ರಾಜ್‌ಕೋಟ್‌ನಲ್ಲಿ ಐರ್ಲೆಂಡ್ ವಿರುದ್ಧ ಸ್ಮೃತಿ ಮಂಧನಾ 70 ಎಸೆತಗಳಲ್ಲಿ ಶತಕ ಬಾರಿಸಿ, ಮಹಿಳಾ ಏಕದಿನದಲ್ಲಿ ಭಾರತದ ಅತಿವೇಗದ ಶತಕದ ದಾಖಲೆ ನಿರ್ಮಿಸಿದರು. ಇದು ಅವರ 10ನೇ ಏಕದಿನ ಶತಕವಾಗಿದ್ದು, ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಕ್ರಿಕೆಟಿಗ ಎನಿಸಿಕೊಂಡರು. ಪಂದ್ಯದಲ್ಲಿ ಭಾರತ ಬೃಹತ್ ಮೊತ್ತ ಕಲೆಹಾಕುತ್ತಿದ್ದು, ಪ್ರತೀಕಾ ರಾವಲ್ ಕೂಡ ಶತಕ ಸಿಡಿಸಿದರು.
ರಾಜ್‌ಕೋಟ್: ಭಾರತ ಹಾಗೂ ಐರ್ಲೆಂಡ್ ಮಹಿಳಾ ತಂಡಗಳ ನಡುವಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕಿ ಸ್ಮೃತಿ ಮಂಧನಾ ಸ್ಪೋಟಕ ಶತಕ ಸಿಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಇದಷ್ಟೇ ಅಲ್ಲದೇ ಏಕದಿನ ಕ್ರಿಕೆಟ್‌ನಲ್ಲಿ ಸ್ಮೃತಿ ಮಂಧನಾ ಶತಕ ಸಿಡಿಸುವ ವಿಚಾರದಲ್ಲೂ ಹೊಸ ಮೈಲಿಗಲ್ಲು ನೆಡುವಲ್ಲಿ ಯಶಸ್ವಿಯಾಗಿದ್ದಾರೆ.
ಇಲ್ಲಿನ ನಿರಂಜನ್ ಶಾ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಸ್ಮೃತಿ ಮಂಧನಾ, ಭಾರತ ಪರ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗದ ಶತಕ ಸಿಡಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಭಾರತ ಮಹಿಳಾ ಕ್ರಿಕೆಟ್ ತಂಡದ ಹಂಗಾಮಿ ನಾಯಕಿಯಾಗಿರುವ ಸ್ಮೃತಿ ಮಂಧನಾ ಕೇವಲ 70 ಎಸೆತಗಳನ್ನು ಎದುರಿಸಿ ಶತಕ ಸಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ 2024ರಲ್ಲಿ ದಕ್ಷಿಣ ಆಫ್ರಿಕಾ ಎದುರು ಹರ್ಮನ್‌ಪ್ರೀತ್ ಕೌರ್ 87 ಎಸೆತಗಳಲ್ಲಿ ಸಿಡಿಸಿದ್ದ ಶತಕದ ದಾಖಲೆ ಅಳಿಸಿಹಾಕುವಲ್ಲಿ ಮಂಧನಾ ಯಶಸ್ವಿಯಾಗಿದ್ದಾರೆ. ಅಂತಿಮವಾಗಿ ಸ್ಮೃತಿ ಮಂಧನಾ 80 ಎಸೆತಗಳನ್ನು ಎದುರಿಸಿ 12 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 135 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು.
ವಿಜಯ್ ಹಜಾರೆ ಟ್ರೋಫಿ: ಇಂದು ಕರ್ನಾಟಕ vs ಹರ್‍ಯಾಣ ಸೆಮೀಸ್ ಕದನ
28 ವರ್ಷದ ಸ್ಮೃತಿ ಮಂಧನಾ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ 10ನೇ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಈ ಮೂಲಕ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಭಾರತ ಪರ 10 ಶತಕ ಸಿಡಿಸಿದ ಮೊದಲ ಬ್ಯಾಟರ್ ಎನ್ನುವ ಅಪರೂಪದ ಮೈಲಿಗಲ್ಲನ್ನು ನೆಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಸಿಡಿಸಿದ ಮಹಿಳಾ ಬ್ಯಾಟರ್‌ಗಳ ಪಟ್ಟಿಯಲ್ಲಿ ಸ್ಮೃತಿ ಮಂಧನಾ, ಇಂಗ್ಲೆಂಡ್‌ನ ಬಿಯುಮೂಟ್ ಜತೆ ಜಂಟಿ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ. ಸದ್ಯ ಆಸ್ಟ್ರೇಲಿಯಾದ ಮೆಗ್ ಲ್ಯಾನಿಂಗ್ಸ್(15) ಹಾಗೂ ನ್ಯೂಜಿಲೆಂಡ್‌ನ ಸುಜಿ ಬೇಟ್ಸ್(13) ಅತಿಹೆಚ್ಚು ಏಕದಿನ ಶತಕ ಸಿಡಿಸಿದ ಆಟಗಾರ್ತಿಯರ ಪಟ್ಟಿಯಲ್ಲಿ ಮೊದಲೆರಡು ಸ್ಥಾನ ಹಂಚಿಕೊಂಡಿದ್ದಾರೆ.
IPL 2025 ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ; ಹೊಸ ವೇಳಾಪಟ್ಟಿ ಪ್ರಕಟ!
ಇನ್ನು ಭಾರತ ಹಾಗೂ ಐರ್ಲೆಂಡ್ ನಡುವಿನ ಮೂರನೇ ಮಹಿಳಾ ಏಕದಿನ ಪಂದ್ಯದ ಬಗ್ಗೆ ಹೇಳುವುದಾದರೇ, ಮೊದಲು ಬ್ಯಾಟ್ ಮಾಡುತ್ತಿರುವ ಸ್ಮೃತಿ ಮಂಧನಾ ಪಡೆ ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ. ನಾಯಕಿ ಸ್ಮೃತಿ ಮಂಧನಾ ಜತೆಗೆ ಮತ್ತೋರ್ವ ಆರಂಭಿಕ ಬ್ಯಾಟರ್ ಪ್ರತೀಕಾ ರಾವಲ್ ಕೂಡಾ ಸ್ಪೋಟಕ ಶತಕ ಸಿಡಿಸಿ ಗಮನ ಸೆಳೆದಿದ್ದಾರೆ. 40 ಓವರ್ ಅಂತ್ಯದ ವೇಳೆಗೆ ಭಾರತ ಕೇವಲ 2 ವಿಕೆಟ್ ಕಳೆದುಕೊಂಡು 349 ರನ್ ಬಾರಿಸಿದ್ದು, ಪ್ರತೀಕಾ ರಾವಲ್ 130 ರನ್ ಗಳಿಸಿ ಅಜೇಯ ಬ್ಯಾಟಿಂಗ್ ಮುಂದುವರೆಸಿದ್ದಾರೆ.
