IPL ಟೂರ್ನಿಯಿಂದ ಹೊರಬಿದ್ದರೂ ರಿಷಭ್ ಪಂತ್‌ಗೆ ಸಿಗಲಿದೆ 16 ಕೋಟಿ ರುಪಾಯಿ..! ಐಪಿಎಲ್ ರೂಲ್ಸ್ ಏನು?

By Naveen KodaseFirst Published Jan 9, 2023, 12:32 PM IST
Highlights

ರಸ್ತೆ ಅಪಘಾತದಿಂದ ಚೇತರಿಸಿಕೊಳ್ಳುತ್ತಿರುವ ರಿಷಭ್ ಪಂತ್, ಐಪಿಎಲ್‌ ನಿಂದ ಔಟ್
ಡೆಲ್ಲಿ ಕ್ಯಾಪಿಟಲ್ಸ್‌ ನಾಯಕರಾಗಿದ್ದ ಪಂತ್‌, 16ನೇ ಆವತ್ತಿಯ ಐಪಿಎಲ್‌ಗೆ ಅಲಭ್ಯ
ಹೀಗಿದ್ದೂ ಸಂಪೂರ್ಣ ಸಂಭಾವನೆ ಪಡೆಯಲಿರುವ ರಿಷಭ್ ಪಂತ್

ನವದೆಹಲಿ(ಜ.09): ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮುಗಿದಿದೆ. ತಜ್ಞರ ಸಲಹೆಯಂತೆ ರಿಷಭ್‌ ಪಂತ್‌, ಏನಿಲ್ಲವೆಂದರೂ ಕನಿಷ್ಠ 4 ರಿಂದ 6 ತಿಂಗಳುಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹೀಗಾಗಿ ರಿಷಭ್ ಪಂತ್, 2023ರ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಿಷಭ್ ಪಂತ್ ಅವರ ಆಟವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳಿಗೆ ಸಾಧ್ಯವಿಲ್ಲ. ಇದೆಲ್ಲದರ ಹೊರತಾಗಿಯೂ ರಿಷಭ್ ಪಂತ್, ತಮ್ಮ ಪಾಲಿನ ಪೂರ್ಣ ಪ್ರಮಾಣದ ಸಂಭಾವನೆಯನ್ನು ಪಡೆದುಕೊಳ್ಳಲಿದ್ದಾರೆ. 

ಹೌದು, ಕಾರು ಅಪಘಾತದಿಂದಾಗಿ ಮುಂಬೈನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಭಾರತೀಯ ಕ್ರಿಕೆಟಿಗ ರಿಷಭ್‌ ಪಂತ್‌ 16ನೇ ಆವೃತ್ತಿಯ ಐಪಿಎಲ್‌ಗೆ ಸಂಪೂರ್ಣ ಗೈರಾದರೂ ಅವರ 16 ಕೋಟಿ ರು. ವೇತನ ಪೂರ್ತಿ ಸಿಗಲಿದೆ. 16ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ರಿಷಭ್ ಪಂತ್ ಅವರನ್ನು 16 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿತ್ತು. ಈಗ ಪಂತ್, ಐಪಿಎಲ್ ಟೂರ್ನಿಯಿಂದ ಹೊರಬಿದ್ದರೂ ಸಹಾ, ಪೂರ್ಣ ಹಣವನ್ನು ರಿಷಭ್ ಪಂತ್ ಪಡೆದುಕೊಳ್ಳಲಿದ್ದಾರೆ. ಇದರ ಜೊತೆಗೆ ಬಿಸಿಸಿಐ ಕೇಂದ್ರ ಗುತ್ತಿಗೆಯ 5 ಕೋಟಿ ರು. ಮೊತ್ತವೂ ಪಂತ್‌ ಖಾತೆಗೆ ಜಮೆಯಾಗಲಿದೆ. 

ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿರುವ ಎಲ್ಲಾ ಆಟಗಾರರು ವಿಮೆ ವ್ಯಾಪ್ತಿಗೆ ಒಳಪಟ್ಟಿರುತ್ತಾರೆ. ಗಾಯದ ಕಾರಣದಿಂದ ಐಪಿಎಲ್‌ಗೆ ಗೈರಾದರೂ ಅವರಿಗೆ ಫ್ರಾಂಚೈಸಿ ಘೋಷಿಸಿರುವ ಪೂರ್ತಿ ವೇತನ ಸಿಗಲಿದೆ. ಅದನ್ನು ವಿಮಾ ಕಂಪೆನಿಯೇ ಆಟಗಾರನಿಗೆ ಪಾವತಿಸಲಿದೆ. ಮತ್ತೊಂದೆಡೆ ಈಗಾಗಲೇ ರಿಷಭ್ ಪಂತ್‌ರ ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸುವುದಾಗಿ ತಿಳಿಸಿರುವ ಬಿಸಿಸಿಐ, ಕೇಂದ್ರ ಗುತ್ತಿಗೆಯ ಹಣವನ್ನೂ ಪಾವತಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಟೀಂ ಇಂಡಿಯಾ ಕ್ರಿಕೆಟಿಗ ರಿಷಭ್‌ ಪಂತ್‌ಗೆ ಯಶಸ್ವಿ ಅಸ್ತಿಬಂಧಕ ಶಸ್ತ್ರಚಿಕಿತ್ಸೆ..!

