
ರಾಯ್‌ಪುರ (ಡಿ.1): ನವೆಂಬರ್ ಮಧ್ಯಭಾಗದಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸೀಸ್ ವಿರುದ್ಧ ಕರಾಳ ಸೋಲು ಕಂಡು ಕುಗ್ಗಿಹೋಗಿದ್ದ ಭಾರತ ತಂಡ ಹಾಗೂ ಭಾರತ ತಂಡದ ಅಭಿಮಾನಿಗಳಿಗೆ ಸಂಭ್ರಮದ ಸುದ್ದಿ ಸಿಕ್ಕಿದೆ. ಆಸೀಸ್ ತಂಡವನ್ನು ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡ ಮಣಿಸಿ ಟ್ರೊಫಿ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಶುಕ್ರವಾರ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ 20 ರನ್‌ಗಳಿಂದ ಆಸೀಸ್ ತಂಡವನ್ನು ಸೋಲಿಸುವ ಮೂಲಕ ವಿಶ್ವಕಪ್ ಸೋಲಿಗೆ ತಕ್ಕ ಮಟ್ಟಿಗೆ ಸಮಾಧಾನ ತಂದುಕೊಂಡಿದೆ. ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಸ್ಟ್ರೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 9 ವಿಕೆಟ್‌ಗೆ 174 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. ಪ್ರತಿಯಾಗಿ ಆಸ್ಟ್ರೇಲಿಯಾ ತಂಡ 7 ವಿಕೆಟ್‌ಗೆ 154 ರನ್ ಬಾರಿಸಿ ಸೋಲು ಕಂಡಿತು. ಐದು ಪಂದ್ಯಗಳ ಟಿ20 ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಭಾರತ ಗೆಲುವು ಕಂಡಿದ್ದರೆ, ಮೂರನೇ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ ಸಾಹಸದಿಂದಾಗಿ ಆಸ್ಟ್ರೇಲಿಯಾ ಗೆಲುವು ಸಾಧಿಸಿತ್ತು. ಉಭಯ ತಂಡಗಳ ನಡುವಿನ ಐದನೇ ಟಿ20 ಪಂದ್ಯ ಔಪಚಾರಿಕವಾಗಿದ್ದು, ಡಿಸೆಂಬರ್ 3 ರಂದು ಬೆಂಗಳೂರಿನಲ್ಲಿ ಈ ಪಂದ್ಯ ನಡೆಯಲಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಯಶಸ್ವಿ ಜೈಸ್ವಾಲ್ ಹಾಗೂ ರುತುರಾಜ್ ಗಾಯಕ್ವಾಡ್ 50 ರನ್‌ಗಳ ಉತ್ತಮ ಆರಂಭ ನೀಡಿದರು. 