ಸಾಮಾನ್ಯ ಆಟೋ ಡ್ರೈವರ್ ಮಗ ವಿಘ್ನೇಶ್ ಪುಥೂರ್ ಮುಂಬೈ ಇಂಡಿಯನ್ಸ್ ತಂಡ ಸೇರಲು ಕಾರಣರಾದವರು ವಿನಯ್ ಕುಮಾರ್. ಕೇರಳ T20 ಲೀಗ್’ನಲ್ಲಿ ಆಡುತ್ತಿದ್ದ ವಿಘ್ನೇಶನ ಪ್ರತಿಭೆಯನ್ನು ಗುರುತಿಸಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಕರೆತಂದರು.
ಸುದರ್ಶನ್, ಏಷ್ಯಾನೆಟ್ ಸುವರ್ಣನ್ಯೂಸ್
ಕಿವಿಗಿಂತ ಕಣ್ಣು ಚುರುಕಾಗಿರುವವನಷ್ಟೇ ಒಳ್ಳೆಯ ನಾಯಕನಾಗಲು ಸಾಧ್ಯ.ಈ ಮಾತಿಗೆ ಒಳ್ಳೆಯ ಉದಾಹರಣೆ ಎಂ.ಎಸ್ ಧೋನಿ ಮತ್ತು ದಾವಣಗೆರೆ ಎಕ್ಸ್‌ಪ್ರೆಸ್ ಆರ್.ವಿನಯ್ ಕುಮಾರ್. ಧೋನಿ ತಂಡ CSK ವಿರುದ್ಧ ನಿನ್ನೆ ಒಬ್ಬ ಅಪರಿಚಿತ ಹುಡುಗನೊಬ್ಬ ಸ್ಪಿನ್ ಗಾರುಡಿಗನಂತೆ ಚೆಂಡನ್ನು ತಿರುಗಿಸುತ್ತಿದ್ದರೆ ಕ್ರಿಕೆಟ್ ಜಗತ್ತೇ ಅಚ್ಚರಿಯಿಂದ ಅವನೆಡೆಗೆ ನೋಡುತ್ತಿತ್ತು. ಯಾರಿವನು..? ಎಲ್ಲಿಯವನು..? ಈ ಮುಂಬೈನವರು ಎಲ್ಲಿಂದ ಹುಡುಕಿದರು ಇವನನ್ನು..? ಹೀಗೊಂದಷ್ಟು ಪ್ರಶ್ನೆಗಳು.. ಹುಡುಗನ ಹಿನ್ನೆಲೆ ಕೆದಕುತ್ತಾ ಹೋದರೆ ಸಿಕ್ಕ ಉತ್ತರ, ಅವನು ಕೇರಳದ ಮಲಪ್ಪುರಂನ ಒಬ್ಬ ಆಟೋ ಡ್ರೈವರ್ ಮಗ.. ವಿಘ್ನೇಶ್ ಪುಥೂರ್.. ಇನ್ನೂ ಪ್ರಥಮದರ್ಜೆ ಕ್ರಿಕೆಟ್ ಆಡಿಲ್ಲ. ಆಗಲೇ ಮುಂಬೈ ಇಂಡಿಯನ್ಸ್ ತಂಡ ಸೇರಿದ್ದಾನೆಂದರೆ.. ಅವರ ಕಣ್ಣಿಗೆ ಬಿದ್ದದ್ದು ಹೇಗೆ..?
ಕಮಲ ಕೆಸರಿನಲ್ಲೇ ಹುಟ್ಟುತ್ತದೆ, ಕೆಸರಿನಲ್ಲೇ ಅರಳುತ್ತದೆ..
