ಚೆನ್ನೈನಲ್ಲಿ ನಡೆಯಲಿರುವ ಆರ್‌ಸಿಬಿ ಮತ್ತು ಸಿಎಸ್‌ಕೆ ಪಂದ್ಯಕ್ಕೆ ಅಭಿಮಾನಿಗಳಿಗೆ ಸಿಎಮ್‌ಆರ್‌ಎಲ್ ಉಚಿತ ಮೆಟ್ರೋ ಪ್ರಯಾಣದ ವ್ಯವಸ್ಥೆ ಮಾಡಿದೆ. ಪಂದ್ಯದ ಟಿಕೆಟ್ ಹೊಂದಿರುವವರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.
ಚೆನ್ನೈ: ಬಹುನಿರೀಕ್ಷಿತ 2025ನೇ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಹೈವೋಲ್ಟೇಜ್ ಪಂದ್ಯ ಎನಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಮುಖಾಮುಖಿಗೆ ಕ್ಷಣಗಣನೆ ಆರಂಭವಾಗಿದೆ. ಇದೇ ಮಾರ್ಚ್ 28ರಂದು ಚೆನ್ನೈನ ಚೆಪಾಕ್ ಮೈದಾನದಲ್ಲಿ ಐಪಿಎಲ್‌ನ ಬದ್ದ ಎದುರಾಳಿಗಳಾದ ಆರ್‌ಸಿಬಿ ಹಾಗೂ ಸಿಎಸ್‌ಕೆ ತಂಡಗಳು ಕಾದಾಡಲಿವೆ.
ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಹೀಗಿರುವಾಗಲೇ ಚೆನ್ನೈ ಮೆಟ್ರೋ ರೈಲ್ ಲಿಮಿಟೆಡ್ ಸಂಸ್ಥೆಯು ಚನ್ನೈ ಸೂಪರ್ ಕಿಂಗ್ಸ್ ಕ್ರಿಕೆಟ್ ಲಿಮಿಟೆಡ್ ಜತೆ ಒಪ್ಪಂದ ಮಾಡಿಕೊಂಡಿದ್ದು, ಆರ್‌ಸಿಬಿ-ಸಿಎಸ್‌ಕೆ ಪಂದ್ಯ ವೀಕ್ಷಿಸಲು ಚೆಪಾಕ್ ಮೈದಾನಕ್ಕೆ ಬರುವ ಫ್ಯಾನ್ಸ್‌ಗೆ ಉಚಿತ ಮೆಟ್ರೋ ಟಿಕೆಟ್ ವ್ಯವಸ್ಥೆ ಮಾಡಿದೆ. ಈ ಉಚಿತ ಮೆಟ್ರೋ ರೈಡ್ ಅವಕಾಶ ಪಡೆಯಲು ನಿಮ್ಮ ಬಳಿ ಆ ಪಂದ್ಯದ ಸೂಕ್ತ ಟಿಕೆಟ್ ಇರಬೇಕಾಗುತ್ತದೆ. ಚೆಪಾಕ್ ಮೈದಾನದ ಸಮೀಪ ಇರುವ ಗೌರ್ನಮೆಂಟ್ ಎಸ್ಟೇಟ್ ಮೆಟ್ರೋ ಸ್ಟೇಷನ್‌ನಿಗೆ ಬರುವವರಿಗೆ ಈ ಫ್ರೀ ಟಿಕೆಟ್ ಸೌಲಭ್ಯ ಕಲ್ಫಿಸಿದೆ.
ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಪಂದ್ಯದ ಟಿಕೆಟ್ ಹೊಂದಿರುವವರು QR ಕೋಡ್ ಸ್ಕ್ಯಾನ್ ಮಾಡುವ ಆಟೋಮ್ಯಾಟಿಕ್ ಪ್ರವೇಶವನ್ನು ಪಡೆಯಬಹುದಾಗಿದೆ. ಈ ವ್ಯಾಲಿಡ್ ಟಿಕೆಟ್ ಎರಡು ಹಾಗೂ ಎರಡು ಎಕ್ಸಿಟ್ ಆಗಲು ಅವಕಾಶ ಕಲ್ಪಿಸಲಾಗಿದೆ. ಈ ಆಫರ್ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ಉಭಯ ತಂಡಗಳು: 18ನೇ ಆವೃತ್ತಿ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಎದುರು ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 7 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದೆ. ಇನ್ನೊಂದೆಡೆ ಋತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ತನ್ನ ಬದ್ದ ಎದುರಾಳಿ ಮುಂಬೈ ಇಂಡಿಯನ್ಸ್ ಎದುರು 4 ವಿಕೆಟ್ ಅಂತರದ ರೋಚಕ ಜಯ ಸಾಧಿಸಿದೆ. ಇದೀಗ ಚೆನ್ನೈ ತವರಿನಲ್ಲಿ ಎರಡನೇ ಗೆಲುವು ಸಾಧಿಸಲು ಎದುರು ನೋಡುತ್ತಿದೆ. ಹೀಗಾಗಿ ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯುವ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಪಂದ್ಯವು ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುವ ಸಾಧ್ಯತೆಯಿದೆ.
IPL 2025: ಪಂಜಾಬ್ ಎದುರು ರನ್ ಮಳೆಗೆ ಮುಳುಗಿದ ಗುಜರಾತ್ ಟೈಟಾನ್ಸ್!
ನಮ್ಮ ಮೆಟ್ರೋ ನಡೆ ಏನಾಗುತ್ತೆ?:
ಇನ್ನು 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಎರಡು ಬಾರಿ ಮುಖಾಮುಖಿಯಾಗಲಿವೆ. ಮಾರ್ಚ್ 28ರಂದು ಚೆನ್ನೈನಲ್ಲಿ ಮುಖಾಮುಖಿಯಾದರೆ, ಮೇ 03ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಎರಡನೇ ಬಾರಿಗೆ ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಸಾಗರೋಪಾದಿಯಲ್ಲಿ ಫ್ಯಾನ್ಸ್ ಚಿನ್ನಸ್ವಾಮಿ ಸ್ಟೇಡಿಯಂಗೆ ಬರುತ್ತಾರೆ. ಆಗ ನಮ್ಮ ಮೆಟ್ರೋ ಈ ಫ್ಯಾನ್ಸ್‌ಗೆ ಸ್ಪೆಷಲ್ ಆಫರ್ ನೀಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.