28 ಎಸೆತಗಳಲ್ಲಿ ಜೈಸ್ವಾಲ್ ಬಿರುಸಿನ 38 ರನ್ ಬಾರಿಸಿದರು ಇದರಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಸೇರಿದ್ದವು. ಇವರಿಗೆ ಉತ್ತಮ ಸಾಥ್ ನೀಡಿದ ರುತುರಾಜ್ ಗಾಯಕ್ವಾಡ್ 28 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಇದ್ದ 32 ರನ್ ಬಾರಿಸಿದರು. ಆದರೆ 12 ರನ್‌ಗಳ ಅಂತರದಲ್ಲಿ ಇವರಿಬ್ಬರೊಂದಿಗೆ ನಾಯಕ ಸೂರ್ಯಕುಮಾರ್ ಯಾದವ್ (1) ಕೂಡ ಔಟಾದಾಗ ಭಾರತ ಕೊಂಚ ಹಿನ್ನಡೆ ಕಂಡಿತ್ತು. ಈ ಹಂತದಲ್ಲಿ ಶ್ರೇಯಸ್ ಅಯ್ಯರ್ (8) ಜೊತೆಗೂಡಿದ ರಿಂಕು ಸಿಂಗ್ ತಂಡದ ಮೊತ್ತವನ್ನು ಬಿರುಸಾಗಿ ಏರಿಸಿದರು. 29 ಎಸೆತ ಆಡಿದ ರಿಂಕು ಸಿಂಗ್ 4 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ 46 ರನ್ ಬಾರಿಸಿದ್ದು ಭಾರತದ ದೊಡ್ಡ ಸವಾಲಿನ ಮೊತ್ತಕ್ಕೆ ಕಾರಣವಾಯಿತು. ವಿಕೆಟ್ ಕೀಪರ್ ಜಿತೇಶ್ ಶರ್ಮ ಕೂಡ 19 ಎಸೆತಗಳಲ್ಲಿ ಮೂರು ಭರ್ಜರಿ ಸಿಕ್ಸರ್‌ಗಳಿದ್ದ 35 ರನ್ ಸಿಡಿಸಿ ಸ್ಲಾಗ್ ಓವರ್‌ಗಳಲ್ಲಿ ತಂಡದ ಮೊತ್ತವನ್ನು ಏರಿಸಿದರು. ಆಸೀಸ್ ಪರವಾಗಿ ಡ್ವಾರಶುಯಿಸ್ ಮೂರು ವಿಕೆಟ್ ಉರುಳಿಸಿದ್ದರು.
ಸ್ಟೇಡಿಯಂನ ಕಟ್ಟೆಯ ಮೇಲೆ ಕುಳಿತು ಮಗನ ಆಟ ವೀಕ್ಷಿಸಿದ ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್!
ಈ ಮೊತ್ತ ಬೆನ್ನಟ್ಟಿದ ಆಸೀಸ್ ತಂಡಕ್ಕೆ ಭಾರತ ನಿರಂತರವಾಗಿ ಏಟು ನೀಡಿತು. ಸ್ಪಿನ್ನರ್ ಅಕ್ಷರ್ ಪಟೇಲ್, ಆರಂಭಿಕ ಆಟಗಾರ ಟ್ರಾವಿಸ್ ಹೆಡ್ (31), ಬೆನ್ ಮೆಕ್‌ಡೆಮೋರ್ಟ್ (19) ಹಾಗೂ ಆಲ್ರೌಂಡರ್ ಆರೋನ್ ಹಾರ್ಡಿ (8) ವಿಕೆಟ್ ಉರುಳಿಸಿ ತಂಡಕ್ಕೆ ಕಡಿವಾಣ ಹಾಕಿದರು. ಜೋಶ್ ಫಿಲಿಪ್ ಕೇವಲ 8 ರನ್ ಬಾರಿಸಿ ರವಿ ಬಿಷ್ಣೋಯಿಗೆ ವಿಕೆಟ್ ನೀಡಿದರು. ಕೆಳ ಕ್ರಮಾಂಕದಲ್ಲಿ ಟಿಮ್ ಡೇವಿಡ್ (19), ಮ್ಯಾಥ್ಯೂ ಶಾರ್ಟ್ (22) ಹಾಗೂ ನಾಯಕ ಮ್ಯಾಥ್ಯೂ ವೇಡ್ (36 ರನ್, 23 ಎಸೆತ, 2 ಬೌಂಡರಿ, 2 ಸಿಕ್ಸರ್) ಹೋರಾಟ ಮಾಡಿದರೂ ಭಾರತ ಎಚ್ಚರಿಕೆಯ ಬೌಲಿಂಗ್ ಮಾಡುವ ಮೂಲಕ ಗೆಲುವು ಕಂಡಿತು. ಇದು ತವರಿನಲ್ಲಿ ಭಾರತ ತಂಡಕ್ಕೆ ಸತತ 5ನೇ ಟಿ20 ಸರಣಿ ಗೆಲುವು ಎನಿಸಿದೆ.
ಆಟದಲ್ಲಿ ಮಾತ್ರವಲ್ಲ ಇನ್ವೆಸ್ಟ್‌ಮೆಂಟ್‌ನಲ್ಲೂ ಕಿಂಗ್ ನಮ್ಮ ಕೊಹ್ಲಿ!
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.