Vanitha VR ಪುರುಷರ ಟಿ20ಗೆ ಮಹಿಳಾ ಕೋಚ್‌: ದೇಶದಲ್ಲೇ ಪ್ರಥಮ!

By Kannadaprabha News  |  First Published Jul 25, 2023, 12:13 PM IST

ರಾಜ್ಯದ ಮಹಾರಾಜ ಟಿ20 ಟೂರ್ನಿಯಲ್ಲಿ ಪ್ರಯೋಗ
ಶಿವಮೊಗ್ಗ ಲಯನ್ಸ್‌ ಪುರುಷರ ತಂಡಕ್ಕೆ ವನಿತಾ ಕೋಚ್‌
ಭಾರ​ತ​ದಲ್ಲಿ ಪುರು​ಷರ ಟಿ20 ತಂಡಕ್ಕೆ ಪ್ರಧಾನ ಕೋಚ್‌ ಆದ ಮೊದಲ ಮಹಿಳೆ


- ಸ್ಪಂದನ್‌ ಕಣಿಯಾರ್‌, ಕನ್ನಡಪ್ರಭ

ಬೆಂಗ​ಳೂರು(ಜು.25): ‘ಬದಲಾವಣೆ ಜಗದ ನಿಯಮ’ ಎನ್ನುತ್ತಾರೆ. ಇದಕ್ಕೆ ಕ್ರಿಕೆಟ್‌ ಕೂಡ ಹೊರತಲ್ಲ. ಕಾಲಕಾಲಕ್ಕೆ ಪರಿಷ್ಕರಣೆಯಾಗುತ್ತಿರುವ ‘ಜಂಟಲ್‌ಮ್ಯಾನ್ಸ್‌ ಗೇಮ್‌’ನಲ್ಲಿ ಇದೀಗ ಮಹಿಳಾ ಕ್ರಾಂತಿಯಾಗುತ್ತಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಹಿಳಾ ತಂಡಗಳಿಗೆ ಈಗಲೂ ಪುರುಷ ತರಬೇತುದಾರರು ಇದ್ದರೆ, ಕರ್ನಾಟಕದಲ್ಲೊಂದು ಗುಣಾತ್ಮಕ ಪ್ರಯೋಗ ನಡೆದಿದೆ. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆ​ಎಸ್‌ಸಿಎ) ಆಯೋ​ಜಿ​ಸುವ ಮಹಾ​ರಾಜ ಟ್ರೋಫಿ ಟಿ20 ಟೂರ್ನಿಯ 2023ರ ಆವೃ​ತ್ತಿ​ಯಲ್ಲಿ ಶಿವ​ಮೊಗ್ಗ ಲಯನ್ಸ್‌ (ಪುರುಷರ) ತಂಡಕ್ಕೆ ಭಾರ​ತದ ಮಾಜಿ ಆಟ​ಗಾರ್ತಿ, ರಾಜ್ಯದ ವಿ.ಆರ್‌.ವ​ನಿತಾ ಪ್ರಧಾನ ಕೋಚ್‌ ಆಗಿ ನೇಮ​ಕ​ಗೊಂಡಿ​ದ್ದಾರೆ!

Tap to resize

Latest Videos

ಇತ್ತೀ​ಚೆ​ಗಷ್ಟೇ ನಡೆದ ಆಟ​ಗಾ​ರರ ಹರಾಜು ಪ್ರಕ್ರಿಯೆಯಲ್ಲಿ ತಂಡದ ಮಾಲಿ​ಕರು, ಇತರ ಸಹಾ​ಯಕ ಸಿಬ್ಬಂದಿ​ಯೊಂದಿಗೆ ಸೇರಿ ಬಲಿಷ್ಠ ತಂಡ ಕಟ್ಟಿ​ರುವ ವನಿತಾ, ಆಗಸ್ಟ್‌ 13ರಿಂದ 29ರ ವರೆಗೂ ನಡೆ​ಯ​ಲಿ​ರುವ ಟೂರ್ನಿ​ಯಲ್ಲಿ ತಮ್ಮ ತಂಡ​ವನ್ನು ಚಾಂಪಿ​ಯನ್‌ ಪಟ್ಟ​ಕ್ಕೇ​ರಿ​ಸುವ ವಿಶ್ವಾಸದಲ್ಲಿ​ದ್ದಾರೆ.

Deodhar Trophy 2023: ಮಯಾಂಕ್, ವಿದ್ವತ್ ಅಬ್ಬರಕ್ಕೆ ತಬ್ಬಿಬ್ಬಾದ ಉತ್ತರ ವಲಯ..!

