ಏಕದಿನ ವಿಶ್ವಕಪ್‌ಗೆ ಭಾರತ ಸಂಭಾವ್ಯ ತಂಡವನ್ನು ಹೆಸರಿಸಿದ ವಾಸೀಂ ಜಾಫರ್..! ಯಾರಿಗೆಲ್ಲಾ ಸಿಕ್ಕಿದೆ ಸ್ಥಾನ?

By Naveen Kodase  |  First Published Jul 25, 2023, 6:07 PM IST

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭ
ಏಕದಿನ ವಿಶ್ವಕಪ್‌ ಟೂರ್ನಿಗೆ ಭಾರತ ಸಂಭಾವ್ಯ ತಂಡ ಹೆಸರಿಸಿದ ಜಾಫರ್
ಜಾಫರ್ ಸಂಭಾವ್ಯ ತಂಡದಲ್ಲಿ ಚಹಲ್‌, ಅಶ್ವಿನ್‌ಗಿಲ್ಲ ಸ್ಥಾನ


ನವದೆಹಲಿ(ಜು.25): ಮುಂಬರುವ ಅಕ್ಟೋಬರ್ 05ರಿಂದ ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಚಾಲನೆ ಸಿಗಲಿದೆ. ಆತಿಥೇಯ ಭಾರತ ಸೇರಿದಂತೆ 10 ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಎಲ್ಲಾ ತಂಡಗಳು ಪ್ರಶಸ್ತಿ ಮೇಲೆ ಕಣ್ಣಿಟ್ಟಿವೆ. ಹೀಗಿರುವಾಗಲೇ ಟೀಂ ಇಂಡಿಯಾ ಮಾಜಿ ಆರಂಭಿಕ ಬ್ಯಾಟರ್ ವಾಸೀಂ ಜಾಫರ್, ವಿಶ್ವಕಪ್ ಟೂರ್ನಿಗೆ ಭಾರತದ ಸಂಭಾವ್ಯ ತಂಡವನ್ನು ಹೆಸರಿಸಿದ್ದಾರೆ. ವಾಸೀಂ ಜಾಫರ್ ಆಯ್ಕೆ ಮಾಡಿದ ಸಂಭಾವ್ಯ ತಂಡದಲ್ಲಿ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್‌ಗೆ ಸ್ಥಾನ ನೀಡಲಾಗಿದ್ದು, ಇನ್ನು ಅನುಭವಿ ಲೆಗ್‌ಸ್ಪಿನ್ನರ್ ಯುಜುವೇಂದ್ರ ಚಹಲ್ ಅವರನ್ನು ಕೈಬಿಟ್ಟಿದ್ದಾರೆ.

ವಿಕೆಟ್ ಕೀಪರ್ ರೂಪದಲ್ಲಿ ಕೆ ಎಲ್ ರಾಹುಲ್ ಹಾಗೂ ಸಂಜು ಸ್ಯಾಮ್ಸನ್‌ ಅವರಿಗೆ ಅವಕಾಶ ನೀಡಿದ್ದು, ಇಶಾನ್ ಕಿಶನ್ ಅವರನ್ನು ಕೈಬಿಟ್ಟಿದ್ದಾರೆ. ಇನ್ನು ಬೌಲಿಂಗ್‌ ವಿಭಾಗದಲ್ಲಿ ಮೂವರು ಸ್ಪಿನ್ನರ್‌ಗಳಿಗೆ ಮಣೆಹಾಕಲಾಗಿದ್ದು, ಅಚ್ಚರಿಯೆಂದರೆ, ಮೂವರು ಸ್ಪಿನ್ನರ್‌ಗಳು ಎಡಗೈ ಬೌಲರ್‌ಗಳಾಗಿದ್ದಾರೆ. ವಾಸೀಂ ಜಾಫರ್ ಹೆಸರಿಸಿದ ಸ್ಪಿನ್ನರ್‌ಗಳ ಪೈಕಿ ಅಶ್ವಿನ್ ಹಾಗೂ ಚಹಲ್ ಕೈಬಿಟ್ಟು, ಕುಲ್ದೀಪ್ ಯಾದವ್‌ಗೆ ಮಣೆಹಾಕಿದ್ದು, ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಆತಿಥೇಯ ಟೀಂ ಇಂಡಿಯಾ, ಅಕ್ಟೋಬರ್ 08ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.

Latest Videos

undefined

ನನ್ನ ತಂಡದಲ್ಲಿ ಆರಂಭಿಕರಾಗಿ ರೋಹಿತ್ ಶರ್ಮಾ, ಶುಭ್‌ಮನ್ ಗಿಲ್ ಹಾಗೂ ಶಿಖರ್ ಧವನ್ ಇರಲಿದ್ದಾರೆ. ಶಿಖರ್ ಧವನ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯದಿದ್ದರೂ ಬ್ಯಾಕ್‌ಅಪ್ ಆರಂಭಿಕನಾಗಿರಲಿದ್ದಾರೆ. ಆತ ಒಂದುವೇಳೆ ಆಡದಿದ್ದರೂ ತೊಂದರೆಯಿಲ್ಲ ಎಂದು ಜಾಫರ್‌, ಜಿಯೋ ಸಿನಿಮಾ ಜತೆಗಿನ ಮಾತುಕತೆ ವೇಳೆ ತಿಳಿಸಿದ್ದಾರೆ.

