ಇಂದು ಐಪಿಎಲ್ ಪ್ಲೇ-ಆಫ್‌ ರೇಸ್‌ ಕ್ಲೈಮ್ಯಾಕ್ಸ್‌: ರಾಜಸ್ಥಾನ, ಕೋಲ್ಕತಾ ಭವಿಷ್ಯ ನಿರ್ಧಾರ

Kannadaprabha News   | Kannada Prabha
Published : May 24, 2026, 10:19 AM IST
Rajasthan Royals

ಸಾರಾಂಶ

ಭಾನುವಾರದ ಮಹತ್ವದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಗೆದ್ದರೆ ನೇರವಾಗಿ ಪ್ಲೇ-ಆಫ್‌ ಪ್ರವೇಶಿಸಲಿದೆ. ಒಂದು ವೇಳೆ ರಾಜಸ್ಥಾನ ಸೋತರೆ, ಕೋಲ್ಕತಾ ನೈಟ್‌ ರೈಡರ್ಸ್‌ ತಂಡಕ್ಕೆ ಡೆಲ್ಲಿ ವಿರುದ್ಧ ಗೆದ್ದು ನೆಟ್‌ ರನ್‌ರೇಟ್‌ ಆಧಾರದ ಮೇಲೆ ಪ್ಲೇ-ಆಫ್‌ ಪ್ರವೇಶಿಸುವ ಅವಕಾಶವಿದೆ.

ಮುಂಬೈ: ಪ್ಲೇ-ಆಫ್‌ ರೇಸ್‌ನ ಅತಿ ಮಹತ್ವದ ಪಂದ್ಯದಲ್ಲಿ ಭಾನುವಾರ ರಾಜಸ್ಥಾನ ರಾಯಲ್ಸ್‌ ತಂಡ ಮುಂಬೈ ಇಂಡಿಯನ್ಸ್‌ ವಿರುದ್ಧ ಸೆಣಸಾಡಲಿದೆ. ಈ ಪಂದ್ಯದಲ್ಲಿ ಗೆದ್ದರೆ ರಾಜಸ್ಥಾನ ರಾಯಲ್ಸ್‌ ಟೂರ್ನಿಯ 4ನೇ ತಂಡವಾಗಿ ಪ್ಲೇ-ಆಫ್‌ ಪ್ರವೇಶಿಸಲಿದ್ದು, ಇತರೆಲ್ಲಾ ತಂಡಗಳ ಕನಸು ಭಗ್ನಗೊಳ್ಳಲಿದೆ. ಒಂದು ವೇಳೆ ರಾಜಸ್ಥಾನ ಸೋತರೆ ಮಾತ್ರ ಕೋಲ್ಕತಾ ಸೇರಿ ಇತರ ತಂಡಗಳ ಆಸೆ ಜೀವಂತವಾಗಿರಲಿದೆ.

ರಾಜಸ್ಥಾನ ರಾಯಲ್ಸ್ ತಂಡಕ್ಕಿದೆ ಗೋಲ್ಡನ್ ಚಾನ್ಸ್

ಆರ್‌ಸಿಬಿ, ಗುಜರಾತ್‌, ಹೈದರಾಬಾದ್‌ ತಲಾ 18 ಅಂಕಹೊಂದಿದ್ದು, ಮೂರೂ ತಂಡಗಳು ಪ್ಲೇ-ಆಫ್‌ ಪ್ರವೇಶಿಸಿವೆ. ಈ ತಂಡಗಳ ಹೊರತಾಗಿ 16 ಅಂಕ ಗಳಿಸುವ ಅವಕಾಶ ಇರುವುದು ರಾಜಸ್ಥಾನಕ್ಕೆ ಮಾತ್ರ. ತಂಡ ಈ ಬಾರಿ 13 ಪಂದ್ಯಗಳನ್ನಾಡಿದ್ದು, 14 ಅಂಕಗಳನ್ನು ಸಂಪಾದಿಸಿದೆ. ಮುಂಬೈ ವಿರುದ್ಧ ಗೆದ್ದರೆ ತಂಡಕ್ಕೆ 16 ಅಂಕ ಆಗಲಿದ್ದು, ಪ್ಲೇ-ಆಫ್‌ ಪ್ರವೇಶಿಸಿ ಎಲಿಮಿನೇಟರ್‌ನಲ್ಲಿ ಆಡಲಿದೆ. ಒಂದು ವೇಳೆ ಸೋತರೆ ರಾಯಲ್ಸ್‌ ಅಂಕ 14 ಆಗಿರಲಿದೆ. ಆಗ ತಂಡದ ಭವಿಷ್ಯ ಭಾನುವಾರ ನಡೆಯಲಿರುವ ಮತ್ತೊಂದು ಪಂದ್ಯದ ಮೂಲಕ ನಿರ್ಧಾರವಾಗಲಿದೆ.

