ಭಾರತ ಮಹಿಳಾ ಕ್ರಿಕೆಟ್ ತಂಡದ ಬಿಸಿಸಿಐ ಕೇಂದ್ರೀಯ ಗುತ್ತಿಗೆ ಪ್ರಕಟಗೊಂಡಿದೆ. ಹರ್ಮನ್‌ಪ್ರೀತ್, ಸ್ಮೃತಿ, ದೀಪ್ತಿ 'ಎ' ಗ್ರೇಡ್‌ನಲ್ಲಿದ್ದು, ಶ್ರೇಯಾಂಕಾ ಪಾಟೀಲ್ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಗ್ರೇಡ್‌ಗಳ ಆಧಾರದ ಮೇಲೆ ಆಟಗಾರ್ತಿಯರಿಗೆ ಸಂಭಾವನೆ ನಿಗದಿಪಡಿಸಲಾಗಿದೆ.
ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಬಿಸಿಸಿಐ ಕೇಂದ್ರೀಯ ಗುತ್ತಿಗೆ ಪ್ರಕಟವಾಗಿದ್ದು, ನಾಯಕಿ ಹರ್ಮನ್‌ಪ್ರೀತ್ ಕೌರ್, ಉಪನಾಯಕಿ ಸ್ಮೃತಿ ಮಂಧನಾ ಹಾಗೂ ಅನುಭವಿ ಆಲ್ರೌಂಡರ್ ದೀಪ್ತಿ ಶರ್ಮಾ 'ಎ' ಗ್ರೇಡ್‌ನಲ್ಲಿ ಸ್ಥಾನ ಪಡೆಯುವಲ್ಲಿ ಮತ್ತೊಮ್ಮೆ ಯಶಸ್ವಿಯಾಗಿದ್ದಾರೆ. ಕಳೆದ ಬಾರಿ ಕೂಡಾ ಈ ಮೂವರು ಆಟಗಾರ್ತಿಯರು ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಲ್ಲಿ 'ಎ' ಗ್ರೇಡ್ ಗುತ್ತಿಗೆ ಪಡೆದುಕೊಂಡಿದ್ದರು.
ಇನ್ನು ವೇಗಿ ರೇಣುಕಾ ಸಿಂಗ್ ಠಾಕೂರ್, ಅನುಭವಿ ಆಲ್ರೌಂಡರ್ ಜಿಮಿಯಾ ರೋಡ್ರಿಗ್ಸ್, ವಿಕೆಟ್ ಕೀಪರ್ ರಿಚಾ ಘೋಷ್ ಹಾಗೂ ಆರಂಭಿಕ ಬ್ಯಾಟರ್ ಶಫಾಲಿ ವರ್ಮಾ 'ಬಿ' ಗ್ರೇಡ್‌ನಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಕರ್ನಾಟಕದ ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಕಳೆದ ವರ್ಷ ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಲ್ಲಿ 'ಬಿ' ಗ್ರೇಡ್ ಪಡೆದುಕೊಂಡಿದ್ದರು. ಆದರೆ ಈ ವರ್ಷ ರಾಜೇಶ್ವರಿ ಗಾಯಕ್ವಾಡ್ ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಿಂದ ಹೊರಬಿದ್ದಿದ್ದಾರೆ.
ಇದನ್ನೂ ಓದಿ: ಬಾಂಗ್ಲಾದೇಶ ದಿಗ್ಗಜ ಕ್ರಿಕೆಟಿಗನಿಗೆ ಹಾರ್ಟ್ ಅಟ್ಯಾಕ್! ಆಸ್ಪತ್ರೆಗೆ ದೌಡು!
