
ಮುಂಬೈ (ಜು.22) ಟೀಂ ಇಂಡಿಯಾದ ಸತತ ಸೋಲಿನ ಬಳಿಕ ಮ್ಯಾನೇಜ್ಮೆಂಟ್ ಹಾಗೂ ಟೀಂ ಸದಸ್ಯರ ನಡುವಿನ ಮನಸ್ತಾಪಗಳು, ಜಟಾಪಟಿಗಳು ಒಂದೊಂದಾಗಿ ಹೊರಬೀಳುತ್ತಿದೆ.ಈ ಪೈಕಿ ಸ್ಪಿನ್ನರ್ ಕುಲ್ದೀಪ್ ಯಾದವ್ ಕುರಿತು ಸಾಕಷ್ಟು ಚರ್ಚೆಯಾಗಿದ್ದು ಮಾತ್ರವಲ್ಲ, ಕುಲ್ದೀಪ್ ಯಾದವ್‌ಗೆ ಬ್ಯಾಗ್ ಪ್ಯಾಕ್ ಮಾಡಿ ತವರಿಗೆ ಮರಳಲು ಮಾಜಿ ಕ್ರಿಕೆಟಿಗರು ಸಲಹೆ ನೀಡಿದ್ದರು. ತಂಡಕ್ಕೆ ಆಯ್ಕೆಯಾದರೂ ಕುಲ್ದೀಪ್‌ಗೆ ಪ್ಲೇಯಿಂಗ್ 11ನಲ್ಲಿ ಸ್ಥಾನ ಸಿಗುತ್ತಿಲ್ಲ. ಪ್ರತಿ ಪಂದ್ಯದಲ್ಲೂ ಬೆಂಚ್ ಕಾಯುತ್ತಿರುವ ಕುಲ್ದೀಪ್ ಯಾದವ್ ಟೀಂ ಇಂಡಿಯಾ ನಿರ್ಲಕ್ಷ್ಯದಿಂದ ಬೇಸತ್ತಿದ್ದಾರೆ. ಇದೀಗ ಇಂಗ್ಲೆಂಡ್ ಕೌಂಟಿ ಕ್ರಿಕೆಟ್‌ನತ್ತ ಮುಖ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್ ಆಡಿದ್ದ ಇಂಗ್ಲೆಂಡ್‌ನ ಯಾರ್ಕ್‌ಶೈರ್ ತಂಡದ ಜೊತೆ ಕುಲ್ದೀಪ್ ಯಾದವ್ ಒಪ್ಪಂದ ಮಾಡಿಕೊಂಡಿದ್ದಾರೆ.
2025-26ರ ಸಾಲಿನ ಯಾರ್ಕ್‌ಶೈರ್ ಕ್ರಿಕೆಟ್‌ಗೆ ಕುಲ್ದೀಪ್ ಯಾದವ್ ಸಹಿ ಹಾಕಿದ್ದಾರೆ. ಈ ಮೂಲಕ ಈ ವರ್ಷ ಕುಲ್ದೀಪ್ ಯಾದವ್ ಯಾರ್ಕ್‌ಶೈರ್ ತಂಡದ ಲಿಸ್ಟ್ ಎ ಹಾಗೂ ಫಸ್ಟ್ ಕ್ಲಾಸ್ ಕ್ರಿಕೆಟ್ ಆಡಲಿದ್ದಾರೆ. ಸದ್ಯ ನಡೆಯುತ್ತಿರುವ ಮೆಟ್ರೋ ಬ್ಯಾಂಕ್ ಒನ್ ಡೇ ಕಪ್ ಟೂರ್ನಿಯಲ್ಲಿ ಕುಲ್ದೀಪ್ ಯಾದವ್ ಯಾರ್ಕ್‌ಶೈರ್ ತಂಡದ ಪರ ಪದಾರ್ಪಣೆ ಮಾಡಲಿದ್ದಾರೆ. ಜುಲೈ 24 ರಂದು ಯಾರ್ಕ್‌ಶೈರ್ ಹಾಗೂ ಗ್ಲಾಮರ್‌ಗನ್ ನಡುವಿನ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಇಂಗ್ಲೆಂಡ್ ಕೌಂಟಿಗೆ ಡೆಬ್ಯೂ ಮಾಡಲಿದ್ದಾರೆ.
