ಗಂಡನ ಮದ್ಯವರ್ಜನ ಶಿಬಿರಕ್ಕೆ ಸೇರಿಸಿ ಹೆಂಡತಿಗೆ ಬೇರೆ ಮದ್ವೆ: ಪತಿಯಿಂದ ಮದ್ವೆ ಮಾಡಿದವನ ಕೊಲೆ

By Kannadaprabha News  |  First Published Nov 14, 2023, 9:22 AM IST

ಹಳೇ ದ್ವೇಷದ ಹಿನ್ನೆಲೆಯಲ್ಲಿ ತನ್ನ ದೂರದ ಸಂಬಂಧಿ ಜತೆಗೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿ ಮೃತದೇಹಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದ ಆರೋಪಿಯನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.


ಬೆಂಗಳೂರು: ಹಳೇ ದ್ವೇಷದ ಹಿನ್ನೆಲೆಯಲ್ಲಿ ತನ್ನ ದೂರದ ಸಂಬಂಧಿ ಜತೆಗೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿ ಮೃತದೇಹಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದ ಆರೋಪಿಯನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಲಾಸಿಪಾಳ್ಯ ಮಾರ್ಕೆಟ್‌ನ ವಿಜಯ್‌ಕುಮಾರ್‌(33) ಬಂಧಿತ.

ಆರೋಪಿಯು ಶನಿವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ತನ್ನ ದೂರದ ಸಂಬಂಧಿ ಸುಧಾಹರನ್‌ ಅಲಿಯಾಸ್‌ ಕುಳ್ಳ(28) ಎಂಬಾತನನ್ನು ಕಲಾಸಿಪಾಳ್ಯ ಮಾರ್ಕೆಟ್‌ನಲ್ಲಿ (Kalasipalya Market) ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆಗೈದು ಬಳಿಕ ಮೃತದೇಹವನ್ನು ಗೋಣಿಚೀಲಕ್ಕೆ ಹಾಕಿ ಬೆಂಕಿ ಹಚ್ಚಿ ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Videos

undefined

ಅಪರಿಚಿತ ಬಂದೂಕುಧಾರಿಗಳ ಮುಂದುವರಿದ ಸಂಹಾರ: ಜೈಷ್‌ ಉಗ್ರ ಮಸೂದ್‌ ಅಜರ್‌ ಆಪ್ತ ಸ್ನೇಹಿತನ ಹತ್ಯೆ

ಪ್ರಕರಣದ ಹಿನ್ನೆಲೆ:

ಆರೋಪಿ ವಿಜಯಕುಮಾರ್‌ ಮತ್ತು ಕೊಲೆಯಾದ ಸುಧಾಹರನ್‌ ದೂರದ ಸಂಬಂಧಿಗಳು. ಆರೋಪಿ ವಿಜಯಕುಮಾರ್‌ 2014ನೇ ಸಾಲಿನಲ್ಲಿ ನಂದಿನಿ ಎಂಬಾಕೆಯನ್ನು ವಿವಾಹವಾಗಿದ್ದ. ಬಳಿಕ ವಿಪರೀತ ಮದ್ಯ ಮತ್ತು ಸಿಗರೇಟ್‌ ಸೇದುವ ಚಟಕ್ಕೆ (Smoking Addiction) ಬಿದ್ದಿದ್ದ ವಿಜಯಕುಮಾರ್‌ನನ್ನು 2015ನೇ ಸಾಲಿನಲ್ಲಿ ಆತನ ತಾಯಿ ಚಂದ್ರಾಲೇಔಟ್‌ನ ಗಂಗೊಂಡನಹಳ್ಳಿಯ ಮದ್ಯ ವರ್ಜನ ಕೇಂದ್ರಕ್ಕೆ ಸೇರಿದ್ದರು. 11 ತಿಂಗಳು ವಿಜಯಕುಮಾರ್‌ ಈ ಮದ್ಯ ವರ್ಜನ ಕೇಂದ್ರದಲ್ಲೇ ಇದ್ದ.

ಪತ್ನಿಗೆ ಬೇರೆಯವನ ಜತೆ ಮದುವೆ

ಈ ನಡುವೆ ಸಂಬಂಧಿ ಸುಧಾಹರನ್‌, ವಿಜಯಕುಮಾರ್ ಪತ್ನಿ ನಂದಿನಿಯನ್ನು ಪಾವರ್ತಿಪುರದ ಆನಂದ್‌ ಎಂಬಾತನ ಜತೆಗೆ ಮದುವೆ ಮಾಡಿಸಿದ್ದ. ಬಳಿಕ ಮದ್ಯ ವರ್ಜನ ಕೇಂದ್ರದಿಂದ ಹೊರಬಂದ ವಿಜಯ್ ಕುಮಾರ್‌, ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ. ಸಂಬಂಧಿ ಸುಧಾಹರನ್‌ ಸಹ ಮಾರುಕಟ್ಟೆಯಲ್ಲೇ ಕೂಲಿ ಕೆಲಸ ಮಾಡಿಕೊಂಡಿದ್ದ.

