ಬಾಲಕಿ ಬಹಿರ್ದೆಸಗೆ ಹೋದ ಸಂದರ್ಭದಲ್ಲಿ ಕಬ್ಬಿನ ಗದ್ದೆಗೆ ಎಳೆದೊಯ್ದು ಅತ್ಯಾಚಾರ
ಕಲಬುರಗಿ(ನ.02): 15 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಆಳಂದ ತಾಲೂಕಿನ ಗ್ರಾಮವೊಂದರಲ್ಲಿ ಈ ಕೃತ್ಯ ನಡೆದಿದ್ದು, ಬಾಲಕಿ ಬಹಿರ್ದೆಸಗೆ ಹೋದ ಸಂದರ್ಭದಲ್ಲಿ ಕಬ್ಬಿನ ಗದ್ದೆಗೆ ಎಳೆದೊಯ್ದು ಅತ್ಯಾಚಾರ ನಡೆಸಲಾಗಿದೆ. ಅಲ್ಲದೇ ಅವಳದೇ ವೇಲ್‌ನಿಂದ ಕತ್ತಿಗೆ ಉರುಲು ಬಿಗಿದು ಕೊಲೆ ಮಾಡಲಾಗಿದೆ.
ಕಬ್ಬಿನ ಗದ್ದೆಯಲ್ಲಿ ಶವ ಪತ್ತೆ
15 ವರ್ಷದ 9 ನೇ ತರಗತಿಯ ವಿದ್ಯಾರ್ಥಿನಿಯ ಶವ ನಿನ್ನೆ(ಮಂಗಳವಾರ) ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿದೆ. ಅರೆಬೆತ್ತಲೆ ಸ್ಥಿತಿಯಲ್ಲಿ ಬಾಲಕಿಯ ದೇಹ ಪತ್ತೆಯಾಗಿದ್ದು, ಆಕೆಯ ವೇಲ್ ನಿಂದಲೇ ಆಕೆಯ ಕೊರಳಿಗೆ ಉರುಳು ಬಿಗಿದು ಕೊಲೆ ಮಾಡಲಾಗಿದೆ. ಮೇಲ್ನೋಟಕ್ಕೆ ಅತ್ಯಾಚಾರ ಮತ್ತು ಕೊಲೆ ಎನ್ನುವಂತಿದೆ. ಅಲ್ಲದೇ ಬಾಲಕಿಯ ಕುಟುಂಬದವರು ರೇಪ್ & ಮರ್ಡರ್ ಕೇಸ್ ನೀಡಿದ್ದಾರೆ.
ಮಂಡ್ಯ: ಮಳವಳ್ಳಿ ಬಾಲಕಿ ರೇಪ್ ಅಂಡ್ ಮರ್ಡರ್ ಕೇಸ್, ಜಾರ್ಜ್‌ಶೀಟ್ ಸಲ್ಲಿಕೆ
ಪಕ್ಕದೂರಿನ ಬಾಲಕಿ
ಕೊಲೆಯಾದ ಈ ನತದೃಷ್ಟ ಬಾಲಕಿ ಮೂಲತಃ ಬೇರೆ ಊರಿನವಳಾದರೂ ತನ್ನ ಸಂಬಂಧಿಕರ ಊರಲ್ಲಿದ್ದು ಶಾಲೆ ಓದುತ್ತಿದ್ದಳು. ನಿನ್ನೆ ಯಥಾ ರೀತಿ ಮಧ್ಯಾಹ್ನ ಬಹಿರ್ದೆಸೆಗೆ ಹೋಗಿದ್ದಾಗ ಈ ಕೃತ್ಯ ನಡೆದಿದೆ. ಗ್ರಾಮಕ್ಕೆ ಹೊಂದಿಕೊಂಡಂತೆಯೇ ಇರುವ ಕಬ್ಬಿನ ಗದ್ದೆಗೆ ಬಲವಂತವಾಗಿ ಕರೆದುಕೊಂಡು ಹೋಗಿ ಅಲ್ಲಿ ರೇಪ್ ಮತ್ತು ಮರ್ಡರ್ ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಎಸ್ಪಿ ಭೇಟಿ
ಕೊಲೆ ನಡೆದ ಊರಿಗೆ ಕಲಬುರಗಿ ಎಸ್ಪಿ ಇಶಾ ಪಂಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಯುವಕರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಪ್ರಕರಣದ ತನಿಖೆ ಮುಂದುವರೆದಿದ್ದು ಇನ್ನೂ ಅಟ್ಟಹಾಸ ಮೆರೆದ ಕಾಮುಕರು ಪತ್ತೆಯಾಗಬೇಕಾಗಿದೆ.
ಯುವತಿ ಮೇಲೆ ನಿರಂತರ ಅತ್ಯಾಚಾರ; ಚಳ್ಳಕೆರೆ ಸಿಪಿಐ ಜಿ.ಉಮೇಶ್ ವಿರುದ್ಧ ದೂರು
ಕಲಬುರಗಿ ಮತ್ತು ಆಳಂದನಲ್ಲಿ ಪ್ರತಿಭಟನೆ
ಆಳಂದ ತಾಲೂಕಿನ ಗ್ರಾಮವೊಂದರಲ್ಲಿ ನಡೆದ ಈ ರೇಪ್ ಆಂಡ್ ಮರ್ಡರ್ ಪ್ರಕರಣದ ಆರೋಪಿಗಳಿಗೆ ಎನ್‌ಕೌಂಟರ್ ಮಾಡಬೇಕು ಎಂದು ಆಗ್ರಹಿಸಿ ರಾಮಸೇನಾ ಸಂಘಟನೆಯ ಕಾರ್ಯಕರ್ಯರು ಕಲಬುರಗಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಇಂದು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಇದೇ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಆಳಂದನಲ್ಲೂ ಪ್ರತಿಭಟನೆ ನಡೆದಿದೆ.
ಬೆಚ್ಚಿ ಬಿದ್ದ ಜನ
ಈ ಭೀಭತ್ಸ ಕೃತ್ಯದಿಂದಾಗಿ ಆ ಗ್ರಾಮದ ಜನ ಬೆಚ್ಚಿ ಬೀಳುವಂತಾಗಿದೆ. ಮೃತ ಬಾಲಕಿಯ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.