
ದುಬೈ(ನ.08): ನಮಿಬಿಯಾ ವಿರುದ್ಧದ T20 World Cup 2021 ಟೂರ್ನಿಯ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದೆ. ರವೀಂದ್ರ ಜಡೇಜಾ, ಆರ್ ಅಶ್ವಿನ್ ಹಾಗೂ ಜಸ್ಪ್ರೀತ್ ಬುಮ್ರಾ ದಾಳಿಗೆ ನಮಿಬಿಯಾ ತತ್ತರಿಸಿತು. ಹೀಗಾಗಿ ನಮಿಬಿಯಾ 8 ವಿಕೆಟ್ ನಷ್ಟಕ್ಕೆ 132 ರನ್ ಸಿಡಿಸಿದೆ. ಟಿ20 ಟೂರ್ನಿಯಿಂದ ಈಗಾಗಲೇ ಹೊರಬಿದ್ದಿರುವ ಟೀಂ ಇಂಡಿಯಾ(Team India) ನಮಿಬಿಯಾ ವಿರುದ್ಧ ಅಂತಿಮ ಪಂದ್ಯದ ಮೂಲಕ ಟೂರ್ನಿಗೆ ವಿದಾಯ ಹೇಳಲಿದೆ.
ನಮಿಬಿಯಾ(Namibia) ವಿರುದ್ಧದ ಪಂದ್ಯ ವಿರಾಟ್ ಕೊಹ್ಲಿಗೆ ಟಿ20 ನಾಯಕನಾಗಿ ಕೊನೆಯ ಪಂದ್ಯವಾಗಿದೆ. ಕೊನೆಯ ಪಂದ್ಯದಲ್ಲಿ ಕೊಹ್ಲಿ ಟಾಸ್(Toss) ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು. ಮೊದಲು ಬ್ಯಾಟಿಂಗ್ ಇಳಿದ ನಮಿಬಿಯಾಗೆ ಸ್ಪಿನ್ ದಾಳಿಗೆ ಕಕ್ಕಾಬಿಕ್ಕಿಯಾಯಿತು. ನಮಿಬಿಯಾ ಬ್ಯಾಟ್ಸ್‌ಮನ್‌ಗಳಿಗೆ ಅಬ್ಬರಿಸಲು ಅವಕಾಶಕವೇ ನೀಡಲಿಲ್ಲ. ಸ್ಟೀಫನ್ ಬಾರ್ಡ್ 21 ರನ್ ಕಾಣಿಕೆ ನೀಡಿದರು. ಇತ್ತ ಮೆಚೆಲ್ ವ್ಯಾನ್ ಲಿಂಜೆನ್ 14 ರನ್ ಸಿಡಿಸಿ ನಿರ್ಗಮಿಸಿದರು.
T20 World Cup: ರಾಷ್ಟ್ರೀಯ ತಂಡಕ್ಕೆ ಮೊದಲ ಆದ್ಯತೆ ನೀಡಿ : ಕಪೀಲ್ ದೇವ್!
34 ರನ್‌ಗಳಿಗೆ ನಮಿಬಿಯಾ 2 ವಿಕೆಟ್ ಕಳೆದುಕೊಂಡಿತು. ಕ್ರೈಗ್ ವಿಲಿಯಮ್ಸ್ ಡಕೌಟ್ ಆದರು. ಇನ್ನು ಗೆಹಾರ್ಡ್ ಎರಾಸ್ಮಸ್ 12 ರನ್ ಸಿಡಿಸಿ ಔಟಾದರು. ಜಾನ್ ನಿಕೋಲ್ ಲೋಫ್ಟಿ 5 ರನ್ ಸಿಡಿಸಿ ಔಟಾದರು. ಡೇವಿಡ್ ವೀಸೆ ಏಕಾಂಗಿ ಹೋರಾಟ ನೀಡಿದರು. ಆದರೆ ಇತರರಿಂದ ರನ್ ಹರಿದು ಬರಲಿಲ್ಲ. ಜೆಜೆ ಸ್ಮಿತ್ 9 ರನ್, ಜೇನ ಗ್ರೀನ್ ಡಕೌಟ್ ಆದರು. ಡಿವೆಸ್ ವೀಸ್ 26 ರನ್ ಸಿಡಿಸಿ ಔಟಾದರು. ಜ್ಯಾನ್ ಫ್ರೈಲಿಂಕ್ ಅಜೇಯ 15 ರನ್ ಹಾಗೂ ರುಬೆನ್ ಅಜೇಯ 13 ರನ್ ಸಿಡಿಸಿದರು. ಈ ಮೂಲಕ ನಮಿಬಿಯಾ 8 ವಿಕೆಟ್ ನಷ್ಟಕ್ಕೆ 132 ರನ್ ಸಿಡಿಸಿತು.
