Sonali Phogat: ಗೋವಾದಲ್ಲಿ ಯಾವುದೇ ಶೂಟಿಂಗ್‌ ಇದ್ದಿರಲಿಲ್ಲ, ನಾನೇ ಕೊಲೆ ಮಾಡಿದೆ: ಪಿಎ ಸುಧೀರ್‌ ತಪ್ಪೊಪ್ಪಿಗೆ?

By Santosh Naik  |  First Published Sep 4, 2022, 6:09 PM IST

ಟಿಕ್‌ಟಾಕ್‌ ಸ್ಟಾರ್‌ ಹಾಗೂ ರಾಜಕಾರಣಿ ಸೋನಾಲಿ ಪೋಗಟ್‌ ಹತ್ಯೆಯ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದೆ. ಇದರ ನಡುವೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಆಕೆಯ ಆಪ್ತ ಸಹಾಯಕ ಸುಧೀರ್‌ ಸಂಗ್ವಾನ್‌ ತಾನೇ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಗಿ ವರದಿಯಾಗಿದೆ. ಇದನ್ನು ಗೋವಾ ಪೊಲೀಸ್‌ ಅಲ್ಲಗಳೆದಿದೆ. ಈ ನಡುವೆ ಉತ್ತರ ಪ್ರದೇಶದ ಚಿತ್ರ ನಿರ್ದೇಶಕನೊಬ್ಬ, ಸುಧೀರ್‌ ಸಂಗ್ವಾನ್‌ ನನ್ನನ್ನು ಬ್ಲಾಕ್‌ ಮೇಲ್‌ ಮಾಡುತ್ತಿದ್ದಾನೆ ಎಂದು ಸೋನಾಲಿ ಪೋಗಟ್‌ ತಮ್ಮ ಬಳಿ ಹೇಳಿದ್ದರು ಎಂದು ಹೇಳಿಕೆ ನೀಡಿದ್ದಾರೆ.


