CCB Raid: ಪರಪ್ಪನ ಅಗ್ರಹಾರ ಜೈಲಲ್ಲಿ ಗಾಂಜಾ..!

By Kannadaprabha News  |  First Published Dec 1, 2021, 6:42 AM IST

*  30 ಗ್ರಾಂ ಗಾಂಜಾ, ಚುಟ್ಟಾ ಕೊಳವೆ ವಶ
*  3 ತಿಂಗಳ ಹಿಂದೆ ಭಾರೀ ಪ್ರಮಾಣದಲ್ಲಿ ಡ್ರಗ್ಸ್‌, ಮೊಬೈಲ್‌ ವಶ
*  ಜೈಲಿಂದಲೇ ಅನೈತಿಕ ಚುಟವಟಿಕೆ ನಿಯಂತ್ರಣ ಸುಳಿವು ಆಧರಿಸಿ ದಾಳಿ
 


ಬೆಂಗಳೂರು(ಡಿ.01):  ಅಕ್ರಮ ಚಟುವಟಿಕೆಗಳ ಶಂಕೆ ಮೇರೆಗೆ ಪರಪ್ಪನ ಅಗ್ರಹಾರ(Parappana Agrahara) ಕೇಂದ್ರ ಕಾರಾಗೃಹದ ಮೇಲೆ ಮಂಗಳವಾರ ಮುಂಜಾನೆ ದಿಢೀರ್‌ ದಾಳಿ(Raid) ನಡೆಸಿದ ಕಾರಾಗೃಹ ಇಲಾಖೆ ಅಧಿಕಾರಿಗಳು ಹಾಗೂ ಸಿಸಿಬಿ(CCB) ಪೊಲೀಸರು, ಜೈಲಿನಲ್ಲಿ ಮತ್ತೆ ಗಾಂಜಾ ಹಾಗೂ ಚುಟ್ಟಾಸೇವನೆಯ ಕೊಳವೆಗಳನ್ನು ಜಪ್ತಿ ಮಾಡಿದ್ದಾರೆ.

ಸಜಾ ಕೈದಿಗಳ ಬ್ಲಾಕ್‌ನ ‘ಬಿ’ ಬ್ಯಾರೆಕ್‌ನ ಸಜಾ ಕೈದಿ(Prisoner) ಮಂಜುನಾಥ್‌ ಸೆಲ್‌ನಲ್ಲಿ 10 ಗ್ರಾಂ ಹಾಗೂ ಅನುಕುಮಾರ್‌ನ ಸೆಲ್‌ನಲ್ಲಿ 20 ಗ್ರಾಂ ಗಾಂಜಾ(Marijuana) ಹಾಗೂ ಚುಟ್ಟಾ ಸೇವನೆಯ ಕೊಳವೆಗಳನ್ನು ಜಪ್ತಿ ಮಾಡಲಾಗಿದೆ. ಈ ಇಬ್ಬರ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌(FIR) ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Latest Videos

undefined

350 Kg ಗಾಂಜಾ ಜೊತೆ ಸಿಕ್ಕಿಬಿದ್ದವನಿಗೆ ಜಾಮೀನು

ಮೂರು ತಿಂಗಳ ಹಿಂದೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ(Central Prison) ಮೇಲೆ ಅಪಾರ ಪ್ರಮಾಣದ ಗಾಂಜಾ ಹಾಗೂ ಮೊಬೈಲನ್ನು ಸಿಸಿಬಿ ಜಪ್ತಿ ಮಾಡಿದ್ದರು. ಆದರೆ ಮಂಗಳವಾರದ ಕಾರ್ಯಾಚರಣೆಯಲ್ಲಿ ನಿರೀಕ್ಷಿತ ಪ್ರಮಾಣದ ಮಾದಕ ವಸ್ತು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐದು ತಾಸು ಪರಿಶೀಲಿಸಿದ ಸಿಸಿಬಿ:

