ತೆಗೆದುಕೊಂಡಿದ್ದ ಸಾಲ ಮರುಪಾವತಿ ಮಾಡಿಲ್ಲವೆಂದು ಕಿಡ್ನಾಪ್ ಮಾಡಿದ ಆರೋಪಿಗಳು
ತೋಟದ ಮನೆಯಲ್ಲಿ ಕೂಡಿಹಾಕಿ ಮನಸೋ ಇಚ್ಛೆ ಥಳಿಸಿದ ಪಾಪಿಗಳು
ಮರವೊಂದಕ್ಕೆ ನೇತು ಹಾಕಿ ಹಗ್ಗದಿಂದ ಥಳಿಸಿ ಹಲ್ಲೆ
ಯಮಲೋಕದ ನರಕವನ್ನೂ ಮೀರಿಸುವಂತಿಗೆ ಚಿತ್ರಹಿಂಸೆ
ಕೊಲೆ ಮಾಡಿ ಚಾರ್ಮಾಡಿ ಘಾಟ್‌ನಲ್ಲಿ ಬೀಸಾಡಿದರು
ಬೆಂಗಳೂರು (ಡಿ.27): ಸಿಲಿಕಾನ್ ಸಿಟಿಯಲ್ಲಿ ಹಣದ ವಿಚಾರಕ್ಕಾಗಿ ಯುವಕನೊಬ್ಬನನ್ನು ಅಪಹರಣ ಮಾಡಿಕೊಂಡು ಹೋಗಿ ಚಿಕ್ಕಬಳ್ಳಾಪುರ ತೋಟದ ಮನೆಯಲ್ಲಿಟ್ಟು ಚಿತ್ರಹಿಂಸೆ ನೀಡಿ ಕೊಲೆ ಮಾಡಿದ ಘಟನೆ 6 ತಿಂಗಳ ನಂತರ ಬೆಳಕಿಗೆ ಬಂದಿದೆ. ಅವರ ಹಿಂಸೆ ಕೊಟ್ಟ ಸ್ವರೂಪವನ್ನು ನೋಡಿದರೆ ಯಮಲೋಕದ ನರಕದಲ್ಲಿಯೂ ಇಷ್ಟು ಹಿಂಸೆ ಕೊಡಲು ಸಾಧ್ಯವಿಲ್ಲ ಎನ್ನುವಂತಿದೆ.
ಬೆಂಗಳೂರಿನಲ್ಲಿ ಹಣ, ದುಡಿಮೆ ಹಾಗೂ ನೆಮ್ಮದಿಯ ಜೀವನ ಕಟ್ಟಿಕೊಳ್ಳಲು ಸಾಕಷ್ಟು ಜನರು ಪರದಾಡುತ್ತಿದ್ದಾರೆ. ಆದರೆ, ಹಣದ ವ್ಯವಹಾರವನ್ನು ಮಾಡುತ್ತಿದ್ದ ವಿಕೃತ ಮನಸ್ಥಿತಿಯುಳ್ಳವರ ಗುಂಪು ಯುವಕನೊಬ್ಬನನ್ನು ಚಿತ್ರಹಿಂಸೆ ಮಾಡಿ ಕೊಂದಿದ್ದಾರೆ. ಇನ್ನು ಕೊಲೆ ನಡೆದು ಆರು ತಿಂಗಳು ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಭೀಕರವಾಗಿ ಕೊಲೆಯಾದ ಯುವಕನನ್ನು ಕೋಣನಕುಂಟೆ ನಿವಾಸಿ ಶರತ್ ಎಂದು ಗುರುತಿಸಲಾಗಿದೆ. ಈ ಯುವಕ ಸಾಲ ಪಡೆದು ಹಿಂತಿರುಗಿಸದೆ ರಾಜಾರೋಷವಾಗಿ ಓಡಾಡುತ್ತಿದ್ದನಂತೆ. ಹೀಗಾಗಿ, ಶರತ್ ನನ್ನು 6 ತಿಂಗಳ ಹಿಂದೆಯೇ ಆರೋಪಿಗಳು ಕಿಡ್ನಾಪ್ ಮಾಡಿದ್ದರು. ಅಪಹರಿಸಿದ ಶರತ್ ನನ್ನು ಚಿಕ್ಕಬಳ್ಳಾಪುರಕ್ಕೆ ಕರೆದುಕೊಂಡು ಹೋಗಿ ತೋಟದ ಮನೆಯೊಂದರಲ್ಲಿ ಇಟ್ಟು, ಪ್ರತಿನಿತ್ಯ ಹಾಗೂ ವಾರಕ್ಕೊಮ್ಮೆ ಚಿತ್ರ ಹಿಂಸೆ ಕೊಡುತ್ತಿದ್ದರು.