ಒಬ್ಬ ಸಾಮಾನ್ಯ ಆಟೋ ಡ್ರೈವರ್ ಮಗ.. ಐಪಿಎಲ್’ನಲ್ಲಿ ಒಂದು ದೊಡ್ಡ ಫ್ರಾಂಚೈಸಿ ಪರ ಆಡುವ ಅವಕಾಶ ಸಿಗುತ್ತದೆ ಎಂದರೆ ಇದೇನು ಸಾಮಾನ್ಯ ಸಾಧನೆಯಲ್ಲ.. ಮಲಪ್ಪುರಂನ ಈ ಚಿನ್ನವನ್ನು ಜರಡಿ ಹಿಡಿದು ಹುಡುಕಿ ತಂದವರು ನಮ್ಮ ದಾವಣಗೆರೆ ಎಕ್ಸ್‌ಪ್ರೆಸ್ ಆರ್.ವಿನಯ್ ಕುಮಾರ್.
ಕೇರಳ T20 ಲೀಗ್’ನಲ್ಲಿ Alleppey Ripples ತಂಡದ ಪರ ಆಡುತ್ತಿದ್ದ ಹುಡುಗ.. ಆಡಿದ್ದು ಮೂರೇ ಪಂದ್ಯ, ಪಡೆದದ್ದು ಎರಡೇ ವಿಕೆಟ್.. ಆದರೆ ಯಾರ ಕಣ್ಣಿಗೆ ಬೀಳಬೇಕಿತ್ತೋ ಬಿದ್ದು ಬಿಟ್ಟ ಆ ದಿನ..
ಕುಲದೀಪ್ ಯಾದವ್ ನಂತೆ, ಅಫ್ಘಾನಿಸ್ತಾನದ ನೂರ್ ಅಹ್ಮದ್ ನಂತೆ ವಿಘ್ನೇಶ ಎಡಗೈ ಮಣಿಕಟ್ಟಿನ ಸಹಾಯದಿಂದ ಚೆಂಡನ್ನು ತಿರುಗಿಸುತ್ತಿದ್ದರೆ ಒಂದು ಕಣ್ಣು ಅವನನ್ನು ಕುತೂಹಲದಿಂದ ಗಮನಿಸುತ್ತಿತ್ತು. ಅದು ನಮ್ಮ ವಿನಯ್ ಕುಮಾರ್ ಅವರ ಕಣ್ಣು..
ಕರ್ನಾಟಕ ಕ್ರಿಕೆಟ್ ಎಂದಿಗೂ ಮರೆಯಲಾಗದ, ಮರೆಯಬಾರದ ದಿಗ್ಗಜ ವಿನಯ್ ಕುಮಾರ್. ನನ್ನ ಪ್ರಕಾರ ವಿನಯ್ ಕುಮಾರ್ ಕರ್ನಾಟಕದ ಎಂ.ಎಸ್ ಧೋನಿ. ನಿವೃತ್ತಿಯ ನಂತರ ವಿನಯ್ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ scouting ತಂಡದಲ್ಲಿದ್ದಾರೆ.
ಕ್ರಿಕೆಟ್ ಪಂದ್ಯಗಳು ನಡೆಯುತ್ತಿರುವ ಜಾಗಕ್ಕೆ ಹೋಗಿ ಅಲ್ಲಿಂದ ಹೊಸ ಹೊಸ ಪ್ರತಿಭೆಗಳನ್ನು ಹೆಕ್ಕಿ ತರುವುದು ಈ Scouting wingನ ಕೆಲಸ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲೊಬ್ಬ ಇದ್ದಾನೆ.. ತಮಿಳುನಾಡಿನ ದಂಡಪಿಂಡ.. ಮಲೋಲನ್ ರಂಗರಾಜನ್ ಎಂದು ಹೆಸರು.. ಈ ಮಹಾನುಭಾವ ಶೋಧಿಸಿ ತಂದ ಒಂದು ಪ್ರತಿಭೆಯನ್ನು ತೋರಿಸಿ..!
ಆದರೆ ಅವರು ಹಾಗಲ್ಲ..
