
ಚನ್ನಪಟ್ಟಣ(ಡಿ.16): ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ರವರ ಭಾವ ಮಹದೇವಯ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಮಿಳುನಾಡಿನಲ್ಲಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆಂದು ತಿಳಿದು ಬಂದಿದೆ.
ತಮಿಳುನಾಡು ಮೂಲದ ಮುರುಗೇಶ್(40) ಬಂಧಿತ ಆರೋಪಿ. ಈತ ತಮಿಳುನಾಡಿನ ಇನ್ನಿಬ್ಬರು ಸ್ನೇಹಿತರ ಸಹಕಾರದಿಂದ ಕೊಲೆ ಮಾಡಿರುವುದಾಗಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಮುರುಗೇಶ್, ಈ ಹಿಂದೆ ಯೋಗೇಶ್ವರ್ ಸಹೋದರ ಗಂಗಾಧರ್ ಅವರ ತೋಟದ ಕಾವಲುಗಾರನಾಗಿದ್ದ. ಮಹದೇವಯ್ಯನವರ ಮನೆ ಪಕ್ಕದ ತೋಟದಲ್ಲಿ ಪತ್ನಿ ಸಮೇತ ವಾಸವಾಗಿದ್ದ. ಆದರೆ, ಈತನನ್ನು ಕೆಲಸದಿಂದ ಇತ್ತೀಚೆಗೆ ತೆಗೆದುಹಾಕಲಾಗಿತ್ತು.
ಮಾಜಿ ಸಚಿವ ಸಿಪಿ ಯೋಗೇಶ್ವರ್ ಭಾವ ಮಹದೇವಯ್ಯ ಕೊಲೆಯಾದ್ರಾ? ದಟ್ಟ ಕಾಡೊಳಗೆ ಮೂಟೆಯಲ್ಲಿ ಶವ ಪತ್ತೆ!
ಹಣಕ್ಕಾಗಿ ಕೊಲೆಯಾ ಮಾಡಿರಬಹುದಾ?:
ಈ ಹಿಂದೆ ಇಲ್ಲಿ ಕೆಲಸ ಮಾಡುವಾಗ ಮುರುಗೇಶ್, ಮಹದೇವಯ್ಯನವರ ವಿಶ್ವಾಸ ಗಳಿಸಿದ್ದನು. ಜಮೀನು ಮಾರಿರುವ ಹಿನ್ನೆಲೆಯಲ್ಲಿ ಮಹದೇವಯ್ಯನವರ ಬಳಿ ಅಪಾರ ಹಣವಿದೆ ಎಂಬ ಮಾಹಿತಿ ಇದ್ದಿದ್ದರಿಂದ ತಮಿಳುನಾಡಿನ ತನ್ನಿಬ್ಬರು ಸ್ನೇಹಿತರ ಸಹಕಾರದಿಂದ ಈ ಕೃತ್ಯ ಎಸಗಿದ್ದಾನೆ ಎನ್ನಲಾಗುತ್ತಿದೆ. ಕೊಲೆಯಾದ ನಂತರ ಆತ ನಾಪತ್ತೆಯಾಗಿದ್ದು ಪೊಲೀಸರಿಗೆ ಅನುಮಾನ ಉಂಟಾಯಿತು. ಹೀಗಾಗಿ ಪೊಲೀಸರು ಆತನ ಬೆನ್ನುಬಿದ್ದಿದ್ದರು.
ಘಟನೆ ಹಿನ್ನೆಲೆ :
ಡಿ.1ರಂದು ತಾಲೂಕಿನ ಚಕ್ಕೆರೆ ಬಳಿಯ ವಡ್ಡರದೊಡ್ಡಿ ತೋಟದ ಮನೆಯಿಂದ ಕಾರು ಸಮೇತ ಮಹದೇವಯ್ಯ ನಾಪತ್ತೆಯಾಗಿದ್ದು, ಈ ಸಂಬಂಧ ನಾಲ್ಕು ಪ್ರತ್ಯೇಕ ತಂಡಗಳ ರಚಿಸಿಕೊಂಡ ಪೊಲೀಸರು ಪ್ರಕರಣದ ಬೆನ್ನು ಹತ್ತಿದ್ದರು. ಡಿ.3ರಂದು ರಾತ್ರಿ ರಾಮಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಮಹದೇವಯ್ಯ ಕಾರು ಪತ್ತೆಯಾಗಿ, ಅದೇ ಹಾದಿಯಲ್ಲಿ ತನಿಖೆ ಚುರುಕುಗೊಳಿಸದ ಪರಿಣಾಮ ಡಿ.4ರ ಮಧ್ಯಾಹ್ನ ರಾಮಾಪುರದಿಂದ ಕೌದಳ್ಳಿಗೆ ತೆರಳುವ ಕಾಡಿನಲ್ಲಿ ಮಹದೇವಯ್ಯ ಶವ ಪತ್ತೆಯಾಗಿತ್ತು.