ಹಳೇ ವೈಷಮ್ಯ ಯುವಕನ ಹತ್ಯೆ; ಆರೋಪಿ ಮನೆ ಮೇಲೆ ಕಲ್ಲು ತೂರಿದ ಇನ್ನೊಂದು ಗುಂಪು!

ಈ ನಡುವೆ ವಿಜಯ್‌ ಕುಮಾರ್‌ಗೆ ಪತ್ನಿ ನಂದಿನಿ ಆಗಾಗ ನೆನಪಾಗಿ ಕಾಡುತ್ತಿದ್ದಳು. ಹೀಗಾಗಿ ನಾಲ್ಕು ತಿಂಗಳ ಹಿಂದೆ ವಿಜಯಕುಮಾರ್‌, ನಂದಿನಿ ಮತ್ತು ಆನಂದ್‌ ಎಲ್ಲಿದ್ದಾರೆ ಎಂದು ಸುಧಾಹರನ್‌ ಬಳಿ ವಿಚಾರಿಸಿದ್ದ. ಬಳಿಕ ಸುಧಾಹರನ್‌ ಮೊಬೈಲ್‌ ಫೋನ್‌ನಲ್ಲಿ ಆನಂದ್‌ಗೆ ಕರೆ ಮಾಡಿದ್ದ. ಆದರೆ, ಆನಂದ್ ಕರೆ ಸ್ವೀಕರಿಸಿಲ್ಲ.

ಹತ್ಯೆಗೆ ನಿರ್ಧಾರ:

ಈ ವಿಚಾರವಾಗಿ ಮಣಿ ಎಂಬಾತ ನಂದಿನಿ ಮತ್ತು ಆನಂದ್‌ ಬಗ್ಗೆ ಸುಧಾಹರನ್‌ ಬಳಿ ಏಕೆ ವಿಚಾರಿಸುವೆ ಎಂದು ಸ್ಟೀಲ್‌ ಪೈಪ್‌ನಿಂದ ವಿಜಯಕುಮಾರ್‌ಗೆ ಹಲ್ಲೆ ಮಾಡಿದ್ದ. ಹಲ್ಲೆಯಿಂದ ಗಾಯಗೊಂಡಿದ್ದ ವಿಜಯ್‌ಕುಮಾರ್‌, ಒಂದು ವಾರ ವಿಶ್ರಾಂತಿ ಪಡೆದು ಮತ್ತೆ ಮಾರುಕಟ್ಟೆಗೆ ಕೆಲಸಕ್ಕೆ ಬರಲು ಆರಂಭಿಸಿದ್ದ. ತನ್ನ ಪತ್ನಿ ನಂದಿನಿ ನೆನಪಾದಾಗಲೆಲ್ಲಾ ಸುಧಾಹರನ್‌ ಮೇಲೆ ಕೋಪಗೊಳ್ಳುತ್ತಿದ್ದ. ತನ್ನ ಸಂಬಂಧಿಯಾಗಿ ತನಗೇ ಮೋಸ ಮಾಡಿರುವ ಸುಧಾಹರನ್‌ನನ್ನು ಹತ್ಯೆ ಮಾಡಲು ನಿರ್ಧರಿಸಿದ್ದ.

