ಆಸ್ತಿ ವಿವಾದ ತಾರಕಕ್ಕೇರಿದ ಹಿನ್ನೆಲೆಯಲ್ಲಿ ಸ್ವಂತ ಅಣ್ಣ ತನ್ನ ತಮ್ಮನನ್ನು ಕೊಲೆಗೈದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೇಕವಾಡ ಗ್ರಾಮದ ಬಳಿ ನಡೆದ ಘಟನೆ.
ಖಾನಾಪುರ(ಜ.20): ಆಸ್ತಿ ವಿವಾದ ತಾರಕಕ್ಕೇರಿದ ಹಿನ್ನೆಲೆಯಲ್ಲಿ ಸ್ವಂತ ಅಣ್ಣ ತನ್ನ ತಮ್ಮನನ್ನು ಕೊಲೆಗೈದ ಘಟನೆ ತಾಲೂಕಿನ ಬೇಕವಾಡ ಗ್ರಾಮದ ಬಳಿ ಗುರುವಾರ ವರದಿಯಾಗಿದೆ. ಯಲ್ಲಪ್ಪ ಶಾಂತಾರಾಮ ಗುರವ (36) ಮೃತ ವ್ಯಕ್ತಿ. ರಾಜು ಶಾಂತಾರಾಮ ಗುರವ (40) ತಮ್ಮನನ್ನು ಹತ್ಯೆಗೈದ ಆರೋಪಿ.
ಇವರಿಬ್ಬರ ನಡುವೆ ಬಹಳ ದಿನಗಳಿಂದ ಆಸ್ತಿಗಾಗಿ ಮನಸ್ತಾಪವಿತ್ತು. ಗುರುವಾರ ಇದೇ ವಿಷಯಕ್ಕಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಯಲ್ಲಪ್ಪ ತನ್ನ ಸಹೋದರ ರಾಜು ಮೇಲೆ ಹಲ್ಲೆ ನಡೆಸಿದ್ದ. ತಮ್ಮನ ಹಲ್ಲೆಯಿಂದ ತಪ್ಪಿಸಿಕೊಳ್ಳಲು ರಾಜು ಕೈಗೆ ಸಿಕ್ಕ ಕಟ್ಟಿಗೆಯಿಂದ ಯಲ್ಲಪ್ಪನ ಮೇಲೆ ಪ್ರತಿ ಹಲ್ಲೆ ನಡೆಸಿದ್ದು, ರಾಜು ಬೀಸಿದ ಕಟ್ಟಿಗೆ ಯಲ್ಲಪ್ಪನ ತಲೆಗೆ ತಗುಲಿದ್ದರಿಂದ ತೀವ್ರವಾಗಿ ಗಾಯಗೊಂಡ ಯಲ್ಲಪ್ಪ ಸ್ಥಳದಲ್ಲೇ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ.
ಭಾವನೊಂದಿಗೆ ಅನೈತಿಕ ಸಂಬಂಧ ಶಂಕೆ: ಪತ್ನಿ ಕೊಂದು ಆಕೆಯ ಅಣ್ಣನಿಗೆ ಹತ್ಯೆ ಮೆಸೇಜ್!
ಈ ಘಟನೆಯಲ್ಲಿ ರಾಜು ಅವರಿಗೂ ತೀವ್ರವಾಗಿ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.