ಮುಂಬೈ ತಂಡ 13 ಪಂದ್ಯಗಳನ್ನಾಡಿದ್ದು, ಕೇವಲ 4ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಕೆಳಗಿದೆ. ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳಲು ಕಾಯುತ್ತಿದೆ.

ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ

ಕೋಲ್ಕತಾ vs ಡೆಲ್ಲಿ ಮುಖಾಮುಖಿ: ಗೆದ್ರೂ ಪ್ಲೇ-ಆಫ್‌ ಸ್ಥಾನ ಖಚಿತವಿಲ್ಲ

ಕೋಲ್ಕತಾ: ಈ ಬಾರಿ ಲೀಗ್‌ ಹಂತದ ಕೊನೆ ಪಂದ್ಯದಲ್ಲಿ ಭಾನುವಾರ ಸಂಜೆ ಕೋಲ್ಕತಾ ನೈಟ್‌ ರೈಡರ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ರೋಚಕತೆ ಹುಟ್ಟುಹಾಕಿದ್ದರೂ, ಉಭಯ ತಂಡಗಳ ಪ್ಲೇ-ಆಫ್‌ ಭವಿಷ್ಯದ ನಿರ್ಧಾರವಾಗುವುದು ಮತ್ತೊಂದು ಪಂದ್ಯದಲ್ಲಿ.

ಅಜಿಂಕ್ಯ ರಹಾನೆ ನಾಯಕತ್ವದ ಕೋಲ್ಕತಾ ಆಡಿರುವ 13 ಪಂದ್ಯಗಳಲ್ಲಿ ತಲಾ 6 ಗೆಲುವು, ಸೋಲು ಕಂಡಿದೆ. ಒಂದು ಪಂದ್ಯ ರದ್ದುಗೊಂಡಿದ್ದರಿಂದ ತಂಡದ ಬಳಿ ಈಗ 13 ಅಂಕಗಳಿದ್ದು, ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಭಾನುವಾರ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ಸೋತರೆ ಮಾತ್ರ ಕೋಲ್ಕತಾಗೆ ಪ್ಲೇ-ಆಫ್‌ ಅವಕಾಶವಿದೆ. ರಾಜಸ್ಥಾನ ಸೋತು, ಕೋಲ್ಕತಾ ಗೆದ್ದರೆ ಆಗ ತಂಡದ ಅಂಕ 15 ಆಗಲಿದೆ. ನೆಟ್‌ ರನ್‌ರೇಟ್‌ನಲ್ಲಿ ಪಂಜಾಬ್‌ ಕಿಂಗ್ಸ್‌ಅನ್ನು ಹಿಂದಿಕ್ಕಿದರೆ ಕೋಲ್ಕತಾ 4ನೇ ತಂಡವಾಗಿ ಪ್ಲೇ-ಆಫ್‌ ಪ್ರವೇಶಿಬಹುದು.

ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಆಡಿರುವ 13 ಪಂದ್ಯಗಳ ಪೈಕಿ 6ರಲ್ಲಿ ಗೆದ್ದಿದ್ದು, 7ರಲ್ಲಿ ಸೋತಿದೆ. ತಂಡದ ಬಳಿ ಈಗ ಇರುವುದು 12 ಅಂಕಗಳು ಮಾತ್ರ. ತಂಡ ಪ್ಲೇ-ಆಫ್‌ ರೇಸ್‌ನಿಂದ ಈಗಾಗಲೇ ಬಹುತೇಕ ಹೊರಬಿದ್ದಿದ್ದು, ಗೆದ್ದರೂ ಅಂತಿಮ-4 ತಂಡಗಳಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವುದು ಅಸಾಧ್ಯ ಎಂಬಂತಿದೆ.

ಪಂದ್ಯ ಆರಂಭ: ಸಂಜೆ 7.30ಕ್ಕೆ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IPL 2026: ಪಂಜಾಬ್ ಕಿಂಗ್ಸ್ ಗೆಲ್ಲುತ್ತಿದ್ದಂತೆಯೇ ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದ ಮತ್ತೊಂದು ತಂಡ!
ಅಲ್ಲು ಅರ್ಜುನ್ ಭೇಟಿ ಮಾಡಿ ಭರ್ಜರಿ ಉಡುಗೊರೆ ನೀಡಿದ ಆರ್‌ಸಿಬಿ ಸ್ಟಾರ್ ವೆಂಕಟೇಶ್ ಐಯ್ಯರ್