ಮುಂಬೈ ಇಂಡಿಯನ್ಸ್’ನ scouting ಟೀಮ್’ನ ಕಣ್ಣು ಮತ್ತು ಕಿವಿ ಅದೆಷ್ಟು ಚುರುಕು ಎಂದರೆ.. ಪ್ರತಿಭೆಗಳು ದೇಶದ ಯಾವುದೇ ಮೂಲೆಯಲ್ಲಿದ್ದರೂ ಮೊದಲು ಆ ತಂಡದ ಕಣ್ಣಿಗೆ ಬಿದ್ದಾಗಿರುತ್ತದೆ.
ಒಬ್ಬ ಜಸ್ಪ್ರೀತ್ ಬುಮ್ರಾ, ಒಬ್ಬ ಹಾರ್ದಿಕ್ ಪಾಂಡ್ಯ, ಒಬ್ಬ ತಿಲಕ್ ವರ್ಮಾ.. ಹೀಗೆ ಮುಂಬೈ ಇಂಡಿಯನ್ಸ್ ಪರ ಇವತ್ತು ಸ್ಟಾರ್’ಗಳಾಗಿರುವವರನ್ನೆಲ್ಲಾ ಹುಡುಕಿದ್ದು ಇದೇ scouting team.
ಆ scouting ತಂಡಕ್ಕೆ ಇಡೀ ವರ್ಷ ಇದೇ ಕೆಲಸ.. ದೇಶದಲ್ಲಿ ಎಲ್ಲೇ ಟಿ20 ಕ್ರಿಕೆಟ್ ಲೀಗ್’ಗಳು ನಡೆಯುತ್ತಿರಲಿ.. ಅಲ್ಲಿ ಮುಂಬೈ ಇಂಡಿಯನ್ಸ್’ನ scouting ತಂಡದವರು ಹಾಜರಿರುತ್ತಾರೆ.. ಟಿ20 ಲೀಗ್’ಗಳಷ್ಟೇ ಅಲ್ಲ.. ರಣಜಿ ಟ್ರೋಫಿ, ವಿಜಯ್ ಹಜಾರೆ, ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಗಳ ಮೇಲೆ ಆ scouting ಟೀಮ್ ಹದ್ದಿನ ಕಣ್ಣಿಟ್ಟಿರುತ್ತದೆ.
ನಾನು ಕಣ್ಣಾರೆ ಕಂಡ ಉದಾಹರಣೆಯನ್ನೇ ಕೊಡುವುದಾದರೆ, 2016ರ ಇರಬೇಕು.. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ P1 ಸ್ಟ್ಯಾಂಡ್’ನಲ್ಲಿ ಕುಳಿತು ರಣಜಿ ಪಂದ್ಯವನ್ನು ನೋಡುತ್ತಿದ್ದೆ.. ಪಕ್ಕದಲ್ಲೇ ಒಬ್ಬರು ವ್ಯಕ್ತಿ ಕೂತಿದ್ದರು.. ಅವರು ಜಾನ್ ರೈಟ್.. ಸೌರವ್ ಗಂಗೂಲಿ ಭಾರತ ತಂಡದ ನಾಯಕನಾಗಿದ್ದಾಗ ಆ ತಂಡದ ಕೋಚ್ ಆಗಿದ್ದವರು.
ಇವರಿಗೆ ಈ ರಣಜಿ ಪಂದ್ಯದಲ್ಲೇನು ಕೆಲಸ ಎಂದು ವಿಚಾರಿಸಿದರೆ, ಅವರು ಬಂದದ್ದು ಮುಂಬೈ ಇಂಡಿಯನ್ಸ್’ನ scouting ತಂಡದ ಪರವಾಗಿ. ಆಗ ಅವರು ಮುಂಬೈ ಫ್ರಾಂಚೈಸಿಯ Head of the talent scouting wing ಆಗಿದ್ದರು.
2021ರಿಂದ ವಿನಯ್ ಕುಮಾರ್ ಮುಂಬೈ ಇಂಡಿಯನ್ಸ್’ನ scouting teamನಲ್ಲಿದ್ದಾರೆ.
