ನೇಪಾಳ ಕ್ರಿಕೆಟ್ ತಂಡದ ಮಾಜಿ ನಾಯಕನಿಗೆ ನೀಡಲಾಗಿದ್ದ 8 ವರ್ಷದ ಜೈಲು ಶಿಕ್ಷೆಯನ್ನು ಹೈಕೋರ್ಟ್ ಖುಲಾಸೆ ಮಾಡಿದೆ. ಇದರಿಂದಾಗಿ ಸಂದೀಪ್ ಲಮಿಚನ್ನೆ ಈಗ ಟಿ20 ವಿಶ್ವಕಪ್ ತಂಡವನ್ನು ಕೂಡಿಕೊಳ್ಳಲು ಸಾಧ್ಯವಾಗಲಿದೆ.
ನವದೆಹಲಿ (ಮೇ.16): ನೇಪಾಳ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಐಪಿಎಲ್‌ನ ಮಾಜಿ ಆಟಗಾರ ಸಂದೀಪ್ ಲಮಿಚನ್ನೆ ವಿರುದ್ಧದ ಅತ್ಯಾಚಾರ ಆರೋಪವನ್ನು ಖುಲಾಸೆ ಮಾಡಲಾಗಿದೆ. ತಮ್ಮ ವಿರುದ್ಧದ ರೇಪ್ ಆರೋಪ ಹಾಗೂ ಅದಕ್ಕಾಗಿ ನೀಡಲಾಗಿರುವ 8 ವರ್ಷದ ಶಿಕ್ಷೆಯ ವಿರುದ್ಧ ಹೈಕೋರ್ಟ್‌ಗೆ ಸಂದೀಪ್ ಮೇಲ್ಮನವಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಹೈಕೋರ್ಟ್ ಈತನ ವಿರುದ್ಧದ ಎಲ್ಲಾ ಆರೋಪಗಳನ್ನು ಖುಲಾಸೆ ಮಾಡಿದೆ. ನೇಪಾಳ ತಂಡದ ನಾಯಕನಿಗೆ ಕಳೆದ ಜನವರಿಯಲ್ಲಿ ಲೈಂಗಿಕ ದೌರ್ಜನ್ಯಕ್ಕಾಗಿ ಎಂಟು ವರ್ಷಗಳ ಜೈಲು ಶಿಕ್ಷೆಯನ್ನು ಪ್ರಶ್ನೆ ಮಾಡಿ ಮೇಲ್ಮನವಿ ಸಲ್ಲಿಸಿದ್ದರು. ''ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ರದ್ದುಗೊಳಿಸಿದೆ. ಸಂದೀಪ್ ಲಮಿಚ್ಚನ್ನೆ ಅವರನ್ನು ದೋಷಮುಕ್ತಗೊಳಿಸಲಾಗಿದೆ ಎಂದು ಪಟಾನ್ ಹೈಕೋರ್ಟ್ ವಕ್ತಾರ ಬಿಮಲ್ ಪರಾಜುಲಿ ಬುಧವಾರ ತಿಳಿಸಿದ್ದಾರೆ. 2022 ರಲ್ಲಿ ಕಠ್ಮಂಡು ಹೋಟೆಲ್‌ನಲ್ಲಿ 18 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಲಮಿಚ್ಚನ್ನೆ ಶಿಕ್ಷೆಗೆ ಗುರಿಯಾಗಿದ್ದರು. ಮೂಲಗಳ ಪ್ರಕಾರ ಸಂದೀಪ್ ಲಮಿಚ್ಚನ್ನೆ ಮುಂಬರುವ ಟಿ20 ವಿಶ್ವಕಪ್ ಆಡಲಿರುವ ನೇಪಾಳ ತಂಡದ ಪರವಾಗಿ ಆಡುವ ಸಾಧ್ಯತೆ ಇದೆ ಎನ್ನಲಾಗಿದೆ.
ನೇಪಾಳವು ಈ ತಿಂಗಳ ಆರಂಭದಲ್ಲಿ ಟಿ20 ವಿಶ್ವಕಪ್ ಟೂರ್ನಿಗೆ ತನ್ನ ತಾತ್ಕಾಲಿಕ ತಂಡವನ್ನು ಹೆಸರಿಸಿದೆ ಆದರೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನಿಗದಿಪಡಿಸಿದ ಮೇ 25 ಗಡುವಿನವರೆಗೆ ಬದಲಾವಣೆಗಳನ್ನು ಮಾಡಬಹುದು. 23 ವರ್ಷದ ಸಂದೀಪ್ ನೇಪಾಳದ ಪ್ರಖ್ಯಾತ ಕ್ರಿಕೆಟಿಗ. ಐಪಿಎಲ್‌ನಲ್ಲಿ ಆಡಿದ ಮೊದಲ ನೇಪಾಳದ ಪ್ಲೇಯರ್ ಎನ್ನುವ ಶ್ರೇಯವೂ ಇವರದಾಗಿದೆ. ಅದರೊಂದಿಗೆ ಆಸ್ಟ್ರೇಲಿಯಾ, ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್‌ನ ಪ್ರಮುಖ ಟಿ20 ಲೀಗ್‌ಗಳಲ್ಲಿ ಅವರು ಆಟವಾಡಿದ್ದಾರೆ. ಆನ್‌ಫೀಲ್ಡ್‌ನಲ್ಲಿ ಲೆಗ್‌ಸ್ಪಿನ್ನರ್ ಸಂಪಾದಿಸಿದ ದೊಡ್ಡ ಯಶಸ್ಸು ಹಿಮಾಲಯದ ದೇಶವಾಗಿರುವ ನೇಪಾಳದಲ್ಲಿ ಕ್ರಿಕೆಟ್ನ ಜನಪ್ರಿಯತೆಗೆ ಕಾರಣವಾಗಿತ್ತು.
