ಆಕ್ಲೆಂಡ್‌ನಲ್ಲಿ ಸತತ ಎರಡನೇ ಸಲ ಕಿವೀಸ್ ಕಿವಿ ಹಿಂಡುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಕನ್ನಡಿಗ ಕೆ.ಎಲ್ ರಾಹುಲ್ ಗೆಲುವಿನ ರೂವಾರಿ ಎನಿಸಿದ್ದಾರೆ. ಈ ಗೆಲುವಿನೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 2-0 ಮುನ್ನಡೆ ಸಾಧಿಸಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..
ಆಕ್ಲೆಂಡ್(ಜ.26): ದೇಶಾದ್ಯಂತ ಇಂದು ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ 71ನೇ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಈ ದಿನವೇ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ನ್ಯೂಜಿಲೆಂಡ್ ಎದುರು 7 ವಿಕೆಟ್‌ಗಳ ಭರ್ಜರಿ ಜಯದಾಖಲಿಸುವ ಮೂಲಕ ಭಾರತೀಯರ ಸಂಭ್ರಮವನ್ನು ಮತ್ತಷ್ಟು ರಂಗೇರುವಂತೆ ಮಾಡಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
Clinical performance by to take a 2-0 lead in the series 🔥🙌 pic.twitter.com/kYNGckrhjz
— BCCI (@BCCI)undefined
ಹೌದು, ಮೊದಲಿಗೆ ನ್ಯೂಜಿಲೆಂಡ್ ತಂಡವನ್ನು ಕೇವಲ 132 ರನ್‌ಗಳಿಗೆ ನಿಯಂತ್ರಿಸಿದ್ದ ಟೀಂ ಇಂಡಿಯಾ ಆ ಬಳಿಕ ಮತ್ತೊಮ್ಮೆ ಅನಾಯಾಸವಾಗಿ ಕಿವೀಸ್ ಪಡೆಯನ್ನು ಹೊಸಕಿ ಹಾಕಿದೆ. ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಕನ್ನಡಿಗ ಕೆ.ಎಲ್. ರಾಹುಲ್ ಟೀಂ ಇಂಡಿಯಾದ ಗೆಲುವಿನ ರೂವಾರಿ ಎನಿಸಿದರು. ಮತ್ತೊಂದು ತುದಿಯಲ್ಲಿ ಶ್ರೇಯಸ್ ಅಯ್ಯರ್ 44 ರನ್ ಬಾರಿಸುವ ಮೂಲಕ ರಾಹುಲ್‌ಗೆ ಉತ್ತಮ ಸಾಥ್ ನೀಡಿದರು.
ಸುಲಭ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಮತ್ತೊಮ್ಮೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ರೋಹಿತ್ ಶರ್ಮಾ 2 ಬೌಂಡರಿ ಬಾರಿಸಿ ಟಿಮ್ ಸೌಥಿಗೆ ವಿಕೆಟ್ ಒಪ್ಪಿಸಿದರು. ಇನ್ನು ನಾಯಕ ವಿರಾಟ್ ಕೊಹ್ಲಿ 11 ರನ್ ಬಾರಿಸಿ ವಿಕೆಟ್ ಒಪ್ಪಿಸಿದಾಗ, ಭಾರತೀಯ ಅಭಿಮಾನಿಗಳ ಮನದಲ್ಲಿ ಆತಂಕ ಮನೆ ಮಾಡಿತು. ಆದರೆ 3ನೇ ವಿಕೆಟ್‌ಗೆ ಕೆ.ಎಲ್ ರಾಹುಲ್-ಶ್ರೇಯಸ್ ಅಯ್ಯರ್ 86 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ಸನೀಹ ತಂದಿತ್ತರು. ರಾಹುಲ್ 44 ಎಸೆತಗಳಲ್ಲಿ ಸತತ ಎರಡನೇ ಅರ್ಧಶತಕ ಪೂರೈಸಿದರು. ಇನ್ನು ಶ್ರೇಯಸ್ ಅಯ್ಯರ್ 44 ರನ್ ಬಾರಿಸಿ ಕೇವಲ 6 ರನ್ ಅಂತರದಲ್ಲಿ ಎರಡನೇ ಅರ್ಧಶತಕ ವಂಚಿತರಾದರು. ಕೆ.ಎಲ್. ರಾಹುಲ್ 50 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 57 ರನ್‌ಗಳಿಸಿ ಅಜೇಯರಾಗುಳಿದರು. ಕೊನೆಯಲ್ಲಿ ಶಿವಂ ದುಬೆ ಸಿಕ್ಸರ್ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
2ನೇ ಟಿ20: ಟೀಂ ಇಂಡಿಯಾಗೆ ಸಾಧಾರಣ ಗುರಿ ನೀಡಿದ ಕಿವೀಸ್
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 132 ರನ್ ಬಾರಿಸಿತ್ತು. ರವೀಂದ್ರ ಜಡೇಜಾ 2 ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾ ಪರ ಯಶಸ್ವಿ ಬೌಲರ್ ಎನಿಸಿದರು. ಮೊದಲ ಪಂದ್ಯದಲ್ಲಿ ಕಿವೀಸ್ ಪರ ಮೂವರು ಬ್ಯಾಟ್ಸ್‌ಮನ್‌ಗಳು ಅರ್ಧಶತಕ ಬಾರಿಸಿದ್ದರು. ಆದರೆ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಯಾವೊಬ್ಬ ಬ್ಯಾಟ್ಸ್‌ಮನ್‌ಗೂ 35ಕ್ಕೂ ಅಧಿಕ ಬಾರಿಸಲು ಅವಕಾಶ ನೀಡಲಿಲ್ಲ. ನ್ಯೂಜಿಲೆಂಡ್ ಪರ ಮಾರ್ಟಿನ್ ಗಪ್ಟಿಲ್ ಹಾಗೂ ಟಿಮ್ ಸೈಫರ್ಟ್ 33 ರನ್ ಬಾರಿಸಿದ್ದೇ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿತು.
ಮೂರನೇ ಟಿ20 ಪಂದ್ಯವು ಜನವರಿ 29ರಂದು ಹ್ಯಾಮಿಲ್ಟನ್‌ನ ಸೆಡನ್ ಪಾರ್ಕ್‌ನಲ್ಲಿ ನಡೆಯಲಿದ್ದು, ಸರಣಿ ಜೀವಂತವಾಗಿರಿಸಿಕೊಳ್ಳಬೇಕಿದ್ದರೆ ಆತಿಥೇಯ ನ್ಯೂಜಿಲೆಂಡ್ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ಸಂಕ್ಷಿಪ್ತ ಸ್ಕೋರ್:
ನ್ಯೂಜಿಲೆಂಡ್: 132/5
ಮಾರ್ಟಿನ್ ಗಪ್ಟಿಲ್: 33
ಜಡೇಜಾ: 18/2
ಭಾರತ: 135/3
ಕೆ.ಎಲ್. ರಾಹುಲ್: 57*
ಸೌಥಿ: 20/2
ಜನವರಿ 26ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