ಇತ್ತೀಚಿನ ಕೋರಮಂಗಲದ ರೌಡಿ ಜೋಸೆಫ್‌ ಅಲಿಯಾಸ್‌ ಬಬ್ಲಿ ಕೊಲೆ(Murder) ಸೇರಿದಂತೆ ಕೆಲವು ಅಪರಾಧ ಕೃತ್ಯಗಳಿಗೆ ಜೈಲಿನಿಂದ ಕೆಲವರು ಸುಪಾರಿ ಕೊಟ್ಟಿದ್ದ ಸಂಗತಿ ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಅಲ್ಲದೆ, ಜೈಲಿನಲ್ಲಿದ್ದುಕೊಂಡೇ ಹೊರಗೆ ಕಾನೂನುಬಾಹಿರ ಚಟುವಟಿಕೆಯಲ್ಲಿ ನಡೆಸಿರುವುದು ಹಾಗೂ ಜೈಲಿನಲ್ಲಿ ಮಾದಕ ವಸ್ತು ಸೇವನೆ ಮತ್ತು ಮೊಬೈಲ್‌ ಬಳಕೆ ಮಾಡುತ್ತಿರುವ ಕುರಿತು ಮಾಹಿತಿ ಸಿಕ್ಕಿತು. ಈ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಅನಿರೀಕ್ಷಿತ ದಾಳಿಗೆ ಯೋಜಿಸಲಾಯಿತು.

ಅಂತೆಯೇ ಜೈಲಿನಲ್ಲಿ ಬೆಳಗ್ಗೆ 5 ಗಂಟೆಗೆ ಕಾರಾಗೃಹದ ಅಧಿಕಾರಿಗಳ ಜತೆ ಜಂಟಿ ಪೊಲೀಸ್‌ ಆಯುಕ್ತ (Crime) ಸಂದೀಪ್‌ ಪಾಟೀಲ್‌(Sandip Pattil) ನೇತೃತ್ವದಲ್ಲಿ ಇಬ್ಬರು ಡಿಸಿಪಿಗಳು, ಮೂವರು ಎಸಿಪಿ ಹಾಗೂ 15 ಇನ್‌ಸ್ಪೆಕ್ಟರ್‌ಗಳ ತಂಡ ಜಂಟಿ ಕಾರ್ಯಾಚರಣೆ ನಡೆಸಿತು. ಕಾರಾಗೃಹದೊಳಗೆ ಶ್ವಾನ ದಳ ಜತೆ ಸತತ 5 ತಾಸುಗಳ ಪರಿಶೀಲನೆ ನಡೆಸಲಾಯಿತು. ಆಗ ಆ ವೇಳೆ ದರೋಡೆ ಪ್ರಕರಣದ ಸಜಾ ಕೈದಿ ಮಂಜುನಾಥ್‌ ಹಾಗೂ ಕೊಲೆ ಪ್ರಕರಣದ ಕೈದಿ ಅನುಕುಮಾರ್‌ನ ಸೆಲ್‌ನಲ್ಲಿ ಮಾತ್ರ ಗಾಂಜಾ ಪತ್ತೆಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ರಮ ಗಾಂಜಾ ಮಾರಾಟ : ಮೂವರು ಅರೆಸ್ಟ್

