
ವಡೋದರಾ: ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಕರ್ನಾಟಕ 5ನೇ ಬಾರಿ ಫೈನಲ್ ಪ್ರವೇಶಿಸಿದೆ. ಬುಧವಾರ ಹರ್ಯಾಣ ವಿರುದ್ಧ ಸೆಮಿಫೈನಲ್‌ನಲ್ಲಿ ರಾಜ್ಯ ತಂಡ 5 ವಿಕೆಟ್ ಜಯಭೇರಿ ಬಾರಿಸಿತು. ಇದರೊಂದಿಗೆ ಸತತ 2ನೇ ಬಾರಿ ಫೈನಲ್‌ಗೇರುವ ಹಾಲಿ ಚಾಂಪಿಯನ್ ಹರ್ಯಾಣ ತಂಡದ ಕನಸು ಭಗ್ನಗೊಂಡಿತು.
ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಹರ್ಯಾಣ 50 ಓವರಲ್ಲಿ 9 ವಿಕೆಟ್‌ಗೆ 237 ರನ್ ಕಲೆಹಾಕಿತು. ಆರಂಭದಲ್ಲೇ ಹರ್ಯಾಣದ ರನ್ ಗಳಿಕೆಗೆ ಕಡಿವಾಣ ಹಾಕಿದ್ದ ರಾಜ್ಯ ತಂಡ, ದೊಡ್ಡ ಮೊತ್ತಕ್ಕೆ ಅವಕಾಶ ನೀಡಲಿಲ್ಲ. ನಾಯಕ ಅಂಕಿತ್ ಕುಮಾರ್ 48ಮ ಹಿಮಾನ್ಶು ರಾಣಾ 44 ರನ್ ಗಳಿಸಿದರು. ರಾಜ್ಯದ ಪರ ಅಭಿಲಾಶ್ ಶೆಟ್ಟಿ 4 ವಿಕೆಟ್ ಪಡೆದರು.
ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ರಾಜ್ಯ ತಂಡ 47.2 ಓವರ್‌ಗಳಲ್ಲಿ ಗೆಲುವು ತನ್ನದಾಗಿಸಿಕೊಂಡಿತು. ರನ್ ಖಾತೆ ತೆರೆಯುವ ಮೊದಲೇ ನಾಯಕ ಮಯಾಂಕ್ ಅಗರ್‌ವಾಲ್ ವಿಕೆಟ್ ಕಳೆದುಕೊಂಡರೂ, ದೇವದತ್ ಪಡಿಕ್ಕಲ್-ಸ್ಮರಣ್ ರಾಜ್ಯಕ್ಕೆ ಗೆಲುವು ತಂದುಕೊಟ್ಟರು. ಪಡಿಕ್ಕಲ್ 113 ಎಸೆತಗಳಲ್ಲಿ 86, ಸ್ಮರಣ್ 94 ಎಸೆತಗಳಲ್ಲಿ 76 ರನ್ ಸಿಡಿಸಿದರು. ಶ್ರೇಯಸ್ ಗೋಪಾಲ್ ಔಟಾಗದೆ 23, ಅನೀಶ್ 22 ರನ್ ಕೊಡುಗೆ ನೀಡಿದರು.
ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗದ ಶತಕ ಚಚ್ಚಿ ದಾಖಲೆ ಬರೆದ ಸ್ಮೃತಿ ಮಂಧನಾ!
ಸ್ಕೋರ್: ಹರ್ಯಾಣ 50 ಓವರಲ್ಲಿ 237/9 (ಅಂಕಿತ್ 48, ಹಿಮಾನ್ಶು 44, ಅಭಿಲಾಶ್ 4-34), ಕರ್ನಾಟಕ 47.2 ಓವರಲ್ಲಿ 238/5(ದೇವದತ್ 86, ಸ್ಮರಣ್ 76, ನಿಶಾಂತ್ 2-47)
ಪಂದ್ಯಶ್ರೇಷ್ಠ: ದೇವದತ್ ಪಡಿಕ್ಕಲ್.
