ICC Men's T20 World Cup 2024: ಟಿ-20 ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಕಂಗೊಳಿಸಲಿದೆ ಕರ್ನಾಟಕದ ಹೆಮ್ಮೆಯ ‘ನಂದಿನಿ’..!

By Kannadaprabha News  |  First Published May 16, 2024, 9:05 AM IST

ಇದೇ ಮೊದಲ ಬಾರಿಗೆ ಕೆಎಂಎಫ್‌ ಐರ್ಲೆಂಡ್‌ ಮತ್ತು ಸ್ಕಾಟ್ಲೆಂಡ್‌ ಕ್ರಿಕೆಟ್‌ ತಂಡಗಳಿಗೆ ಪ್ರಾಯೋಜಕತ್ವ ನೀಡಲಿದೆ. ಈ ತಂಡಗಳ ಆಟಗಾರರ ಜೆರ್ಸಿಯಲ್ಲಿ ಬಲಗೈ ಆಟಗಾರನ ಎಡ ತೋಳಿನ ಮೇಲೆ ಮತ್ತು ಎಡಗೈ ಆಟಗಾರನ ಬಲ ತೋಳಿನ ಮೇಲೆ ಕೆಎಂಎಫ್‌ ಲಾಂಛನ ಇರಲಿದೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ನಂದಿನಿ ಎಂದು ಬರೆದ ಲಾಂಛನ ಇದಾಗಿರಲಿದೆ. 


ಬೆಂಗಳೂರು(ಮೇ.16):  ಜೂನ್‌ನಲ್ಲಿ ನಡೆಯಲಿರುವ ಟಿ-20 ಕ್ರಿಕೆಟ್‌ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಕನ್ನಡಿಗರ ಹೆಮ್ಮೆಯ ನಂದಿನಿ ಬ್ರ್ಯಾಂಡ್‌ ಲಾಂಛನ ಐರ್ಲೆಂಡ್‌ ಮತ್ತು ಸ್ಕಾಟ್ಲೆಂಡ್‌ ಆಟಗಾರರ ಜೆರ್ಸಿಯ ಮೇಲೆ ರಾರಾಜಿಸಲಿದೆ ಎಂದು ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್‌ ತಿಳಿಸಿದರು. ಬುಧವಾರ ಕೆಎಂಎಫ್‌ ಕೇಂದ್ರ ಕಚೇರಿಯಲ್ಲಿ ಐರ್ಲೆಂಡ್‌ ಮತ್ತು ಸ್ಕಾಟ್ಲೆಂಡ್‌ ಕ್ರಿಕೆಟ್‌ ತಂಡದ ಆಡಳಿತ ಮಂಡಳಿಯೊಂದಿಗೆ ವರ್ಚುವಲ್‌ ಮಾದರಿಯಲ್ಲಿ ಮಾತುಕತೆ ನಡೆಸಿದರು.

ಬಳಿಕ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ಅಮೆರಿಕ, ವೆಸ್ಟ್‌ಇಂಡೀಸ್‌ನಲ್ಲಿ ಜೂ.1ರಿಂದ 29ರವರೆಗೆ ನಡೆಯಲಿರುವ ಟಿ-20 ಕ್ರಿಕೆಟ್‌ ವಿಶ್ವಕಪ್‌ ಪಂದ್ಯಾವಳಿ ನಡೆಯಲಿದೆ. ಇದೇ ಮೊದಲ ಬಾರಿಗೆ ಕೆಎಂಎಫ್‌ ಐರ್ಲೆಂಡ್‌ ಮತ್ತು ಸ್ಕಾಟ್ಲೆಂಡ್‌ ಕ್ರಿಕೆಟ್‌ ತಂಡಗಳಿಗೆ ಪ್ರಾಯೋಜಕತ್ವ ನೀಡಲಿದೆ. ಈ ತಂಡಗಳ ಆಟಗಾರರ ಜೆರ್ಸಿಯಲ್ಲಿ ಬಲಗೈ ಆಟಗಾರನ ಎಡ ತೋಳಿನ ಮೇಲೆ ಮತ್ತು ಎಡಗೈ ಆಟಗಾರನ ಬಲ ತೋಳಿನ ಮೇಲೆ ಕೆಎಂಎಫ್‌ ಲಾಂಛನ ಇರಲಿದೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ನಂದಿನಿ ಎಂದು ಬರೆದ ಲಾಂಛನ ಇದಾಗಿರಲಿದೆ ಎಂದು ತಿಳಿಸಿದರು.

