ನಿಮ್ಮ ಅಂಗಡಿಗಳಿಗೂ ಬರಬಹುದು ನಕಲಿ ಪತ್ರಕರ್ತರು: ₹ 10 ಸಾವಿರದಿಂದ 10 ಲಕ್ಷದವರೆಗೆ ಹಣ ವಸೂಲಿ!

By Sathish Kumar KH  |  First Published Oct 10, 2024, 7:20 PM IST

ಬೆಂಗಳೂರಿನಲ್ಲಿ ನಕಲಿ ಪತ್ರಕರ್ತರು ಅಂಗಡಿ ಮಾಲೀಕರಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದಾರೆ. ಟಿವಿ ಚಾನೆಲ್ ಲೋಗೋ ಬಳಸಿ ಅಂಗಡಿಗಳಿಗೆ ನುಗ್ಗಿ ವಿಡಿಯೋ ಮಾಡಿ, ಸ್ವಚ್ಛತೆ ಕೊರತೆ ಆರೋಪಿಸಿ ಲೈಸೆನ್ಸ್ ರದ್ದು ಮಾಡಿಸುವುದಾಗಿ ಬೆದರಿಸಿ ಹಣ ಪಡೆಯುತ್ತಿದ್ದಾರೆ.


ಬೆಂಗಳೂರು (ಅ.10): ನೀವು ಬೆಂಗಳೂರು ನಿವಾಸಿಗಳಾಗಿದ್ದು, ವ್ಯಾಪಾರ ವ್ಯವಹಾರಕ್ಕಾಗಿ ಯಾವುದಾದರೂ ಪೆಟ್ಟಿ ಅಂಗಡಿ, ಬೇಕರಿ ಅಥವಾ ಹೋಟೆಲ್ ಇಟ್ಟುಕೊಂಡಿದ್ದೀರಾ? ಹಾಗಾದೆ ಇಲ್ಲಿದ್ದಾರೆ ನೋಡಿ, ಈ  ನಕಲಿ ಪತ್ರಕರ್ತರು ನಿಮ್ಮ ಅಂಗಡಿಗೂ ಬರಬಹುದು ಹುಷಾರ್.. ಇವರು ನಿಮ್ಮ ಅಂಗಡಿಗೆ ಟಿವಿ ಚಾನೆಲ್ ಲೋಗೋ ಹಿಡಿದುಕೊಂಡು ಎಂಟ್ರಿ ಕೊಟ್ಟರೆ ಕನಿಷ್ಠ 10 ಸಾವಿರ ರೂ.ನಿಂದ 10 ಲಕ್ಷ ರೂ.ವರೆಗೆ ಹಣ ವಸೂಲಿ ಮಾಡುವುದು ಗ್ಯಾರಂಟಿ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜನಸಂಖ್ಯೆ 1.40 ಕೋಟಿಗಿಂತ ಹೆಚ್ಚಾಗಿದೆ. ಇದರ ಬೆನ್ನಲ್ಲಿಯೇ ವಂಷನೆ ಮಾಡುವವರ ಸಂಖ್ಯೆಯೂ ವಿಪರೀತವಾಗಿ ಹೆಚ್ಚಾಗಿದ್ದು, ಮೋಸಕ್ಕೆ ವಿವಿಧ ಮಾರುವೇಷಗಳನ್ನು ಹಾಕಿಕೊಂಡು ಬರುತ್ತಿದ್ದಾರೆ. ಅದೇ ರೀತಿ ಇಲ್ಲೊಂದು ಜೋಡಿ ನಾವು ಟಿವಿ ಚಾನೆಲ್‌ನವರು, ಪತ್ರಕರ್ತರು ಎಂದು ಹೇಳಿಕೊಂಡು ಬೇಕರಿ, ಹೋಟೆಲ್ ಹಾಗೂ ಇತರೆ ಅಂಗಡಿ ಮುಂಗಟ್ಟುಗಳಿಗೆ ನುಗ್ಗುತ್ತಾರೆ. ಯಾರಿಂದಲೂ ಅನುಮತಿ ಪಡೆಯದೇ ತಮ್ಮ ಬಗ್ಗೆ ಮಾಹಿತಿಯನ್ನೂ ನೀಡದೇ ಅಡುಗೆ ಕೋಣೆಗಳಿಗೆ ನುಗ್ಗಿ ಅಲ್ಲಿ ವಿಡಿಯೋ ಮಾಡಲು ಆರಂಭಿಸುತ್ತಾರೆ. ಒಬ್ಬ ಮೊಬೈಲ್ ಹಾಗೂ ಮತ್ತೊಬ್ಬ ಲೋಗೋ ಹಿಡಿದುಕೊಂಡು ಸಣ್ಣ ಹ್ಯಾಂಡಿ ಕ್ಯಾಮ್‌ನಲ್ಲಿ ವಿಡಿಯೋ ಮಾಡುತ್ತಾರೆ.

