
ನವದೆಹಲಿ(ನ.08): ಆಫ್ಘಾನಿಸ್ತಾನದಲ್ಲಿ ಎದ್ದಿರುವ ಬಿಕ್ಕಟ್ಟು, ಭದ್ರತಾ ಸವಾಲು ಪರಿಹರಿಸಲು ಭಾರತ ಮಹತ್ವದ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಸಭೆ(NSA level meeting ) ಆಯೋಜಿಸಿದೆ. ನವೆಂಬರ್ 10 ರಂದು ನಡೆಯಲಿರುವ ಈ ಮಹತ್ವದ ಸಭೆಗೆ ಆಫ್ಘಾನಿಸ್ತಾನ ನೆರೆ ರಾಷ್ಟ್ರಗಳನ್ನು ಭಾರತ(India) ಆಹ್ವಾನಿಸಿದೆ. ಭಾರತದ ಆಹ್ವಾನವನ್ನು ಮೊದಲು ಪಾಕಿಸ್ತಾನ ತಿರಸ್ಕರಿಸಿತ್ತು. ಇದೀಗ ಚೀನಾ(China) ಕೂಡ ಭಾರತದ ಆಹ್ವಾನ ತರಿಸ್ಕರಿಸಿದೆ ಎಂದು ವರದಿ ಹೇಳುತ್ತಿದೆ.
ಆಫ್ಘಾನಿಸ್ತಾನದಲ್ಲಿನ(Afghanistan Crisis) ಪ್ರಾದೇಶಿಕ ಭದ್ರತಾ ಸವಾಲು ಕುರಿತು ಭಾರತ ಆಯೋಜಿಸಿರುವ ಮಹತ್ವದ ಸಭೆಗೆ ರಷ್ಯಾ, ಇರಾನ್, ಚೀನಾ, ಪಾಕಿಸ್ತಾನ, ತಜಕಿಸ್ತಾನ, ತುರ್ಕಮೆನಿಸ್ತಾನ, ಕ್ರೈಗಿಸ್ತಾನ ಹಾಗೂ ಉಜ್ಬೇಕಿಸ್ತಾನಕ್ಕೆ ಆಹ್ವಾನ ನೀಡಿದೆ. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ.
ಇತರ ಕಾರ್ಯಕ್ರಮಗಳ ಕಾರಣ ಭಾರತ ಆಯೋಜಿಸಿದ NSA ಮಟ್ಟದ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಚೀನಾ ಹೇಳಿದೆ. ಆದರೆ ಇದಕ್ಕೂ ಮೊದಲು ಪಾಕಿಸ್ತಾನ ಭಾರತದ ಆಹ್ವಾನವನ್ನು ತಿರಸ್ಕರಿಸಿತ್ತು. ಪಾಕಿಸ್ತಾನ ಭದ್ರತಾ ಸಲಹೆಗಾರ ಡಾ. ಮೊಯಿದ್ ಯೂಸುಫ್, ಭಾರತ ಆಹ್ವಾನಿಸಿದ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದಿದ್ದರು.
ಆಫ್ಘಾನಿಸ್ತಾನ ಬಿಕ್ಕಟ್ಟು; ಗೃಹ, ರಕ್ಷಣಾ ಸಚಿವ, NSA ಜೊತೆ ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ!
ಪಾಕಿಸ್ತಾನ(Pakistan) ಸಭೆಯಿಂದ ದೂರ ಉಳಿಯುವ ನಿರ್ಧಾರ ಅಚ್ಚರ ತಂದಿಲ್ಲ. ಆದರೆ ಪಾಕಿಸ್ತಾನ ತೆಗೆದುಕೊಂಡ ನಿರ್ಧಾರ ಆಫ್ಘಾನಿಸ್ತಾನ ಮೇಲಿರುವ ಪಾಕಿಸ್ತಾನ ಪ್ರೀತಿಯನ್ನು ಬಿಂಬಿಸುತ್ತದೆ. ಸಮಸ್ಯೆ ಪರಿಹಾರಕ್ಕೆ ಪಾಕಿಸ್ತಾನ ಎಂದೂ ಬಯಸುವುದಿಲ್ಲ ಎಂದು ಭಾರತ ಪ್ರತಿಕ್ರಿಯೆ ನೀಡಿತ್ತು.
ಪಾಕಿಸ್ತಾನ ಹಾಗೂ ಚೀನಾ ಹೊರತು ಪಡಿಸಿದರೆ ಇನ್ನುಳಿದ ಎಲ್ಲಾ 7 ರಾಷ್ಟ್ರಗಳು ಭಾರತ ಆಯೋಜಿಸಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮಟ್ಟದ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಖಚಿತಪಡಿಸಿದೆ. NSA ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ ಎಂದು ಭಾರತ ಹೇಳಿದೆ. ತಾಲಿಬಾನ್ ಸರ್ಕಾರವನ್ನು ಮೊದಲಿನಿಂದಲೂ ವಿರೋಧಿಸುತ್ತಿರುವ ಭಾರತ, ಈ ಸಭೆಗೆ ಆಫ್ಘಾನಿಸ್ತಾವನ್ನು ಆಹ್ವಾನಿಸಿಲ್ಲ. ಹೀಗಾಗಿ ಭಾರತ ಸೇರಿದಂತೆ ಒಟ್ಟು 8 ರಾಷ್ಟ್ರಗಳು NSA ಸಭೆಯಲ್ಲಿ ಪಾಲ್ಗೊಳ್ಳಲಿದೆ.
