ಕುಡಿತದ ದಾಸನಾಗಿದ್ದ ಪಾಪಿ ಪತಿಯೊಬ್ಬ ಪತ್ನಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾಗ ಹಿಂಬಾಲಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಹಾಕಿರುವ ದಾರುಣ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚೀಕನಹಳ್ಳಿಯಲ್ಲಿ ನಡೆದಿದೆ.
ವರದಿ: ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್
ಹಾಸನ (ಸೆ.6): ಕುಡಿತದ ದಾಸನಾಗಿದ್ದ ಪಾಪಿ ಪತಿಯೊಬ್ಬ, ಕೇಳಿದಾಗಲೆಲ್ಲಾ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನೆ ಕೊಲೆ ಮಾಡಿದ್ದಾನೆ. ಕಾಫಿ ತೋಟದ ಕೆಲಸಕ್ಕೆ ಹೋಗುತ್ತಿದ್ದ ಪತ್ನಿಯನ್ನು ಬೆಳ್ಳಂಬೆಳಗ್ಗೆ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾನೆ. ಈ ಘಟನೆ ನಡೆದಿರೋದು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚೀಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಇಂದ್ರಮ್ಮ(48) ಕೊಲೆಯಾದ ನತದೃಷ್ಟೆ. ಇಂದ್ರಮ್ಮನನ್ನು ರಕ್ಷಣೆ ಮಾಡಲು ಹೋದ ಮಹಿಳೆ ಮೇಲೂ ಹಲ್ಲೆ ನಡೆಸಿ ಚಂದ್ರಯ್ಯ ಎಂಬ ದುರುಳ ಪರಾರಿಯಾಗಿದ್ದಾನೆ. ಇಂದ್ರಮ್ಮ ಎಂದಿನಂತೆ ಇಂದು ಬೆಳಗ್ಗೆ ನಾಲ್ಕು ಮಂದಿ ಇತರೆ ಮಹಿಳೆಯರೊಂದಿಗೆ ಕೇಶವ ಮೂರ್ತಿ ಎಂಬುವರ ಕಾಫಿ ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದರು. ಈ ವೇಳೆ ಮಾರಕಾಸ್ತ್ರ ಹಿಡಿದು ದಾರಿಯಲ್ಲಿ ಹೊಂಚು ಹಾಕಿ ಕಾದಿದ್ದ ಚಂದ್ರಯ್ಯ, ಪತ್ನಿ ಇತರರು ಮುಂದೆ ಹೋಗುತ್ತಿದ್ದಂತೆಯೇ ಹಿಂದಿನಿಂದ ಹೋಗಿ ಮನಸೋ ಇಚ್ಛೆ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ಮಚ್ಚಿನಿಂದ ಮನ ಬಂದಂತೆ ಕೊಚ್ಚಿದ್ದಾನೆ. ಈ ವೇಳೆ ಇಂದ್ರಮ್ಮನನ್ನು ರಕ್ಷಿಸಲು ಬಂದ ಜೊತೆಯಲ್ಲಿದ್ದ ಮಹಿಳೆ ಮೇಲೂ ಹಲ್ಲೆ ಮಾಡಿದ್ದಾನೆ. ಉಳಿದ ಮಹಿಳೆಯರಿಗೆ ಮಚ್ಚು ತೋರಿಸಿದ್ದಾನೆ. ಇದರಿಂದ ಹೆದರಿದ ಮಹಿಳೆಯರು ಕೂಗಿಕೊಳ್ಳಲು ಆರಂಭಿಸುತ್ತಿದ್ದಂತೆಯೇ ಇದನ್ನು ಕೇಳಿ ನೆರೆ ಹೊರೆಯವರು ಸ್ಥಳಕ್ಕೆ ಬಂದಿದ್ದಾರೆ. ಕೂಡಲೇ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ.
ಹಿಂದೆಯೂ ಕೊಲೆಗೆ ಯತ್ನಿಸಿದ್ದ: ಕುಡಿತದ ದಾಸನಾಗಿದ್ದ ಚಂದ್ರಯ್ಯ, ಹಣಕ್ಕಾಗಿ ಪದೇ ಪದೇ ಪತ್ನಿಯನ್ನು ಪೀಡಿಸುತ್ತಿದ್ದ.
ಕುಡಿಯುವುದಕ್ಕಾಗಿಯೇ ಚೀಕನಹಳ್ಳಿ ಸಹಕಾರ ಸಂಘದಲ್ಲಿ ಮನೆಯವರಿಗೆ ತಿಳಿಯದ ಹಾಗೆ ಸಾಲ ಪಡೆದಿದ್ದ ಎನ್ನಲಾಗಿದೆ. ಇದರ ಜೊತೆಗೆ ಅನೇಕರ ಬಳಿ ಕೈ ಸಾಲ ಮಾಡಿಕೊಂಡಿದ್ದ. ಹಣದ ಕೊರತೆ ಎದುರಾದಾಗಲೆಲ್ಲಾ ಹಣ ಕೊಡುವಂತೆ ಪತ್ನಿಯನ್ನು ಸತಾಯಿಸುತ್ತಿದ್ದ.
ಆಕೆ ನಿರಾಕರಿಸಿದಾಗ ಕುಡಿದು ಬಂದು ಜಗಳ ಕಾಯುತ್ತಿದ್ದ.