ಟೀಂ ಇಂಡಿಯಾದ ಇಂಗ್ಲೆಂಡ್ ಪ್ರವಾಸದಲ್ಲಿ ಕುಲ್ದೀಪ್ ಯಾದವ್ ಬೆಂಚ್ ಕಾದಿದ್ದೇ ಹೆಚ್ಚು. ಇದಕ್ಕೂ ಮೊದಲಿನ ಹಲವು ಟೂರ್ನಿಗಳಲ್ಲಿ ಕುಲ್ದೀಪ್ ಯಾದವ್‌ಗೆ ಅವಕಾಶ ಸಿಗದೆ ವಂಚಿತರಾಗಿದ್ದರು. ಆರ್ ಅಶ್ವಿನ್ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ಕುಲ್ದೀಪ್ ಯಾದವ್ ಪರ ಬ್ಯಾಟ್ ಬೀಸಿದ್ದರು. ಕುಲ್ದೀಪ್ ಯಾದವ್‌ಗೆ ಅವಕಾಶ ನೀಡುವಂತೆ ಸಲಹೆ ನೀಡಿದ್ದರು. ಇತ್ತ ಕುಲ್ದೀಪ್ ಯಾದವ್ ಕೂಡ ಅವಕಾಶಕ್ಕಾಗಿ ಕಾದು ಕುಳಿತಿದ್ದರು. ಆದರೆ ಸ್ಥಾನ ಸಿಗಲೇ ಇಲ್ಲ. ಇದೀಗ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಕುಲ್ದೀಪ್ ಯಾದವ್ ಇಂಗ್ಲೀಷ್ ಕೌಂಟಿ ಮೂಲಕ ಈ ವರ್ಷ ಫುಲ್ ಬ್ಯೂಸಿಯಾಗಲಿದ್ದಾರೆ.
ಇಂಗ್ಲೆಂಡ್‌ನ ಪ್ರಸಿದ್ಧ ಯಾರ್ಕ್‌ಶೈರ್ ಕೌಂಟಿ ತಂಡ ಅತ್ಯಂತ ಜನಪ್ರಿಯ ತಂಡ. ಇದೇ ತಂಡದಲ್ಲಿ ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್ ಕೂಡ ಆಡಿದ್ದರು. 1992ರಲ್ಲಿ ಸಚಿನ್ ತೆಂಡೂಲ್ಕರ್ ಯಾರ್ಕ್‌ಶೈರ್ ತಂಡದ ಜೊತೆ ಒಪ್ಪಂದ ಮಾಡಿಕೊಂಡು ಪಾದಾರ್ಪಣೆ ಮಾಡಿದ್ದರು. ಟೀಂ ಇಂಡಿಯಾದಿಂದ ಕೌಂಟಿ ಆಟಿದ ಮೊದಲ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್. ಬಳಿಕ 2003ರಲ್ಲಿ ಯುವರಾಜ್ ಸಿಂಗ್ ಯಾರ್ಕ್‌ಶೈರ್ ಪರ ಪದಾರ್ಪಣೆ ಮಾಡಿದ್ದರು. ಇನ್ನು 2015 ಹಾಗೂ 2018ರಲ್ಲಿ ಚೇತೇಶ್ವರ ಪೂಜಾರ ಯಾರ್ಕ್‌ಶೈರ್ ಪರ ಆಡಿದ್ದಾರೆ.
ಯಾರ್ಕ್‌ಶೈರ್ ತಂಡದ ಭಾಗವಾಗಲು ಸಂತೋಷವಾಗುತ್ತಿದೆ. ಇಂಗ್ಲೆಂಡ್ ಕಂಡೀಷನ್‌ನಲ್ಲಿ ಕ್ರಿಕೆಟ್ ಆಡಲು ಉತ್ಸುಕನಾಗಿದ್ದೇನೆ. ಯಾರ್ಕ್‌ಶೈರ್ ತಂಡದ ಪರ ಆಡಲು ಹೆಮ್ಮೆಯಾಗುತ್ತಿದೆ ಎಂದು ಕುಲ್ದೀಪ್ ಯಾದವ್ ಹೇಳಿದ್ದಾರೆ. ಯಾರ್ಕ್‌ಶೈರ್ ಮ್ಯಾನೇಜ್ಮೆಂಟ್ ಉತ್ತಮ ಬೆಂಬಲ ಸೂಚಿಸಿದ್ದಾರೆ. ಉತ್ತಮ ಕ್ರಿಕೆಟ್ ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.
ಇಂಗ್ಲೆಂಡ್‌ನ ಸದ್ಯದ ಡ್ರೈ ಕಂಡೀಷನ್ ಕುಲ್ದೀಪ್ ಯಾದವ್ ಸ್ಪಿನ್‌ಗೆ ತುಂಬಾ ಸಹಕಾರಿಯಾಗಿದೆ. ಹೀಗಾಗಿ ಕುಲ್ದೀಪ್ ಯಾದವ್ ಯಾರ್ಕ್‌ಶೈರ್ ಸ್ಪಿನ್ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭಿಸುವ ವಿಶ್ವಾಸವಿದೆ ಎಂದು ಯಾರ್ಕ್‌ಶೈರ್ ಮ್ಯಾನೇಜರ್ ಗ್ಯಾವಿನ್ ಹ್ಯಾಮಿಲ್ಟನ್ ಹೇಳಿದ್ದಾರೆ. ಕುಲ್ದೀಪ್ ಅಂತಾರಾಷ್ಟ್ರೀಯ ಸ್ಪಿನ್ನರ್. ಕುಲ್ದೀಪ್ ಅನುಭವ, ಸ್ಪಿನ್ ಅಸ್ತ್ರಗಳು ಇಂಗ್ಲೆಂಡ್ ಕೌಂಟಿ ತಂಡದ ರೋಚಕತೆ ಹೆಚ್ಚಿಸಲಿದೆ ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.