Ind vs WI: ಭಾರತ ಎದುರಿನ ಏಕದಿನ ಸರಣಿಗೆ ವೆಸ್ಟ್ ಇಂಡೀಸ್ ತಂಡ ಪ್ರಕಟ..! ತಂಡದಲ್ಲಿ ಅಚ್ಚರಿಯ ಆಯ್ಕೆ

By Naveen Kodase  |  First Published Jul 25, 2023, 1:39 PM IST

ಭಾರತ - ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಗೆ ಕ್ಷಣಗಣನೆ
ಜುಲೈ 27ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭ
ಏಕದಿನ ಸರಣಿಗೆ ಆತಿಥೇಯ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಪ್ರಕಟ


ಜಮೈಕಾ(ಜು.25): ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಮುಕ್ತಾಯದ ಬೆನ್ನಲ್ಲೇ ಇದೀಗ ಉಭಯ ತಂಡಗಳು ನಡುವಿನ ಸೀಮಿತ ಓವರ್‌ಗಳ ಸರಣಿಗೆ ಕ್ಷಣಗಣನೆ ಆರಂಭವಾಗಿದೆ. ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಜುಲೈ 27ರಿಂದ ಆರಂಭವಾಗಲಿದ್ದು, ಈ ಸರಣಿಗೆ ಇದೀಗ ಆತಿಥೇಯ ವೆಸ್ಟ್ ಇಂಡೀಸ್ ತಂಡ ಪ್ರಕಟಗೊಂಡಿದೆ. 

ಏಕದಿನ ಸರಣಿಗೆ ವೆಸ್ಟ್‌ ಇಂಡೀಸ್ ತಂಡದಲ್ಲಿ ಕೆಲವು ಅಚ್ಚರಿಯ ಆಯ್ಕೆಗಳು ನಡೆದಿವೆ. ಸುಮಾರು ಒಂದು ವರ್ಷಗಳ ಬಳಿಕ ಎಡಗೈ ಬ್ಯಾಟರ್ ಶಿಮ್ರೊನ್ ಹೆಟ್ಮೇಯರ್, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಸ್ಪೋಟಕ ಬ್ಯಾಟರ್‌ ಶಿಮ್ರೊನ್ ಹೆಟ್ಮೇಯರ್ 2021ರ ಜುಲೈನಲ್ಲಿ ಕೊನೆಯ ಬಾರಿಗೆ ವೆಸ್ಟ್ ಇಂಡೀಸ್ ಪರ ಏಕದಿನ ಕ್ರಿಕೆಟ್ ಪಂದ್ಯವನ್ನಾಡಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ ಆಡದಿದ್ದರೂ ಹೆಟ್ಮೇಯರ್, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಪರ ಅದ್ಭುತ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು. ಕೆಲ ತಿಂಗಳ ಹಿಂದಷ್ಟೇ ಮುಕ್ತಾಯವಾದ 2023ರ ಐಪಿಎಲ್ ಟೂರ್ನಿಯಲ್ಲಿ ಹೆಟ್ಮೇಯರ್, 14 ಪಂದ್ಯಗಳನ್ನಾಡಿ 300 ರನ್ ಬಾರಿಸಿದ್ದರು. 

Tap to resize

Latest Videos

Vanitha VR ಪುರುಷರ ಟಿ20ಗೆ ಮಹಿಳಾ ಕೋಚ್‌: ದೇಶದಲ್ಲೇ ಪ್ರಥಮ!

ಶಿಮ್ರೊನ್ ಹೆಟ್ಮೇಯರ್ ಜತೆ ವೇಗಿ ಒಶಾನೆ ಥಾಮಸ್‌, ಬರೋಬ್ಬರಿ ಎರಡೂವರೆ ವರ್ಷಗಳ ಬಳಿಕ ವಿಂಡೀಸ್ ಏಕದಿನ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ಒಶಾನೆ ಥಾಮಸ್‌, 2020ರ ಜನವರಿಯಲ್ಲಿ ಕೊನೆಯ ಬಾರಿಗೆ ವೆಸ್ಟ್ ಇಂಡೀಸ್ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದರು. ಇನ್ನು ವೆಸ್ಟ್ ಇಂಡೀಸ್ ತಂಡವನ್ನು ಆಯ್ಕೆ ಮಾಡಿದ್ದರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಆಯ್ಕೆ ಸಮಿತಿ ಮುಖ್ಯಸ್ಥ ಡೆಸ್ಮಂಡ್ ಹೇಯ್ನ್ಸ್," ನಾವು ಒಶಾನೆ ಹಾಗೂ ಶಿಮ್ರೊನ್ ಅವರನ್ನು ತಂಡದೊಳಗೆ ಸ್ವಾಗತಿಸುತ್ತಿದ್ದೇವೆ. ಈ ಹಿಂದೆಯೇ ಅವರು ಅಂತಾರಾಷ್ಟ್ರೀಯ ಏಕದಿನ ಪಂಡ್ಯಗಳನ್ನಾಡಿದ ಅನುಭವ ಹೊಂದಿದ್ದಾರೆ. ಅವರು ಇದೀಗ ನಮ್ಮ ತಂಡದೊಳಗೆ ಫಿಟ್ ಆಗಲಿದ್ದಾರೆ ಎನ್ನುವ ವಿಶ್ವಾಸವಿದೆ. ಹೊಸ ಚೆಂಡಿನೊಂದಿಗೆ ದಾಳಿ ನಡೆಸಿ ವಿಕೆಟ್ ಕಬಳಿಸುವ ಸಾಮರ್ಥ್ಯವನ್ನು ಒಶಾನೆ ಹೊಂದಿದ್ದಾರೆ. ಇನ್ನು ಶಿಮ್ರೊನ್‌ ಅವರ ಬ್ಯಾಟಿಂಗ್ ಶೈಲಿಯು ನಮ್ಮ ತಂಡದ ಮಧ್ಯಮ ಕ್ರಮಾಂಕಕ್ಕೆ ಬಲ ತಂದುಕೊಡಲಿದೆ ಹಾಗೂ ಅವರು ಮ್ಯಾಚ್‌ ಫಿನಿಶರ್ ಕೂಡಾ ಆಗಬಲ್ಲರು" ಎಂದು ಹೇಯ್ನ್ಸ್‌ ಹೇಳಿದ್ದಾರೆ.