ಇದೇ ಕಾರಣಕ್ಕೆ ಆರು ತಿಂಗಳ ಹಿಂದೆಯೂ ಮನೆ ಹಿಂದಿನ ಕೊಟ್ಟಿಗೆಯಲ್ಲಿ ಇಂದ್ರಮ್ಮಳನ್ನು ನೇಣು ಹಾಕಿ ಕೊಲ್ಲಲು ಯತ್ನಿಸಿದ್ದ. ಇತ್ತೀಚೆಗೂ ಮಚ್ಚಿನಿಂದ ಕೊಚ್ಚಿ ಸಾಯಿಸಲು ಹೋಗಿದ್ದ. ಆಗಿನಿಂದ ಪತಿ-ಪತ್ನಿ ಇಬ್ಬರೂ ಮಾತನಾಡುತ್ತಿರಲಿಲ್ಲ ಎನ್ನಲಾಗಿದೆ. ಆದರೆ ಹಿಂದೆ ಕೆಲವು ಬಾರಿ ಅಪಾಯದಿಂದ ಬಚಾವ್ ಆಗಿದ್ದ ಇಂದ್ರಮ್ಮ, ಇಂದು ಕೊಲೆಯಾಗಿದ್ದಾಳೆ.
ಒಲ್ಲದ ಮದುವೆ; ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ನವವಿವಾಹಿತೆ!
ಗಂಡನ ಜೀವ ಉಳಿಸಿದ್ದ ಪತ್ನಿ: ಯಾವುದೇ ಕೆಲಸ ಮಾಡದೆ ಕುಡಿದು ಉಂಡಾಡಿ ಗುಂಡನಂತೆ ಓಡಾಡಿಕೊಂಡಿದ್ದ ಚಂದ್ರಯ್ಯ, ಕುಡಿಯುದನ್ನು ಬಿಟ್ಟು ಬೇರೇನೂ ಮಾಡುತ್ತಿರಲಿಲ್ಲ. ಕೆಲ ತಿಂಗಳ ಹಿಂದೆ ಬೆನ್ನು ನೋವು ಎಂದು ಹಾಸಿಗೆ ಹಿಡಿದಿದ್ದವನನ್ನು ಪತ್ನಿ ಹಾಗೂ ಚೀಕನಹಳ್ಳಿ ಗ್ರಾಪಂ ಸದಸ್ಯನಾಗಿರುವ ಮಗ ಪ್ರದೀಪ್ ಸೇರಿ ಲಕ್ಷಾಂತರ ರೂ. ಖರ್ಚು ಮಾಡಿ ಗುಣಪಡಿಸಿದ್ದರು. ಹೀಗಿದ್ದರೂ, ಪತ್ನಿಯನ್ನು ನಿರ್ದಯವಾಗಿ ಕೊಲೆ ಮಾಡಿದ್ದಾನೆ. ಸುದ್ದಿ ತಿಳಿದು ಅರೇಹಳ್ಳಿ ಪಿಎಸ್‌ಐ ಸುರೇಶ್, ಬೇಲೂರು ಸಿಪಿಐ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಇಬ್ಬಿಬ್ಬರ ಜತೆ ಏಕಕಾಲದಲ್ಲಿ ಆಕೆಯ ಲವ್ವಿಡವ್ವಿ! ಇದೊಂದು ಪಕ್ಕಾ ಕಿತ್ತೋದ್ ಲವ್ ಸ್ಟೋರಿ!
ತಂದೆಗೆ ತಕ್ಕ ಶಿಕ್ಷೆಯಾಗಲಿ ಇಂದ್ರಮ್ಮಳ ಮಗನ ಒತ್ತಾಯ
ಅನಾರೋಗ್ಯಕ್ಕೆ ತುತ್ತಾಗಿದ್ದ ತಂದೆಯನ್ನು ನಾನು ಅಮ್ಮ ಸೇರಿ ಉಷಾರು ಮಾಡಿಸಿದ್ದೆವು. ಆದರೂ ಬದಲಾಗದ ಅವರು, ಕೆಲ ದಿನಗಳ ಹಿಂದೆ ತಾಯಿಯನ್ನು ಕೊಲೆ ಮಾಡಲು ಹೋಗಿದ್ದರು. ಮನೆಯವರೆಲ್ಲಾ ಸೇರಿ ತಡೆದು ಅವರಿಗೆ ಬುದ್ಧವಾದ ಹೇಳಿದ್ದೆವು. ಆದರೂ ಅವರು ಬದಲಾಗಿರಲಿಲ್ಲ. ನನ್ನ ತಾಯಿ ಜೊತೆ ಮಾತು ಬಿಟ್ಟಿದ್ದರು. ಇಂದು ನಾನು ಮನೆ ಕೆಲಸ ಮಾಡಿಸುತ್ತಿದ್ದೆ. ತಾಯಿ ಬೆಳಗ್ಗೆ ಎಂದಿನಂತೆ ಕೆಲಸ ಹೋಗಿದ್ದಾಗ ಹಿಂಬಾಲಿಸಿ ಕೊಲೆ ಮಾಡಿದ್ದಾರೆ. ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಇಂದ್ರಮ್ಮರ ಪುತ್ರ ಪ್ರದೀಪ್ ಒತ್ತಾಯಿಸಿದ್ದಾನೆ.