ಮೂರು ಮಾದರಿ ಕ್ರಿಕೆಟ್‌ನ ಸಕ್ರಿಯ ಆಟಗಾರನೆನಿಸಿಕೊಂಡಿದ್ದ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಬಿಸಿಸಿಐ ಕೇಂದ್ರೀಯ ಗುತ್ತಿಗೆಯಲ್ಲಿ 'ಎ' ಗ್ರೇಡ್‌ ಪಡೆದುಕೊಂಡಿದ್ದರು. 'ಎ' ಗ್ರೇಡ್ ಹೊಂದಿದ ಆಟಗಾರರು ಬಿಸಿಸಿಐನಿಂದ ವಾರ್ಷಿಕ 5 ಕೋಟಿ ರುಪಾಯಿ ಸಂಭಾವನೆಯನ್ನು ಪಡೆಯಲಿದ್ದು, ಪಂತ್‌ಗೆ ಪೂರ್ಣ ಸಂಭಾವನೆ ನೀಡಲು ತೀರ್ಮಾನಿಸಿದೆ.

ಈ ಹಿಂದೆ ದೀಪಕ್ ಚಹರ್‌ಗೂ ಸಿಕ್ಕಿತ್ತು ಸಂಭಾವನೆ:

ಹೌದು, 2022ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಫ್ರಾಂಚೈಸಿಯು ಬರೋಬ್ಬರಿ 14 ಕೋಟಿ ರುಪಾಯಿ ನೀಡಿ ದೀಪಕ್‌ ಚಹರ್ ಅವರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆದರೆ 15ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನವೇ ಬೆನ್ನು ನೋವಿನ ಸಮಸ್ಯೆಯಿಂದಾಗಿ ದೀಪಕ್ ಚಹರ್, 2022ನೇ ಸಾಲಿನ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದರು. ಹೀಗಿದ್ದೂ ದೀಪಕ್ ಚಹರ್, ತಮಗೆ ಸಿಗಬೇಕಿದ್ದ ಸಂಭಾವನೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಐಪಿಎಲ್ ಆಟಗಾರರಿಗೆ ಯಾವಾಗ ತಮ್ಮ ಪಾಲಿನ ಸಂಭಾವನೆ ಸಿಗುತ್ತೆ..?

ಸಾಮಾನ್ಯವಾಗಿ ಹರಾಜಿನಲ್ಲಿ ಆಟಗಾರರನ್ನು ಖರೀದಿಸುತ್ತಿದ್ದಂತೆಯೇ ಆಟಗಾರರ ಖಾತೆಗೆ ಹಣ ಜಮಾವಣೆಯಾಗುವುದಿಲ್ಲ. ಐಪಿಎಲ್‌ ಫ್ರಾಂಚೈಸಿಗಳು, ಐಪಿಎಲ್ ಸೀಸನ್ ಆರಂಭಕ್ಕೂ ಮುನ್ನ ಆಟಗಾರರು ಅಭ್ಯಾಸಕ್ಕೆ ಕ್ಯಾಂಪ್ ಸೇರಿಕೊಳ್ಳುತ್ತಿದ್ದಂತೆಯೇ, ಆಟಗಾರರ ಒಪ್ಪಂದದ 50% ಹಣವನ್ನು ಜಮೆ ಮಾಡಲಾಗುತ್ತದೆ. ಇದಾದ ಬಳಿಕ ಟೂರ್ನಿ ಅರ್ಧ ಮುಗಿಯುತ್ತಿದ್ದಂತೆಯೇ ಮತ್ತೆ 30% ಒಪ್ಪಂದದ ಹಣವನ್ನು ಆಟಗಾರರ ಖಾತೆಗೆ ಜಮೆ ಮಾಡಲಿದೆ. ಇನ್ನು 20% ಹಣವನ್ನು ಟೂರ್ನಿ ಮುಕ್ತಾಯದ ಬಳಿಕ ಅಥವಾ ಆಟಗಾರರು ಹಾಗೂ ತಂಡದ ಹೊಂದಾಣಿಯಲ್ಲಿ ಹಣವನ್ನು ಜಮೆ ಮಾಡಲಾಗುತ್ತದೆ.

click me!