ಇನ್ನು ರಾಜ್ಯದ ಮತ್ತೋರ್ವ ಯುವ ಸ್ಪಿನ್ ಆಲ್ರೌಂಡರ್ ಶ್ರೇಯಾಂಕಾ ಪಾಟೀಲ್ ಇದೇ ಮೊದಲ ಬಾರಿಗೆ ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರೇಯಾಂಕಾ ಪಾಟೀಲ್, ವೇಗಿ ತಿತಾಸ್ ಸಧು, ಅರುಂಧತಿ ರೆಡ್ಡಿ, ಆಲ್ರೌಂಡರ್ ಅಮನ್‌ಜೋತ್ ಕೌರ್ ಹಾಗೂ ವಿಕೆಟ್ ಕೀಪರ್ ಉಮಾ ಚೆಟ್ರಿ ಇದೇ ಮೊದಲ ಬಾರಿಗೆ ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಈ ಆಟಗಾರ್ತಿಯರ ಜತೆಗೆ ಯಾಶ್ತಿಕಾ ಭಾಟಿಯಾ, ರಾಧಾ ಯಾದವ್, ಸ್ನೆಹ್ ರಾಣಾ ಹಾಗೂ ಪೂಜಾ ವಸ್ತ್ರಾಕರ್ ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಲ್ಲಿ 'ಸಿ' ಗ್ರೇಡ್ ಪಡೆದುಕೊಂಡಿದ್ದಾರೆ.
🚨 News 🚨
BCCI announces annual player retainership 2024-25 - Team India (Senior Women) pic.twitter.com/fwDpLlm1mT
ಇನ್ನುಳಿದಂತೆ ಮೇಘನಾ ಸಿಂಗ್, ದೇವಿಕಾ ವೈದ್ಯ, ಶಬ್ಬಿನೇನಿ ಮೇಘನಾ, ಅಂಜಲಿ ಶರ್ವನೇನಿ ಹಾಗೂ ಹರ್ಲಿನ್ ಡಿಯೋಲ್ ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ.
ಇದನ್ನೂ ಓದಿ: ಸಿಎಸ್‌ಕೆಯನ್ನು ತಬ್ಬಿಬ್ಬು ಮಾಡಿದ ವಿಘ್ನೇಶ್ ಆಟೋ ಚಾಲಕನ ಮಗ! ಕೇರಳದ ಮುತ್ತು ಈಗ ಮುಂಬೈ ಸ್ವತ್ತು!
ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಲ್ಲಿ 'ಎ' ಗ್ರೇಡ್ ಪಡೆದ ಆಟಗಾರ್ತಿಯರು 50 ಲಕ್ಷ ರುಪಾಯಿ ಸಂಭಾವನೆ ಹಾಗೂ ಪ್ರತಿ ಮ್ಯಾಚ್ ಸಂಭಾವನೆ ಪಡೆದುಕೊಳ್ಳಲಿದ್ದಾರೆ. ಇನ್ನುಳಿದಂತೆ ಬಿ ಹಾಗೂ ಸಿ ಗ್ರೂಪ್‌ನಲ್ಲಿ ಸ್ಥಾನ ಪಡೆದ ಆಟಗಾರ್ತಿಯರು ಕ್ರಮವಾಗಿ 30 ಹಾಗೂ 10 ಲಕ್ಷ ರುಪಾಯಿ ಸಂಭಾವನೆ ಪಡೆದುಕೊಳ್ಳುತ್ತಾರೆ.
ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್ ಪಡೆದ ಆಟಗಾರ್ತಿಯರ ಕಂಪ್ಲೀಟ್ ಡೀಟೈಲ್ಸ್:
ಗ್ರೇಡ್ 'ಎ': ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧನಾ, ದೀಫ್ತಿ ಶರ್ಮಾ
ಗ್ರೇಡ್ 'ಬಿ': ರೇಣುಕಾ ಸಿಂಗ್ ಠಾಕೂರ್, ಜೆಮಿಯಾ ರೋಡ್ರಿಗ್ಸ್, ರಿಚಾ ಘೋಷ್ ಹಾಗೂ ಶಫಾಲಿ ವರ್ಮಾ
ಗ್ರೇಡ್ 'ಸಿ': ಯಾಸ್ತಿಕಾ ಭಾಟಿಯಾ, ರಾಧಾ ಯಾದವ್, ಶ್ರೇಯಾಂಕಾ ಪಾಟೀಲ್, ತಿತಾಸ್ ಸಧು, ಅರುಂಧತಿ ರೆಡ್ಡಿ, ಅಮನ್‌ಜೋತ್ ಕೌರ್, ಉಮಾ ಚೆಟ್ರಿ, ಸ್ನೆಹ್ ರಾಣಾ, ಪೂಜಾ ವಸ್ತ್ರಾಕರ್.