ಬ್ಯಾಟ್‌ನಿಂದ ವಿಕೆಟ್‌ ಚೆಲ್ಲಾಪಿಲ್ಲಿ ಮಾಡಿದ ಹರ್ಮನ್‌ಪ್ರೀತ್ ಕೌರ್‌ಗೆ ಐಸಿಸಿಯಿಂದ ಬ್ಯಾನ್ ಶಿಕ್ಷೆ..!

"ಇದಾದ ಬಳಿಕ ಮೂರನೇ ಕ್ರಮಾಂಕದಲ್ಲಿ ಸಹಜವಾಗಿಯೇ ವಿರಾಟ್ ಕೊಹ್ಲಿ ಕಣಕ್ಕಿಳಿದರೆ, ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಹಾಗೂ 5ನೇ ಕ್ರಮಾಂಕದಲ್ಲಿ ಕೆ ಎಲ್ ರಾಹುಲ್ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿಯಲಿದ್ದಾರೆ. ಇನ್ನು ಆರನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ, 7ನೇ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ, ಇದಾದ ಬಳಿಕ ಅಕ್ಷರ್ ಪಟೇಲ್ ಹಾಗೂ ಕುಲ್ದೀಪ್ ಯಾದವ್‌, ಆಡುವ  ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲಿರುವ ಸ್ಪಿನ್ನರ್‌ಗಳಾಗಿದ್ದಾರೆ" ಎಂದು ವಾಸೀಂ ಜಾಫರ್ ಹೇಳಿದ್ದಾರೆ.

"ಇನ್ನು ನನ್ನ ಆಡುವ ಹನ್ನೊಂದರ ಬಳಗದಲ್ಲಿ ವೇಗಿಗಳ ರೂಪದಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್/ಮೊಹಮ್ಮದ್ ಶಮಿ ಸ್ಥಾನ ಪಡೆಯಲಿದ್ದಾರೆ. ನಾನು ಇಬ್ಬರು ವೇಗಿಗಳ ರೂಪದಲ್ಲಿ ಬುಮ್ರಾ ಹಾಗೂ ಸಿರಾಜ್‌ ಅವರನ್ನು ನೋಡಲು ಬಯಸುತ್ತೇನೆ. ಭಾರತದಲ್ಲೇ ವಿಶ್ವಕಪ್ ನಡೆಯುತ್ತಿರುವುದರಿಂದ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುವುದು ತಂಡದ ಪಾಲಿಗೆ ಸಾಕಷ್ಟು ಮುಖ್ಯವಾಗುತ್ತದೆ. ಪಾಂಡ್ಯ 10 ಓವರ್‌ ಮಾಡಲಾಗದಿದ್ದರೂ 7-8 ಓವರ್ ಮಾಡಿದರೂ ಸಾಕಾಗುತ್ತದೆ ಎಂದು ಜಾಫರ್ ಹೇಳಿದ್ದಾರೆ.

ಪಾಕ್‌ ಅಂಡರ್ 23 ಏಷ್ಯಾಕಪ್ ಗೆದ್ದ ಬೆನ್ನಲ್ಲೇ ಪಠಾಣ್ ಟ್ರೋಲ್‌; ಇರ್ಫಾನ್ ಒಂದೇ ಟ್ವೀಟ್‌ಗೆ ಟ್ರೋಲರ್ಸ್‌ ಸೈಲೆಂಟ್..!

ಒಂದು ವೇಳೆ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಿದರೆ, ನಾನು ಭಾರತ ತಂಡವು ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವುದನ್ನು ನೋಡಲು ಬಯಸುತ್ತೇನೆ. ಈ ಪೈಕಿ ಸ್ಪಿನ್ ಆಲ್ರೌಂಡರ್‌ಗಳಾಗಿ ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ಅವರ ಜತೆಗೆ ತಜ್ಞ ಸ್ಪಿನ್ನರ್ ರೂಪದಲ್ಲಿ ಕುಲ್ದೀಪ್‌ ಯಾದವ್ ಸಹಜವಾಗಿ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ನಾಲ್ಕನೇ ವೇಗಿ ರೂಪದಲ್ಲಿ ಶಾರ್ದೂಲ್ ಠಾಕೂರ್ ಸ್ಥಾನ ಪಡೆಯಲಿದ್ದಾರೆ. ಇನ್ನು ಶಿಖರ್ ಧವನ್ ಮೂರನೇ ಬ್ಯಾಕ್‌ಅಪ್‌ ಓಪನ್ನರ್ ರೀತಿಯಲ್ಲಿ ಕೆ ಎಲ್ ರಾಹುಲ್‌ಗೆ ಸಂಜು ಸ್ಯಾಮ್ಸನ್‌ ಬ್ಯಾಕ್‌ಅಪ್‌ ವಿಕೆಟ್ ಕೀಪರ್ ಆಗಿ ಸ್ಥಾನ ಪಡೆಯಲಿದ್ದಾರೆ ಎಂದು ವಾಸೀಂ ಜಾಫರ್‌ ಹೇಳಿದ್ದಾರೆ.

ವಾಸೀಂ ಜಾಫರ್‌ ಆಯ್ಕೆ ಮಾಡಿದ ಭಾರತ ಸಂಭಾವ್ಯ ತಂಡ ಹೀಗಿದೆ ನೋಡಿ:

ರೋಹಿತ್ ಶರ್ಮಾ(ನಾಯಕ), ಶುಭ್‌ಮನ್‌ ಗಿಲ್‌, ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್‌/ಸಂಜು ಸ್ಯಾಮ್ಸನ್‌, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್‌, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್. 

ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವೇಳಾಪಟ್ಟಿ ಹೀಗಿದೆ ನೋಡಿ:

click me!