ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೋಲಿನ ಬಳಿಕ, ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲೂ ಪಾಕಿಸ್ತಾನ ಹೀನಾಯವಾಗಿ ಸೋತಿದೆ. ಕೊನೆಯ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಸೋತು 1-4 ಅಂತರದಿಂದ ಸರಣಿ ಕಳೆದುಕೊಂಡಿದೆ.
ಬೆಂಗಳೂರು: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಹೀನಾಯ ಸೋಲು ಅನುಭವಿಸಿದ್ದ ಪಾಕಿಸ್ತಾನ ತಂಡವು ತಂಡವು ಸೀಮಿತ ಓವರ್‌ಗಳ ಸರಣಿಯನ್ನಾಡಲು ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿತ್ತು. ಕಿವೀಸ್ ಎದುರು 5 ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನ ತಂಡವು ಹೀನಾಯ ಸೋಲು ಅನುಭವಿ ಸರಣಿಯನ್ನು ಕೈಚೆಲ್ಲಿದೆ.
ಮಾರ್ಚ್ 26(ಇಂದು)ರಂದು ನಡೆದ 5ನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಪಾಕಿಸ್ತಾನ ತಂಡವು 8 ವಿಕೆಟ್ ಅಂತರದ ಹೀನಾಯ ಸೋಲು ಅನುಭವಿಸಿದೆ. ಈ ಮೂಲಕ 5 ಪಂದ್ಯಗಳ ಟ20 ಸರಣಿಯಲ್ಲಿ ಪಾಕಿಸ್ತಾನ ತಂಡವು 1-4 ಅಂತರದ ದಯನೀಯ ಸೋಲು ಅನುಭವಿಸಿದೆ. ಕೊನೆಯ ಪಂದ್ಯಕ್ಕಾಗಿ ಪಾಕಿಸ್ತಾನ ತಂಡವು ತಂಡದಲ್ಲಿ 5 ಮಹತ್ವದ ಬದಲಾವಣೆ ಮಾಡಿತ್ತು. ಇದರ ಹೊರತಾಗಿಯೂ ಪಾಕಿಸ್ತಾನ ತಂಡದ ಹೀನಾಯ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: ಖಿನ್ನತೆಯಿಂದ ಹೊರಬಂದ ಅಶುತೋಷ್ ಶರ್ಮಾ ಈಗ ಐಪಿಎಲ್ ಹೀರೋ!
ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 128 ರನ್ ಗಳಿಸಲಷ್ಟೇ ಶಕ್ತವಾಯಿತು. ಕಿವೀಸ್ ಮಾರಕ ದಾಳಿಗೆ ತತ್ತರಿಸಿದ ಪಾಕಿಸ್ತಾನ 25 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂರು ವಿಕೆಟ್ ಕಳೆದುಕೊಂಡಿತು. ಮಧ್ಯಮ ಕ್ರಮಾಂಕದಲ್ಲಿ ನಾಯಕ ಸಲ್ಮಾನ್ ಅಘಾ 39 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 51 ರನ್ ಸಿಡಿಸಿ ಆಸರೆಯಾದರು. ಇನ್ನು ಆಲ್ರೌಂಡರ್ ಶದಾಬ್ ಖಾನ್ 28 ರನ್ ಸಿಡಿಸುವ ಮೂಲಕ ಆಸರೆಯಾದರು. ಇವರನ್ನು ಹೊರತುಪಡಿಸಿ ಪಾಕಿಸ್ತಾನದ ಯಾವೊಬ್ಬ ಬ್ಯಾಟರ್ ಕೂಡಾ ದಿಟ್ಟ ಹೋರಾಟ ತೋರಲು ವಿಫಲವಾದರು.
ನ್ಯೂಜಿಲೆಂಡ್ ತಂಡದ ಪರ ಮಾರಕ ದಾಳಿ ನಡೆಸಿದ ಜೇಮ್ಸ್ ನೀಶಮ್ ಕೇವಲ 22 ರನ್ ನೀಡಿ 5 ವಿಕೆಟ್ ಪಡೆದರು. ಇನ್ನು ಜೇಕೊಬ್ ಡಪ್ಪಿ 2 ಹಾಗೂ ಬೆನ್ ಸೀರ್ಸ್ ಹಾಗೂ ಇಶ್ ಸೋಧಿ ತಲಾ ಒಂದೊಂದು ವಿಕೆಟ್ ತನ್ನ ಬುಟ್ಟಿಗೆ ಹಾಕಿಕೊಂಡರು.
ಇದನ್ನೂ ಓದಿ: ಸಿಟ್ಟಿನಲ್ಲಿ ಮಲಗುವ ಮಂಚಕ್ಕೆ ಒದ್ದ ಮಯಾಂಕ್; ಐಪಿಎಲ್ ಆಡೋದು ಮತ್ತಷ್ಟು ತಡ!
ಇನ್ನು ಸಾಧಾರಣ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡವು ಸ್ಪೋಟಕ ಆರಂಭ ಪಡೆಯಿತು. ಟಿಮ್ ಸೈಫರ್ಟ್ ಕೇವಲ 38 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 10 ಸಿಕ್ಸರ್ ಸಹಿತ ಅಜೇಯ 97 ರನ್ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾದರು. ಇನ್ನು ಮತ್ತೊಂದು ತುದಿಯಲ್ಲಿ ಫಿನ್ ಅಲೆನ್ 27 ರನ್ ಸಿಡಿಸಿದರು.