
ಕರಾಚಿ: ಐಸಿಸಿ ಟಿ20 ವಿಶ್ವಕಪ್‌ನ ತನ್ನ ಪಂದ್ಯಗಳನ್ನು ಭಾರತದಲ್ಲಿ ಆಡಲ್ಲ ಎಂದು ಪಟ್ಟುಹಿಡಿದಿದ್ದ ಬಾಂಗ್ಲಾದೇಶ ಹಾಗೂ ಅದಕ್ಕೆ ಬೆಂಬಲವಾಗಿ ಭಾರತ ವಿರುದ್ಧ ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದ ಪಾಕಿಸ್ತಾನದ ನಾಟಕ ಈಗ ಒಂದೊಂದಾಗಿ ಬಯಲಾಗುತ್ತಿದೆ. ಭಾರತ ವಿರುದ್ಧ ಆಡಲ್ಲ ಎಂದು ಬಹಿಷ್ಕರಿಸಿದ್ದ ಪಾಕಿಸ್ತಾನವೇ ಈಗ ಭಾರತ ವಿರುದ್ಧ ದ್ವಿಪಕ್ಷೀಯ ಸರಣಿ ಆಡಿಸಿ ಎಂದು ಐಸಿಸಿ ಮುಂದೆ ಅಂಗಲಾಚುತ್ತಿದೆ. ಇದರ ಹಿಂದೆ ಇರುವ ಕಾರಣ ಒಂದೇ. ದುಡ್ಡು.
ಭದ್ರತೆ ಕಾರಣ ನೀಡಿ ಬಾಂಗ್ಲಾ ತಂಡ ಭಾರತದಲ್ಲಿ ಆಡಲ್ಲ ಎಂದು ಹೇಳಿ, ಟಿ20 ವಿಶ್ವಕಪ್‌ನಿಂದಲೇ ಹೊರಬಿದ್ದಿದೆ. ಇದಾದ ಬಳಿಕ ಪಾಕ್ ಕೂಡಾ ಕಿರಿಕ್ ಮಾಡಿ, ಭಾರತ ವಿರುದ್ಧ ಫೆ.15ರಂದ್ಯ ನಿಗದಿಯಾಗಿದ್ದ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ಘೋಷಿಸಿತ್ತು. ಹೀಗಾಗಿ ಈ ಎರಡೂ ಕ್ರಿಕೆಟ್ ಮಂಡಳಿಗಳ ಮೇಲೆ ಐಸಿಸಿ ಕ್ರಮಕ್ಕೆ ಮುಂದಾಗಿತ್ತು. ಇದರ ಬೆನ್ನಲ್ಲೇ ಪಾಕ್ ಮೆತ್ತಗಾಗಿದ್ದು, ತನ್ನ ನಿರ್ಧಾರದಿಂದ ಹಿಂದೆ ಸರಿಯಲು ಮುಂದಾಗಿದೆ. ಆದರೆ ಇದಕ್ಕಾಗಿ ಐಸಿಸಿ ಮುಂದೆ ಇಟ್ಟಿರುವ ಬೇಡಿಕೆಗಳು ಮಾತ್ರ ವಿಚಿತ್ರ. ಪಾಕ್‌ನ ಬೇಡಿಕೆಗಳು ಏನೆಂದರೆ, ಭಾರತ-ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ನಡೆಸಬೇಕು, ಭಾರತ-ಪಾಕ್-ಬಾಂಗ್ಲಾದೇಶ ಒಳಗೊಂಡ ತ್ರಿಕೋನ ಸರಣಿ ನಡೆಸಬೇಕು ಹಾಗೂ ಭಾರತ ತಂಡ ಬಾಂಗ್ಲಾ ಪ್ರವಾಸ ಕೈಗೊಂಡು ಕ್ರಿಕೆಟ್ ಆಡಬೇಕು.