ಕಲಾಸಿಪಾಳ್ಯ ಮರ್ಡರ್: ಬ್ಲೇಡ್‌ನಿಂದ ಕತ್ತುಕೊಯ್ದು ತರಕಾರಿ ಮೂಟೆಯಲ್ಲಿ ತುಂಬಿಟ್ಟು ಹೋದ ಕಿರಾತಕ

ಹತ್ಯೆಗೂ ಮುಂಚೆ ಮದ್ಯ ಕುಡಿಸಿದ

ಆರೋಪಿ ವಿಜಯಕುಮಾರ್‌ ನ.11ರಂದು ಬೆಳಗ್ಗೆ 7ಕ್ಕೆ ಕಲಾಸಿಪಾಳ್ಯ ಮಾರ್ಕೆಟ್‌ಗೆ ಬಂದು ಸುಧಾಹರನ್‌ನನ್ನು ಭೇಟಿಯಾಗಿದ್ದ. ತನಗೆ ಆರೋಗ್ಯ ಸರಿಯಲ್ಲ ಎಂದು ತನ್ನ ಬಳಿ ಇದ್ದ ಒಂದೂವರೆ ಕ್ವಾರ್ಟರ್‌ ಮದ್ಯವನ್ನು ಸುಧಾಹರನ್‌ಗೆ ಕೊಟ್ಟಿದ್ದ. ಸುಧಾಹರನ್‌ ಮದ್ಯ ಸೇವಿಸಿದ ಬಳಿಕ ಇಬ್ಬರು ಕುಂಬಾರಪೇಟೆಗೆ ತೆರಳಿ ಮಾಂಸದೂಟ ಮಾಡಿದ್ದರು. ಬಳಿಕ ಬೆಳಗ್ಗೆ 11ಕ್ಕೆ ಆರೋಪಿ ವಿಜಯಕುಮಾರ್‌, ಸುಧಾಹರನ್‌ಗೆ ಮತ್ತೊಂದು ಕ್ವಾರ್ಟರ್‌ ಮದ್ಯ ಕುಡಿಸಿದ್ದಾನೆ. ಮಧ್ಯಾಹ್ನ 12ರ ಸುಮಾರಿಗೆ ಇಬ್ಬರು ವಿಶ್ರಾಂತಿ ಪಡೆಯಲು ಕಲಾಸಿಪಾಳ್ಯ ಮಾರ್ಕೆಟ್‌ನ ಚಾವಣಿ ಏರಿದ್ದಾರೆ. ಈ ವೇಳೆ ಸುಧಾಹರನ್‌ ಮೆಟ್ಟಿಲ ಮೇಲೆಯೇ ನಿದ್ದೆಗೆ ಜಾರಿದ್ದಾನೆ.

140 ವಿಚಾರಕ್ಕೆ ಜಗಳ ತೆಗೆದು ಕುತ್ತಿಗೆ ಕೊಯ್ದ

ಈ ವೇಳೆ ಆರೋಪಿ ವಿಜಯ್‌ ಕುಮಾರ್‌ ಶೌಚಕ್ಕೆ ತೆರಳುವವನಂತೆ ನಾಟಕವಾಡಿ ಪಕ್ಕಕ್ಕೆ ಹೋಗಿದ್ದಾನೆ. ಕೆಲ ನಿಮಿಷ ಬಳಿಕ ಬಂದು ನಿದ್ದೆಯಲ್ಲಿದ್ದ ಸುಧಾಹರ್‌ನನ್ನು ಎಬ್ಬಿಸಿ, ತನ್ನ ಬಳಿ ಇದ್ದ 140 ರೂ ಕಾಣಿಸುತ್ತಿಲ್ಲ. ನೀನೇ ತೆಗೆದುಕೊಂಡಿರುವೆ ಎಂದು ಜಗಳ ಆರಂಭಿಸಿದ್ದಾನೆ. ಈ ವೇಳೆ ಸುಧಾಹರನ್‌, ವಿಜಯ್‌ಕುಮಾರ್‌ಗೆ ಕಪಾಳಕ್ಕೆ ಹೊಡೆದಿದ್ದಾನೆ. ಹತ್ಯೆ ಮಾಡಲು ಇದೇ ಸರಿಯಾದ ಸಮಯ ಎಂದು ಭಾವಿಸಿದ ವಿಜಯ್‌ಕುಮಾರ್‌, ತನ್ನ ಬಳಿ ಇದ್ದ ಹಣ್ಣು ಕತ್ತರಿಸುವ ಚಾಕು ತೆಗೆದು ಸುಧಾಹರನ್‌ ಕುತ್ತಿಗೆಗೆ ಹೊಡೆದಿದ್ದಾನೆ. ಈ ವೇಳೆ ಗಾಯಗೊಂಡು ರಕ್ತಸ್ರಾವವಾಗಿ ಸುಧಾಹರನ್‌ ಕುಸಿದು ಬಿದ್ದು ಮೃತಪಟ್ಟಿದ್ದಾನೆ.

ಮೃತದೇಹಕ್ಕೆ ಬೆಂಕಿ ಹಚ್ಚಿದ

ಆರೋಪಿಯು ಮೃತದೇಹ ಗುರುತು ಸಿಗದಂತೆ ಮಾಡಲು ಕೆ.ಆರ್‌.ಮಾರುಕಟ್ಟೆಯ (K R Market) ಚಾವಣಿಯಲ್ಲಿದ್ದ ಗೋಣಿಚೀಲಕ್ಕೆ ಮೃತದೇಹ ಹಾಕಿ ಅಲ್ಲೇ ಬಿದ್ದಿದ್ದ ರದ್ದಿ ಪೇಪರ್‌, ಪ್ಲಾಸ್ಟಿಕ್‌ಗಳನ್ನು ಹಾಕಿ ಬೆಂಕಿ ಹಚ್ಚಿ ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!