
ಹೈದರಾಬಾದ್: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎದುರು ಸನ್‌ರೈಸರ್ಸ್ ಹೈದರಾಬಾದ್ ತಂಡವು 55 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇನ್ನು ಈ ಪಂದ್ಯದ ಬಳಿಕ ನಡೆದ ಒಂದು ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಪಂದ್ಯ ಮುಕ್ತಾಯದ ಬಳಿಕ ವಿರಾಟ್ ಕೊಹ್ಲಿ, ಉದ್ದೇಶಪೂರ್ವಕವಾಗಿಯೇ ಎದುರಾಳಿ ತಂಡದ ಟ್ರ್ಯಾವಿಸ್ ಹೆಡ್ ಅವರನ್ನು ಶೇಕ್ ಹ್ಯಾಂಡ್ ಮಾಡದೇ ನಿರ್ಲಕ್ಷ್ಯ ಮಾಡಿರುವುದು ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಆರ್‌ಸಿಬಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯ ಮುಕ್ತಾಯದ ಬಳಿಕ ಉಭಯ ತಂಡಗಳ ಆಟಗಾರರು ಹಸ್ತಲಾಘವ ನಡೆಸಿದರು. ಈ ವೇಳೆ ಆರ್‌ಸಿಬಿ ಕ್ರಿಕೆಟಿಗ ವಿರಾಟ್ ಕೊಹ್ಲಿ, ಆಸೀಸ್ ಮೂಲದ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್, ಅಭಿಷೇಕ್ ಶರ್ಮಾ ಹಾಗೂ ಇಶಾನ್ ಕಿಶನ್ ಅವರ ಕೈಕುಲುಕಿದರು. ಆದರೆ ಟ್ರ್ಯಾವಿಸ್ ಹೆಡ್ ಶೇಕ್ ಹ್ಯಾಂಡ್ ಮಾಡಲು ಕೈ ಮುಂದೆ ಚಾಚಿದರೂ, ಕೊಹ್ಲಿ ಅವರನ್ನು ನಿರ್ಲಕ್ಷ್ಯ ಮಾಡಿ ಮುಂದೆ ಸಾಗುವ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಂದಹಾಗೆ ಟ್ರ್ಯಾವಿಸ್ ಹೆಡ್ ಅವರ ಮೇಲಿನ ಸೇಡು ಇಂದು ನಿನ್ನೆಯದಲ್ಲ. 2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಿಂದಲೂ ಹೆಡ್ ಮೇಲೆ ಭಾರತೀಯ ಕ್ರಿಕೆಟಿಗರ ಸಿಟ್ಟು ಕಮ್ಮಿಯಾಗಿಲ್ಲ. 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸಿತ್ತು. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ತೋರುವ ಮೂಲಕ ಅಜೇಯವಾಗಿ ಫೈನಲ್ ಪ್ರವೇಶಿಸಿತ್ತು. ಆದರೆ ಫೈನಲ್‌ನಲ್ಲಿ ಆಸೀಸ್ ಆರಂಭಿಕ ಬ್ಯಾಟರ್ ಟ್ರ್ಯಾವಿಸ್ ಹೆಡ್ ಏಕಾಂಗಿಯಾಗಿ 137 ರನ್ ಸಿಡಿಸುವ ಮೂಲಕ ಭಾರತ ಏಕದಿನ ವಿಶ್ವಕಪ್ ಗೆಲ್ಲುವ ಕನಸನ್ನು ನುಚ್ಚುನೂರು ಮಾಡಿದರು. ಇದಕ್ಕೂ ಮೊದಲು ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲೂ ಟ್ರ್ಯಾವಿಸ್ ಹೆಡ್ ಶತಕ ಸಿಡಿಸುವ ಮೂಲಕ ಭಾರತದ ಟೆಸ್ಟ್ ವಿಶ್ವಕಪ್ ಗೆಲ್ಲುವ ಕನಸಿಗೆ ತಣ್ಣೀರೆರಚಿದ್ದರು. ಅಲ್ಲಿಂದ ಕೊಹ್ಲಿ, ಸಮಯ ಸಿಕ್ಕಾಗಲೆಲ್ಲಾ ಟ್ರ್ಯಾವಿಸ್ ಹೆಡ್ ಮೇಲೆ ಮೈದಾನದಲ್ಲಿ ಕಿಡಿಕಾರುತ್ತಲೇ ಬಂದಿದ್ದಾರೆ.
ಇನ್ನು 19ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದವು. ಆಗ ಟ್ರ್ಯಾವಿಸ್ ಹೆಡ್ ವಿಕೆಟ್ ಪತನವಾದಾಗ ವಿರಾಟ್ ಕೊಹ್ಲಿ ಭರ್ಜರಿ ಸಂಭ್ರಮಾಚರಣೆ ಮಾಡಿದ್ದರು. ಇನ್ನು ಹೈದರಾಬಾದ್‌ನಲ್ಲಿ ನಿನ್ನೆ ನಡೆದ ಪಂದ್ಯದ ವೇಳೆಯಲ್ಲೂ ಎರಡು ಬಾರಿ ಹೆಡ್ ಹಾಗೂ ಕೊಹ್ಲಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಇನ್ನು ರಸಿಕ್ ಸಲಂ ಧರ್, ಟ್ರ್ಯಾವಿಸ್ ಹೆಡ್ ಅವರನ್ನು ಕ್ಲೀನ್ ಬೌಲ್ಡ್ ಮಾಡುತ್ತಿದ್ದಂತೆಯೇ ಕೊಹ್ಲಿ ಅಗ್ರೆಸ್ಸಿವ್ ಸೆಲಿಬ್ರೇಷನ್ ಮಾಡಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.