ಭಾರ​ತ​ದಲ್ಲಿ ಪುರು​ಷರ ಟಿ20 ತಂಡಕ್ಕೆ ಪ್ರಧಾನ ಕೋಚ್‌ ಆದ ಮೊದಲ ಮಹಿಳೆ ಎನ್ನುವ ಹಿರಿಮೆಗೆ ಪಾತ್ರ​ರಾ​ಗಿ​ರುವ ವನಿತಾ, ಜಾಗ​ತಿಕ ಮಟ್ಟ​ದಲ್ಲಿ (ಐ​ಸಿಸಿಯಿಂದ ಮಾನ್ಯತೆ ಪಡೆದ ಟೂರ್ನಿ​ಗ​ಳ​ನ್ನಷ್ಟೇ ಪರಿ​ಗ​ಣಿ​ಸ​ಲಾ​ಗಿದೆ) ಈ ಹುದ್ದೆ ಅಲಂಕ​ರಿ​ಸಿದ 2ನೇ ಮಹಿಳೆ. ಅಬು​ಧಾಬಿ ಟಿ10 ಟೂರ್ನಿ​ಯ ಅಬು​ಧಾಬಿ ತಂಡಕ್ಕೆ ಇಂಗ್ಲೆಂಡ್‌ನ ಮಾಜಿ ವಿಕೆಟ್‌ ಕೀಪರ್‌ ಸಾರಾ ಟೇಲರ್‌ ಪ್ರಧಾನ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದು ಮೊದಲ ದಾಖಲೆ.

ತಮ್ಮ ನೇಮ​ಕದ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ ಸೋದರ ಸಂಸ್ಥೆ ‘ಕ​ನ್ನ​ಡ​ಪ್ರಭ’ದೊಂದಿಗೆ ಖುಷಿ ಹಂಚಿ​ಕೊಂಡ ವನಿತಾ, ‘ನಿವೃತ್ತಿ ಬಳಿ​ಕ ಪುರು​ಷರ ತಂಡಕ್ಕೆ ಕೋಚ್‌ ಆಗ​ಲು ಸಿದ್ಧತೆ ನಡೆ​ಸಿದ್ದೆನಾದರೂ, ಈ ಅವ​ಕಾಶ ಅನಿ​ರೀ​ಕ್ಷಿತ. ಶಿವ​ಮೊಗ್ಗ ಹಾಗೂ ಮತ್ತೊಂದು ತಂಡದ ಬಳಿ ಸಹಾ​ಯಕ ಕೋಚ್‌ ಹುದ್ದೆ ಕೇಳಿದ್ದೆ. ಶಿವ​ಮೊಗ್ಗ ತಂಡದ ಮಾಲಿ​ಕರು ನನ್ನನ್ನು ಮೊದಲು ಸಹಾ​ಯಕ ಕೋಚ್‌ ಆಗಿ ನೇಮಿ​ಸಿ​ಕೊ​ಳ್ಳು​ವು​ದಾ​ಗಿ ತಿಳಿ​ಸಿದ್ದರು. ಆದರೆ ಆ ಬಳಿಕ ಪ್ರಧಾನ ಕೋಚ್‌ ಹುದ್ದೆ ಆಫರ್‌ ಮಾಡಿ​ದಾಗ ಬಹ​ಳ ಖುಷಿ​ಯಾ​ಯಿತು’ ಎಂದರು.

ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿ: ಅಭಿನವ್‌, ಮಯಾಂಕ್‌ಗೆ ಬಂಪರ್‌! ಯಾವ ಆಟಗಾರರು ಯಾವ ತಂಡಕ್ಕೆ?

ಪುರು​ಷರ ತಂಡಕ್ಕೆ ಕೋಚಿಂಗ್‌ ಮಾಡು​ವ ಸವಾ​ಲಿನ ಕೆಲಸದ ಬಗ್ಗೆ ಭರವಸೆಯಿಂದಲೇ ಉತ್ತ​ರಿ​ಸಿದ ವನಿತಾ, ‘ನಾನು ಹಲವು ವರ್ಷಗಳಿಂದ ಪುರು​ಷರ ಕ್ರಿಕೆಟ್‌ ಕಡೆಗೆ ಹೆಚ್ಚು ಗಮನ ನೀಡುತ್ತಾ ಬಂದಿ​ದ್ದೇನೆ. ಅದ​ರ​ಲ್ಲೂ ಕರ್ನಾ​ಟ​ಕ ಕ್ರಿಕೆಟ್‌ನಲ್ಲಿನ ಬೆಳ​ವ​ಣಿ​ಗೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಕ್ಲಬ್‌ ಕ್ರಿಕೆಟ್‌ನತ್ತಲೂ ನಾನು ಕಣ್ಣಿ​ಟ್ಟಿದ್ದು, ಬಹು​ತೇಕ ಆಟಗಾ​ರರ ಬಗ್ಗೆ ಗೊತ್ತಿದೆ. ಆರ್‌ಸಿಬಿ ಮಹಿಳಾ ತಂಡದ ಫೀಲ್ಡಿಂಗ್‌ ಕೋಚ್‌ ಆಗಿ ಕೆಲಸ ಮಾಡು​ತ್ತಿ​ರು​ವುದು ನನ್ನ ಆತ್ಮ​ವಿ​ಶ್ವಾಸ ಹೆಚ್ಚಿ​ಸಿದೆ’ ಎಂದರು.