ಭಾರತದ ಮೇಲಿನ ವಿರೋಧದಿಂದಾಗಿ ಪಂದ್ಯ ಬಹಿಷ್ಕಾರದ ಘೋಷಣೆ ಮಾಡಿದ್ದ ಪಾಕ್, ಈಗ ಭಾರತದ ವಿರುದ್ಧ ಸರಣಿಗೆ ಬೇಡಿಕೆ ಇಟ್ಟಿರುವುದರ ಹಿಂದಿರುವ ಸ್ಪಷ್ಟ ಕಾರಣ ಹಣ. ಭಾರತ ಜೊತೆಗಿನ ಕ್ರಿಕೆಟ್ ಪಂದ್ಯದಲ್ಲಿ ಸಾವಿರಾರು ಕೋಟಿ ಹಣದ ವ್ಯವಹಾರ ನಡೆಯುತ್ತದೆ. ಭಾರತ-ಪಾಕ್ ನಡುವಿನ ವಿಶ್ವಕಪ್ ಪಂದ್ಯದಲ್ಲಿ ₹2200 ಕೋಟಿ ಲಾಭವನ್ನು ಅಂದಾಜಿಸಲಾಗಿತ್ತು. ಉಭಯ ತಂಡಗಳ ನಡುವೆ ದ್ವಿಪಕ್ಷೀಯ ಸರಣಿ ನಡೆದರೆ ಅಲ್ಲೂ ಕೋಟಿಗಟ್ಟಲೆ ಹಣ ಹರಿದುಬರುತ್ತದೆ. ಇದೇ ಕಾರಣಕ್ಕೆ ಭಾರತ ವಿರುದ್ಧ ದ್ವಿಪಕ್ಷೀಯ ಸರಣಿ, ತ್ರಿಕೋನ ಸರಣಿಗೆ ಪಾಕ್, ಬಾಂಗ್ಲಾ ಬೇಡಿಕೆ ಇಟ್ಟಿದೆ. ಆದರೆ ಸದ್ಯದ ಪರಿಸ್ಥಿತಿ ಗಮನಿಸಿದರೆ, ಇದಕ್ಕೆ ಭಾರತ ಒಪ್ಪುವುದು ಅಸಾಧ್ಯ.
ಭಾರತ ವಿರುದ್ಧ ಟಿ20 ವಿಶ್ವಕಪ್ ಪಂದ್ಯ ಆಡಲ್ಲ ಎಂದು ಸ್ವತಃ ಘೋಷಿಸಿದ್ದು ಪಾಕ್ ಸರ್ಕಾರ. ಆದರೆ ಬಹಿಷ್ಕಾರದ ಘೋಷಣೆ ಬಳಿಕ ಉಂಟಾದ ಬೆಳವಣಿಗೆಯಲ್ಲಿ ಹಣಕಾಸಿನ ವ್ಯವಹಾರ, ಲಾಭ-ನಷ್ಟದ ಲೆಕ್ಕಾಚಾರಗಳು ಜೋರಾಗಿ ನಡೆದಿದೆ. ಪಂದ್ಯ ನಡೆಯದಿದ್ದರೆ ಅನುದಾನ ಕಡಿತ, ದಂಡ ಹೇರಿಕೆ, ಭವಿಷ್ಯದಲ್ಲಿ ಉಂಟಾಗುವ ಆರ್ಥಿಕ ಸಂಕಷ್ಟಗಳು ಪಾಕ್, ಬಾಂಗ್ಲಾಕೆ ಮನವರಿಕೆಯಾಗಿದೆ. ಹೀಗಾಗಿಯೇ ಸಂದರ್ಭವನ್ನು ತನ್ನ ಲಾಭಕ್ಕೆ ಬಳಸಿಕೊಳ್ಳಲು ಪಾಕ್, ಬಾಂಗ್ಲಾ ಮಂಡಳಿಗಳ ನಿಲುವೇ ಬದಲಾಗಿದೆ.
ಭಾರತ ವಿರುದ್ಧ ಪಂದ್ಯ ಆಡಬೇಕಿದ್ದರೆ ತನ್ನ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪಾಕ್ ಕ್ರಿಕೆಟ್ ಮಂಡಳಿಯು ಐಸಿಸಿಗೆ ತಿಳಿಸಿತ್ತು. ಆದರೆ ಯಾವುದಕ್ಕೂ ಐಸಿಸಿ ಒಪ್ಪಿಲ್ಲ ಎನ್ನಲಾಗಿದೆ. ಭಾರತ-ಪಾಕ್ ನಡುವೆ ದ್ವಿಪಕ್ಷೀಯ ಸರಣಿ, ಭಾರತ-ಪಾಕ್-ಬಾಂಗ್ಲಾ ಒಳಗೊಂಡ ತ್ರಿಕೋನ ಸರಣಿ, ಭಾರತ ತಂಡದ ಬಾಂಗ್ಲಾ ಪ್ರವಾಸ ಬೇಡಿಕೆಯನ್ನು ಐಸಿಸಿ ತಿರಸ್ಕರಿಸಿದ್ದು, ಇದು ತನ್ನ ವ್ಯಾಪ್ತಿಗೆ ಬರಲ್ಲ ಎಂದು ಸ್ಪಷ್ಟಪಡಿಸಿದೆ ಎಂದು ವರದಿಯಾಗಿದೆ. ಆದರೆ 2 ಬೇಡಿಕೆಗೆ ಐಸಿಸಿ ಸಕಾರಾತ್ಮಕವಾಗಿ ಸ್ಪಂದಿಸಿದೆ ಎನ್ನಲಾಗುತ್ತಿದೆ.