Latest Videos

undefined

ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೂ ವಿಶೇಷ ರೈಲುಗಳನ್ನು ಬಿಟ್ಟ ರೈಲ್ವೆ ಇಲಾಖೆ: ಇಲ್ಲಿದೆ ನೋಡಿ ಮಾಹಿತಿ

ಇದಾದ ನಂತರ ಅಲ್ಲಿ ಕೆಲಸ ಮಾಡುವವರು ಕೂಡಲೇ ಸಂಬಂಧಪಟ್ಟ ಮಳಿಗೆ ಮಾಲೀಕರಿಗೆ ಮಾಹಿತಿ ನೀಡುತ್ತಾರೆ. ಆಗ ಸ್ಥಳಕ್ಕೆ ಬರುವ ಮಾಲೀಕರಿಗೆ ನಿಮ್ಮ ಬೇಕರಿಗಳಲ್ಲಿ, ಹೋಟೆಲ್‌ಗಳಲ್ಲಿ ಸ್ವಚ್ಛತೆಯಿಲ್ಲ. ಇದರಿಂದ ನಾವು ಬಿಬಿಎಂಪಿ ಆರೋಗ್ಯ ವಿಭಾಗಕ್ಕೆ ಹೇಳಿ ನಿಮ್ಮ ಲೈಸೆನ್ಸ್ ಕ್ಯಾನ್ಸಲ್ ಮಾಡಿಸುತ್ತೇವೆ. ನಂತರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (Food Safety and Standards Authority- fssai) ಅಧಿಕಾರಿಗಳಿಗೆ ದೂರು ನೀಡಿ ನಿಮ್ಮನ್ನು ಜೈಲಿಗೆ ಕಳಿಸುತ್ತೇವೆ. ನಮ್ಮಲ್ಲಿ ಎಲ್ಲ ವಿಡಿಯೋಗಳು ಕೂಡ ಇವೆ ಎಂದು ಬೆದರಿಕೆ ಹಾಕುತ್ತಾರೆ. ಆಗ ಮಾಲೀಕರು ಅದೆಲ್ಲಾ ಏನು ಬೇಡ, ಒಂದು ಸೆಟ್ಲ್‌ಮೆಂಟ್ ಮಾಡಿಕೊಳ್ಳೋಣ ಎಂದಾಕ್ಷಣ ನಿಮ್ಮ ಅಂಗಡಿ ಬ್ಯುಸಿನೆಸ್ ಎಷ್ಟಾಗುತ್ತದೆ ಎಂದು ನಿಮ್ಮಿಂದಲೇ ತಿಳಿದುಕೊಂದು ಅದರಲ್ಲಿ ಒಂದು ವಾರದ ದುಡಿಮೆಯ ಹಣವನ್ನೇ ಕೇಳುತ್ತಾರೆ. ಅಂದರೆ, ಕನಿಷ್ಠ 10 ಸಾವಿರ ರೂ.ಗಳಿಂದ 10 ಲಕ್ಷ ರೂ.ವರೆಗೆ ಹಣ ಡಿಮ್ಯಾಂಡ್ ಮಾಡುತ್ತಾರೆ.