15 ನಿಮಿಷ ಕಾಯಿಸಿ ಗೇಟ್‌ ತೆರೆದ ಜೈಲು ಸಿಬ್ಬಂದಿ

ಅನಿರೀಕ್ಷಿತ ದಾಳಿಗೆ ಸಜ್ಜಾಗಿ ಬಂದ ಸಿಸಿಬಿ ತಂಡವನ್ನು ಜೈಲಿನೊಳಗೆ(Jail) ಬಿಡಲು ಮಂಗಳವಾರ ಮುಂಜಾನೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಸಿಬ್ಬಂದಿ ಸುಮಾರು 15 ನಿಮಿಷಗಳು ತಡ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕಾರಾಗೃಹದ ಮುಖ್ಯ ದ್ವಾರದಲ್ಲಿ ಜಂಟಿ ಆಯುಕ್ತ ಸಂದೀಪ್‌ ಪಾಟೀಲ್‌ ಹಾಗೂ ಡಿಸಿಪಿ ಅವರನ್ನು ನಿಲ್ಲಿಸಿದ ಕಾರಾಗೃಹದ ಸಿಬ್ಬಂದಿ, ಗೇಟ್‌ ಬೀಗ ಕೀ ಸಿಗುತ್ತಿಲ್ಲ ಎಂದಿದ್ದಾರೆ. ಈ ಮಾತಿಗೆ ಜಂಟಿ ಆಯುಕ್ತರು ಗರಂ ಆಗಿದ್ದಾರೆ. ಆಗ ಎಚ್ಚೆತ್ತ ಸಿಬ್ಬಂದಿ, ಕೀ ಹುಡುಕಿದಂತೆ ಮಾಡಿ 15 ನಿಮಿಷಗಳ ನಂತರ ಕೊನೆಗೆ ಗೇಟ್‌ ತೆಗೆದಿದ್ದಾರೆ. ಬಳಿಕ ಪ್ರವೇಶದ ದ್ವಾರದಲ್ಲಿ ಸಂದರ್ಶಕರ ಪುಸ್ತಕಕ್ಕೆ ಸಹಿ ಮಾಡಿ ಸಿಸಿಬಿ ಅಧಿಕಾರಿಗಳು ಜೈಲಿನ ಬ್ಯಾರೆಕ್‌ಗಳಿಗೆ ತೆರಳುವ ವೇಳೆಗೆ 25 ನಿಮಿಷವಾಗಿತ್ತು. ಅಷ್ಟರಲ್ಲಿ ದಾಳಿ ವಿಚಾರ ಕೈದಿಗಳಿಗೆ ಗೊತ್ತಾಗಿದೆ. ಹೀಗಾಗಿಯೇ ದಾಳಿ ವೇಳೆ ನಿರೀಕ್ಷಿತ ಪ್ರಮಾಣದಲ್ಲಿ ಜೈಲಿನಲ್ಲಿ ಮಾದಕ ವಸ್ತು(Drugs), ಮಾರಕಾಸ್ತ್ರ ಹಾಗೂ ಮೊಬೈಲ್‌ಗಳು ಪತ್ತೆಯಾಗಿಲ್ಲ ಎಂದು ಮೂಲಗಳು ಹೇಳಿವೆ.

ದಾಳಿ ವಿಚಾರ ಮೊದಲೇ ಮಾಹಿತಿ ಸೋರಿಕೆ ಶಂಕೆ

ಸಿಸಿಬಿ ದಾಳಿ ವಿಚಾರವು ಕೈದಿಗಳಿಗೆ ಮೊದಲೇ ಸೋರಿಕೆ ಆಗಿತ್ತೇ ಎಂಬ ಶಂಕೆ ವ್ಯಕ್ತವಾಗಿದೆ. ಜೈಲಿನ ಮೇಲೆ ದಾಳಿಗೆ ಸಜ್ಜಾಗುವಂತೆ ಸಿಸಿಬಿ ಎಸಿಪಿಗಳಿಗೆ ಸೋಮವಾರ ರಾತ್ರಿ 8ಕ್ಕೆ ತಿಳಿಸಿದ ಜಂಟಿ ಆಯುಕ್ತರು, ಮಂಗಳವಾರ ಬೆಳಗ್ಗೆ 4ಕ್ಕೆ ನಿಮ್ಮ ತಂಡದೊಂದಿಗೆ ಸಿಎಆರ್‌ ಮೈದಾನಕ್ಕೆ ಬರುವಂತೆ ಸೂಚಿಸಿದ್ದರು. ಆದರೆ ಇಬ್ಬರು ಡಿಸಿಪಿಗಳು ಹಾಗೂ ಮೂವರು ಎಸಿಪಿಗಳಿಗೆ ಮಾತ್ರ ದಾಳಿ ರೂಪುರೇಷೆಯನ್ನು ಜಂಟಿ ಆಯುಕ್ತರು ವಿವರಿಸಿದ್ದರು. ಹೀಗಿದ್ದರೂ ದಾಳಿ ಸಂಗತಿ ಕೈದಿಗಳಿಗೆ ಗೊತ್ತಾಗಿದ್ದು ಹೇಗೆ ಎಂಬುದು ಪ್ರಶ್ನೆಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
 

click me!