ತೋಟದ ಮನೆಯಿಂದ ರಾಮಾಪುರವರೆಗಿನ ದಾರಿಯಲ್ಲಿನ ಸಿಸಿಟಿವಿ ದೃಶ್ಯಾವಳಿಗಳು, ಕೊಲೆಯ ಹಿಂದಿರುವ ಕಾರಣಗಳನ್ನು ಕೆದಕುತ್ತಾ ಹೋದಂತೆ ಜಟಿಲವಾಗತೊಡಗಿತು. ಈ ಕೊಲೆ ಪ್ರಕರಣದ ಆರೋಪಿ ಅಂತಿಮವಾಗಿ ಮಹದೇವಯ್ಯನವರ ಉತ್ತರ ಕ್ರಿಯಾಧಿಗಳಂದು ಪತ್ತೆಯಾಗಿದ್ದು, ಆ ಮೂಲಕ ಇಲ್ಲಿಯವರೆಗೆ ಎದ್ದಿದ್ದ ಊಹಾಪೋಹಗಳಿಗೆ ತೆರೆ ಎಳೆದಂತಾಗಿದೆ.
ತಲೆನೋವಾಗಿದ್ದ ಚಲನವಲನ:
ಡಿ.4ರ ರಾತ್ರಿ ಮಹದೇವಯ್ಯನವರ ಕೊಲೆ ಮಾಡಿರುವ ಆರೋಪಿಗಳು ಮೊಬೈಲ್ ಬಳಸದೆ ಚಾಲಕಿತನ ತೋರಿದ್ದು, ಕೊಲೆ ಮಾಡಿ ಶವವನ್ನು ಕಾಡಿನಲ್ಲಿ ಅಡಗಿಸಿಟ್ಟು ನಂತರ ಮಹದೇಶ್ವರ ಬೆಟ್ಟಕ್ಕೆ ತೆರಳಿ ಅಲ್ಲಿ ಮುಡಿಕೊಟ್ಟು ಬಟ್ಟೆ ಬದಲಿಸಿ ನಂತರ ತಮಿಳುನಾಡಿಗೆ ತೆರಳಿ ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ.
ರಾಮನ ಹೆಸರಿದ್ದರೆ ಕಾಂಗ್ರೆಸ್ಸಿಗರಿಗೆ ಅಲರ್ಜಿನಾ: ಯೋಗೇಶ್ವರ್
ಒಂದೇ ಕಡೆ ತೆರಳದೆ ಬೇರೆ ಬೇರೆಯಾಗಿ ಸಂಚರಿಸುತ್ತಾ ಪೊಲೀಸರಿಗೆ ತಲೆನೋವಾಗಿದ್ದ. ತಮಿಳುನಾಡಿನ ಆಸ್ಪತ್ರೆಯೊಂದರಲ್ಲಿ ಹಾವು ಕಚ್ಚಿದ್ದರಿಂದ ಮುರುಗೇಶ್ ಚಿಕಿತ್ಸೆಗೆಂದು ದಾಖಲಾಗಿದ್ದನು. ಪೊಲೀಸರು ಬಂಧಿಸಲು ತೆರಳಿದ್ದ ವೇಳೆ ಪರಾರಿಯಾಗಲು ಯತ್ನಿಸಿ ಸಿಕ್ಕಿಬಿದ್ದಿದ್ದಾನೆ ಎನ್ನಲಾಗಿದೆ.
ಅಧಿಕೃತವಾಗಿ ಖಚಿತಪಡಿಸಿಲ್ಲ
ಕೊಲೆ ಆರೋಪಿ ಮುರುಗನ್ ಬಂಧನವನ್ನು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಕಾರ್ತಿಕ್ ರೆಡ್ಡಿಯವರು ಅಧಿಕೃತವಾಗಿ ಖಚಿತಪಡಿಸಿಲ್ಲ. ಬಲ್ಲ ಮೂಲಗಳ ಪ್ರಕಾರ 400 ಕಿ.ಮಿ. ದೂರದಲ್ಲಿರುವ ಆರೋಪಿಯನ್ನು ಈಗಷ್ಟೆ ಬಂಧಿಸಿ ಕರೆತರಲಾಗುತ್ತಿದ್ದು, ಈತ ಯಾವ ಕಾರಣಕ್ಕೆ ಕೊಲೆ ಮಾಡಿದ್ದಾನೆ? ಇವನ ಹಿಂದೆ ಯಾರದರೂ ಇದ್ದಾರೆಯೇ ಎಂಬೆಲ್ಲಾ ಮಾಹಿತಿಗಳು ಆತನನ್ನು ವಿಚಾರಣೆಗೆ ಒಳಪಡಿಸಿದ ನಂತರವಷ್ಟೆ ತಿಳಿದು ಬರಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