
ಕೊಲಂಬೊ(ಜು.01): ಇಂಗ್ಲೆಂಡ್ ಪ್ರವಾಸದ ವೇಳೆ ಬಯೋ ಬಬಲ್ ನಿಯಮ ಉಲ್ಲಂಘಿಸಿ ಸಾರ್ವಜನಿಕ ರಸ್ತೆಯಲ್ಲಿ ಸಿಗರೇಟ್ ಹಿಡಿದು ಓಡಾಡಿದ್ದ ಶ್ರೀಲಂಕಾ ಕ್ರಿಕೆಟ್ ತಂಡದ ಉಪನಾಯಕ ಕುಸಾಲ್ ಮೆಂಡಿಸ್, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ನಿರ್ಶೋನ್ ಡಿಕ್‌ವೆಲ್ಲಾ ಹಾಗೂ ಆಲ್ರೌಂಡರ್ ದನುಷ್ಕಾ ಗುಣತಿಲಕ ಅವರನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಒಂದು ವರ್ಷಗಳ ಕಾಲ ಕ್ರಿಕೆಟ್‌ನಿಂದ ನಿಷೇಧ ಹೇರಿದೆ.
ಈ ಮೂವರು ಕ್ರಿಕೆಟಿಗರು ಇಂಗ್ಲೆಂಡ್ ವಿರುದ್ದದ ಟಿ20 ಸರಣಿಯಲ್ಲಿ ಲಂಕಾ ತಂಡವನ್ನು ಪ್ರತಿನಿಧಿಸಿದ್ದರು. ಇಂಗ್ಲೆಂಡ್ ಎದುರು ಶ್ರೀಲಂಕಾ 3 ಟಿ20 ಪಂದ್ಯದಲ್ಲೂ ಹೀನಾಯ ಸೋಲು ಕಾಣುವ ಮೂಲಕ ವೈಟ್‌ವಾಷ್ ಅನುಭವಿಸಿತ್ತು. ಇಂಗ್ಲೆಂಡ್ ಎದುರಿನ ಏಕದಿನ ಸರಣಿಗೂ ಮುನ್ನ ಕುಸಾಲ್ ಮೆಂಡಿಸ್, ಡಿಕ್‌ವೆಲ್ಲಾ ಹಾಗೂ ಗುಣತಿಲಕ ಬಯೋ ಬಬಲ್ ನಿಯಮ ಉಲ್ಲಂಘಿಸಿ ಸಾರ್ವಜನಿಕ ರಸ್ತೆಯಲ್ಲಿ ಕಾಣಿಸಿಕೊಂಡಿದ್ದರು. ರಸ್ತೆ ಬದಿ ಈ ಲಂಕಾ ಆಟಗಾರರು ಸಿಗರೇಟ್ ಹಿಡಿದು ಓಡಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಬಯೋ ಬಬಲ್ ಉಲ್ಲಂಘಿಸಿ ರಸ್ತೆಯಲ್ಲಿ ಸಿಗರೇಟ್ ಹಿಡಿದು ಓಡಾಡಿದ 3 ಲಂಕಾ ಕ್ರಿಕೆಟಿಗರು ಸಸ್ಪೆಂಡ್
ಬಯೋ ಬಬಲ್ ಉಲ್ಲಂಘಿಸಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ, ಲಂಕಾ ಕ್ರಿಕೆಟ್ ಮಂಡಳಿ ಈ ಮೂವರು ಆಟಗಾರರನ್ನು ದಿಢೀರ್ ಸಸ್ಪೆಂಡ್ ಮಾಡಿತ್ತು. ಇದೀಗ ಈ ಮೂವರು ಆಟಗಾರರ ಮೇಲೆ ಲಂಕಾ ಕ್ರಿಕೆಟ್ ಮಂಡಳಿ ಒಂದು ವರ್ಷಗಳ ಕಾಲ ನಿಷೇಧದ ಶಿಕ್ಷೆ ವಿಧಿಸಿದೆ. ಹೀಗಾಗಿ ಈ ಮೂವರು ಕ್ರಿಕೆಟಿಗರು ಭಾರತದ ವಿರುದ್ದದ ಸೀಮಿತ ಓವರ್‌ಗಳ ಸರಣಿಯೂ ಸೇರಿದಂತೆ ಯುಎಇನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಿಂದಲೂ ಹೊರಬಿದ್ದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.