ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಸೂಪರ್ ಲೀಗ್ ಪಂದ್ಯಾವಳಿಗಳು ಇಂದಿನಿಂದ ಆರಂಭವಾಗಲಿದ್ದು, ಹಾಲಿ ಚಾಂಪಿಯನ್ ಕರ್ನಾಟಕ ಹಾಗೂ ತಮಿಳುನಾಡು ತಂಡಗಳು ಮುಖಾಮುಖಿಯಾಗಲಿವೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಸೂರತ್[ನ.21]: ಸಯ್ಯದ್ ಮುಷ್ತಾಕ್ ಅಲಿ ರಾಷ್ಟ್ರೀಯ ಟಿ20 ಟೂರ್ನಿಯ ಸೂಪರ್ ಲೀಗ್ ಹಂತ ಗುರುವಾರ ಇಲ್ಲಿ ಆರಂಭಗೊಳ್ಳಲಿದೆ. ಒಟ್ಟು 10 ತಂಡಗಳು ಸೆಮಿಫೈನಲ್ನಲ್ಲಿ ಸ್ಥಾನಕ್ಕಾಗಿ ಸೆಣಸಲಿದ್ದು, ಉತ್ತಮ ನೆಟ್ ರನ್‌ರೇಟ್ ಗಳಿಸಿದರೂ ಗುಂಪು ಹಂತದ ಪಂದ್ಯದಲ್ಲಿ ಬರೋಡಾ ವಿರುದ್ಧ ಸೋತ ಕಾರಣ ‘ಎ’ ಗುಂಪಿನಲ್ಲಿ ಕರ್ನಾಟಕ 2ನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಇದೀಗ ಕರ್ನಾಟಕ ತಂಡ ಸೂಪರ್ ಲೀಗ್‌ನ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಮೊದಲ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಸೆಣಸಲಿದೆ.
ಮುಷ್ತಾಕ್ ಅಲಿ ಟಿ20: ಸೂಪರ್ ಲೀಗ್ ವೇಳಾಪಟ್ಟಿ ಪ್ರಕಟ
undefined
‘ಎ’ ಗುಂಪಿನಲ್ಲಿ ಆಡಿದ 6 ಪಂದ್ಯಗಳಲ್ಲಿ ಕರ್ನಾಟಕ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. ತಮಿಳುನಾಡು ಸಹ ಆಡಿದ 6 ಪಂದ್ಯಗಳಲ್ಲಿ 5ರಲ್ಲಿ ಜಯಿಸಿತು. ಆದರೆ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದು, ಸೂಪರ್ ಲೀಗ್‌ನ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆಯಿತು. ಇತ್ತೀಚೆಗಷ್ಟೇ ನಡೆದಿದ್ದ ವಿಜಯ್ ಹಜಾರೆ ಏಕದಿನ ಟೂರ್ನಿಯ ಫೈನಲ್ ಪಂದ್ಯದಲ್ಲಿ ಉಭಯ ತಂಡಗಳು ಎದುರಾಗಿದ್ದವು, ಕರ್ನಾಟಕ 60 ರನ್‌ಗಳ ಗೆಲುವು ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆ ಸೋಲಿನ ಸೇಡಿಗಾಗಿ ತಮಿಳುನಾಡು ಕಾಯುತ್ತಿದ್ದರೆ, ಮತ್ತೊಮ್ಮೆ ಜಯಭೇರಿ ಬಾರಿಸಲು ಕರ್ನಾಟಕ ಕಾತರಿಸುತ್ತಿದೆ.
ರೋಚಕ ಪೈಪೋಟಿ
ಸೂಪರ್ ಲೀಗ್‌ನಲ್ಲಿ ಒಟ್ಟು 10 ತಂಡಗಳಿದ್ದು ತಲಾ 5 ತಂಡಗಳಂತೆ 2 ಗುಂಪು ರಚಿಸಲಾಗಿದೆ. ಪ್ರತಿ ತಂಡ ಗುಂಪಿನಲ್ಲಿ ಇನ್ನುಳಿದ 4 ತಂಡಗಳ ವಿರುದ್ಧ ಸೆಣಸಲಿದೆ. ಗುಂಪಿನಲ್ಲಿ ಅಗ್ರ 2 ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಫೈನಲ್ಗೆ ಪ್ರವೇಶಿಸಲಿವೆ. ಹಾಲಿ ಚಾಂಪಿಯನ್ ಕರ್ನಾಟಕಕ್ಕೆ ತಮಿಳುನಾಡು, ಜಾರ್ಖಂಡ್, ಪಂಜಾಬ್, ಮುಂಬೈ ತಂಡಗಳು ಎದುರಾಗಲಿವೆ.
