
ನವದೆಹಲಿ: ಚಾಂಪಿಯನ್ಸ್ ಟ್ರೋಫಿ ವಿಜೇತ ಟೀಂ ಇಂಡಿಯಾ ಆಟಗಾರರು ಮಂಗಳವಾರ ತವರಿಗೆ ಮರಳಿದ್ದಾರೆ. ಆದರೆ ಈ ಬಾರಿ ಯಾವುದೇ ಸಂಭ್ರಮಾಚರಣೆ ಇರುವುದಿಲ್ಲ. ಬದಲಾಗಿ ಆಟಗಾರರು ಮಾ.22ರಿಂದ ಅರಂಭವಾಗಲಿರುವ ಐಪಿಎಲ್‌ಗೆ ಸಿದ್ಧರಾಗಲಿದ್ದಾರೆ.
ಈ ಬಗ್ಗೆ ಬಿಸಿಸಿಐ ಮೂಲಗಳು ಮಾಹಿತಿ ನೀಡಿದ್ದು, ‘ಎಲ್ಲ ಆಟಗಾರರು ಮತ್ತು ಕುಟುಂಬಸ್ಥರು ದುಬೈನಿಂದ ಹಿಂದಿರುಗಿದ್ದಾರೆ. ಕೆಲವು ಆಟಗಾರರು ಒಂದೆರೆಡು ದಿನ ಅಲ್ಲೇ ಉಳಿಯಲಿದ್ದಾರೆ’ ಎಂದಿದೆ. ಐಪಿಎಲ್ 2 ತಿಂಗಳ ಕಾಲ ನಡೆಯಲಿದೆ. ಹೀಗಾಗಿ ಆಟಗಾರರಿಗೆ ವಿಶ್ರಾಂತಿ ಅಗತ್ಯವಿದ್ದು, ಐಪಿಎಲ್ ತಂಡ ಸೇರ್ಪಡೆಗೂ ಮುನ್ನ ಕೆಲ ದಿನಗಳು ವಿಶ್ರಾಂತಿ ಪಡೆಯಲಿದ್ದಾರೆ. ಇದೇ ಕಾರಣಕ್ಕೆ ಯಾವುದೇ ಸನ್ಮಾನ ಕಾರ್ಯಕ್ರಮ ಆಯೋಜಿಸಿಲ್ಲ.
ಇದನ್ನೂ ಓದಿ: ಗೆಲುವಿನೊಂದಿಗೆ WPL ಟೂರ್ನಿಗೆ RCB ಗುಡ್ ಬೈ
ಕೊಹ್ಲಿ ಅದ್ಭುತ ಫಾರ್ಮ್‌ಗೆ ಅಯ್ಯರ್ ಕಾರಣ: ಅಶ್ವಿನ್
ನವದೆಹಲಿ: ‘ಚಾಂಪಿಯನ್ಸ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಅದ್ಭುತ ಆಟವಾಡಲು ಶ್ರೇಯಸ್ ಅಯ್ಯರ್ ಅವರೇ ಕಾರಣ. 4ನೇ ಕ್ರಮಾಂಕದಲ್ಲಿ ಆಡುತ್ತಿರುವ ಅವರು ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳ ವಿರುದ್ಧ ಪ್ರಾಬಲ್ಯ ಸಾಧಿಸುವುದು ವಿರಾಟ್ ಕೊಹ್ಲಿ ನಿರಾಯಾಸವಾಗಿ ಆಡಲು ನೆರವಾಗುತ್ತಿದೆ’ ಎಂದು ಮಾಜಿ ಕ್ರಿಕೆಟಿಗ ಆರ್. ಅಶ್ವಿನ್ ಹೇಳಿದ್ದಾರೆ.
ಈ ಬಗ್ಗೆ ಯುಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಮಾತನಾಡಿರುವ ಅಶ್ವಿನ್, ‘ ನನ್ನ ಪ್ರಕಾರ ಪಂದ್ಯದಲ್ಲಿ ಗೇಮ್ ಚೇಂಜರ್ ಶ್ರೇಯಸ್ ಅಯ್ಯರ್. ಅದಕ್ಕೆ ಅವರ ಇತ್ತೀಚಿನ ಫಾರ್ಮ್ ಕಾರಣ. ವಿರಾಟ್ ಅವರ ಯಶಸ್ಸಿನಲ್ಲಿ ಶ್ರೇಯಸ್‌ರ ಪಾತ್ರವಿದೆ, ಶ್ರೇಯಸ್‌ರ ಯಶಸ್ಸಿನಲ್ಲಿ ವಿರಾಟ್ ಪಾತ್ರವಿದೆ. ಇದನ್ನೇ ಜೊತೆಯಾಟ ಎಂದು ಕರೆಯುವುದು’ ಎಂದಿದ್ದಾರೆ.
ಇದನ್ನೂ ಓದಿ: ಸಾರಾ ತೆಂಡೂಲ್ಕರ್ ಕೆಂಪು ಕಾರಿನ ಸವಾರಿ: ಸಚಿನ್ ಮಗಳ 5 ಗ್ಲಾಮರಸ್ ಫೋಟೋ ವೈರಲ್
ಡೆಲ್ಲಿ ನಾಯಕತ್ವ ಆಫರ್ ತಿರಸ್ಕರಿಸಿದ ರಾಹುಲ್?