ಕೊಹ್ಲಿ, ಶಾಸ್ತ್ರಿಗೆ ಕೊನೆಯ ಪಂದ್ಯ:
ಟೀಂ ಇಂಡಿಯಾ ಟಿ20 ನಾಯಕನಾಗಿ ವಿರಾಟ್ ಕೊಹ್ಲಿಗೆ(Virat Kohli) ಇದು ಕೊನೆಯ ಪಂದ್ಯವಾಗಿದೆ. ಟೂರ್ನಿಗೂ ಮೊದಲು ಕೊಹ್ಲಿ ವಿಶ್ವಕಪ್ ಟೂರ್ನಿ ಬಳಿಕ ನಾಯಕತ್ವಕ್ಕೆ ವಿದಾಯ ಹೇಳುವುದಾಗಿ ಘೋಷಿಸಿದ್ದರು. ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಆರಂಭದಲ್ಲಿ 2 ಪಂದ್ಯ ಸೋತ ಕಾರಣ ಟೂರ್ನಿಯಿಂದ ಹೊರಬಿದ್ದಿದೆ. ಹೀಗಾಗಿ ಇದು ನಾಯಕನಾಗಿ ಕೊಹ್ಲಿಗೆ ಅಂತಿಮ ಪಂದ್ಯವಾಗಿದೆ.
T20 World Cup 2021: ನಾಯಕನಾಗಿ ಕೊನೆಯ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಕೊಹ್ಲಿ!
ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿಗೆ(Ravi Shahstri) ಇಂದು ಅಂತಿಮ ಪಂದ್ಯವಾಗಿದೆ. ಟೀಂ ಇಂಡಿಯಾ ಕೋಚ್ ಆಗಿ ರವಿ ಶಾಸ್ತ್ರಿ ಅವಧಿ ಇಂದಿನ ಪಂದ್ಯದೊಂದಿಗೆ ಅಂತ್ಯಗೊಳ್ಳುತ್ತಿದೆ. ಸುದೀರ್ಘ ವರ್ಷಗಳ ಕಾಲ ಟೀಂ ಇಂಡಿಯಾದ ಮೆಂಟರ್, ನಿರ್ದೇಶಕನಾಗಿ ಕೋಚ್ ಆಗಿ ಸೇವೆ ಸಲ್ಲಿಸಿದ ಶಾಸ್ತ್ರಿ ವಿದಾಯ ಹೇಳುತ್ತಿದ್ದಾರೆ. ಬಿಸಿಸಿಐ ಈಗಾಗಲೇ ಟೀಂ ಇಂಡಿಯಾ ನೂತನ ಕೋಚ್ ಆಗಿ ಮಾಜಿ ನಾಯಕ, ಎನ್‌ಸಿಎ ಮಖ್ಯಸ್ಥ ರಾಹುಲ್ ದ್ರಾವಿಡ್ ಆಯ್ಕೆ ಮಾಡಿದೆ.
ಅಂಕಪಟ್ಟಿ:
2ನೇ ಗುಂಪಿನಲ್ಲಿರುವ ಟೀಂ ಇಂಡಿಯಾ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದ ಫಲಿತಾಂಶದಿಂದ ಅಂಕಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ನಮಿಬಿಯಾ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಟೀಂ ಇಂಡಿಯಾ ಆಡಿರುವ 4 ಪಂದ್ಯದಲ್ಲಿ 2 ಗೆಲುವು ಹಾಗೂ 2 ಸೋಲು ಕಂಡಿದೆ. ಇತ್ತ ನಮಿಬಿಯಾ 4ರಲ್ಲಿ 3 ಸೋಲು 1 ಗೆಲುವು ಕಂಡಿದೆ. ಇನ್ನು 2ನೇ ಗುಂಪಿನಿಂದ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ಸೆಮಿಫೈನಲ್‌ಗೆ ಪ್ರವೇಶ ಪಡೆದಿದೆ.
ಮೊದಲ ಗುಂಪಿನಿಂದ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡ ಸೆಮಿಫೈನಲ್ ಪ್ರವೇಶ ಪಡೆದಿದೆ. ನವೆಂಬರ್ 10 ರಂದು ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ಹೋರಾಟ ನಡೆಸಲಿದೆ. ಇನ್ನು ನವೆಂಬರ್ 11 ರಂದು ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ಹೋರಾಟ ನಡೆಸಲಿದೆ. ನವೆಂಬರ್ 14 ರಂದು ಫೈನಲ್ ಪಂದ್ಯ ನಡೆಯಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.