ಗಾಳಿಪಟ ಹಾರಿಸುತ್ತಿದ್ದಾಗ ವಿದ್ಯುತ್‌ ಸ್ಪರ್ಶದಿಂದ ಬಾಲಕ ಸಾವು: ಅಪಾರ್ಟ್‌ಮೆಂಟ್‌ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಬಲಿ?

By BK AshwinFirst Published Jan 14, 2024, 11:47 AM IST
Highlights

ಬಾಲಕ ತನಿಷ್ಕ್ ತನ್ನ ಸೋದರ ಸಂಬಂಧಿ ಹಾಗೂ ಸ್ನೇಹಿತರೊಂದಿಗೆ ಟೆರೇಸ್ ಮೇಲೆ ಗಾಳಿಪಟ ಹಾರಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಟೆರೇಸ್ ಮೇಲಿನ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. 

ಹೈದರಾಬಾದ್‌ (ಜನವರಿ 14, 2024): ಅಪಾರ್ಟ್‌ಮೆಂಟ್ ಕಟ್ಟಡದ ಟೆರೇಸ್‌ನಲ್ಲಿ ತನ್ನ ಸ್ನೇಹಿತರೊಂದಿಗೆ ಗಾಳಿಪಟ ಹಾರಿಸುತ್ತಿದ್ದಾಗ ವಿದ್ಯುತ್ ಅವಘಡಕ್ಕೆ 11 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಅಪಾರ್ಟ್‌ಮೆಂಟ್ ಕಟ್ಟಡದ ಟೆರೇಸ್‌ನಲ್ಲಿ ತನ್ನ ಸ್ನೇಹಿತರೊಂದಿಗೆ ಗಾಳಿಪಟ ಹಾರಿಸುತ್ತಿದ್ದಾಗ ವಿದ್ಯುತ್ ಅವಘಡಕ್ಕೆ ಬಾಲಕ ಬಲಿಯಾಗಿರುವ ಘಟನೆ ತೆಲಂಗಾಣ ರಾಜಧಾನಿಯಲ್ಲಿ ನಡೆದಿದೆ. 

ಅತ್ತಾಪುರದ ಲಕ್ಷ್ಮೀ ವಾಣಿ ಟವರ್ಸ್‌ನಲ್ಲಿ ಘಟನೆ ನಡೆದಿದ್ದು, ಅಪಾರ್ಟ್‌ಮೆಂಟ್ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 304A ಅಡಿಯಲ್ಲಿ ನಿರ್ಲಕ್ಷ್ಯದಿಂದ ಸಾವಿಗೆ ಕಾರಣ ಆರೋಪದಡಿ ಕೇಸ್‌ ದಾಖಲಿಸಲಾಗಿದೆ. 

ಇದನ್ನು ಓದಿ: ಹೈದರಾಬಾದ್‌ - ಬೆಂಗಳೂರು ಹೆದ್ದಾರಿಯಲ್ಲಿ ವೋಲ್ವೋ ಬಸ್‌ಗೆ ಬೆಂಕಿ: ಸುಟ್ಟು ಕರಕಲಾದ ಮಹಿಳೆ, ನಾಲ್ವರಿಗೆ ಗಂಭೀರ ಗಾಯ

ಬಾಲಕ ತನಿಷ್ಕ್ ತನ್ನ ಸೋದರ ಸಂಬಂಧಿ ಹಾಗೂ ಸ್ನೇಹಿತರೊಂದಿಗೆ ಟೆರೇಸ್‌ ಮೇಲೆ ಗಾಳಿಪಟ ಹಾರಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಟೆರೇಸ್ ಮೇಲಿನ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಸಂಬಂಧಿ ಅಭಿಷೇಕ ಉಬಾಳೆ ಅತ್ತಾಪುರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಜನವರಿ 12 ರಂದು ಮಧ್ಯಾಹ್ನ 3.15 ರ ಸುಮಾರಿಗೆ ಈ ಘಟನೆ ನಡೆದಿದ್ದು, ಅದೇ ದಿನ ಲಕ್ಷ್ಮೀ ವಾಣಿ ಟವರ್ಸ್ ಆಡಳಿತದ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ತನಿಷ್ಕ್ ತನ್ನ 15 ವರ್ಷದ ಸೋದರಸಂಬಂಧಿ ಮೋಹಿತ್ ಜೊತೆ ಟೆರೇಸ್ ಮೇಲೆ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್ ತಗುಲಿದೆ. 