2019ರ ಬಳಿಕ ಮತ್ತೆಕಪ್ ಸನಿಹಕ್ಕೆ ರಾಜ್ಯ
ಕರ್ನಾಟಕ ತಂಡ 2019ರ ಬಳಿಕ ಟ್ರೋಫಿ ಗೆದ್ದಿಲ್ಲ. ಅದನ್ನು ಈ ಬಾರಿ ನೀಗಿಸುವ ಕಾತರದಲ್ಲಿದೆ. ತಂಡ 2013-14, 2014-15, 2017-18 ಹಾಗೂ 2019-20ರಲ್ಲಿ ಫೈನಲ್‌ಗೇರಿ ಟ್ರೋಫಿ ಗೆದ್ದಿತ್ತು. ಈಗ 5 ವರ್ಷ ಬಳಿಕ ಮತ್ತೆ ಫೈನಲ್ ಪ್ರವೇಶಿಸಿದೆ.
07ನೇ ಫಿಫ್ಟಿ
ವಿಜಯ್ ಹಜಾರೆಯಲ್ಲಿ ದೇವದತ್ ಪಡಿಕ್ಕಲ್ ಸತತ 7ನೇ ಅರ್ಧಶತಕ ಬಾರಿಸಿದರು. ಈ ಮೂಲಕ ತಮ್ಮದೇ ಹೆಸರಲ್ಲಿ ದಾಖಲೆ ಸರಿಗಟ್ಟಿದರು. 2020-21ರಲ್ಲೂ ಪಡಿಕ್ಕಲ್ ಸತತ 7 ಪಂದ್ಯಗಳಲ್ಲಿ 50+ ರನ್ ದಾಖಲಿಸಿದ್ದರು.
ಬಿಸಿಸಿಐ ಚಾಟಿ ಬಳಿಕ ಮತ್ತೆ ದೇಸಿ ಕ್ರಿಕೆಟ್‌ನತ್ತ ಸ್ಟಾರ್ ಆಟಗಾರರು: ರಿಷಭ್ ಕಣಕ್ಕೆ, ರೋಹಿತ್, ಕೊಹ್ಲಿ ಡೌಟ್!
ಲಿಸ್ಟ್ ‘ಎ’ ಕ್ರಿಕೆಟ್‌ನಲ್ಲಿ ದೇವದತ್ 2,000 ರನ್
ದೇವದತ್ ಪಡಿಕ್ಕಲ್ ಲಿಸ್ಟ್ ‘ಎ’(ಏಕದಿನ) ಕ್ರಿಕೆಟ್‌ನಲ್ಲಿ 2000 ರನ್ ಪೂರ್ಣಗೊಳಿಸಿದರು. 24 ವರ್ಷದ ದೇವದತ್ 31 ಇನ್ನಿಂಗ್ಸ್‌ಗಳಲ್ಲಿ 83+ ಸರಸಾರಿಯಲ್ಲಿ ಈ ಸಾಧನೆ ಮಾಡಿದ್ದಾರೆ. ಇದರಲ್ಲಿ 9 ಶತಕ, 12 ಶತಕಗಳೂ ಒಳಗೊಂಡಿವೆ. ಇತ್ತೀಚೆಗಷ್ಟೇ ಬರೋಡಾ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ದೇವದತ್ 102 ರನ್ ಬಾರಿಸಿ ತಂಡವನ್ನು ಗೆಲ್ಲಿಸಿದ್ದರು.
ಮಹಾರಾಷ್ಟ್ರ-ವಿದರ್ಭ ಸೆಮಿಫೈನಲ್ ಇಂದು
ಟೂರ್ನಿಯ ಮತ್ತೊಂದು ಸೆಮಿಫೈನಲ್ ಗುರುವಾರ ನಡೆಯಲಿದೆ. ಋತುರಾಜ್ ಗಾಯಕ್ವಾಡ್ ನಾಯಕತ್ವದ ಮಹಾರಾಷ್ಟ್ರ ಹಾಗೂ ಕರುಣ್ ನಾಯರ್ ಸಾರಥ್ಯದ ವಿದರ್ಭ ತಂಡಗಳು ಸೆಣಸಾಡಲಿದೆ. ಗೆಲ್ಲುವ ತಂಡ ಜ.18ರಂದು ಫೈನಲ್‌ನಲ್ಲಿ ಕರ್ನಾಟಕ ವಿರುದ್ಧ ಆಡಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.