ಮೃಗಗಳೂ ಇಷ್ಟು ಚಿತ್ರಹಿಂಸೆ ಕೊಡುವುದಿಲ್ಲ : ಇನ್ನು ಸಾಲ ಮಾಡಿಹಣ ಹಿಂದುರುಗಿಸದ ಒಂದು ತಪ್ಪಿಗಾಗಿ ಅವರನ್ನು ಕಿಡ್ನಾಪ್ ಮಾಡಿ ಕೈಕಾಲು ಕಟ್ಟಿ ತೋಟದ ಮನೆಯೊಂದರಲ್ಲಿ ಕೂಡಿ ಹಾಕಿದ್ದಾರೆ. ಸುಮಾರು ಆರು ಅಡಿ ದಷ್ಟಪುಷ್ಟ ದೇಹವನ್ನು ಹೊಂದಿದ ಶರತ್‌ನನ್ನು ಅರೆಬೆತ್ತಲೆಯಲ್ಲಿ ಕೋಣೆಯಲ್ಲು ಕೂಡಿ ಹಾಕಿದ್ದಾರೆ. ಬೆಂಗಳೂರಿನಿಂದ ಅಲ್ಲಿಗೆ ಹೋಗುತ್ತಿದ್ದ ಆರೋಪಿಗಳು ಅರೆನಗ್ನಗೊಳಿಸಿ ಮನಸೋ ಇಚ್ಛೆ ಥಳಿಸಿದ್ದಾರೆ. ದೊಡ್ಡದಾದ ಹಗ್ಗ, ಕಲ್ಲಿನಿಂದ ಹೊಡೆದಿದ್ದಾರೆ. ಇನ್ನು ತೋಟದಲ್ಲಿನ ಮಾವಿನ ಮರಕ್ಕೆ ಕರಿಯನ್ನು ನೇತು ಹಾಕುವ ರೀತಿಯಲ್ಲಿ ಕೈ-ಕಾಲು ಕಟ್ಟಿ ನೇತು ಹಾಕಿ ಥಳಿಸಿದ್ದಾರೆ. ಮೈಯೆಲ್ಲಾ ರಕ್ತ ಮಡುಗಟ್ಟುವಂತೆ ಥಳಿಸಿ ವಿಕೃತಿ ಮೆರೆದಿದ್ದಾರೆ. ಇಷ್ಟೊಂದು ಶಿಕ್ಷೆ ನರಕದಲ್ಲಿಯೂ ಇರಲಾರದು ಎನ್ನಿಸುವಂತಿದೆ.
Bengaluru Crime: ಮೀಸೆ ಚಿಗುರದ ಹುಡುಗರ ಗಲಾಟೆ ಒಬ್ಬನ ಕೊಲೆಯಲ್ಲಿ ಅಂತ್ಯ : ಇಷ್ಟೇನಾ ಕಾರಣ?
ಚಾರ್ಮಾಡಿ ಘಾಟ್‌ನಲ್ಲಿ ದೇಹ ಎಸೆದರು: ಇನ್ನು ಶರತ್‌ನನ್ನು ಸತತವಾಗಿ ಆರು ತಿಂಗಳ ಕಾಲ ಚಿತ್ರಹಿಂಸೆ ನೀಡಿದ್ದು, ನೀರು- ಆಹಾರವನ್ನೂ ಸರಿಯಾಗಿ ಕೊಟ್ಟಿಲ್ಲ. ರಾತ್ರಿ ವೇಳೆ ಕೂಗಿಕೊಳ್ಳಬಾರದು ಎಂದು ಬಾಯಿಗೆ ಬಟ್ಟೆ ತುರುಕಿ ಸಿನಿಮೀಯ ರೀತಿಯಲ್ಲಿ ಯೋಜನೆ ರೂಪಿಸಿದ್ದಾರೆ. ನೀರು, ಆಹಾರ, ಗಾಳಿ, ಬೆಳಕು ಇಲ್ಲದೇ ಆರೋಗ್ಯ ಕ್ಷೀಣಿಸಿದ್ದು, ವಿಕೃತ ಮನಸ್ಥಿತಿ ಉಳ್ಳವರ ಹೊಡೆತವನ್ನು ತಡೆದುಕೊಳ್ಳಲಾಗದೇ ಶರತ್ ಸಾವನ್ನಪ್ಪಿದ್ದಾರೆ. ಇನ್ನು ಮೃತದೇಹವನ್ನು ಇಲ್ಲಿ ಮಣ್ಣು ಮಾಡಿದರೆ ಅನುಮಾನ ಬರುತ್ತದೆ ಎಂದು ಭಾವಿಸಿ ಶರತ್ ಮೃತದೇಹವನ್ನು ಚಾರ್ಮಾಡಿ ಘಾಟ್ ನಲ್ಲಿ ಎಸೆದು ಬಂದಿದ್ದರು. ಇನ್ನು ಶವ ಸಿಗದ ರೀತಿಯಲ್ಲಿ ಹಾಗೂ ತಾವು ಕೊಲೆ ಮಾಡಿದ ಸುಳಿವು ಸಿಗದ ರೀತಿ ಸಾಕ್ಷ್ಯವನ್ನು ನಾಶ ಮಾಡಿದ್ದರು. ಇದರಿಂದಾಗಿ ಶರತ್ ಕೊಲೆಯಾಗಿ ಆರು ತಿಂಗಳು ಕಳೆದರೂ ಯಾರಿಗೂ ಗೊತ್ತಾಗಿರಲಿಲ್ಲ.
