
ಲಂಡನ್: ಭಾರತ ತಂಡಕ್ಕೆ 8 ವರ್ಷಗಳ ಬಳಿಕ ಕಮ್‌ಬ್ಯಾಕ್ ಮಾಡಿರುವ ತಾರಾ ಕ್ರಿಕೆಟಿಗ ಕರುಣ್ ನಾಯರ್, ತಮಗೆ ಭಾರತದ ಖ್ಯಾತ ಕ್ರಿಕೆಟಿಗರೊಬ್ಬರು ನಿವೃತ್ತಿಯಾಗುವಂತೆ ಸೂಚಿಸುತ್ತಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ನಾಯರ್ ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
'ಭಾರತದ ಖ್ಯಾತ ಕ್ರಿಕೆಟಿರೊಬ್ಬರು ನನಗೆ ಕರೆ ಮಾಡಿ, ನಿವೃತ್ತಿಯಾಗುವಂತೆ ಹೇಳುತ್ತಿದ್ದದ್ದು ಈಗಲೂ ನೆನಪಿದೆ. ನಿವೃತ್ತಿಯಾದ ಬಳಿಕ ಟಿ20 ಲೀಗ್‌ಗಳಲ್ಲಿ ಆಡಿ ಹೆಚ್ಚಿನ ದುಡ್ಡು ಗಳಿಸಬಹುದು ಎಂದು ಅವರು ಹೇಳುತ್ತಿದ್ದರು. ನಿವೃತ್ತಿ ಘೋಷಿಸುವುದು ಸುಲಭ. ಆದರೆ ಭಾರತ ತಂಡಕ್ಕೆ ಮತ್ತೆ ಆಡಬೇಕೆಂದು ನಾನು ಮಾಡಿದ್ದ ದಿಟ್ಟ ನಿರ್ಧಾರದಿಂದ ಹಿಂದೆ ಸರಿಯಲು ಸಾಧ್ಯವಿರಲಿಲ್ಲ. ಹೀಗಾಗಿಯೇ ನಾನು ನಿವೃತ್ತಿ ಘೋಷಿಸದೆ ಸತತ ಪ್ರಯತ್ನದ ಮೂಲಕ ಮತ್ತೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದೇನೆ' ಎಂದಿದ್ದಾರೆ.
2017ರಲ್ಲಿ ಕೊನೆ ಬಾರಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಕರುಣ್ ನಾಯರ್, ಬಳಿಕ ಕರ್ನಾಟಕ ತಂಡದಿಂದಲೂ ಹೊರಬಿದ್ದಿದ್ದರು. ಕಳೆದೆರಡು ಋತುಗಳಲ್ಲಿ ವಿದರ್ಭ ಪರ ಮಿಂಚಿದ್ದ ಅವರು ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಸರಣಿಗೆ ಆಯ್ಕೆಯಾಗಿದ್ದಾರೆ.
ಸಿಕ್ಕ ಅವಕಾಶ ಎರಡೂ ಕೈನಿಂದ ಬಾಚಿಕೊಳ್ಳುವೆ: ಕರುಣ್ ನಾಯರ್ ವಿಶ್ವಾಸ
ಬೆಕೆನ್‌ಹ್ಯಾಮ್: ಬರೋಬ್ಬರಿ 8 ವರ್ಷಗಳ ಬಳಿಕ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಿರುವ ತಾರಾ ಕ್ರಿಕೆಟಿಗ ಕರುಣ್ ನಾಯರ್, ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2017ರಲ್ಲಿ ಕೊನೆ ಬಾರಿ ಭಾರತ ಪರ ಆಡಿದ್ದ ಕರುಣ್, ಈ ಸಲ ಇಂಗ್ಲೆಂಡ್ ಸರಣಿಗೆ ಆಯ್ಕೆಯಾಗಿದ್ದಾರೆ. ಇದರ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ‘ಇದು ತುಂಬಾ ವಿಶೇಷ ಕ್ಷಣ. ಮತ್ತೊಮ್ಮೆ ಭಾರತ ತಂಡಕ್ಕೆ ಆಯ್ಕೆಯಾಗುವ ಅವಕಾಶ ಸಿಕ್ಕಿದ್ದಕ್ಕೆ ಖುಷಿಯಿದೆ. ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳಲು ಎದುರು ನೋಡುತ್ತಿದ್ದೇನೆ’ ಎಂದಿದ್ದಾರೆ.
ಕರುಣ್ ಇಂಗ್ಲೆಂಡ್ ಲಯನ್ಸ್ ವಿರುದ್ಧ ಅನಧಿಕೃತ ಟೆಸ್ಟ್‌ನಲ್ಲಿ ದ್ವಿಶತಕ ಬಾರಿಸಿದ್ದರು. ಹೀಗಾಗಿ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.
ಇಂಗ್ಲೆಂಡ್ ಟೆಸ್ಟ್ ಸರಣಿ: ವೇಗಿ ಹರ್ಷಿತ್ ರಾಣಾ ಭಾರತ ತಂಡ ಸೇರ್ಪಡೆ?
ಲಂಡನ್: ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಆಡಿದ್ದ ಯುವ ವೇಗಿ ಹರ್ಷಿತ್ ರಾಣಾರನ್ನು ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಸರಣಿಗೆ ಆಯ್ಕೆ ಮಾಡುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈಗಾಗಲೇ ಪ್ರಕಟಗೊಂಡಿರುವ ತಂಡದಲ್ಲಿ ಹರ್ಷಿತ್ ಇರಲಿಲ್ಲ. ಆದರೆ ಭಾರತ ‘ಎ’ ತಂಡದಲ್ಲಿರುವ ಹರ್ಷಿತ್ ಇಂಗ್ಲೆಂಡ್‌ನಲ್ಲೇ ಇದ್ದು, ಇತ್ತೀಚೆಗೆ ಇಂಗ್ಲೆಂಡ್ ಲಯನ್ಸ್ ವಿರುದ್ಧ ಆಡಿ 1 ವಿಕೆಟ್ ಪಡೆದಿದ್ದರು.
ಇಂಗ್ಲೆಂಡ್‌ನಲ್ಲೇ ಉಳಿದುಕೊಳ್ಳುವಂತೆ ಅವರಿಗೆ ಸೂಚಿಸಲಾಗಿದ್ದು, ಮುಖ್ಯ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ತಂಡದಲ್ಲಿ ವೇಗಿಗಳಾದ ಜಸ್‌ಪ್ರೀತ್ ಬುಮ್ರಾ, ಮೊಹಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್‌ದೀಪ್, ಅರ್ಶ್‌ದೀಪ್ ಸಿಂಗ್ ಇದ್ದಾರೆ. ಸರಣಿ ಜೂ.20ಕ್ಕೆ ಆರಂಭಗೊಳ್ಳಲಿದೆ.
ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡ ಹೀಗಿದೆ:
ಶುಭ್‌ಮನ್ ಗಿಲ್(ನಾಯಕ), ರಿಷಭ್ ಪಂತ್(ಉಪನಾಯಕ& ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ಕೆ ಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೇಲ್(ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್‌ದೀಪ್ ಸಿಂಗ್, ಅರ್ಶದೀಪ್ ಸಿಂಗ್, ಕುಲ್ದೀಪ್ ಯಾದವ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.