ಪಾಕ್‌ಗೆ ಸೋಲುಣಿಸಿದ ಆಸೀಸ್, ಮತ್ತೊಮ್ಮೆ ಭಾರತ-ಆಸ್ಟ್ರೇಲಿಯಾ ವಿಶ್ವಕಪ್‌ ಫೈನಲ್‌!

By Santosh NaikFirst Published Feb 8, 2024, 9:35 PM IST
Highlights

ಮತ್ತೊಮ್ಮೆ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಫೈನಲ್‌ ಪಂದ್ಯದ ದಕ್ಷಿಣ ಆಫ್ರಿಕಾದಲ್ಲಿಯೇ ನಡೆಯಲಿರುವುದು ವಿಶೇಷ. 19 ವಯೋಮಿತಿ ವಿಶ್ವಕಪ್‌ ಟೂರ್ನಿಯ 2ನೇ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿ ಆಸೀಸ್‌ ಫೈನಲ್‌ಗೆ ಲಗ್ಗೆ ಇಟ್ಟಿದೆ.
 

ಬೆನೋನಿ (ಫೆ.8): ರೋಚಕ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 1 ವಿಕೆಟ್‌ಗಳಿಂದ ಸೋಲಿಸಿದ ಆಸ್ಟ್ರೇಲಿಯಾ ತಂಡ 19 ವಯೋಮಿತಿ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಅದರೊಂದಿಗೆ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಮತ್ತೊಮ್ಮೆ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯ ನಡೆಯಲಿದೆ. ಕಳೆದ ವರ್ಷ ಪುರುಷರ ಏಕದಿನ ಕ್ರಿಕೆಟ್‌ ವಿಶ್ವಕಪ್‌ನ ಫೈನಲ್‌ನಲ್ಲಿ ಆಸೀಸ್‌ ವಿರುದ್ಧ ಕಂಡ ಸೋಲಿಗೆ ಹಾಗೂ 2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿಯೇ ನಡೆದ ಏಕದಿನ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದ ಸೋಲಿಗೆ ಸೇಡುವ ತೀರಿಸಿಕೊಳ್ಳುವ ಅವಕಾಶವೀಗ ಯುವ ಭಾರತದ ಮುಂದಿದೆ. ಭಾನುವಾರ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಕಾದಾಡಲಿವೆ.

ವಿಲೋಮೂರ್ ಪಾರ್ಕ್‌ನಲ್ಲಿ ಗುರುವಾರ ನಡೆದ 2ನೇ ಸೆಮಿಫೈನಲ್‌ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ ತಂಡ 48.5 ಓವರ್‌ಗಳಲ್ಲಿ 179 ರನ್‌ಗೆ ಆಲೌಟ್‌ ಆಯಿತು. ಬೌಲಿಂಗ್‌ ಸ್ನೇಹಿ ಪಿಚ್‌ನಲ್ಲಿ ಸಾಧಾರಣ ಮೊತ್ತವನ್ನು ಬೆನ್ನಟ್ಟಲು ಪರದಾಟ ನಡೆಸಿದ ಆಸ್ಟ್ರೇಲಿಯಾ ತಂಡ 49.1 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 181 ರನ್‌ ಬಾರಿಸಿ ಗೆಲುವು ಕಂಡಿತು. ಆಸೀಸ್‌ ಪರವಾಗಿ ಆರಂಭಿಕ ಆಟಗಾರ ಹ್ಯಾರಿ ಡಿಕ್ಸಾನ್‌ 75 ಎಸೆತಗಳಲ್ಲಿ 5  ಬೌಂಡರಿಗಳೊಂದಿಗೆ 50 ರನ್‌ ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೊನೆಯ ಹಂತದಲ್ಲಿ ಒಲಿವರ್‌ ಪೀಕ್‌, ಟಾಮ್‌ ಕ್ಯಾಂಪ್‌ಬೆಲ್‌ ಹಾಗೂ ರಾಫ್‌ ಮೆಕ್‌ಮಿಲನ್‌ ಉಪಯುಕ್ತ ಕಾಣಿಕೆ ನೀಡುವ ಮೂಲಕ ಆಸೀಸ್‌ ತಂಡದ ಗೆಲುವಿಗೆ ಕಾರಣರಾದರು.

ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ ತಂಡಕ್ಕೆ ಬಲಗೈ ಆಲ್ರೌಂಡರ್‌ ಆಟಗಾರ ಟಾಮ್‌ ಸ್ಟ್ರಾಕರ್‌ ಘಾತಕ ಪೆಟ್ಟು ನೀಡಿದರು. ಕೇವಲ 24 ರನ್‌ ನೀಡಿ ಪಾಕಿಸ್ತಾನದ ಪ್ರಮುಖ 6 ವಿಕೆಟ್‌ಗಳನ್ನು ಇವರು ಉರುಳಿಸಿದರು. ಪಾಕ್‌ ಪರವಾಗಿ ಅಜಾನ್‌ ಆವಿಸ್‌ (52 ರನ್‌, 91 ಎಸೆತ 3 ಬೌಂಡರಿ), ಅರಾಫತ್‌ ಮಿನ್ಹಾಸ್‌ (52 ರನ್‌, 61 ಎಸೆತ, 9 ಬೌಂಡರಿ) ಅರ್ಧಶತಕ ಬಾರಿಸಿದರೆ, ಆರಂಭಿಕ ಆಟಗಾರ ಶಾಮ್ಯಲ್‌ ಹುಸೇನ್‌ 17 ರನ್‌ ಸಿಡಿಸಿದರು. ಈ ಮೂವರ ಹೊರತಾಗಿ ಉಳಿದ ಯಾವ ಪಾಕಿಸ್ತಾನಿ ಬ್ಯಾಟ್ಸ್‌ಮನ್‌ಗಳು ಕೂಡ ಎರಡಂಕಿಯ ಮೊತ್ತ ದಾಟಲಿಲ್ಲ.

Breaking: 19 ವಯೋಮಿತಿ ವಿಶ್ವಕಪ್‌ ಫೈನಲ್‌ಗೇರಿದ ಭಾರತ ತಂಡ

ಇನ್ನು ಮೊತ್ತ ಬೆನ್ನಟ್ಟಿದ ಆಸೀಸ್‌ ಪರಿಸ್ಥಿತಿ ಕೂಡ ಭಿನ್ನವಾಗಿರಲಿಲ್ಲ.164 ರನ್‌ಗೆ 8 ವಿಕೆಟ್‌ ಕಳೆದುಕೊಂಡು ಸೋಲಿನ ಭೀತಿಯಲ್ಲಿದ್ದ ತಂಡವನ್ನು ರಾಫ್‌ ಮೆಕ್‌ಮಿಲನ್‌ ಉಪಯುಕ್ತ ಆಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.  ಕೆಳ ಕ್ರಮಾಂಕದಲ್ಲಿ ಒಲಿವರ್‌ ಪೀಕ್‌ 75 ಎಸೆತಗಳಲ್ಲಿ 3 ಬೌಂಡರಿಗಳಿದ್ದ 49 ರನ್‌ ಬಾರಿಸಿದರೆ, ಟಾಮ್‌ ಕ್ಯಾಂಪ್‌ಬೆಲ್‌ 42 ಎಸೆತಗಳಲ್ಲಿ 2 ಬೌಂಡರಿಗಳಿದ್ದ 25 ರನ್ ಬಾರಿಸಿದ್ದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಪಾಕಿಸ್ತಾನ ಪರವಾಗಿ ಅಲಿ ರಾಜಾ 34 ರನ್‌ ನೀಡಿ 4 ವಿಕೆಟ್‌ ಉರುಳಿಸಿದರು.

ಅಂಡರ್- 19 ವಿಶ್ವಕಪ್ ಸೆಮಿಫೈನಲ್ ಹೀರೋ: ಸಚಿನ್ ದಾಸ್ ಫಿಯರ್ಲೆಸ್ ಆಟಕ್ಕೆ ಫ್ಯಾನ್ಸ್ ಸಲಾಂ..!

click me!