ನವದೆಹಲಿ (ಸೆ.4): ಸೋನಾಲಿ ಫೋಗಟ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸುಧೀರ್ ಸಾಂಗ್ವಾನ್ ರಿಮಾಂಡ್ ಅವಧಿಯಲ್ಲಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಕೊಲೆಗೆ ಸಂಚು ರೂಪಿಸಿದ್ದಾಗಿ ಆರೋಪಿಯೂ ತಪ್ಪೊಪ್ಪಿಕೊಂಡಿದ್ದಾನೆ ಎಂದು ಗೋವಾ ಪೊಲೀಸ್ ಮೂಲವೊಂದು ಮಾಹಿತಿ ನೀಡಿದೆ. ಆದರೆ, ಗೋವಾ ಡಿಜಿಪಿ ಜಸ್ಪಾಲ್ ಸಿಂಗ್ ಇದನ್ನು ಅಲ್ಲಗಳೆದಿದ್ದು, ಅಂಥ ಮಾಹಿತಿ ಇದ್ದಲ್ಲಿ ಮಾಧ್ಯಮಗಳಿಗೆ ತಿಳಿಸಲಾಗುವುದು ಎಂದು ಹೇಳಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಕೊಲೆ ಮಾಡುವ ಉದ್ದೇಶದಲ್ಲಿಯೇ ಸುಧೀರ್ ಸೋನಾಲಿಯನ್ನು ಗುರುಗ್ರಾಮದಿಂದ ಗೋವಾಕ್ಕೆ ಕರೆತಂದಿದ್ದ. ಗೋವಾದಲ್ಲಿ ಚಿತ್ರೀಕರಣ ಮಾಡುವ ಯಾವುದೇ ಯೋಜನೆ ಇರಲಿಲ್ಲ. ಸೋನಾಲಿ ಹತ್ಯೆಯ ಸಂಚು ಬಹಳ ಹಿಂದೆಯೇ ರೂಪಿಸಲಾಗಿತ್ತು. ಸುಧೀರ್ ಸಾಂಗ್ವಾನ್‌ಗೆ ಶಿಕ್ಷೆ ವಿಧಿಸಲು ಗೋವಾ ಪೊಲೀಸರು ಈ ಕೊಲೆ ಪ್ರಕರಣದಲ್ಲಿ ಕೆಲವು ದೃಢವಾದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಅದೇ ಸಮಯದಲ್ಲಿ, ಗೋವಾ ಸಿಎಂ ಪ್ರಮೋದ್ ಸಾವಂತ್ ಅವರು ಆದಷ್ಟು ಬೇಗ ಚಾರ್ಜ್ ಶೀಟ್ ಸಲ್ಲಿಸುವಂತೆ ಪೊಲೀಸರಿಗೆ ಸೂಚನೆಯನ್ನೂ ನೀಡಿದ್ದಾರೆ. ಆಗಸ್ಟ್‌ 23 ರಂದು ಗೋವಾದ ಕರ್ಲೀಸ್‌ ರೆಸ್ಟೋರೆಂಟ್‌ನಲ್ಲಿ ಈ ಕೊಲೆ ನಡೆದಿತ್ತು, ಅಂಜುನಾ ಪೊಲೀಸ್‌ ಠಾಣೆಯ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಸುಧೀರ್ ಸಂಗ್ವಾನ್‌, ಸುಖ್ವಿಂದರ್, ಕರ್ಲೀಸ್ ರೆಸ್ಟೋರೆಂಟ್‌ನ ಮಾಲೀಕ, ರೂಮ್ ಬಾಯ್ ದತ್ತ ಪ್ರಸಾದ್ ಗಾಂವ್ಕರ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಕರ್ಲೀಸ್‌ ಕ್ಲಬ್ ರೆಸ್ಟೋರೆಂಟ್‌ ಮಾಲೀಕ ಎಡ್ವಿನ್ ಮತ್ತು ರಾಮ ಮಾಂಡ್ರೇಕರ್ ಅವರನ್ನು ಎನ್‌ಡಿಪಿಎಸ್ ಆಕ್ಟ್ ಅಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಸುಧೀರ್‌ ಸಂಗ್ವಾನ್‌ ಹಾಗೂ ಸುಖ್ವಿಂದರ್‌, ಸೋನಾಲಿ ಪೋಗಟ್‌ರನ್ನು ಕೊಲೆ ಮಾಡುವ ಸಂಚು ರೂಪಿಸಿದ್ದರು. ಸುಧೀರ್‌ಗೆ 12 ಸಾವಿರ ರೂಪಾಯಿಗೆ ಡ್ರಗ್ಸ್‌ಅನ್ನು ನೀಡಿದ್ದು ದತ್ತ ಪ್ರಸಾದ್‌. ಇದಕ್ಕಾಗಿ ದತ್ತ ಪ್ರಸಾದ್‌ಗೆ ಸುಧೀರ್‌ ಸಂಗ್ವಾನ್‌ 5 ಸಾವಿರ ಹಾಗೂ 7 ಸಾವಿರ ರೂಪಾಯಿಯಲ್ಲಿ 2 ಬಾರಿ ಹಣ ಪಾವತಿ ಮಾಡಿದ್ದ. ಇನ್ನು ಕ್ಲಬ್‌ ಮಾಲೀಕ ಎಡ್ವಿನ್‌, ತನ್ನ ರೆಸ್ಟೋರೆಂಟ್‌ನಲ್ಲಿ ಡ್ರಗ್‌ ಬಳಕೆಗೆ ಯಾವುದೇ ವಿರೋಧ ವ್ಯಕ್ತಪಡಿಸಿರಲಿಲ್ಲ. ಇನ್ನು ರಾಮ ಮಂಡ್ರೇಕರ್‌ ಎನ್ನುವವನು ಡ್ರಗ್‌ ಪೆಡ್ಲರ್‌ ಆಗಿದ್ದು, ದತ್ತಪ್ರಸಾದ್‌ ಈತನ ಬಳಿಯೇ  ಸುಧೀರ್‌ಗೆ ಬೇಕಾದ ಡ್ರಗ್ಸ್‌ಅನ್ನು ಖರೀದಿ ಮಾಡಿದ್ದ.