ಕರ್ನಾಟಕ ತಂಡದ ನಾಯಕನಾಗಿದ್ದಾಗ ವಿನಯ್ ಹತ್ತಾರು ಯುವ ಪ್ರತಿಭೆಗಳನ್ನು ಬೆಳೆಸಿದ್ದವರು. ಕಿವಿಗಿಂತ ಕಣ್ಣು ಚುರುಕಾಗಿರುವ ಮನುಷ್ಯ. ಕಿವಿ ಚುರುಕಾಗಿದ್ದರೆ ಬೇಕಾಗಿರುವ ಮಾತುಗಳ ಜೊತೆ ಬೇಡದ ಶಬ್ದಗಳೂ ಕಿವಿಗೆ ಬೀಳುತ್ತವೆ. ಆದರೆ ಕಣ್ಣು ಚುರುಕಾಗಿದ್ದರೆ.. ಸತ್ಯ ದರ್ಶನವಾಗುತ್ತದೆ.
ಸಿಎಸ್‌ಕೆಯನ್ನು ತಬ್ಬಿಬ್ಬು ಮಾಡಿದ ವಿಘ್ನೇಶ್ ಆಟೋ ಚಾಲಕನ ಮಗ!
ವಿನಯ್ ಕುಮಾರ್ ಕಿವಿಯನ್ನಲ್ಲ, ಕಣ್ಣುಗಳನ್ನಷ್ಟೇ ನಂಬುವ ನಾಯಕ. ಇದೇ ಕಾರಣಕ್ಕೆ ಅವರ ನಾಯಕತ್ವದಲ್ಲಿ ಕರ್ನಾಟಕ ತಂಡ ದೇಶೀಯ ಕ್ರಿಕೆಟ್’ನಲ್ಲಿ ಯಾವ ತಂಡವೂ ಮಾಡಲಾಗದ ಸಾಧನೆಗಳನ್ನು ಮಾಡಿದ್ದು, ಯಾವ ಕಾಲಕ್ಕೂ ಮುಟ್ಟಲಾಗದ ಎತ್ತರವನ್ನು ಏರಿದ್ದು.
ಬಾಂಗ್ಲಾದೇಶ ದಿಗ್ಗಜ ಕ್ರಿಕೆಟಿಗನಿಗೆ ಹಾರ್ಟ್ ಅಟ್ಯಾಕ್! ಆಸ್ಪತ್ರೆಗೆ ದೌಡು!
ಕೇರಳ ಟಿ20 ಲೀಗ್’ನಲ್ಲಿ ಆಡುತ್ತಿದ್ದ ವಿಘ್ನೇಶನ ಪ್ರತಿಭೆಯನ್ನು ಗುರುತಿಸಿದ ವಿನಯ್, ಹುಡುಗ ಕೆಲಸಕ್ಕೆ ಬರುತ್ತಾನೆ ಎಂದುಕೊಂಡವರೇ ಮುಂಬೈ ಇಂಡಿಯನ್ಸ್ ತಂಡದ ಟ್ರಯಲ್ಸ್’ಗೆ ಕರೆ ತರುತ್ತಾರೆ. ಹಾಗೆ ಮಲಪ್ಪುರಂನಿಂದ ವಿನಯ್ ಹುಡುಕಿ ತಂದದ್ದು ಅಪ್ಪಟ ಚಿನ್ನವನ್ನ. ಇವತ್ತು ಅದೇ ಹುಡುಗ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 3 ವಿಕೆಟ್’ಗಳನ್ನು ಪಡೆದು ಮಿಂಚಿದ್ದಾನೆ.
ಸರಿಯಾದ ವ್ಯಕ್ತಿಗಳು ಸರಿಯಾದ ಜಾಗದಲ್ಲಿ ಕೂತಿದ್ದರೆ ಮಾತ್ರ ಇಂತಹ ಪ್ರತಿಭೆಗಳು ಬೆಳಕಿಗೆ ಬರುತ್ತವೆ.