
ದುಬೈ: 13ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದೆ. ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ವೇಜ್ ಪಂದ್ಯ ಅಕ್ಟೋಬರ್ 5ರಂದು ನಡೆಯಲಿದ್ದು, ಶ್ರೀಲಂಕಾ ರಾಜಧಾನಿ ಕೊಲಂಬೊ ಆತಿಥ್ಯ ವಹಿಸಲಿದೆ. ಟೂರ್ನಿಗೆ ಭಾರತ ಆತಿಥ್ಯ ವಹಿಸುತ್ತಿದ್ದರೂ, ಪಾಕ್ ತಂಡ ಭಾರತಕ್ಕೆ ಆಗಮಿಸಲು ಒಪ್ಪದ ಕಾರಣ ಉಭಯ ತಂಡಗಳ ನಡುವಿನ ಪಂದ್ಯವನ್ನು ಕೊಲಂಬೊದಲ್ಲಿ ನಡೆಸಲು ಐಸಿಸಿ ನಿರ್ಧರಿಸಿದೆ.
ಸೆ.30ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟೂರ್ನಿಗೆ ಚಾಲನೆ ಲಭಿಸಲಿದೆ. ಉದ್ಘಾಟನಾ ಪಂದ್ಯದಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳು ಸೆಣಸಾಡಲಿವೆ. ನ.2ರಂದು ಫೈನಲ್ಸ್ ಪಂದ್ಯ ಬೆಂಗಳೂರು ಅಥವಾ ಕೊಲಂಬೊದಲ್ಲಿ ನಡೆಯಲಿದೆ. ಒಂದು ವೇಳೆ ಪಾಕಿಸ್ತಾನ ಫೈನಲ್‌ಗೇರಿದರೆ ಪಂದ್ಯ ಕೊಲಂಬೊದಲ್ಲಿ ನಡೆಯಲಿದ್ದು, ಅಲ್ಲದಿದ್ದರೆ ಫೈನಲ್ ಪಂದ್ಯಕ್ಕೆ ಬೆಂಗಳೂರು ಆತಿಥ್ಯ ವಹಿಸಲಿದೆ. ಟೂರ್ನಿ ಭಾರತದ 4 ನಗರಗಳಾದ ಬೆಂಗಳೂರು, ಇಂದೋರ್, ವಿಶಾಖಪಟ್ಟಣ, ಗುವಾಹಟಿಯಲ್ಲಿ ಆಯೋಜನೆಗೊಳ್ಳಲಿವೆ. ಎಲ್ಲಾ ಪಂದ್ಯಗಳು ಮಧ್ಯಾಹ್ನ 3 ಗಂಟೆಗೆ ಆರಂಭಗೊಳ್ಳಲಿವೆ.
ಟೂರ್ನಿ ಮಾದರಿ ಹೇಗೆ?: ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ಶ್ರೀಲಂಕಾ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ತಂಡಗಳು ಪಾಲ್ಗೊಳ್ಳಲಿವೆ. ರೌಂಡ್ ರಾಬಿನ್ ಮಾದರಿಯಲ್ಲಿ ಪ್ರತಿ ತಂಡಗಳು ಲೀಗ್ ಹಂತದಲ್ಲಿ ಒಮ್ಮೆ ಮುಖಾಮುಖಿಯಾಗಲಿವೆ. ಅಂದರೆ ಎಲ್ಲಾ ತಂಡಕ್ಕೂ ತಲಾ 7 ಪಂದ್ಯ. ಲೀಗ್ ಹಂತದಲ್ಲಿ ಅಗ್ರ-4 ಸ್ಥಾನ ಪಡೆದ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.