ವನಿ​ತಾ​ಗಿದೆ ಕೋಚಿಂಗ್‌ ಅನು​ಭ​ವ:

ಕರ್ನಾ​ಟಕ ಅಂಡರ್‌-16 ಬಾಲ​ಕಿ​ಯರ ತಂಡದ ಕೋಚ್‌ ಆಗಿ​ರುವ ವನಿತಾ, ಐಪಿ​ಎಲ್‌ನಲ್ಲಿ ಆರ್‌ಸಿಬಿ ತಂಡದ ಪರ ಸ್ಕೌಟಿಂಗ್‌(ಪ್ರ​ತಿ​ಭಾ​ನ್ವೇ​ಷಣೆ) ನಡೆ​ಸುತ್ತಾರೆ. ಮಹಿಳಾ ಐಪಿ​ಎಲ್‌ನಲ್ಲಿ ಆರ್‌ಸಿಬಿ ತಂಡದ ಫೀಲ್ಡಿಂಗ್‌ ಕೋಚ್‌ ಆಗಿ ಕಾರ‍್ಯ​ನಿ​ರ್ವ​ಹಿ​ಸುವ ಅವರು, ಇತ್ತೀ​ಚೆಗೆ ಆಸ್ಪ್ರೇ​ಲಿ​ಯಾಗೆ ತೆರಳಿ ಕೋಚಿಂಗ್‌ ಕೋರ್ಸ್‌ ಒಂದನ್ನು ಸಹ ಪೂರ್ತಿಗೊಳಿ​ಸಿ​ದ್ದಾರೆ.

ತಂಡ​ದಲ್ಲಿರುವ ಹಲ​ವ​ರು ನನ್ನ ಆತ್ಮೀಯ ಸ್ನೇಹಿ​ತ​ರು!

ಶಿವ​ಮೊಗ್ಗ ಲಯನ್ಸ್‌ ತಂಡ ಹರಾ​ಜಿ​ನಲ್ಲಿ ರಾಜ್ಯದ ತಾರಾ ಆಟ​ಗಾ​ರ​ರಾದ ಅಭಿ​ನವ್‌ ಮನೋ​ಹರ್‌, ಶ್ರೇಯಸ್‌ ಗೋಪಾಲ್‌, ವಾಸುಕಿ ಕೌಶಿಕ್‌ರನ್ನು ಖರೀ​ದಿ​ಸಿದೆ. ತಾರಾ ಆಟ​ಗಾ​ರರ ನಿರ್ವ​ಹಣೆ ಬಗ್ಗೆ ಮಾತ​ನಾ​ಡಿದ ವನಿತಾ, ‘ತಂಡ​ದ​ಲ್ಲಿ​ರುವ ಬಹು​ತೇಕರು ನನ್ನ ಸ್ನೇಹಿ​ತರು. ಅಭಿ​ನವ್‌ ಸೇರಿ ಕೆಲ​ವರೊಂದಿಗೆ ನಾನು ಕ್ರಿಕೆಟ್‌ ಆಡಿ​ದ್ದೇನೆ. ಹೀಗಾಗಿ ಅವರ ಬಲಾ​ಬಲದ ಬಗ್ಗೆ ಗೊತ್ತಿದೆ. ಈ ಹಂತ​ದಲ್ಲಿ ಆಟ​ಗಾ​ರ​ರಿಗೆ ಆಟದ ಬಗ್ಗೆ ಹೆಚ್ಚಾಗಿ ಹೇಳಿ​ಕೊ​ಡುವ ಅಗ​ತ್ಯ​ವೇನೂ ಇರು​ವು​ದಿಲ್ಲ. ಆಟ​ಗಾ​ರರ ನಿರ್ವ​ಹಣೆ, ಮಾನ​ಸಿಕವಾಗಿ ಅವ​ರನ್ನು ಫಿಟ್‌ ಆಗಿ​ಡು​ವುದು, ಪಂದ್ಯ​ಗ​ಳಿಗೆ ಬೇಕಿ​ರುವ ರಣ​ತಂತ್ರ ರೂಪಿ​ಸು​ವುದು ಕೋಚ್‌ ಆಗಿ ನನ್ನ ಕೆಲಸ. ಕಳೆದ 2-3 ವರ್ಷ​ದಲ್ಲಿ ಟಿ20 ಕ್ರಿಕೆಟ್‌ ದೊಡ್ಡ ಪ್ರಮಾ​ಣ​ದಲ್ಲಿ ಬದ​ಲಾ​ಗಿದೆ. ಹೀಗಾಗಿ ಬದ​ಲಾ​ವಣೆಗೆ ತಕ್ಕಂತೆ ಯಾರು ತಮ್ಮ ಆಟ ಬದ​ಲಿ​ಸಿ​ಕೊ​ಳ್ಳು​ತ್ತಾರೋ ಅವ​ರಿಗೆ ಯಶಸ್ಸು ಸಿಗ​ಲಿದೆ ಎನ್ನು​ವುದು ನನ್ನ ನಂಬಿಕೆ’ ಎಂದರು.