ಇದೇ ರೀತಿ ಬೆಂಗಳೂರಿನಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು, ಇಲ್ಲಿ ಕಾಣಿಸುತ್ತಿರುವ ಈ ಇಬ್ಬರ ಜೋಡಿ ಸುಮಾರು 50ಕ್ಕೂ ಹೆಚ್ಚು ಬೇಕರಿ ಮಾಲೀಕರಿಗೆ ಬೆದರಿಕೆ ಹಾಕಿ ಲಕ್ಷ ಲಕ್ಷ ಹಣಕ್ಕೆ ಬೇಡಿಕೆ ಇಟ್ಟು ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಮೋಸ ಮಾಡಿ ಗಳಿಸುವುದು ಎಷ್ಟು ದಿನ ತಾನೇ ಯಶಸ್ಸು ಆಗುತ್ತದೆ ಹೇಳಿ. ತಮ್ಮ ಐನಾತಿ ಕೆಲಸವನ್ನು ಹುಳಿಮಾವು ಬಳಿಯ ಅಕ್ಷಯ್ ನಗರದ  ಡಿಎಲ್ಎಫ್ ಬಳಿಯ ಎಸ್ ಎಲ್ ವಿ ಬೇಕರಿ ಸ್ವಿಟ್ಸ್ ಸ್ಟಾಲ್‌ನಲ್ಲಿಯೂ ಮಾಡಿದ್ದಾರೆ. ಬೇಕರಿ ಒಳಗೆ ನುಗ್ಗಿ ವಿಡಿಯೋ ಮಾಡಿಕೊಂಡು ನಂತರ ಮಾಲೀಕರಿಗೆ ನಿಮ್ಮ ಬೇಕರಿ ಯಲ್ಲಿ ಸ್ವಚ್ಚತೆಯಿಲ್ಲ, ಸಿಬ್ಬಂದಿಗಳ ಮೈಂಟೈನ್ ‌ಇಲ್ಲ‌ ಎಂದು ಬೆದರಿಕೆ ಹಾಕಿದ್ದಾರೆ. ಈ ವಿಡಿಯೋ ಬಿಬಿಎಂಪಿ ಅಧಿಕಾರಿಗಳಿಗೆ ಕೊಟ್ಟು ನಿಮ್ಮ ಬೇಕರಿ ಲೈಸೆನ್ಸ್ ಸೀಜ್ ಮಾಡಿಸುತ್ತೇವೆ ಎಂದು ಧಮ್ಕಿ ಹಾಕಿದ್ದಾರೆ. ತತಕ್ಷಣ ಏನು ಮಾಡಬೇಕೆಂದು ತೋಚದ ಬೇಕರಿ ಮಾಲೀಕ ನಮ್ಮ ಬಳಿ ಲಕ್ಷ ಲಕ್ಷ ಹಣವಿಲ್ಲ ಎಂದು ತತಕ್ಷಣ ಇದೀಗ 10 ಸಾವಿರ ರೂ. ಹಾಕುವುದಾಗಿ ಯುಪಿಐ ಮನಿ ಟ್ರಾನ್ಸ್‌ಫರ್ ಮಾಡಿದ್ದಾರೆ.

ಇದನ್ನೂ ಓದಿ: ನಾಲ್ಕು ಹೆಬ್ಬಾವುಗಳೊಂದಿಗೆ ಸರಸವಾಡಲು ಹೋದ ವ್ಯಕ್ತಿ; ಯಾವ ಹಾವಿಗೆ ಆಹಾರವಾದ ಗೊತ್ತಾ?

ಬಾಕಿ ಹಣವನ್ನು ಕೊಡುವುದಾಗಿ ಅವರನ್ನು ಸಾಗಹಾಕಿ ತನ್ನ ಸ್ನೇಹಿತರಿಗೆ ಕರೆ ಮಾಡಿದ್ದಾರೆ. ಆತನ ಸ್ನೇಹಿತರು ಹೇಳಿದಂತೆ ಕೂಡಲೇ ಹೋಗಿ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆಗ ಪೊಲೀಸರು ಸಿಸಿಟಿವಿ ಪರಿಶೀಲನೆ ಮಾಡಿ ಇಬ್ಬರು ಪತ್ರಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಬೇಕರಿ ಮಾಲೀಕರಿಗೆ ವಂಚನೆ ಮಾಡಿದವರನ್ನು ಪ್ರಜಾಪರ ಯೂಟ್ಯೂಬ್ ಚಾನಲ್ ಹಾಗೂ ಪ್ರಜಾಪರ ಸಂಘಟನೆಯ ಸದಸ್ಯರು ಎಂದು ತಿಳಿದುಬಂದಿದೆ. ಬೊಮ್ಮನಹಳ್ಳಿ ಶಫಿ ಎಂಬ ನಕಲಿ ಪತ್ರಕರ್ತನಿಂದ  ಹಣಕ್ಕೆ ಡಿಮ್ಯಾಂಡ್ ಮಾಡಿದ ವ್ಯಕ್ತಿ ಎಂಬುದು ತಿಳಿದುಬಂದಿದೆ. ಇನ್ನು ಪೊಲೀಸರು ವಿಚಾರಣೆ ಮಾಡುವ ವೇಳೆಯೂ ನನಗೆ ಎಂಎಲ್ಎ ಗೊತ್ತು, ಲೋಕಲ್ ಲೀಡರ್ಸ್ ಗೊತ್ತು ಎಂದು ಆವಾಜ್ ಹಾಕಿದ್ದಾರೆ. ಈತನ ಬಗ್ಗೆ ಮಾಹಿತಿ ಕಲೆಹಾಕಿದಾಗ ಇದೇ ರೀತಿ ಬಂಡೆಪಾಳ್ಯ ಸೇರಿದಂತೆ ವಿವಿಧೆಡೆಯೂ ವಂಚನೆ ಮಾಡಿದ ಬಗ್ಗೆ ತಿಳಿದುಬಂದಿದೆ. ಹುಳಿಮಾವು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಶಫಿಯನ್ನು ಬಂಧಿಸಿದ್ದಾರೆ.

click me!