
ಮುಂಬೈ: 2025-26ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ 42 ಬಾರಿ ಚಾಂಪಿಯನ್ ಮುಂಬೈ ತಂಡವನ್ನು ಅವರದ್ದೇ ತವರಿನಲ್ಲಿ ಬಗ್ಗುಬಡಿದ ಕರ್ನಾಟಕ ಭರ್ಜರಿಯಾಗಿ ಸೆಮಿಫೈನಲ್ ಪ್ರವೇಶಿಸಿದೆ. ಕೆ ಎಲ್ ರಾಹುಲ್ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ಕರ್ನಾಟಕ ತಂಡವು 325 ರನ್‌ಗಳ ಕಠಿಣ ಗುರಿಯನ್ನು ಇನ್ನೂ 4 ವಿಕೆಟ್ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ. ಈ ಸೋಲಿನೊಂದಿಗೆ ಮುಂಬೈ ತಂಡದ ರಣಜಿ ಟ್ರೋಫಿ ಸೆಮೀಸ್‌ಗೇರುವ ಕನಸು ಭಗ್ನವಾಗಿದೆ.
ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಪಂಜಾಬ್ ವಿರುದ್ದ ರೋಚಕ ಜಯ ಸಾಧಿಸುವ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ದೇವದತ್ ಪಡಿಕ್ಕಲ್ ನೇತೃತ್ವದ ಕರ್ನಾಟಕ ತಂಡವು, ಇದೀಗ ರಣಜಿ ಟ್ರೋಫಿ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ತಂಡ ಎಂದು ಗುರುತಿಸಿಕೊಂಡಿರುವ ಮುಂಬೈಗೆ ಅವರದ್ದೇ ನೆಲದಲ್ಲಿ ಸೋಲುಣಿಸುವಲ್ಲಿ ರಾಜ್ಯ ತಂಡ ಯಶಸ್ವಿಯಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಮಂಕಾಗಿದ್ದ ಮುಂಬೈ ತಂಡವು, ಎರಡನೇ ಇನ್ನಿಂಗ್ಸ್‌ನಲ್ಲಿ 377 ರನ್ ಕಲೆಹಾಕುವ ಮೂಲಕ ಕರ್ನಾಟಕ ತಂಡಕ್ಕೆ ಗೆಲ್ಲಲು 325 ರನ್‌ಗಳ ಕಠಿಣ ಗುರಿ ನೀಡಿತ್ತು. ಇನ್ನು ಗುರಿ ಬೆನ್ನತ್ತಿದ ರಾಜ್ಯ ತಂಡವು ಮೂರನೇ ದಿನದಾಟದಂತ್ಯಕ್ಕೆ ಎರಡು ವಿಕೆಟ್ ಕಳೆದುಕೊಂಡು 113 ರನ್ ಕಲೆಹಾಕಿತ್ತು. ಕೊನೆಯ ದಿನ ಗೆಲ್ಲಲು ಕರ್ನಾಟಕ್ಕೆ ಇನ್ನೂ 212 ರನ್‌ಗಳ ಅಗತ್ಯವಿತ್ತು.
60 ರನ್‌ಗಳೊಂದಿಗೆ ನಾಲ್ಕನೇ ದಿನದಾಟದ ಆರಂಭಿಸಿದ ಅನುಭವಿ ಬ್ಯಾಟರ್ ಕೆ ಎಲ್ ರಾಹುಲ್ ಅತ್ಯಂತ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು. ಮತ್ತೊಂದು ತುದಿಯಲ್ಲಿ 9 ರನ್ ಗಳಿಸಿದ್ದ ಕರುಣ್ ನಾಯರ್ ತನ್ನ ಖಾತೆಗೆ ಕೇವಲ 4 ರನ್ ಸೇರಿಸಿ ಶಾರ್ದೂಲ್ ಠಾಕೂರ್‌ಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಕೆ ಎಲ್ ರಾಹುಲ್ ಹಾಗೂ ಸ್ಮರಣ್ ರವಿಚಂದ್ರನ್ ನಾಲ್ಕನೇ ವಿಕೆಟ್‌ಗೆ 147 ರನ್‌ಗಳ ಅಮೂಲ್ಯ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.
ಮುಂಬೈನ ಬೌಲರ್‌ಗಳನ್ನು ಅತ್ಯಂತ ಎಚ್ಚರಿಕೆಯಿಂದ ಎದುರಿಸಿದ ರಾಹುಲ್ 182 ಎಸೆತಗಳನ್ನು ಎದುರಿಸಿ 14 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿ 130 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಶ್ರೇಯಸ್ ಗೋಪಾಲ್(1) ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಕೃತಿಕ್ ಕೃಷ್ಣ(2) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದಾಗ ಕರ್ನಾಟಕದ ಪಾಳಯದಲ್ಲಿ ಆತಂಕ ಮನೆ ಮಾಡಿತ್ತು.
ಆದರೆ ಏಳನೇ ವಿಕೆಟ್‌ಗೆ ಸ್ಮರಣ್ ರವಿಚಂದ್ರನ್ ಹಾಗೂ ವಿದ್ಯಾಧರ್ ಪಾಟೀಲ್ ಕೇವಲ 47 ಎಸೆತಗಳಲ್ಲಿ ಮುರಿಯದ 40 ರನ್ ಬಾರಿಸುವ ಮೂಲಕ ಯಾವುದೇ ಅಪಾಯವಿಲ್ಲದೇ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು. ಅತ್ಯಂತ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಸ್ಮರಣ್ ರವಿಚಂದ್ರನ್ ಕೇವಲ 123 ಎಸೆತಗಳಲ್ಲಿ 11 ಬೌಂಡರಿ ಸಹಿತ ಅಜೇಯ 83 ರನ್ ಬಾರಿಸಿದರೆ, ಸ್ಪೋಟಕ ಬ್ಯಾಟಿಂಗ್ ನಡೆಸಿದ ವಿದ್ಯಾಧರ್ ಪಾಟೀಲ್ ಕೇವಲ 30 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಅಜೇಯ 31 ರನ್ ಸಿಡಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.