ಕೊಲೆಯಾದ ಯುವಕನಿಂದ ಮನೆಗೆ ಸಂದೇಶ: ಇನ್ನು ಕಿಡ್ನಾಪ್ ಆದ ಶರತ್‌ನ ಮೊಬೈಲ್‌ನಿಂದ ತಾನು ಸಾಲ ಮಾಡಿಕೊಂಡಿದ್ದೇನೆ. ಅದನ್ನು ತೀರಿಸಲು ಹಣ ಬೇಕಾಗಿದ್ದು, ಅದಕ್ಕಾಗಿ ದುಡಿಯಲು ಹೋಗುತ್ತಿದ್ದೇನೆ. ನನ್ನನ್ನು ಯಾರೂ ಹುಡುಕಬೇಡಿ ಎಂದು ಮನೆಯವರಿಗೆ ಮೆಸೇಜ್ ಮಾಡಿದ್ದಾರೆ. ನಂತರ ಮೊಬೈಲ್ ಅನ್ನು ಲಾರಿ ಮೇಲೆ ಎಸೆದಿದ್ದು, ಆ ಲಾರಿ ಹೊರ ರಾಜ್ಯಕ್ಕೆ ಹೋಗಿದೆ. ಅಲ್ಲಿ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ನಂತರ ನೆಟ್ವರ್ಕ್ ಸಿಕ್ಕಿರಲಿಲ್ಲ. ಹೀಗಾಗಿ, ಮನೆಯವರು ಕೂಡ ಅವನನ್ನು ಹುಡಕದೇ ಬರುವಿಕೆಗಾಗಿ ಕಾಯುತ್ತಿದ್ದರು. ಕೊಲೆಯಾಗಿ ಆರು ತಿಂಗಳು ಕಳೆದ್ರೂ ಯಾರಿಗೂ ಗೊತ್ತಿರಲಿಲ್ಲ. ತನ್ನ ಮಗ ದುಡಿಮೆಗಾಗಿ ಹೊರರಾಜ್ಯದಲ್ಲಿದ್ದಾನೆಂಬ ನಂಬಿಕೆಯಿಂದ ಪೋಷಕರು ಕೂಡ ಅರೆ ನೆಮ್ಮದಿಯಲ್ಲಿ ಜೀವನ ಮಾಡುತ್ತಿದ್ದರು.
ಯುವತಿಯ ಬಾಯಿ ಮುಚ್ಚಿ, ಸ್ಕ್ರೂಡ್ರೈವರ್‌ನಿಂದ 51 ಬಾರಿ ಇರಿದು ಕೊಂದ ಪಾಪಿ..!
ಕೊಲೆ ಆರೋಪಿಯ ಹೆಸರೂ ಶರತ್: ಇನ್ನು ಕೋಣನಕುಂಟೆಯ ಕೊಲೆಯಾದ ಯುವಕನ ಹೆಸರು ಶರತ್ ಆಗಿದ್ದರೆ, ಅವನನ್ನು ಕೊಲೆ ಮಾಡಿದ ಅರೋಪಿಯ ಹೆಸರೂ ಶರತ್ ಆಗಿದೆ. ಚಿಕ್ಕಬಳ್ಳಾಪುರ ಮೂಲದ ಈ ಕೊಲೆ ಮಾಡಿದ ಆರೋಪಿ ಶರತ್ ವಿರುದ್ಧ ಆರಂಭದಲ್ಲಿ ಈ ಕೇಸ್ ದಾಖಲಿಸಿಕೊಳ್ಳಲು ಪೊಲೀಸರ ನಕಾರ ಮಾಡಿದ್ದರು. ಕೊಲೆಯಾದ ವಿಷಯ ತಿಳಿಯುತ್ತಿದಂತೆ 5 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಶರತ್, ಮಂಜುನಾಥ್, ಶ್ರೀಧರ್, ವೆಂಕಟಚಲಪತಿ , ಧನುಷ್ ಬಂಧಿಸಿದ್ದಾರೆ. ಕಬನ್ ಪಾರ್ಕ್ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.