ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಅಜೇಯ 97 ರನ್ ಸಿಡಿಸಿದ್ದ ಕೆಎಲ್ ರಾಹುಲ್, ಆ ಬಳಿಕ ಬ್ಯಾಟಿಂಗ್‌ನಲ್ಲಿ ಅಷ್ಟಾಗಿ ಮಿಂಚಿಲ್ಲ. ಇದರ ನಡುವೆ ಅವರು ತಮ್ಮ ತಾಯಿಯ ಕುರಿತಾಗಿ ಮಾತನಾಡಿರುವ ಹಳೆಯ ವಿಡಿಯೋವೊಂದು ವೈರಲ್ ಆಗಿದೆ.
ಬೆಂಗಳೂರು (ನ.7): ಹಾರ್ದಿಕ್ ಪಾಂಡ್ಯ ಏಕದಿನ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಬೆನ್ನಲ್ಲಿಯೇ ಕೆಎಲ್ ರಾಹುಲ್ ಮತ್ತೆ ಏಕದಿನ ತಂಡದ ಉಪನಾಯಕರಾಗಿ ನೇಮಕವಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ದ ಚೆನ್ನೈನಲ್ಲಿ ನಡೆದ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಅಜೇಯ 97 ರನ್ ಸಿಡಿಸಿ ಮಿಂಚಿದ್ದ ಕೆಎಲ್ ರಾಹುಲ್ ಆ ಬಳಿಕ ಬ್ಯಾಟಿಂಗ್‌ನಲ್ಲಿ ಅಷ್ಟೇನೂ ದೊಡ್ಡ ಇನ್ನಿಂಗ್ಸ್ ಆಡಿಲ್ಲ. ಆದರೆ, ಟೀಮ್ ಇಂಡಿಯಾ ಗೆಲುವಿನ ದಾರಿಯಲ್ಲಿರುವ ಕಾರಣ ಈ ಹಿನ್ನಡೆಗಳು ಸಣ್ಣದಾಗಿ ಕಾಣುತ್ತಿವೆ. ಆದರೆ, ವಿಕೆಟ್ ಕೀಪಿಂಗ್‌ನಲ್ಲಿ ರಾಹುಲ್ ನಿರ್ವಹಣೆ ಭರ್ಜರಿಯಾಗಿ ಸಾಗಿದೆ. ಇದರ ನಡುವೆ ತಂಡದ ಉಪನಾಯಕನ ಜವಾಬ್ದಾರಿ ಮರಳಿ ಸಿಕ್ಕಿರುವುದು ರಾಹುಲ್ ಸಂಭ್ರಮಕ್ಕೆ ಕಾರಣವಾಗಿದೆ. ಈ ನಡುವೆ ಕೆಎಲ್ ರಾಹುಲ್ ಅವರ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ವೈರಲ್ ಆಗೋದಕ್ಕೆ ಕಾರಣ, ಇದರಲ್ಲಿ ಕೆಎಲ್ ರಾಹುಲ್ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿರುವುದಕ್ಕೆ. ತಾನೆಷ್ಟೇ ದೊಡ್ಡ ಕ್ರಿಕೆಟರ್ ಆಗಿದ್ದರೂ, ತಾಯಿಗೆ ತನ್ನ ಮಗ ಡಿಗ್ರಿ ಪಡೆದುಕೊಂಡಿಲ್ಲ ಎನ್ನುವ ಹಿಂಜರಿಕೆ ಈಗಲೂ ಇದೆ. ಪ್ರತಿ ಬಾರಿಯೂ ಆಕೆ ಇದರ ಬಗ್ಗೆ ಹೇಳುತ್ತಲೇ ಇರುತ್ತಾರೆ ಎಂದು ಹೇಳಿದ್ದಾರೆ.
ನನ್ನ ತಾಯಿ ಈಗಲೂ ಕೂಡ ನಾನು ಡಿಗ್ರಿ ಪಡೆದುಕೊಳ್ಳದೇ ಇರೋದಕ್ಕೆ ಬೈಯುತ್ತಲೇ ಇರುತ್ತಾರೆ. ಹೌದು.. ಈಗಲೂ ಕೂಡ ಆಕೆ ಇದರ ಕುರಿತಾಗಿಯೇ ಪ್ರಶ್ನೆ ಮಾಡ್ತಾರೆ. ಲಾಕ್‌ಡೌನ್ ಟೈಮ್‌ನಲ್ಲಿ 'ನೀನ್ಯಾಕೆ ನಿನ್ನ ಬಾಕಿ ಇರುವ 30 ಪೇಪರ್‌ಗಳನ್ನು ಕಂಪ್ಲೀಟ್ ಮಾಡಬಾರದು?' ಅಂತಾ ತಾಯಿ ಹೇಳ್ತಾನೆ ಇದ್ರು. ಸ್ವಲ್ಪ ಓದಿ, ಎಕ್ಸಾಂ ಯಾಕೆ ಬರೆದು ಯಾಕೆ ಡಿಗ್ರಿ ಪಡೆಯಬಾರದು ಅಂತಾ ಕೇಳ್ತಾ ಇರ್ತಿದ್ರು. ಈ ವೇಳೆ ನಾನೇ ಅವರಿಗೆ, ಅಮ್ಮಾ ನಾನೇನು ಆಗಬೇಕು ಅಂತಾ ನೀನು ಹೇಳ್ತಾ ಇದ್ದೀಯ ಅಂತಾ ಪ್ರಶ್ನೆ ಮಾಡ್ತಿದ್ದೆ.
