನನ್ನು ವಿಚಾರಣೆಗೊಳಪಡಿಸಿದ್ದಾರೆ. 

click me!