ನವದೆಹಲಿ: ಐಪಿಎಲ್‌ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವವನ್ನು ಕರ್ನಾಟಕದ ಕೆ.ಎಲ್.ರಾಹುಲ್ ತಿರಸ್ಕರಿಸಿದ್ದಾರೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಕಳೆದ ಬಾರಿ ಲಖನೌ ತಂಡದಲ್ಲಿದ್ದ ರಾಹುಲ್‌ರನ್ನು ಈ ಬಾರಿ ಹರಾಜಿನಲ್ಲಿ ಡೆಲ್ಲಿ ತಂಡ ₹14 ಕೋಟಿ ನೀಡಿ ತನ್ನದಾಗಿಸಿಕೊಂಡಿತ್ತು.
ರಾಹುಲ್‌ರನ್ನೇ ನಾಯಕನಾಗಿ ನೇಮಿಸಲು ಫ್ರಾಂಚೈಸಿ ನಿರ್ಧರಿಸಿದ್ದರೂ, ಅದನ್ನು ರಾಹುಲ್ ತಿರಸ್ಕರಿಸಿದ್ದಾರೆ. ಬ್ಯಾಟಿಂಗ್‌ನತ್ತ ಹೆಚ್ಚಿನ ಗಮನಹರಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ರಾಹುಲ್ ಹೊರತುಪಡಿಸಿದರೆ ಡೆಲ್ಲಿ ತಂಡದ ನಾಯಕತ್ವ ರೇಸ್‌ನಲ್ಲಿ ಮುಂಚೂಣಿಯಲ್ಲಿರುವುದು ಅಕ್ಷರ್ ಪಟೇಲ್.
ಇದನ್ನೂ ಓದಿ: ಡೆಲ್ಲಿ ಕ್ಯಾಪಿಟಲ್ಸ್‌ಗೆ ಮತ್ತೆ ಕೈಕೊಟ್ಟ ಸ್ಟಾರ್ ಆಟಗಾರ; BCCI ನಿಂದ ಇಂಗ್ಲೆಂಡ್ ಕ್ರಿಕೆಟಿಗ 2 ವರ್ಷ ಬ್ಯಾನ್?
ಐಪಿಎಲ್‌ಗೆ ತಂಬಾಕು, ಮದ್ಯ ಜಾಹೀರಾತು ಬೇಡ: ಆರೋಗ್ಯ ಸಚಿವಾಲಯದಿಂದ ಸೂಚನೆ
ನವದೆಹಲಿ: ಮಾ.22ರಿಂದ ಅರಂಭವಾಗಲಿರುವ ಐಪಿಎಲ್‌ನಲ್ಲಿ ತಂಬಾಕು, ಆಲ್ಕೋಹಾಲ್ ಜಾಹೀರಾತುಗಳನ್ನು ನಿಷೇಧಿಸುವಂತೆ ಐಪಿಎಲ್ ಆಡಳಿತ ಮಂಡಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ. ಐಪಿಎಲ್ ಅಧ್ಯಕ್ಷ ಅರುಣ್ ಸಿಂಗ್ ಧುಮಾಲ್‌ಗೆ ಪತ್ರ ಬರೆದಿರುವ ಆರೋಗ್ಯ ಸೇವೆಗಳ ಮಹಾನಿರ್ದೇಶಕ, ಐಪಿಎಲ್ ಹೆಚ್ಚು ವೀಕ್ಷಣೆಗೆ ಒಳಪಡುವ ಕ್ರೀಡೆ. ಹೀಗಾಗಿ ತಂಬಾಕು, ಮದ್ಯ ಜಾಹೀರಾತು ತಪ್ಪು ಸಂದೇಶವನ್ನು ನೀಡುತ್ತದೆ ಎಂದಿದ್ದಾರೆ.
‘ತಂಬಾಕು ಮತ್ತು ಆಲ್ಕೋಹಾಲ್‌ಗೆ ಸಂಬಂಧಿಸಿದ ಜಾಹೀರಾತುಗಳಿಗೆ ನಿರ್ಬಂಧವನ್ನು ಹೇರಲು ಐಪಿಎಲ್ ಕಟ್ಟುನಿಟ್ಟಾಗಿ ನಿಯಮಗಳನ್ನು ಜಾರಿಗೆ ತರಬೇಕು. ಕ್ರೀಡಾಂಗಣದಲ್ಲಿ ಆಟದ ಸಮಯದಲ್ಲಿ ಅಥವಾ ಐಪಿಎಲ್ ಪಂದ್ಯ, ಕಾರ್ಯಕ್ರಮಗಳಲ್ಲಿ, ರಾಷ್ಟ್ರೀಯ ಚಾನೆಲ್‌ನಲ್ಲಿ ಪ್ರಸಾರದ ಸಂದರ್ಭದಲ್ಲಿ ತಂಬಾಕು, ಮದ್ಯ ಜಾಹೀರಾತುಗಳನ್ನು ನಿಷೇಧಿಸಬೇಕು’ ಎಂದು ಸಚಿವಾಲಯ ಸೂಚಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.