Tap to resize

Latest Videos

ಗೋವಾ ಡಿಜಿಪಿ ಜಸ್ಪಾಲ್ ಸಿಂಗ್ (Goa DGP Jaspal Singh) ಪ್ರಕಾರ, ಆಗಸ್ಟ್ 22 ರ ರಾತ್ರಿ ತಾವು ಸೋನಾಲಿಗೆ (Sonali Phogat) ಬಲವಂತವಾಗಿ ಮಾದಕ ದ್ರವ್ಯ ನೀಡಿದ್ದಾಗಿ ಸುಧೀರ್ (sudhir sangwan) ಮತ್ತು ಸುಖ್ವಿಂದರ್ (Sukhwinder) ಒಪ್ಪಿಕೊಂಡಿದ್ದಾರೆ. ಅವರಿಗೆ ಮೆಥಾಂಫೆಟಮೈನ್  (MDMA)ಡ್ರಗ್‌ಅನ್ನು ನೀರಿನಲ್ಲಿ ಬೆರೆಸಿ ನೀಡಲಾಗಿತ್ತು. ಈ ಮೂವರು ಕೂಡ ಎಂಡಿಎಂಎಯನ್ನು ಹೋಟೆಲ್‌ ರೂಮ್‌ನಲ್ಲಿಯೇ ಮೂಸಿದ್ದರು. ಉಳಿದ ಎಂಡಿಎಂಎಯನ್ನು ನೀರಿನ ಬಾಟಲ್‌ನಲ್ಲಿ ಹಾಕಿಕೊಂಡು ಕರ್ಲೀಸ್‌ ಕ್ಲಬ್‌ಗೆ ತೆರಳಿದ್ದಾರೆ. ಸುಧೀರ್‌ ಇಲ್ಲಿ ಸೋನಾಲಿಗೆ ಇದೇ ಡ್ರಗ್ಸ್‌ಅನ್ನು ನೀಡಿದ್ದಾರೆ. ಡ್ರಗ್ಸ್‌ ಸೇವನೆಯಿಂದಾಗಿ ಮುಂಜಾನೆಯ ವೇಳೆಗೆ ಸೋನಾಲಿಯ ಆರೋಗ್ಯ ಹದೆಗೆಡಲು ಆರಂಭಿಸಿತ್ತು.

Sonali Phogat ನಿಗೂಢ ಸಾವು ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್, ದೇಹದಲ್ಲಿ 46 ಗಾಯದ ಗುರುತು ಪತ್ತೆ!