Tap to resize

Latest Videos

ಐಸಿಸಿ ಟಿ20 ವಿಶ್ವಕಪ್‌: ಐರ್ಲೆಂಡ್‌, ಸ್ಕಾಟ್ಲೆಂಡ್‌ ತಂಡಗಳಿಗೆ KMF ಪ್ರಾಯೋಜಕತ್ವ

ಸ್ಕಾಟ್ಲೆಂಡ್‌ ಮತ್ತು ಐರ್ಲೆಂಡ್‌ ತಂಗಳ ಆಟಗಾರರು ನಂದಿನಿ ಉತ್ಪನ್ನಗಳ ಜಾಹೀರಾತು, ಸಾಮಾಜಿಕ ತಾಣಗಳಲ್ಲಿ ನಡೆಸುವ ಅಭಿಯಾನ, ಫೋಟೋಶೂಟ್‌ಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಶ್ವಕಪ್‌ ವೇಳೆ ಜಾಹೀರಾತುಗಳು ಪ್ರಸಾರಗೊಳ್ಳಲಿವೆ. ಹಾಗೆಯೇ ‘ವಿಶ್ವಕಪ್‌ ವೇಳೆ ಕೆಎಂಎಫ್‌ನ ಉತ್ಪನ್ನಗಳು ಅಮೆರಿಕದಲ್ಲಿ ಲಭ್ಯವಿರಲಿದ್ದು, ಕರ್ನಾಟಕದ ಬ್ರ್ಯಾಂಡ್‌ಗೆ ಜಾಗತಿಕ ಮನ್ನಣೆ ಸಿಗುವಂತೆ ಮಾಡುವುದು ನಮ್ಮ ಗುರಿ ಎಂದು ಹೇಳಿದರು.

ಜಾಗತಿಕ ಮಟ್ಟದಲ್ಲಿ ಈಗಾಗಲೇ ನಂದಿನಿ ಉತ್ಪನ್ನ ದೊರೆಯುತ್ತಿದೆ. ದುಬೈನಲ್ಲಿ ನಂದಿನಿ ಮಳಿಗೆ ತೆರೆಯಲಾಗಿದೆ. ಇನ್ನು ಎರಡು ಮಳಿಗೆಗಳನ್ನು ತೆರೆಯಲು ಸಿದ್ಧತೆಗಳನ್ನುಮಾಡಿಕೊಳ್ಳಲಾಗಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲೂ ಮಳಿಗೆ ತೆರೆಯುವ ಪ್ರಯತ್ನ ನಡೆದಿದೆ. ಅಮೆರಿಕಗೆ ನಂದಿನಿ ಹಾಲಿನ ಸಿಹಿ ಉತ್ಪನ್ನಗಳು ಗ್ರಾಹಕರಿಗೆ ಲಭ್ಯವಿದ್ದು ಇದರ ಪ್ರಮಾಣವನ್ನು ಇನ್ನು ಹೆಚ್ಚು ಮಾಡುತ್ತಿದ್ದೇವೆ. ಇಲ್ಲಿ ಹೋಟೆಲ್‌ ಸ್ಟೋರ್ಸ್‌ ನೊಂದಿಗೆ ಒಪ್ಪಂದ ಮಾಡಿಕೊಂಡು 700 ಔಟ್‌ಲೆಟ್‌ಗಳಲ್ಲಿ ನಂದಿನಿ ಉತ್ಪನ್ನಗಳು ದೊರೆಯುವಂತೆ ಮಾಡಿದ್ದೇವೆ ಎಂದರು.

ಜಾಗತಿಕ ಮಟ್ಟದಲ್ಲಿ ನಂದಿನಿ ಉತ್ಪನ್ನಗಳ ಮಾರಾಟ ಹೆಚ್ಚಿಸುವ ಗುರಿ ಕೆಎಂಎಫ್‌ನದ್ದು. ಕರ್ನಾಟಕ ಮಾತ್ರವಲ್ಲಿ ಇಡೀ ಪ್ರಪಂಚದಲ್ಲಿ ನಂದಿನಿ ಉತ್ಪನ್ನ ಲಭ್ಯವಾಗಬೇಕು. ಈ ನಿಟ್ಟಿನಲ್ಲಿ ಸ್ಕಾಟ್ಲೆಂಡ್‌ ಮತ್ತು ಐರ್ಲೆಂಡ್‌ ಕ್ರಿಕೆಟ್‌ ತಂಡಗಳಿಗೆ ಪ್ರಾಯೋಜಕತ್ವ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ. ಭಾರತ ತಂಡಕ್ಕೂ ಪ್ರಾಯೋಜಕತ್ವ ನೀಡುವ ಮನಸ್ಸಿದೆ. ಆದರೆ ದುಬಾರಿ ಮೊತ್ತವನ್ನು ಭರಿಸುವುದು ಕಷ್ಟ ಎಂದು ಹೇಳಿದರು. ಈ ಸಂದರ್ಭದಲ್ಲಿ ಕೆಎಂಎಫ್‌ ಮಾರುಕಟ್ಟೆ ವಿಭಾಗದ ನಿರ್ದೇಶಕ ರಘುನಂದನ್‌ ಉಪಸ್ಥಿತರಿದ್ದರು.

click me!