NSA ಸಭೆಯಲ್ಲಿ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದಿಂದ ಸೃಷ್ಟಿಯಾಗಿರುವ ಗಡಿಯಲ್ಲಿನ ಭಯೋತ್ಪಾದನಾ ಚಟುವಟಿಕೆ, ನೆರೆಯ ರಾಷ್ಟ್ರಗಳ ಭದ್ರತೆ ಕುರಿತು ಮಹತ್ವದ ಚರ್ಚೆ ನಡೆಯಲಿದೆ. ಆಫ್ಘಾನಿಸ್ತಾನದಿಂದ ಕಳ್ಳಸಾಗಣೆ ಮೂಲಕ ಸಾಗುತ್ತಿರುವ ಮಾದಕ ದ್ರವ್ಯ ಚಟುವಟಿಕೆ, ಉಗ್ರರ ಕೈಯಲ್ಲಿರುವ ಅಮೆರಿಕದ ಅತ್ಯಾಧುನಿಕ ಶಸ್ತಾಸ್ತ್ರ ಕುರಿತೂ ಚರ್ಚೆ ನಡೆಸಲಿದೆ.
ಇಡೀ ವಿಶ್ವವನ್ನು ಕಾಡಿತ್ತು ಆ ದೃಶ್ಯ, ಅಮೆರಿಕ ಸೈನಿಕರಿಗೆ ಹಸ್ತಾಂತರಿಸಿದ್ದ ಅಫ್ಘನ್ ಮಗು ನಾಪತ್ತೆ!
NSA ಮಟ್ಟದ ಭದ್ರತಾ ಸಭೆ ಇದೇ ಮೊದಲಲ್ಲ. 2018 ಹಾಗೂ 2019ರಲ್ಲಿ ಭಾರತ NSA ಮಟ್ಟದ ಸಭೆಗೆ ಆಯೋಜಿಸಿತ್ತು. ಆದರೆ 2020ರಲ್ಲಿ ಕೊರೋನಾ ಕಾರಣದಿಂದ ಯಾವುದೇ ಸಭೆ ನಡೆಸಿಲ್ಲ. ಹೀಗಾಗಿ ಕಳೆದ ವರ್ಷ ನಡೆಯಬೇಕಿದ್ದ 3ನೇ ಸಭೆ ಇದೀಗ ನಡೆಯುತ್ತಿದೆ.
ಆಫ್ಘಾನಿಸ್ತಾನದಲ್ಲಿದ್ದ ಚುನಾಯಿತ ಸರ್ಕಾರವನ್ನು ಬೀಳಿಸಿ ತಾಲಿಬಾನ್ ಉಗ್ರರು ಆಗಸ್ಟ್ ತಿಂಗಳಲ್ಲಿ ಕೈವಶ ಮಾಡಿದ್ದಾರೆ. ಬಳಿಕ ಆಫ್ಘಾನಿಸ್ತಾನದಲ್ಲಿ ಮಾರಣ ಹೋಮ ನಡೆದಿದೆ. ಮಹಿಳೆಯರು, ಮಕ್ಕಳು ಸೇರಿದಂತೆ ಅಮಾಯಕರು ಬಲಿಯಾಗಿದ್ದಾರೆ. ದೇಶ ತೊರೆಯಲು ಹಾತೊರೆಯುತ್ತಿರುವ ಆಫ್ಘಾನಿಸ್ತಾನ ಜನರ ಸಂಖ್ಯೆ ಇನ್ನೂ ಕಡಿಮೆಯಾಗಿಲ್ಲ. ತಾಲಿಬಾನ್ ಉಗ್ರರು ಇಸ್ಲಾಂ ಷರಿಯಾ ಕಾನೂನಿನಡಿ ಆಡಳಿತ ನಡೆಸುತ್ತಿದ್ದಾರೆ. ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಆಡಳಿತಕ್ಕೆ ಪಾಕಿಸ್ತಾನ ಕೂಡ ಬೆಂಬಲ ನೀಡಿದೆ. ಇದರ ಪರಿಣಾಣ ಭಾರತದ ಗಡಿಗಳಲ್ಲಿ ಉಗ್ರ ಚಟುವಟಿಕೆ ಹೆಚ್ಚಾಗಿದೆ. ತಾಲಿಬಾನ್ ಸರ್ಕಾರಕ್ಕೆ ಚೀನಾ ಕೂಡ ಬೆಂಬಲ ನೀಡಿತ್ತು. ಬಹಿರಂಗವಾಗಿ ಬೆಂಬಲ ನೀಡಿದ ಪಾಕಿಸ್ತಾನ ಹಾಗೂ ಚೀನಾ ಎರಡೂ ರಾಷ್ಟ್ರಗಳು ಭಾರತದ ಸಭೆಯಲ್ಲಿ ಪಾಲ್ಗೊಳ್ಲುತ್ತಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.