
ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಅಂತಿಮ ಘಟ್ಟ ತಲುಪಿದೆ. ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಪ್ಲೇಆಫ್‌ಗೆ ಕ್ವಾಲಿಫೈ ಆಗಿವೆ. 67 ಮ್ಯಾಚ್‌ಗಳು ಮುಗಿದಿದ್ದು, ಇನ್ನು ಕೇವಲ ಮೂರು ಪಂದ್ಯಗಳು ಬಾಕಿ ಇವೆ. ಈಗ ಉಳಿದಿರೋದು ಒಂದೇ ಒಂದು ಸ್ಥಾನ, ಅದಕ್ಕಾಗಿ ನಾಲ್ಕು ತಂಡಗಳು ಫೈಟ್ ಮಾಡುತ್ತಿವೆ. ರಾಜಸ್ಥಾನ ರಾಯಲ್ಸ್, ಪಂಜಾಬ್ ಕಿಂಗ್ಸ್, ಕೋಲ್ಕತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಕೊನೆಯ ಸ್ಥಾನಕ್ಕಾಗಿ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. 'ಸೂಪರ್ ಸಂಡೇ' ದಿನ ಈ ರೇಸ್‌ನ ಸಂಪೂರ್ಣ ಚಿತ್ರಣ ಸಿಗಲಿದೆ. ಹಾಗಾದ್ರೆ, ಪ್ಲೇಆಫ್ ಲೆಕ್ಕಾಚಾರ ಹೇಗಿದೆ ನೋಡೋಣ.
ಈ ನಾಲ್ಕು ತಂಡಗಳಲ್ಲಿ ರಿಯಾನ್ ಪರಾಗ್ ನಾಯಕತ್ವದ ರಾಜಸ್ಥಾನ ರಾಯಲ್ಸ್‌ಗೆ ಚಾನ್ಸ್ ಹೆಚ್ಚು. ಆಡಿರುವ 13 ಪಂದ್ಯಗಳಿಂದ 14 ಪಾಯಿಂಟ್ಸ್ ಗಳಿಸಿದ್ದು, +0.083 ನೆಟ್ ರನ್‌ರೇಟ್ (NRR) ಹೊಂದಿದೆ. ರಾಜಸ್ಥಾನ ತನ್ನ ಕೊನೆಯ ಪಂದ್ಯವನ್ನು ಪಾಯಿಂಟ್ಸ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. ಬೇರೆ ತಂಡಗಳ ಫಲಿತಾಂಶವನ್ನು ನೋಡದೆ ಪ್ಲೇಆಫ್ ತಲುಪಬಹುದಾದ ಏಕೈಕ ತಂಡ ರಾಜಸ್ಥಾನ. ಭಾನುವಾರದ ಪಂದ್ಯದಲ್ಲಿ ಮುಂಬೈ ತಂಡವನ್ನು ಸೋಲಿಸಿದರೆ ಸಾಕು, 16 ಪಾಯಿಂಟ್ಸ್‌ನೊಂದಿಗೆ ನೇರವಾಗಿ ಪ್ಲೇಆಫ್‌ಗೆ ಎಂಟ್ರಿ ಕೊಡಲಿದೆ.
ಒಂದು ವೇಳೆ ಮುಂಬೈ ವಿರುದ್ಧ ಸೋತರೆ? ಆಗಲೂ ರಾಜಸ್ಥಾನ್‌ಗೆ ಅವಕಾಶಗಳಿವೆ. ಆದರೆ, ಪಂಜಾಬ್ ಮತ್ತು ಕೋಲ್ಕತಾ ತಮ್ಮ ಕೊನೆಯ ಪಂದ್ಯಗಳಲ್ಲಿ ಸೋಲಬೇಕು. ಆಗ ಆ ಎರಡೂ ತಂಡಗಳು 13 ಪಾಯಿಂಟ್ಸ್‌ನೊಂದಿಗೆ ಟೂರ್ನಿಯಿಂದ ಹೊರಬೀಳುತ್ತವೆ. ಕೋಲ್ಕತಾ ತನ್ನ ಕೊನೆಯ ಪಂದ್ಯವನ್ನು ಪ್ಲೇಆಫ್ ರೇಸ್‌ನಲ್ಲಿರುವ ಡೆಲ್ಲಿ ವಿರುದ್ಧ ಆಡಲಿದೆ. ಒಂದು ವೇಳೆ ಡೆಲ್ಲಿ ಗೆದ್ದರೆ, ರಾಜಸ್ಥಾನ ಮತ್ತು ಡೆಲ್ಲಿ ಎರಡೂ ತಂಡಗಳ ಪಾಯಿಂಟ್ಸ್ 14 ಆಗಲಿದೆ. ಆದರೆ, ಉತ್ತಮ ನೆಟ್ ರನ್‌ರೇಟ್ ರಾಜಸ್ಥಾನ ಕೈ ಹಿಡಿಯಲಿದೆ.
