
"
ಕೋಲ್ಕತಾ[ನ.21]: ಬಾಂಗ್ಲಾದೇಶ ವಿರುದ್ಧದ ಐತಿಹಾಸಿಕ ಹಗಲು-ರಾತ್ರಿ ಟೆಸ್ಟ್ ಪಂದ್ಯದ ಬಳಿಕ ಭಾರತ ಕ್ರಿಕೆಟ್ ತಂಡ ವೆಸ್ಟ್‌ಇಂಡೀಸ್ ವಿರುದ್ಧ 3 ಪಂದ್ಯಗಳ ಟಿ20, 3 ಪಂದ್ಯಗಳ ಏಕದಿನ ಸರಣಿಗಳನ್ನು ಆಡಲಿದೆ. ಗುರುವಾರ ಎಂ.ಎಸ್.ಕೆ.ಪ್ರಸಾದ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ ಇಲ್ಲಿ ಸಭೆ ಸೇರಲಿದ್ದು, ಎರಡೂ ಸರಣಿಗಳಿಗೆ ಭಾರತ ತಂಡವನ್ನು ಆಯ್ಕೆ ಮಾಡಲಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಉಪನಾಯಕ ರೋಹಿತ್ ಶರ್ಮಾಗೆ ವಿಶ್ರಾಂತಿ ಸಿಗಲಿದೆ. ಮುಂದಿನ ವರ್ಷ ನ್ಯೂಜಿಲೆಂಡ್ ಪ್ರವಾಸಕ್ಕೆ ಅವರು ಮಾನಸಿಕ, ದೈಹಿಕವಾಗಿ ಸದೃಢರಾಗಿ ತೆರಳಲು ಅನುಕೂಲವಾಗಲಿದೆ. ನ್ಯೂಜಿಲೆಂಡ್ ಪ್ರವಾಸದಲ್ಲಿ ಭಾರತ 5 ಟಿ20, 3 ಏಕದಿನ ಹಾಗೂ 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ.
ಟ್ವೀಟ್ ಮಾಡಿ ಧೋನಿ ಅಭಿಮಾನಿಗಳ ತಲೆಗೆ ಹುಳ ಬಿಟ್ಟ ವಿರಾಟ್ ಕೊಹ್ಲಿ!
ವಿಂಡೀಸ್ ವಿರುದ್ಧ 3 ಪಂದ್ಯಗಳ ಸರಣಿಯ ಮೊದಲ ಪಂದ್ಯ ಡಿ.6ರಂದು ಮುಂಬೈನಲ್ಲಿ ನಡೆಯಲಿದ್ದು, ಡಿ.8ರಂದು ತಿರುವನಂತಪುರಂನಲ್ಲಿ 2ನೇ ಪಂದ್ಯ ನಡೆಯಲಿದೆ. ಡಿ.11ಕ್ಕೆ ಹೈದರಾಬಾದ್ನಲ್ಲಿ 3ನೇ ಪಂದ್ಯ ನಿಗದಿಯಾಗಿದೆ. 3 ಏಕದಿನ ಪಂದ್ಯಗಳು ಚೆನ್ನೈ (ಡಿ.15), ವಿಶಾಖಪಟ್ಟಣಂ (ಡಿ.18) ಹಾಗೂ ಕಟಕ್ (ಡಿ.22)ನಲ್ಲಿ ನಡೆಯಲಿವೆ.
ರೋಹಿತ್ ಶರ್ಮಾ ಕೆಲಸದ ಒತ್ತಡದ ಬಗ್ಗೆ ಸಭೆಯಲ್ಲಿ ಹೆಚ್ಚಾಗಿ ಚರ್ಚೆಯಾಗುವ ನಿರೀಕ್ಷೆ ಇದೆ. ಈ ವರ್ಷ ಐಪಿಎಲ್ ಸೇರಿ ಸುಮಾರು 60 ಪಂದ್ಯಗಳನ್ನು ಅವರು ಆಡಿದ್ದಾರೆ. ಹಾಲಿ ಕ್ಯಾಲೆಂಡರ್ ವರ್ಷದಲ್ಲಿ ರೋಹಿತ್ 25 ಏಕದಿನ, 11 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ. ರೋಹಿತ್ ಕೊನೆ ಪಕ್ಷ ಒಂದು ಸರಣಿಯಿಂದ ಹೊರಗುಳಿಯಲು ಇಚ್ಛಿಸಬಹುದು ಎನ್ನಲಾಗಿದೆ.