ನಾನು ಕ್ರಿಕೆಟ್ ಆಡ್ತಿದ್ದೇನೆ. ನನ್ನ ಜೀವನ ಸಾಗಿಸುವಷ್ಟು ಬಹಳ ಚೆನ್ನಾಗಿಯೇ ಇದ್ದೇನೆ. ಈಗ ನಾನು ಹೋಗಿ 30 ಪೇಪರ್ ಬರೆಯಬೇಕಾ ಅಂತಾ ಕೇಳುತ್ತಿದ್ದೆ. 'ಹೌದು ಪರೀಕ್ಷೆ ಬರೆದು ಡಿಗ್ರಿ ಪಡೆದ್ರೆ ಏನ್ ತಪ್ಪು' ಅಂತಾ ಕೇಳ್ತಿದ್ದರು. ಟೀಮ್ ಇಂಡಿಯಾ ಕ್ಯಾಪ್ಟನ್, ಐಪಿಎಲ್ ಟೀಮ್ ಕ್ಯಾಪ್ಟನ್ ಆಗಿದ್ದೇನೆ. ಆದರೆ, ಇದ್ಯಾವುದು ಅಮ್ಮನ ಮುಂದೆ ಲೆಕ್ಕಕ್ಕೇ ಇಲ್ಲ. ಆಕೆಗೆ ನಾನು ಡಿಗ್ರಿ ಪಡೆದುಕೊಂಡರೇ ಮಾತ್ರ ಖುಷಿ ಎಂದು ರಾಹುಲ್ ಹೇಳಿದ್ದಾರೆ.
ಬಹುಶಃ ಆಕೆಗೆ ಬಹಳ ಖುಷಿಯಾಗಿದ್ದ ಸಮಯ ಏನೆಂದರೆ, ನನಗೆ ಆರ್‌ಬಿಐನಲ್ಲಿ ಕೆಲಸ ಸಿಕ್ಕಿದ್ದು. ನನ್ನ ಮಗನಿಗೆ ಕೇಂದ್ರ ಸರ್ಕಾರ ಕೆಲಸ ಸಿಕ್ಕಿಬಿಟ್ಟಿತು ಅನ್ನೋಖುಷಿ ಅವರಲ್ಲಿತ್ತು. ಇದು ಅವರ ಈವರೆಗಿನ ಹ್ಯಾಪಿಯೆಸ್ಟ್ ಕ್ಷಣ. ಆರ್‌ಬಿಐ ಕೆಲಸ ಸಿಗುವ ಮುನ್ನ ನಾನು ನಾಲ್ಕು ವರ್ಷ ರಾಷ್ಟ್ರೀಯ ತಂಡಕ್ಕೆ ಕ್ರಿಕೆಟ್ ಆಡಿದ್ದೆ. ಆದರೆ, ಇದ್ಯಾವುದು ಅಮ್ಮನ ಖುಷಿಗೆ ಕಾರಣವಾಗಿರಲಿಲ್ಲ. ಆದರೆ, ಆರ್‌ಬಿಐನಲ್ಲಿ ಕೆಲಸ ಸಿಕ್ಕ ಬೆನ್ನಲ್ಲಿಯೇ, 'ಅಬ್ಬಾ ನನ್ನ ಮಗನ ಜೀವನ ಸೆಟಲ್ ಆಯ್ತು' ಅನ್ನೋ ಖುಷಿ ಅವರಲ್ಲಿತ್ತು ಎಂದು ರಾಹುಲ್ ಆ ವಿಡಿಯೋದಲ್ಲಿ ಹೇಳಿದ್ದಾರೆ.
ಕೆಎಲ್ ರಾಹುಲ್‌ಗೆ ಗೋಲ್ಡ್ ಮೆಡಲ್, ಭರ್ಜರಿಯಾಗಿ ಕಿಚಾಯಿಸಿದ ಟೀಮ್!
ಕೆಎಲ್ ರಾಹುಲ್ ಅವರ ತಾಯಿ ರಾಜೇಶ್ವರಿ ಲೋಕೇಶ್ ಮಂಗಳೂರು ಮೂಲದವರು. ಇತಿಹಾಸ ವಿಷಯದಲ್ಲಿ ಪದವಿ ಪಡೆದಿರುವ ಇವರು ಪ್ರೊಫೆಸರ್ ಆಗಿದ್ದಾರೆ. ಸಾರ್ವಜನಿಕವಾಗಿ ರಾಜೇಶ್ವರಿ ಲೋಕೇಶ್ ಹೆಚ್ಚಾಗಿ ಕಾಣಿಸಿಕೊಳ್ಳೋದು ಕಡಿಮೆ.
ಕತ್ತಲು ಕಳೆದ ಮೇಲೆ ಬೆಳಕು ಬರಲೇಬೇಕು, ನೀವೇ ಸರ್ವಸ್ವ: ಪತಿ ರಾಹುಲ್‌ಗೆ ಭಾವನಾತ್ಮಕ ಸಂದೇಶ ಕಳಿಸಿದ ಆಥಿಯಾ ಶೆಟ್ಟಿ