2022 ರಲ್ಲಿ, ಕಠ್ಮಂಡು ಹೋಟೆಲ್‌ನಲ್ಲಿ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ್ದಾನೆ ಎನ್ನುವ ಆರೋಪವನ್ನು ಇವರ ಮೇಲೆ ಹೊರಿಸಲಾಗಿತ್ತು. ಪೊಲೀಸರು ಆತನಿಗೆ ಬಂಧನ ವಾರಂಟ್ ಹೊರಡಿಸಿದ ನಂತರ ಕಸ್ಟಡಿಗೆ ತೆಗೆದುಕೊಳ್ಳಲಾಯಿತು. ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರಿಂದ, ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಇವರು ಭಾಗವಹಿಸಿದ್ದರು. ಪದೇ ಪದೇ ವಿಳಂಬವಾದ ವಿಚಾರಣೆಯ ನಂತರ ಡಿಸೆಂಬರ್‌ನಲ್ಲಿ ಸಂದೀಪ್ ಲಮಿಚ್ಚನ್ನೆ ಅತ್ಯಾಚಾರದ ತಪ್ಪಿತಸ್ಥನೆಂದು ಸಾಬೀತಾಯಿತು.
ರೇಪ್ ಕೇಸ್‌ನಲ್ಲಿ ಐಪಿಎಲ್ ಆಟಗಾರನಿಗೆ 8 ವರ್ಷ ಜೈಲು ಶಿಕ್ಷೆ
ಅಧಿಕಾರಿಗಳು ಬಂಧನ ವಾರಂಟ್ ಹೊರಡಿಸಿದಾಗ, ಸಂದೀಪ್ ಅವರು ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿದ್ದರು. ವಾರಂಟ್ ಕಾರಣದಿಂದಾಗಿ ಜಮೈಕಾದಿಂದ ವಾಪಾಸ್ ಬರಲು ಹಿಂದೇಟು ಹಾಕಿದ್ದರು. ಇದರ ಬೆನ್ನಲ್ಲಿಯೇ ಅವರನ್ನು ನೇಪಾಳದ ನಾಯಕರಾಗಿ ಅಮಾನತುಗೊಂಡಿದ್ದರೆ, ಕ್ರೀಡಾ ಜೀವನ ಮುಂದುವರಿಸಲು ಮುಕ್ತರಾಗಿದ್ದರಯ. ಇದರಿಂದಾಗಿ ವಿಶ್ವಕಪ್ ಅರ್ಹತಾ ಪಂದ್ಯಗಳು ಮತ್ತು 2023 ರ ಏಷ್ಯಾ ಕಪ್ ಸೇರಿದಂತೆ ರಾಷ್ಟ್ರೀಯ ತಂಡದಲ್ಲಿ ಆಡಲು ಅವರಿಗೆ ಅವಕಾಶ ಮಾಡಿಕೊಟ್ಟಂತಾಗಿತ್ತು. ಕಳೆದ ವರ್ಷ ಫೆಬ್ರವರಿಯಲ್ಲಿ ಅವರು ಮೊದಲು ಮೈದಾನಕ್ಕೆ ಮರಳಿದಾಗ ನೂರಾರು ಕ್ರಿಕೆಟ್ ಅಭಿಮಾನಿಗಳು ಅವರನ್ನು ಸ್ವಾಗತಿಸಿದರು. ಆದರೆ, ಸಂದೀಪ್ ತಂಡದಲ್ಲಿ ಆಡಿದ್ದು, ಕೆಲವು ನೇಪಾಳಿಗಳ ಆಕ್ರೋಶಕ್ಕೂ ಕಾರಣವಾಗಿತ್ತು.ದುಬೈನಲ್ಲಿ ನಡೆದ ಅಂತಾರಾಷ್ಟ್ರೀಯ ಪಂದ್ಯಾವಳಿಯ ವೇಳೆ ಸ್ಕಾಟ್ಲೆಂಡ್‌ನ ಕ್ರಿಕೆಟಿಗರು ಸಂದೀಪ್ ಲಮಿಚನ್ನೆ ಜೊತೆ ಹಸ್ತಲಾಘವ ಮಾಡಲು ನಿರಾಕರಿಸಿದ್ದರು.
ಅಪ್ರಾಪ್ತೆ ಮೇಲೆ ರೇಪ್: ಕ್ರಿಕೆಟಿಗ ಸಂದೀಪ್ ಲಮಿಚ್ಚಾನೆ ದೋಷಿ, ಮತ್ತೆ ಜೈಲು ಶಿಕ್ಷೆಗೆ ಕ್ಷಣಗಣನೆ..!