ಇದನ್ನು ಓದಿ: ಮಗನ ಮುಖದಿಂದ ಗಂಡನ ನೆನಪಾಗ್ತಿದ್ದಕ್ಕೆ ಹತ್ಯೆ ಮಾಡಿದ್ರಾ ಬೆಂಗಳೂರು ಸ್ಟಾರ್ಟಪ್‌ ಕಂಪನಿಯ ಸಿಇಒ?

ಗಾಳಿಪಟ ಹಾರಿಸುತ್ತಿದ್ದ ತಾನು ಹಾಗೂ ತನ್ನ ಸ್ನೇಹಿತರನ್ನು ತನಿಷ್ಕ್‌ ಸೇರಿಕೊಂಡಿದ್ದ ಎಂದು ಮೋಹಿತ್‌ ಮಾಧ್ಯಮಗಳಿಗೆ ತಿಳಿಸಿದ್ದಾನೆ. ಕೆಲವು ಮೆಟಾಲಿಕ್ ರಾಡ್‌ಗಳಿಗೆ ವಿದ್ಯುತ್ ತಂತಿ ತಗುಲಿತ್ತು. ಅಂತಹ ರಾಡ್ ಅನ್ನು ಸ್ಪರ್ಶಿಸಿದ ಬಳಿಕ ತನಿಷ್ಕ್ ಕುಸಿದು ಬಿದ್ದಿದ್ದಾನೆ ಎಂದೂ ಹೇಳಿದ್ದಾನೆ. 

ಬೆಂಗಳೂರಿನಲ್ಲೂ ಸಹ ಇಂತದ್ದೇ ಆರೋಪ ಇತ್ತೀಚೆಗೆ ಕೇಳಿಬಂದಿತ್ತು. ಡಿಸೆಂಬರ್ 28, 2023 ರಂದು, ಆಟವಾಡಲು ಹೊರಗೆ ಹೋಗಿದ್ದ ಮಾನ್ಯ ಎಂಬ 10 ವರ್ಷದ ಬಾಲಕಿ ಬೆಂಗಳೂರಿನ ವಸತಿ ಅಪಾರ್ಟ್ಮೆಂಟ್ ಸಂಕೀರ್ಣದ ಈಜುಕೊಳದಲ್ಲಿ ಶವವಾಗಿ ಪತ್ತೆಯಾಗಿದ್ದಳು. ಆರಂಭದಲ್ಲಿ ಆಕೆ ಮುಳುಗಿ ಮೃತಪಟ್ಟಿದ್ದಾಳೆಂದು ನಂಬಲಾಗಿದ್ದರೂ, ಆಕೆಯ ಕುಟುಂಬದವರು ವಿದ್ಯುತ್‌ ಆಘಾತದಿಂದ ಮೃತಪಟ್ಟಿದ್ದಾಳೆಂದು ಆರೋಪಿಸಿದರು. ಆಕೆಗೆ ಸೀಜರ್‌ ಉಂಟಾಯಿತೆಂದೂ ಹೇಳಲಾಗಿದೆ.

2019 ರಲ್ಲಿ, ಹೈದರಾಬಾದ್‌ನ ರಾಯದುರ್ಗಂನಲ್ಲಿ 9 ವರ್ಷದ ಬಾಲಕನೊಬ್ಬ ಲಿಫ್ಟ್ ಶಾಫ್ಟ್‌ಗೆ ಬಿದ್ದು ಮೃತಪಟ್ಟಿದ್ದ. ಅದೇ ವರ್ಷ ಹೈದರಾಬಾದ್‌ನಲ್ಲೇ 6 ವರ್ಷದ ಬಾಲಕನೊಬ್ಬ ಆಟವಾಡುತ್ತಿದ್ದ ಸಿಮೆಂಟ್ ಬೆಂಚಿನ ಮೇಲೆ ಉರುಳಿ ಬಿದ್ದು ಸಾವಿಗೀಡಾಗಿದ್ದ ಘಟನೆಗಳೂ ನಡೆದಿತ್ತು. 

click me!