ಟೀಂ ಇಂಡಿಯಾ ಕೋಚ್‌ ಆಗು​ವಾ​ಸೆ

ಮುಂದೊಂದು ದಿನ ಭಾರತ ತಂಡದ ಕೋಚ್‌ ಆಗ​ಬೇಕು ಎನ್ನುವುದು ನನ್ನ ಕನಸು. ಅದ​ಕ್ಕಾಗಿ ಬೇಕಿ​ರುವ ಎಲ್ಲಾ ಪ್ರಯ​ತ್ನ​ಗ​ಳನ್ನು ಮಾಡ​ಲಿ​ದ್ದೇನೆ. ಬೇರೆ ಬೇರೆ ಕೋಚ್‌ಗಳ ಜೊತೆ ಕೆಲಸ ಮಾಡ​ಬೇಕು. ಅವರ ಕಾರ‍್ಯ​ನಿ​ರ್ವ​ಹಣೆಯ ರೀತಿ​ಗ​ಳನ್ನು ನೋಡಿ ಕಲಿ​ಯ​ಬೇಕು ಎನ್ನುವ ಹಂಬ​ಲ​ವಿದೆ. ಆ ನಿಟ್ಟಿ​ನಲ್ಲಿ ಇದು ನನ್ನ ಮೊದಲ ಹೆಜ್ಜೆ.

- ವಿ.ಆರ್‌.ವ​ನಿತಾ, ಶಿವ​ಮೊಗ್ಗ ತಂಡದ ಪ್ರಧಾನ ಕೋಚ್‌

ಮಹಿ​ಳೆ​ಯರು ಯಾಕೆ ಕೋಚ್‌ ಆಗ್ಬಾರ್ದು?

ಮಹಿ​ಳೆ​ಯರು ಯಾವ ಕ್ಷೇತ್ರ​ದಲ್ಲಿ ಯಶ​ಸ್ವಿ​ಯಾಗಿ ಕಾರ್ಯ​ನಿ​ರ್ವ​ಹಿ​ಸು​ತ್ತಿಲ್ಲ ಹೇಳಿ. ಹೀಗಿ​ರು​ವಾಗ ಪುರು​ಷರ ತಂಡಕ್ಕೆ ಮಹಿ​ಳೆ​ಯೊ​ಬ್ಬರು ಕೋಚ್‌ ಆಗು​ವು​ದ​ರಲ್ಲಿ ಏನು ತಪ್ಪಿದೆ. ವನಿತಾ ಒಬ್ಬ ಆಟ​ಗಾ​ರ್ತಿ​ಯಾ​ಗಿ ಯಶಸ್ಸು ಕಂಡಿ​ದ್ದಾರೆ. ಕೋಚಿಂಗ್‌ನಲ್ಲೂ ಅನು​ಭವ ಹೊಂದಿ​ದ್ದಾರೆ. ನಮ್ಮ ಈ ಪ್ರಯತ್ನ ದೇಶ, ವಿದೇ​ಶ​ಗಳ ಇತರ ತಂಡ​ಗ​ಳಿಗೂ ಸ್ಫೂರ್ತಿ​ಯಾ​ಗ​ಲಿದೆ ಎನ್ನುವ ವಿಶ್ವಾಸವಿದೆ.

- ಕುಮಾರ್‌, ಶಿವ​ಮೊಗ್ಗ ತಂಡದ ಮಾಲಿಕ

click me!