
ಢಾಕಾ(ಜೂ.12): ಬಾಂಗ್ಲಾದೇಶ ಕ್ರಿಕೆಟ್ ತಂಡದ ಸ್ಟಾರ್ ಆಲ್ರೌಂಡರ್ ಶಕೀಬ್ ಅಲ್ ಹಸನ್ ಶುಕ್ರವಾರ(ಜೂ.12) ಮೈದಾನದಲ್ಲಿ ತೋರಿದ ಅನುಚಿತ ವರ್ತನೆಗೆ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ. ಢಾಕಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಶಕೀಬ್ ಅಲ್ ಹಸನ್ ಅಂಪೈರ್ ಮೇಲೆ ಸಿಟ್ಟಾಗಿ ವಿಕೆಟ್‌ಗಳನ್ನು ಕಿತ್ತೆಸೆದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಮೊಹಮ್ಮದುನ್ ಸ್ಪೋರ್ಟಿಂಗ್ ಕ್ಲಬ್ ತಂಡದ ನಾಯಕ ಶಕೀಬ್ ಅಲ್ ಹಸನ್, ಅಬಹಾನಿ ಲಿಮಿಟೆಡ್ ವಿರುದ್ದದ ಪಂದ್ಯದಲ್ಲಿ ಅಂಪೈರ್ ನಿರ್ಣಯವನ್ನು ಪ್ರಶ್ನಿಸಿ ಎರಡು ಬಾರಿ ಅನುಚಿತ ವರ್ತನೆ ತೋರಿದ್ದರು. ಮೊದಲಿಗೆ ಅಂಪೈರ್ ಎಲ್‌ಬಿಡಬ್ಲ್ಯೂ ನೀಡಿಲ್ಲವೆಂದು ವಿಕೆಟ್‌ಗೆ ಜಾಡಿಸಿ ಒದ್ದಿದ್ದರು. ಇನ್ನು ಪಂದ್ಯದ 5.5 ಎಸೆತದ ಬಳಿಕ ಮಳೆ ಅಡ್ಡಿಪಡಿಸಿದ್ದರಿಂದ ಅಂಪೈರ್ ಪಂದ್ಯವನ್ನು ತಾತ್ಕಾಲಿಕವಾಗಿ ಮುಂದೂಡುವ ತೀರ್ಮಾನ ತೆಗೆದುಕೊಂಡಾಗ ಮೈದಾನದಲ್ಲಿದ್ದ ಶಕೀಬ್ ನಾನ್‌ಸ್ಟ್ರೈಕರ್‌ನಲ್ಲಿದ್ದ ವಿಕೆಟ್ ಕಿತ್ತೆಸೆದು ದಾಂಧಲೆ ಮಾಡಿದ್ದರು.
ಅಂಪೈರ್ ಔಟ್ ನೀಡದ್ದಕ್ಕೆ ವಿಕೆಟ್ ಕಿತ್ತೆಸೆದ ಶಕೀಬ್ ಅಲ್ ಹಸನ್!
ಶಕೀಬ್ ಅಲ್ ಹಸನ್ ಅವರ ಈ ದುಡುಕಿನ ವರ್ತನೆಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಾದ ವೆಂಕಟೇಶ್ ಪ್ರಸಾದ್, ವಿರೇಂದ್ರ ಸೆಹ್ವಾಗ್ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣವಾದ ಟ್ವಿಟರ್ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.
ಕ್ಷಮೆ ಕೋರಿದ ಶಕೀಬ್: ಈ ಘಟನೆಯು ವಿವಾದದ ತಿರುವು ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಶಕೀಬ್ ಅಲ್ ಹಸನ್ ಅಭಿಮಾನಿಗಳಲ್ಲಿ ಹಾಗೂ ಆಯೋಜಕರಲ್ಲಿ ಕ್ಷಮೆ ಕೋರಿದ್ದಾರೆ. ಪಂದ್ಯದ ವೇಳೆ ತಾಳ್ಮೆ ಕಳೆದುಕೊಂಡಿದ್ದಕ್ಕೆ ನಿಮ್ಮಲ್ಲಿ ನಾನು ಕ್ಷಮೆಯಾಚಿಸುತ್ತಿದ್ದೇನೆ. ನನ್ನ ಅನುಭವಿ ಆಟಗಾರ ಈ ರೀತಿ ವರ್ತಿಸಬಾರದಾಗಿತ್ತು. ದುರಾದೃಷ್ಟವಶಾತ್ ಇಂತಹದ್ದೊಂದು ತಪ್ಪು ನಡೆದಿದೆ.
ನಾನು ಈ ಸಂದರ್ಭದಲ್ಲಿ ತಂಡ, ಆಯೋಜಕರು, ಟೂರ್ನಿಯ ಅಧಿಕಾರಿಗಳಲ್ಲಿ ಕ್ಷಮೆಯಾಚಿಸುತ್ತಿದ್ದೇನೆ. ಇದೊಂದು ಮಾನವಸಹಜ ತಪ್ಪು. ಇನ್ನು ಯಾವತ್ತಿಗೂ ಇಂತಹದ್ದೊಂದು ಮರುಕಳಿಸದಂತೆ ನಡೆದುಕೊಳ್ಳುತ್ತೇನೆಂದು ಸಾಮಾಜಿಕ ಜಾಲತಾಣಗಳ ಮೂಲಕವೇ ಶಕೀಬ್ ಕ್ಷಮೆ ಕೋರಿದ್ದಾರೆ.
ಬಾಂಗ್ಲಾದೇಶ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ಆಟಗಾರ ಎನಿಸಿಕೊಂಡಿರುವ ಶಕೀಬ್ ಅಲ್ ಹಸನ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೂರು ಮಾದರಿಯಿಂದ 10 ಸಾವಿರಕ್ಕೂ ಅಧಿಕ ರನ್ ಹಾಗೂ 600ಕ್ಕೂ ಅಧಿಕ ವಿಕೆಟ್ ಕಬಳಿಸಿದ್ದಾರೆ. ಜಂಟಲ್‌ಮನ್ ಕ್ರೀಡೆ ಎನಿಸಿಕೊಂಡಿರುವ ಕ್ರಿಕೆಟ್‌ನಲ್ಲಿ ಹಿರಿಯ ಆಟಗಾರರು ಇತರರಿಗೆ ತಮ್ಮ ಆಟ ಹಾಗೂ ವರ್ತನೆಯ ಮೂಲಕ ಕಿರಿಯರಿಗೆ ಮಾದರಿಯಾಗಬೇಕು. ಈ ಘಟನೆ ಉಳಿದ ಕ್ರಿಕೆಟಿಗರ ಪಾಲಿಗೆ ಒಂದು ಪಾಠವಾಗಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.