ಈ ಬಾರಿ ಪ್ಲೇಆಫ್‌ನಿಂದ ಹೊರಬಿದ್ದರೆ ಪಂಜಾಬ್‌ಗೆ ಇದು ದೊಡ್ಡ ಮುಖಭಂಗವಾಗಲಿದೆ. ಯಾಕಂದ್ರೆ, ಮೊದಲ ಏಳು ಪಂದ್ಯಗಳಲ್ಲಿ ಆರನ್ನು ಗೆದ್ದಿದ್ದ ತಂಡ, ನಂತರ ಸತತವಾಗಿ ಸೋಲು ಕಂಡಿದೆ. ಸದ್ಯ 13 ಪಾಯಿಂಟ್ಸ್ ಹೊಂದಿರುವ ಪಂಜಾಬ್, +0.227 NRR ಹೊಂದಿದೆ. ತನ್ನ ಕೊನೆಯ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿದರೆ, ಪಂಜಾಬ್ ತನ್ನ ಅವಕಾಶವನ್ನು ಜೀವಂತವಾಗಿರಿಸಿಕೊಳ್ಳಬಹುದು.
ಆದರೆ, ರಾಜಸ್ಥಾನ ತಂಡ ಮುಂಬೈ ವಿರುದ್ಧ ಮತ್ತು ಕೋಲ್ಕತಾ ತಂಡ ಡೆಲ್ಲಿ ವಿರುದ್ಧ ಸೋಲಬೇಕು. ಒಂದು ವೇಳೆ ಪಂಜಾಬ್ ಮತ್ತು ಕೋಲ್ಕತಾ ಎರಡೂ ಗೆದ್ದರೆ, ಆಗ ನೆಟ್ ರನ್‌ರೇಟ್ ನಿರ್ಣಾಯಕವಾಗಲಿದೆ. ಉದಾಹರಣೆಗೆ, ಪಂಜಾಬ್ ತಂಡ ಲಖನೌ ವಿರುದ್ಧ 20 ರನ್‌ಗಳಿಂದ ಗೆದ್ದರೆ, ಕೋಲ್ಕತಾ ತಂಡ 65 ರನ್‌ಗಳಿಗಿಂತ ಕಡಿಮೆ ಅಂತರದಲ್ಲಿ ಗೆಲ್ಲಬೇಕು.
ಪಂಜಾಬ್‌ನಂತೆಯೇ ಕೋಲ್ಕತಾ ಕೂಡ 13 ಪಾಯಿಂಟ್ಸ್ ಹೊಂದಿದೆ, ಆದರೆ NRR ಕೇವಲ +0.011 ಇದೆ. ಮೊದಲೇ ಹೇಳಿದಂತೆ, KKR ತನ್ನ ಕೊನೆಯ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ. ಪ್ಲೇಆಫ್ ತಲುಪಲು ಡೆಲ್ಲಿಯನ್ನು ಸೋಲಿಸುವುದು ಮೊದಲನೇ ಮೆಟ್ಟಿಲು. ಇದರ ಜೊತೆಗೆ, ಪಂಜಾಬ್ ತಂಡ ಲಖನೌ ವಿರುದ್ಧ ಮತ್ತು ರಾಜಸ್ಥಾನ ತಂಡ ಮುಂಬೈ ವಿರುದ್ಧ ಸೋಲಬೇಕು. ಒಂದು ವೇಳೆ ಪಂಜಾಬ್ ಮತ್ತು ಕೋಲ್ಕತಾ ಎರಡೂ ಗೆದ್ದು, ರಾಜಸ್ಥಾನ ಸೋತರೆ, ನೆಟ್ ರನ್‌ರೇಟ್ 'ಕಿಂಗ್ ಮೇಕರ್' ಆಗಲಿದೆ. ಹೀಗಾಗಿ, ಡೆಲ್ಲಿ ವಿರುದ್ಧ ಕೋಲ್ಕತಾ ದೊಡ್ಡ ಅಂತರದಲ್ಲಿ ಗೆಲ್ಲಲೇಬೇಕು.
ಪ್ಲೇಆಫ್ ರೇಸ್‌ನಲ್ಲಿ ಅತಿ ಕಡಿಮೆ ಅವಕಾಶ ಇರುವುದು ಡೆಲ್ಲಿ ತಂಡಕ್ಕೆ. ಕಾರಣ, ತಂಡದ ನೆಟ್ ರನ್‌ರೇಟ್. 12 ಪಾಯಿಂಟ್ಸ್ ಹೊಂದಿರುವ ಡೆಲ್ಲಿಯ NRR -0.871 ಇದೆ. ಎದುರಾಳಿ ಕೋಲ್ಕತಾ. ಪ್ಲೇಆಫ್ ತಲುಪಲು ಡೆಲ್ಲಿಗೆ ಪವಾಡವೇ ನಡೆಯಬೇಕು. ಪಂಜಾಬ್ ತಂಡ ಲಖನೌ ವಿರುದ್ಧ ಸೋಲಬೇಕು, ಮುಂಬೈ ತಂಡ ರಾಜಸ್ಥಾನ ಅನ್ನು ದೊಡ್ಡ ಅಂತರದಲ್ಲಿ ಸೋಲಿಸಬೇಕು. ಇದೆಲ್ಲದರ ಜೊತೆಗೆ, ಡೆಲ್ಲಿ ತಂಡ ಕೋಲ್ಕತಾ ವಿರುದ್ಧ ಕನಿಷ್ಠ 200 ರನ್‌ಗಳ ಅಂತರದಲ್ಲಿ ಗೆಲ್ಲಬೇಕು. ಇದು ಬಹುತೇಕ ಅಸಾಧ್ಯವಾದ ಕೆಲಸ. ಕೇವಲ ಲೆಕ್ಕಾಚಾರದಲ್ಲಿ ಮಾತ್ರ ಡೆಲ್ಲಿಗೆ ಚಾನ್ಸ್ ಇದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.