ಪಾಕಿಸ್ತಾನದ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಬಿಸ್ಮಾ ಮರೂಫ್ ಏಷ್ಯನ್ ಗೇಮ್ಸ್‌ನಲ್ಲಿ ಇರುವ ನಿಯಮದ ಕಾರಣದಿಂದಾಗಿ ತಾವು ಏಷ್ಯಾಡ್‌ನಿಂದ ಹಿಂದೆ ಸರಿಯುತ್ತಿರುವುದಾಗಿ ತಿಳಿಸಿದ್ದಾರೆ.
ಕರಾಚಿ (ಜು.25): ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಬಿಸ್ಮಾ ಮಾರೂಫ್ ಮುಂಬರುವ ಹಾಂಗ್ಜೌ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುತ್ತಿಲ್ಲ ಎಂದು ತಿಳಿಸಿದ್ದಾರೆ. ಗೇಮ್ಸ್‌ನ ನಿಯಮದ ಅನುಸಾರ ಯಾವುದೇ ಅಥ್ಲೀಟ್ ತನ್ನ ಮಕ್ಕಳನ್ನು ಕರೆದುಕೊಂಡು ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುವಂತಿಲ್ಲ. ಮಕ್ಕಳು ಏಷ್ಯನ್ ಗೇಮ್ಸ್‌ನ ಕ್ರೀಡಾಗ್ರಾಮದಲ್ಲಿ ಇರುವಂತಿಲ್ಲ. ಆ ಕಾರಣದಿಂದಾಗಿ ಗೇಮ್ಸ್‌ನಿಂದ ಹಿಂದೆ ಸರಿಯುತ್ತಿರುವುದಾಗಿ ಬಿಸ್ಮಾ ಮಾರೂಫ್ ತಿಳಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಂಗಳವಾರ ಬಿಸ್ಮಾ ಮಾರೂಫ್ ಅವರ ನಿರ್ಧಾರವನ್ನು ತಿಳಿಸಿದೆ. ಅದರೊಂದಿಗೆ ಸಲೀಂ ಜಾಫರ್, ಮುಖ್ಯ ಕೋಚ್ ಮಾರ್ಕ್ ಕೂಲ್ಸ್ ಹಾಗೂ ನಾಯಕಿ ನಿದಾ ದರ್ ನೇತೃತ್ವದ ಆಯ್ಕೆ ಸಮಿತಿ ಆಯ್ಕೆ ಮಾಡಿರುವ 15 ಸದಸ್ಯರ ತಂಡವನ್ನು ಪ್ರಕಟ ಮಾಡುವ ವೇಳೆ ಮಾಹಿತಿ ನೀಡಿತು. 'ಈ ಗೇಮ್ಸ್‌ಗಾಗಿ ನಾವು ಬಿಸ್ಮಾ ಮಾರೂಫ್ ಅವರ ಸೇವೆಯನ್ನು ತಂಡ ಕಳೆದುಕೊಳ್ಳುತ್ತಿರುವುದು ದುರಾದೃಷ್ಟಕರ ಸಂಗತಿ. ಏಷ್ಯನ್ ಗೇಮ್ಸ್ ನಿಯಮದ ಕಾರಣದಿಂದಾಗಿ ತಮ್ಮ ಚಿಕ್ಕ ಹೆಣ್ಣು ಮಗುವನ್ನು ಏಷ್ಯಾಡ್‌ನ ಕ್ರೀಡಾಗ್ರಾಮಕ್ಕೆ ಕರೆದುಕೊಂಡು ಹೋಗಲು ಸಾಧ್ಯವಾಗುತ್ತಿರಲಿಲ್ಲ' ಎಂದು ಪಾಕ್ ಮಹಿಳಾ ಕ್ರಿಕೆಟ್ ಮುಖ್ಯಸ್ಥೆ ತಾನಿಯಾ ಮಲ್ಲಿಕ್ ಹೇಳಿದ್ದಾರೆ.
ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡ ಹಿಂದಿನ ಎರಡೂ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಸಾಧನೆ ಮಾಡಿದೆ. 2010ರಲ್ಲಿ ಚೀನಾದಲ್ಲಿ ನಡೆದ ಗುವಾಂಗ್‌ಝೌ ಏಷ್ಯಾಡ್ ಹಾಗೂ 2014ರಲ್ಲಿ ದಕ್ಷಿಣ ಕೊರಿಯಾದ ಇಂಚೋನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಪಾಕ್ ತಂಡ ಚಿನ್ನದ ಪದಕ ಗೆದ್ದಿದ್ದು ಈ ಬಾರಿ ಹ್ಯಾಟ್ರಿಕ್ ಸ್ವರ್ಣ ಸಾಧಿಸುವ ಗುರಿಯಲ್ಲಿದೆ. ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಸೆಪ್ಟೆಂಬರ್ 19 ರಿಂದ 26ರವರೆಗೆ ಮಹಿಳೆಯರ ಕ್ರಿಕೆಟ್ ಟೂರ್ನಿ ನಡೆಯಲಿದೆ.
ಏಷ್ಯನ್ ಗೇಮ್ಸ್‌ಗೆ ಭಜರಂಗ್, ವಿನೇಶ್ ಫೊಗಟ್ ನೇರ ಆಯ್ಕೆ! ಇನ್ನುಳಿದ ಕುಸ್ತಿಪಟುಗಳಿಂದ ಆಸಮಾಧಾನ
ಐಸಿಸಿ ಟಿ20 ಶ್ರೇಯಾಂಕಗಳು ಮತ್ತು ಟೂರ್ನಮೆಂಟ್ ನಿಯಮದ ಪ್ರಕಾರ ತಂಡವು ಸೆಪ್ಟೆಂಬರ್ 22 ರಿಂದ 24 ರವರೆಗೆ ನಡೆಯಲಿರುವ ಕ್ವಾರ್ಟರ್-ಫೈನಲ್‌ನಿಂದ ಭಾಗವಹಿಸಲಿದೆ. ಸೆಮಿಫೈನಲ್ ಸೆಪ್ಟೆಂಬರ್ 25 ರಂದು ನಡೆಯಲಿದೆ, ಫೈನಲ್ ಸೆಪ್ಟೆಂಬರ್ 26 ರಂದು ನಡೆಯಲಿದೆ. ಕಂಚಿನ ಪದಕದ ಪಂದ್ಯವು 26 ರಂದು ನಡೆಯಲಿದೆ.
ಕ್ರಿಕೆಟ್ ಫ್ಯಾನ್ಸ್‌ಗೆ ಗುಡ್ ನ್ಯೂಸ್: ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಕ್ರಿಕೆಟ್ ತಂಡಗಳ ಸ್ಪರ್ಧೆ!
ಇದಕ್ಕೂ ಮೊದಲು, 18 ವರ್ಷದ ಪಾಕಿಸ್ತಾನದ ಮಹಿಳಾ ತಾರೆ ಆಯೆಶಾ ನಸೀಮ್ ವೈಯಕ್ತಿಕ ಕಾರಣಗಳಿಂದಾಗಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಆಯೇಶಾ ಇದುವರೆಗೆ ನಾಲ್ಕು ಏಕದಿನ ಮತ್ತು 30 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅಗ್ರಕ್ರಮಾಂಕದ ಬ್ಯಾಟರ್ ಆಗಿದ್ದ ಈಕೆ, ತಾವಾಡಿದ 30 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಂದ 18.45 ರ ಸರಾಸರಿಯಲ್ಲಿ 369 ರನ್ ಗಳಿಸಿದ್ದಾರೆ. ಏಕದಿನದಲ್ಲಿ ಅವರು 33 ರನ್ ಗಳಿಸಿದ್ದಾರೆ.