ಅಜೇಯ 141 ಚಚ್ಚಿದ ಕ್ವಿಂಟನ್ ಡಿ ಕಾಕ್; ಹರಿಣಗಳ ಹಿಡಿತದಲ್ಲಿ ವಿಂಡೀಸ್

By Suvarna NewsFirst Published Jun 12, 2021, 3:31 PM IST
Highlights

* ವೆಸ್ಟ್ ಇಂಡೀಸ್‌ ವಿರುದ್ದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದ ದಕ್ಷಿಣ ಆಫ್ರಿಕಾ

* ವಿಂಡೀಸ್ ಎದುರು ಅಜೇಯ ಶತಕ ಬಾರಿಸಿ ಮಿಂಚಿದ ಕ್ವಿಂಟನ್ ಡಿ ಕಾಕ್

* ಇನ್ನೂ 143 ರನ್‌ಗಳ ಹಿನ್ನೆಡೆಯಲ್ಲಿರುವ ವೆಸ್ಟ್ ಇಂಡೀಸ್

ಸೇಂಟ್ ಲೂಸಿಯಾ(ಜೂ.12): ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಕ್ವಿಂಟನ್ ಡಿ ಕಾಕ್ ಬಾರಿಸಿದ ಅಜೇಯ 141 ರನ್‌ಗಳ ನೆರವಿನಿಂದ ವೆಸ್ಟ್‌ ಇಂಡೀಸ್ ವಿರುದ್ದದ ಮೊದಲ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ಬಿಗಿ ಹಿಡಿತ ಸಾಧಿಸಿದೆ. 

ಮೊದಲ ದಿನದಾಟದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 128 ರನ್ ಬಾರಿಸಿದ್ದ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಕ್ಕೆ ಎರಡನೇ ದಿನದಾಟದಲ್ಲಿ ಡಿ ಕಾಕ್ ಆಸರೆಯಾದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ಡಿ ಕಾಕ್ 170 ಎಸೆತಗಳನ್ನು ಎದುರಿಸಿ 12 ಬೌಂಡರಿ ಹಾಗೂ 7 ಸಿಕ್ಸರ್‌ಗಳ ನೆರವಿನಿಂದ ಅಜೇಯ 141 ರನ್ ಚಚ್ಚಿದರು. ದಕ್ಷಿಣ ಆಫ್ರಿಕಾದ ಬಾಲಂಗೋಚಿಗಳು ಕೇವಲ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರೂ, ಮತ್ತೊಂದೆಡೆ ಡಿ ಕಾಕ್ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು 320ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡವು ಮೊದಲ ಇನಿಂಗ್ಸ್‌ನಲ್ಲಿ 322 ರನ್ ಬಾರಿಸಿ ಸರ್ವಪತನ ಕಂಡಿತು. 

12 fours and seven sixes 💪
141* off 170 deliveries 👏's sixth Test century was special 💯 pic.twitter.com/SQ6qelXKu6

— ICC (@ICC)

ವೆಸ್ಟ್ ಇಂಡೀಸ್ ಪರ ಜೇಸನ್ ಹೋಲ್ಡರ್ 4 ವಿಕೆಟ್ ಪಡೆದರೆ, ಜೇಡನ್ ಸೀಲ್ಸ್ 3, ಕೀಮರ್ ರೋಚ್ 2 ಹಾಗೂ ಕಾರ್ನ್‌ವೆಲ್ ಒಂದು ವಿಕೆಟ್ ಪಡೆದರು.

ಮೊದಲ ಟೆಸ್ಟ್: ಎಂಗಿಡಿ ಮಾರಕ ದಾಳಿಗೆ ವಿಂಡೀಸ್‌ 97ಕ್ಕೆ ಆಲೌಟ್

ಇನ್ನು 225 ರನ್‌ಗಳ ಭಾರೀ ಹಿನ್ನೆಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ವೆಸ್ಟ್ ಇಂಡೀಸ್ ತಂಡವು ಮತ್ತೊಮ್ಮೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ತಂಡದ ಮೊತ್ತ 37 ರನ್‌ಗಳಾಗುವಷ್ಟರಲ್ಲಿ ವಿಂಡೀಸ್‌ನ ಅಗ್ರಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ ಪೆವಿಲಿಯನ್ ಸೇರಿದ್ದರು. ಸದ್ಯ ಎರಡನೇ ದಿನದಾಟದಂತ್ಯದ ವೇಳೆಗೆ ವಿಂಡೀಸ್‌ 4 ವಿಕೆಟ್ ಕಳೆದುಕೊಂಡು 82 ರನ್‌ ಬಾರಿಸಿದ್ದು, ಇನ್ನೂ 143 ರನ್‌ಗಳ ಹಿನ್ನೆಡೆಯಲ್ಲಿದೆ. ರೋಸ್ಟನ್ ಚೇಸ್ 21 ಹಾಗೂ ಬ್ಲಾಕ್‌ವುಡ್ 10 ರನ್‌ ಬಾರಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್:

ವೆಸ್ಟ್ ಇಂಡೀಸ್ 97/10& 82/4(ಎರಡನೇ ಇನಿಂಗ್ಸ್)
ದಕ್ಷಿಣ ಆಫ್ರಿಕಾ: 322/10
(*ಮೊದಲ ಟೆಸ್ಟ್‌ನ ಎರಡನೇ ದಿನದಾಟದಂತ್ಯದ ವೇಳೆಗೆ)

click me!