3 ವರ್ಷಗಳ ಬಳಿಕ ಹೊಸ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಯುವರಾಜ್!
ಸಭೆಯಲ್ಲಿ ಶಿಖರ್ ಧವನ್ ಲಯದ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಹೆಚ್ಚಿದೆ. ಧವನ್ ವಿಶ್ವಕಪ್ ವೇಳೆ ಆದ ಗಾಯದಿಂದ ಚೇತರಿಸಿಕೊಂಡ ತಂಡಕ್ಕೆ ಮರಳಿದ ನಂತರ ಕಳಪೆ ಪ್ರದರ್ಶನ ತೋರುತ್ತಿದ್ದಾರೆ. ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಯಲ್ಲಿ ಸಾಧಾರಣ ಆಟವಾಡಿದ್ದ ಧವನ್, ಮುಷ್ತಾಕ್ ಅಲಿ ಟಿ20 ಟೂರ್ನಿಯ ಕೆಲ ಪಂದ್ಯಗಳಲ್ಲಿ ಆಡಿದ್ದರು. ಆದರೆ ಅಲ್ಲೂ ಸಹ ಅವರಿಗೆ ಲಯ ಕಂಡುಕೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಧವನ್‌ರನ್ನು ಕೈಬಿಡುವ ಸಾಧ್ಯತೆ ಇದೆ.
ರೋಹಿತ್‌ಗೆ ವಿಶ್ರಾಂತಿ ನೀಡಿದರೆ ಇಲ್ಲವೇ ಧವನ್‌ರನ್ನು ಕೈಬಿಟ್ಟರೆ ಆರಂಭಿಕನ ಸ್ಥಾನವನ್ನು ಮಯಾಂಕ್ ಅಗರ್‌ವಾಲ್‌ಗೆ ನೀಡಬಹುದು ಎನ್ನಲಾಗಿದೆ. ಕೆ.ಎಲ್.ರಾಹುಲ್ ಹಾಗೂ ಮಯಾಂಕ್ ಆರಂಭಿಕರಾಗಿ ಆಯ್ಕೆಯಾದರೆ ಅಚ್ಚರಿಯಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ರಿಷಭ್ ಪಂತ್ ಕಳಪೆ ಆಟ ಮುಂದುವರಿಸಿದ್ದರೂ, ಅವರಿಗೆ ಮತ್ತೊಂದು ಅವಕಾಶ ಸಿಗಬಹುದು. ಸಂಜು ಸ್ಯಾಮ್ಸನ್ ಸಹ ತಂಡದಲ್ಲಿ ಇರಲಿದ್ದಾರೆ ಎನ್ನಲಾಗಿದೆ. ಆಲ್ರೌಂಡರ್ ಕೃನಾಲ್ ಪಾಂಡ್ಯ ಇಲ್ಲವೇ ವಾಷಿಂಗ್ಟನ್ ಸುಂದರ್ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ಇವರಿಬ್ಬರ ಪೈಕಿ ಒಬ್ಬರಿಗೆ ಕೊಕ್ ಕೊಡುವ ಸಾಧ್ಯತೆ ಇದೆ. ಯಜುವೇಂದ್ರ ಚಹಲ್ ಇಲ್ಲವೇ ರವೀಂದ್ರ ಜಡೇಜಾ ತಂಡಕ್ಕೆ ಮರಳಲಿದ್ದಾರೆ. ದೀಪಕ್ ಚಹರ್ ವೇಗದ ಬೌಲಿಂಗ್ ಪಡೆ ಮುನ್ನಡೆಸಲಿದ್ದು, ದುಬಾರಿಯಾಗುತ್ತಿರುವ ಖಲೀಲ್ ಅಹ್ಮದ್ ಆಯ್ಕೆ ಅನುಮಾನವೆನಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.