ಟಾಯ್ಲೆಟ್‌ನಲ್ಲಿಯೇ ಮಲಗಿದ್ದ ಸೋನಾಲಿ: ಇಬ್ಬರೂ ಆಕೆಯನ್ನು ವಾಶ್‌ರೂಮ್‌ಗೆ ಕರೆದೊಯ್ದಿದ್ದಾರೆ. ಅಲ್ಲಿ ಸೋನಾಲಿ ವಾಂತಿ ಮಾಡಿಕೊಂಡಿದ್ದಾಳೆ. ಸ್ವಲ್ಪ ಸಮಯದ ನಂತರ ಅವಳು ಹಿಂತಿರುಗಿ ಬಂದು ಡಾನ್ಸ್‌ ಮಾಡಲು ಪ್ರಾರಂಭಿಸಿದಳು. 4.30 ರ ಸುಮಾರಿಗೆ ಮತ್ತೆ ಶೌಚಾಲಯಕ್ಕೆ ಹೋಗಿದ್ದರು.ಆದರೆ ಆಕೆಗೆ ಈ ಸಮಯದಲ್ಲಿ ನಿಲ್ಲಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಸುಧೀರ್-ಸುಖ್ವಿಂದರ್ ಅವಳನ್ನು ಕರೆದುಕೊಂಡು ಹೋದಾಗ, ಅವಳು ಶೌಚಾಲಯದಲ್ಲಿಯೇ ಮಲಗಿಕೊಂಡಿದ್ದರು. ಇಬ್ಬರೂ ಶೌಚಾಲಯದಲ್ಲಿಯೇ ಕುಳಿತುಕೊಂಡಿದ್ದರು. ಬೆಳಗ್ಗೆ ಇಬ್ಬರೂ ಸೋನಾಲಿಯನ್ನು ಮೊದಲು ಪಾರ್ಕಿಂಗ್ ಏರಿಯಾಗೆ ಕರೆದುಕೊಂಡು ಹೋಗಿದ್ದರು. ಅಲ್ಲಿಂದ ಗ್ರ್ಯಾಂಡ್ ಲಿಯೋನಿ ರೆಸಾರ್ಟ್‌ಗೆ ಕರೆತಂದಿದ್ದರು. ಆರೋಗ್ಯ ಹದಗೆಟ್ಟ ಕಾರಣಕ್ಕೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದೇ ವೇಳೆ ಮಹಿಳಾ ಶೌಚಾಲಯದಲ್ಲಿ ಡ್ರಗ್ಸ್ ಅನ್ನು ಬಚ್ಚಿಟ್ಟಿದ್ದರು ಎಂದು ಹೇಳಲಾಗಿದೆ.

ಸೋನಾಲಿ ಪೋಗಟ್‌ ಕೇಸ್‌: ರೆಸ್ಟೋರೆಂಟ್‌ ಮಾಲೀಕನ ಬಂಧನ, ಬಾಥ್‌ರೂಮ್‌ನಲ್ಲಿ ಸಿಕ್ತು ಡ್ರಗ್ಸ್!

ಸುಧೀರ್‌ ಬ್ಲ್ಯಾಕ್‌ಮೇಲ್‌ ಮಾಡಿದ್ದ: ಉತ್ತರ ಪ್ರದೇಶದ ಸೀತಾಪುರ ಮೂಲದ ನಿರ್ದೇಶಕ ಹಾಗೂ ನಿರ್ಮಾಪಕ ಮೊಹಮದ್‌ ಅಕ್ರಮ್‌ ಅನ್ಸಾರಿ, ಸುಧೀರ್‌ ಬ್ಲ್ಯಾಕ್‌ಮೇಲ್‌ ಮಾಡುತ್ತಿರುವ ಬಗ್ಗೆ ಸೋನಾಲಿ ತಮಗೆ ಹೇಳಿದ್ದರು ಎಂದು ಹೇಳಿದ್ದಾರೆ.  ನಾನು 12 ಈವೆಂಟ್‌ಗಳಲ್ಲಿ ಕೆಲಸ ಮಾಡಲು ಸೋನಾಲಿ ಫೋಗಟ್ ಅವರನ್ನು ಸಂಪರ್ಕಿಸಿದ್ದೆ, ಆದರೆ ಸುಧೀರ್‌ನಿಂದಾಗಿ ಒಪ್ಪಂದಕ್ಕೆ ಸಹಿ ಹಾಕಲಾಗಲಿಲ್ಲ. ನಾನು ಮೇಡಂ ಅವರನ್ನು ಸಂಪರ್ಕಿಸಿದಾಗ, ನನ್ನ ಕೆಲವು ಪುರಾವೆಗಳು ಸುಧೀರ್ ಬಳಿ ಇವೆ, ಅದಕ್ಕೆ ಅವರು ನನ್ನನ್ನು ಬ್ಲ್ಯಾಕ್ ಮೇಲ್ ಮಾಡುತ್ತಾರೆ ಎಂದು ಹೇಳಿದ್ದರು ಎಂದಿದ್ದಾರೆ.

click me!