ಟಿ20 ವಿಶ್ವಕಪ್ ಆಡದಿದ್ದರೂ ಬಾಂಗ್ಲಾಗೆ ಐಸಿಸಿ ವಾರ್ಷಿಕ ಆದಾಯ ಸಿಗಬೇಕು ಮತ್ತು ಬಾಂಗ್ಲಾಗೆ ದಂಡ ವಿಧಿಸಬಾರದು, 2024ರ ಟಿ20 ವಿಶ್ವಕಪ್ ಬಾಂಗ್ಲಾದಿಂದ ಸ್ಥಳಾಂತರಗೊಳಿಸಿದ್ದಕ್ಕೆ ಬಾಂಗ್ಲಾದಲ್ಲಿ ಬೇರೊಂದು ಐಸಿಸಿ ಟೂರ್ನಿ ನಡೆಸಬೇಕು ಎಂಬ ಬೇಡಿಕೆಗೆ ಐಸಿಸಿ ಒಪ್ಪಿದೆ ಎನ್ನಲಾಗಿದೆ.
ಇದನ್ನೂ ಓದಿ: ಏನಿದು ಬಜಾಜ್ ಚೇತಕ್ C25 ವಿಶೇಷತೆ? WPL ಗೆದ್ದ ಆರ್‌ಸಿಬಿ ಗರ್ಲ್ಸ್‌ಗೆ ಸೇರಿದ ಲೇಟೆಸ್ಟ್ ಎಲೆಕ್ಟ್ರಿಕ್ ರೈಡ್ ಸೆನ್ಸೇಷನ್!
ವರದಿಗಳ ಪ್ರಕಾರ, ಭಾರತ ಹಾಗೂ ಪಾಕ್ ನಡುವಿನ ಹೈಬ್ರಿಡ್ ಮಾದರಿ ಪಂದ್ಯದ ಒಪ್ಪಂದವನ್ನು 2031ರವರೆಗೂ ವಿಸ್ತರಿಸಲು ಪಾಕ್, ಬಾಂಗ್ಲಾ ಮಂಡಳಿಗಳು ಐಸಿಸಿ ಮುಂದೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. 2027ರ ವರೆಗೂ ಭಾರತ-ಪಾಕ್ ಪಂದ್ಯ ಈ 2 ದೇಶ ಹೊರತುಪಡಿಸಿ ತಟಸ್ಥ ಸ್ಥಳದಲ್ಲಿ ನಡೆಸುವ ಬಗ್ಗೆ ಐಸಿಸಿ ಒಪ್ಪಂದ ಮಾಡಿಕೊಂಡಿದೆ. ಆದರೆ 2031ರ ಏಕದಿನ ವಿಶ್ವಕಪ್ ಭಾರತ, ಬಾಂಗ್ಲಾ ಆತಿಥ್ಯದಲ್ಲಿ ನಡೆಯಲಿದೆ. ಹೀಗಾಗಿ, ಹೈಬ್ರಿಡ್ ಮಾದರಿಯನ್ನು 2031ರ ವರೆಗೂ ವಿಸ್ತರಿಸಿ, ಆ ವಿಶ್ವಕಪ್‌ನಲ್ಲಿ ಪಾಕ್ ತನ್ನ ಪಂದ್ಯವನ್ನು ಬಾಂಗ್ಲಾದಲ್ಲಿ ಆಡಲು ಅನುಮತಿ ನೀಡಬೇಕು ಎಂದು ಕೋರಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ರಣಜಿ ಟ್ರೋಫಿ: ಮುಂಬೈ ತಂಡವನ್ನು ಅವರದ್ದೇ ನೆಲದಲ್ಲಿ ಬಗ್ಗುಬಡಿದು ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟ ಕರ್ನಾಟಕ! ಕೆ.ಎಲ್ ಭರ್ಜರಿ ಶತಕ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.