ಪೂರನ್-ಹೋಲ್ಡರ್‌ಗೆ ಗೇಟ್‌ಪಾಸ್‌: ಇನ್ನು ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಹಾಗೂ ಸ್ಪೋಟಕ ಎಡಗೈ ಬ್ಯಾಟರ್ ನಿಕೋಲಸ್ ಪೂರನ್ ಹಾಗೂ ಸ್ಟಾರ್ ಆಲ್ರೌಂಡರ್ ಜೇಸನ್ ಹೋಲ್ಡರ್, ಭಾರತ ಎದುರಿನ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ. ವೆಸ್ಟ್ ಇಂಡೀಸ್ ತಂಡವು ಈಗಾಗಲೇ ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯಲು ವಿಫಲವಾಗಿದೆ. ಇದೀಗ ಹೊಸದಾಗಿ ತಂಡ ಕಟ್ಟುವ ನಿಟ್ಟಿನಲ್ಲಿ ವಿಂಡೀಸ್ ಕ್ರಿಕೆಟ್ ಮಂಡಳಿ ಹೆಜ್ಜೆಯಿಟ್ಟಿರುವ ಸುಳಿವು ನೀಡಿದೆ. 

ಕೊನೆಯ ದಿನ ಮಳೆಯದ್ದೇ ಆಟ; 2ನೇ ಟೆಸ್ಟ್‌ ಡ್ರಾನಲ್ಲಿ ಅಂತ್ಯ..!

ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಜುಲೈ 27, 29ರಂದು ಮೊದ​ಲೆ​ರಡು ಏಕ​ದಿನಕ್ಕೆ ಬಾರ್ಬ​ಡಾ​ಸ್‌​, ಆಗಸ್ಟ್‌ 1ರಂದು 3ನೇ ಏಕ​ದಿ​ನಕ್ಕೆ ಟ್ರಿನಿ​ಡಾಡ್‌ ಆತಿಥ್ಯ ವಹಿ​ಸ​ಲಿದೆ. 

ಏಕದಿನ ಸರಣಿಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ:

ಶಾಯ್ ಹೋಪ್(ನಾಯಕ), ರೋವ್ಮನ್ ಪೊವೆಲ್(ಉಪನಾಯಕ), ಅಲಿಕ್ ಅಥಂಜೆ, ಯಾನಿಕ್‌ ಕ್ಯಾರಿಯ್‌,  ಕೆಸೆ ಕಾರ್ಟಿ, ಡೊಮಿನಿಕ್ ಡ್ರೇಕ್ಸ್‌, ಶಿಮ್ರೊನ್ ಹೆಟ್ಮೇಯರ್, ಅಲ್ಜಾರಿ ಜೋಸೆಫ್‌, ಬ್ರೆಂಡನ್ ಕಿಂಗ್, ಕೈಲ್ ಮೇಯರ್ಸ್‌, ಗುಡಕೇಶ್‌ ಮೊಟೀ, ಜೇಡನ್‌ ಸೀಲ್ಸ್, ರೊಮ್ಯಾರಿಯೋ ಶೆಫರ್ಡ್‌, ಕೆವಿನ್ ಸಿಂಕ್ಲೈರ್ ಮತ್ತು ಒಶಾನೆ ಥಾಮಸ್.

ಏಕದಿನ ಸರಣಿಗೆ ಭಾರತ ತಂಡ:

ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್‌, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಇಶಾನ್ ಕಿಶನ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ(ಉಪನಾಯಕ), ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಯುಜುವೇಂದ್ರ ಚಹಲ್, ಕುಲ್ದೀಪ್ ಯಾದವ್, ಜಯದೇವ್ ಉನಾದ್ಕತ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಮುಕೇಶ್ ಕುಮಾರ್.

click me!