ಟೀಂ ಇಂಡಿಯಾ ಸಂಘಟಿತ ಬೌಲಿಂಗ್ ಪ್ರದರ್ಶನದ ನೆರವಿನಿಂದ ನ್ಯೂಜಿಲೆಂಡ್ ಕೇವಲ 132 ರನ್ ಗಳಿಸಲಷ್ಟೇ ಶಕ್ತವಾಗಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..
ಆಕ್ಲೆಂಡ್[ಜ.26]: ಟೀಂ ಇಂಡಿಯಾ ಬೌಲರ್ ಗಳ ಸಂಘಟಿತ ಪ್ರದರ್ಶನದ ಹೊರತಾಗಿಯೂ ಟಿಮ್ ಸೖಫರ್ಟ್ ಹಾಗೂ ಮಾರ್ಟಿನ್ ಗಪ್ಟಿಲ್ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 132 ರನ್’ಗಳ ಗೌರವಾನ್ವಿತ ಮೊತ್ತ ಕಲೆಹಾಕಿದೆ.
ಇಲ್ಲಿನ ಈಡನ್ ಪಾರ್ಕ್ ಮೖದಾನದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡರು. ನಾಯಕನ ನಿರ್ಧಾರ ಸಮರ್ಥಿಸುವಂತೆ ಆರಂಭಿಕರಾದ ಕಾಲಿನ್ ಮನ್ರೋ-ಮಾರ್ಟಿನ್ ಗಪ್ಟಿಲ್ ಜೋಡಿ ಬ್ಯಾಟ್ ಬೀಸಿದರು. ಮೊದಲ 5.5 ಓವರ್’ಗಳಲ್ಲಿ 48 ರನ್ ಕಲೆಹಾಕಿತು. ಗಪ್ಟಿಲ್ ಕೇವಲ 20 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 33 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಮನ್ರೋ ಸಹಾ 26 ರನ್ ಗಳಿಸಿ ಶಿವಂ ದುಬೆಗೆ ವಿಕೆಟ್ ಒಪ್ಪಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಕಾಲಿನ್ ಡಿ ಗ್ರ್ಯಾಂಡ್ ಹೋಮ್ ಮತ್ತೊಮ್ಮೆ ರವೀಂದ್ರ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಈ ವೇಳೆಗೆ ನ್ಯೂಜಿಲೆಂಡ್ 10.2 ಓವರ್’ಗಳಲ್ಲಿ 3 ವಿಕೆಟ್ ಕಳೆದುಕೊಂಡು 74 ರನ್ ಗಳಿಸಿತ್ತು. ಇನ್ನು ಕಳೆದ ಪಂದ್ಯದಲ್ಲಿ ಸ್ಫೊಟಕ ಅರ್ಧಶತಕ ಬಾರಿಸಿದ್ದ ನಾಯಕ ವಿಲಿಯಮ್ಸನ್ 20 ಎಸೆತಗಳನ್ನು ಎದುರಿಸಿ ಕೇವಲ 14 ರನ್ ಗಳಿಸಿ ಜಡೇಜಾಗೆ ಎರಡನೇ ಬಲಿಯಾದರು.
ಆಸರೆ ಆದ ಟೇಲರ್-ಸೖಫರ್ಟ್: ಒಂದು ಹಂತದಲ್ಲಿ 81 ರನ್’ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕಿವೀಸ್ ಪಡೆಗೆ 5ನೇ ವಿಕೆಟ್’ಗೆ ಆಸರೆಯಾದರು. ಈ ಜೋಡಿ 44 ರನ್ ಕಲೆಹಾಕುವ ಮೂಲಕ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು. ಟೇಲರ್ 18 ರನ್ ಬಾರಿಸಿ ಬುಮ್ರಾಗೆ ವಿಕೆಟ್ ಒಪ್ಪಿಸಿದರೆ, ಸೖಫರ್ಟ್ ಅಜೇಯ 33 ರನ್ ಬಾರಿಸಿದರು.
ಶಿಸ್ತು ಬದ್ಧ ದಾಳಿ ನಡೆದ ಬೌಲರ್ಸ್: ಮೊದಲ ಟಿ20 ಪಂದ್ಯದಲ್ಲಿ ಇದೇ ಮೖದಾನದಲ್ಲಿ 203 ರನ್ ಬಿಟ್ಟುಕೊಟ್ಟಿದ್ದ ಟೀಂ ಇಂಡಿಯಾ ಬೌಲರ್’ಗಳು ತಮ್ಮ ತಪ್ಪನ್ನು ಎರಡನೇ ಪಂದ್ಯದಲ್ಲಿ ತಿದ್ದಿಕೊಳ್ಳುವಲ್ಲಿ ಯಶಸ್ವಿಯಾದರು. ಶಾರ್ದೂಲ್ ಠಾಕೂರ್ ಹೊರತುಪಡಿಸಿ ಉಳಿದೆಲ್ಲಾ ಬೌಲರ್’ಗಳು ಶಿಸ್ತಿನ ದಾಳಿ ನಡೆಸಿದರು. ಶಮಿ 4 ಓವರ್’ಗಳಲ್ಲಿ 22 ರನ್ ನೀಡಿದರೆ, ಬುಮ್ರಾ ಕೇವಲ 21 ರನ್ ನೀಡಿ 1 ವಿಕೆಟ್ ಪಡೆದರು. ಇನ್ನು ಜಡೇಜಾ 18 ರನ್ ನೀಡಿ 2 ವಿಕೆಟ್ ಪಡೆಯುವಲ್ಲಿ ಸಫಲರಾದರು.
ಸಂಕ್ಷಿಪ್ತ ಸ್ಕೋರ್:
ನ್ಯೂಜಿಲೆಂಡ್: 132/5
ಗಪ್ಟಿಲ್: 33
ಜಡೇಜಾ: 18/2