ಕ್ರಿಕೆಟ್‌ಗೆ ಮರಳಿದ ಪೃಥ್ವಿ: ಟಿ20ಯಲ್ಲಿ ಸ್ಫೋಟಕ ಫಿಫ್ಟಿ
ಘಟಾನುಘಟಿಗಳ ಮುಖಾಮುಖಿ
ಮೊದಲ ಪಂದ್ಯದಲ್ಲೇ ರಾಜ್ಯ ತಂಡಕ್ಕೆ ಭರ್ಜರಿ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ. ತಮಿಳುನಾಡು ತಂಡದಲ್ಲಿ ಮುರಳಿ ವಿಜಯ್, ದಿನೇಶ್ ಕಾರ್ತಿಕ್, ವಿಜಯ್ ಶಂಕರ್, ವಾಷಿಂಗ್ಟನ್ ಸುಂದರ್, ಬಾಬಾ ಅಪರಾಜಿತ್ರಂತಹ ಅನುಭವಿ ಆಟಗಾರರಿದ್ದಾರೆ. ತಂಡ ಅತ್ಯುತ್ತಮ ಲಯದಲ್ಲಿದೆ.
ಕರ್ನಾಟಕ ತನ್ನ ತಾರಾ ಆಟಗಾರರಾದ ಮನೀಶ್ ಪಾಂಡೆ, ಕೆ.ಎಲ್.ರಾಹುಲ್, ಕರುಣ್ ನಾಯರ್ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಿದೆ. ಯುವ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ 6 ಪಂದ್ಯಗಳಲ್ಲಿ 1 ಶತಕ, 2 ಅರ್ಧಶತಕದ ಸಹಿತ 303 ರನ್ ಕಲೆಹಾಕಿದ್ದು, ತಂಡದ ಬ್ಯಾಟಿಂಗ್ ಆಧಾರಸ್ತಂಭ ಎನಿಸಿದ್ದಾರೆ. ಪವನ್ ದೇಶಪಾಂಡೆ, ಶ್ರೇಯಸ್ ಗೋಪಾಲ್, ಜೆ.ಸುಚಿತ್ರಂತಹ ಆಲ್ರೌಂಡರ್‌ಗಳ ಬಲ ತಂಡಕ್ಕಿದೆ. ರೋನಿತ್ ಮೋರೆ, ಅಭಿಮನ್ಯು ಮಿಥುನ್‌ರಂತಹ ಅನುಭವಿ ವೇಗಿಗಳಿದ್ದು, ಯುವ ಮಧ್ಯಮ ವೇಗಿ ವಿ.ಕೌಶಿಕ್ ಭರವಸೆ ಮೂಡಿಸಿದ್ದಾರೆ.
ಪಂದ್ಯ ಆರಂಭ: ಸಂಜೆ 6.30ಕ್ಕೆ,
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 2
ಕರ್ನಾಟಕದ ವೇಳಾಪಟ್ಟಿ
ದಿನಾಂಕ ಎದುರಾಳಿ ಪಂದ್ಯ ಆರಂಭ
ನ.21 ತಮಿಳುನಾಡು ಸಂಜೆ 6.30ಕ್ಕೆ
ನ.22 ಜಾರ್ಖಂಡ್ ಮಧ್ಯಾಹ್ನ 2.30ಕ್ಕೆ
ನ.24 ಪಂಜಾಬ್ ಬೆಳಗ್ಗೆ 9.30ಕ್ಕೆ
ನ.25 ಮುಂಬೈ ಮಧ್ಯಾಹ್ನ 1.30ಕ್ಕೆ