ಇನ್ನೂ ಆಯೋಜನಾ ಸಮಿತಿ ರಚಿಸದ ಬಿಸಿಸಿಐ
ಮಹಿಳಾ ವಿಶ್ವಕಪ್‌ಗೆ ವೇಳಾಪಟ್ಟಿ ಪ್ರಕಟಗೊಂಡರೂ, ಟೂರ್ನಿಯನ್ನು ಸುಗಮವಾಗಿ ನಡೆಸುವ ಹೊಣೆಯನ್ನು ಹೊರುವ ಸ್ಥಳೀಯ ಸಂಘಟನಾ ಸಮಿತಿ(ಎಲ್‌ಒಸಿ)ಯನ್ನು ಬಿಸಿಸಿಐ ಇನ್ನೂ ರಚಿಸಿಲ್ಲ. ಕಳೆದ ಮಾರ್ಚ್‌ನಲ್ಲಿ ನಡೆದ ಬಿಸಿಸಿಐ ಅಪೆಕ್ಸ್ ಸಭೆಯಲ್ಲಿ ಎಲ್‌ಒಸಿ ರಚನೆ ಬಗ್ಗೆ ಚರ್ಚೆಯಾಗಿತ್ತು. ಆದರೆ ಈವರೆಗೂ ಬಿಸಿಸಿಐ ಸಮಿತಿ ರಚನೆ ಮಾಡಿಲ್ಲ. ಶೀಘ್ರದಲ್ಲೇ ಸಮಿತಿ ರಚಿಸುವ ನಿರೀಕ್ಷೆಯಿದೆ.
ಬೆಂಗಳೂರಲ್ಲಿ ಫೈನಲ್ ಸೇರಿ ಐದು ಪಂದ್ಯಗಳು
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕನಿಷ್ಠ 4, ಗರಿಷ್ಠ 5 ಪಂದ್ಯಗಳು ನಡೆಯಲಿವೆ. ಸೆ.30ರಂದು ಭಾರತ-ಶ್ರೀಲಂಕಾ, ಅ.3ರಂದು ಇಂಗ್ಲೆಂಡ್-ದಕ್ಷಿಣ ಆಫ್ರಿಕಾ, ಅ.26ರಂದು ಭಾರತ-ಬಾಂಗ್ಲಾದೇಶ, ಬಳಿಕ ಅಕ್ಟೋಬರ್ 30 ರಂದು 2ನೇ ಸೆಮಿಫೈನಲ್ ಆಯೋಜನೆಗೊಳ್ಳಲಿವೆ. ನ.2ರಂದು ಫೈನಲ್ ಪಂದ್ಯ ಬೆಂಗಳೂರು ಅಥವಾ ಕೊಲಂಬೊದಲ್ಲಿ ನಿಗದಿಯಾಗಿವೆ.
ಭಾರತಕ್ಕೆ ಚೊಚ್ಚಲ ಕಪ್ ಗೆಲ್ಲುವ ಗುರಿ
ಭಾರತ ತಂಡ ಈ ವರೆಗೂ ಚಾಂಪಿಯನ್ ಆಗಿಲ್ಲ. 1973ರಿಂದಲೂ ಟೂರ್ನಿ ನಡೆಯುತ್ತಿದ್ದು, ತಂಡಕ್ಕೆ ಈ ಬಾರಿ ಟ್ರೋಫಿ ಬರ ನೀಗಿಸಿಕೊಳ್ಳುವ ಅವಕಾಶವಿದೆ. ಈ ವರೆಗೆ ನಡೆದ 12 ಆವೃತ್ತಿಗಳಲ್ಲಿ ಆಸ್ಟ್ರೇಲಿಯಾ 7 ಬಾರಿ ಚಾಂಪಿಯನ್ ಆಗಿದ್ದರೆ, ಇಂಗ್ಲೆಂಡ್ 4 ಬಾರಿ ಟ್ರೋಫಿ ಗೆದ್ದಿದೆ. ನ್ಯೂಜಿಲೆಂಡ್ ಒಮ್ಮೆ ಟ್ರೋಫಿ ತನ್ನದಾಗಿಸಿಕೊಂಡಿದೆ. ಭಾರತ 2 ಬಾರಿ (2005, 2017) ರನ್ನರ್-ಆಪ್ ಆಗಿದೆ.
ಭಾರತ vs ಪಾಕ್ ಪಂದ್ಯ, ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ಗೊಂದಲಗಳಿಗೆ ತೆರೆ
ಇತ್ತೀಚೆಗೆ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಉಗ್ರ ದಾಳಿ ಬಳಿಕ ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಭಾರತ ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆಸಿತ್ತು. ಇದರ ಬೆನ್ನಲ್ಲೇ, ಪಾಕ್ ವಿರುದ್ಧ ಇನ್ನು ಕ್ರಿಕೆಟ್ ಆಡಬಾರದು ಎಂದು ಹಲವರು ಆಗ್ರಹಿಸಿದ್ದರು. ಸೌರವ್ ಗಂಗೂಲಿ ಸೇರಿ ಹಲವು ಕ್ರಿಕೆಟಿಗರು ಕೂಡಾ ಇದಕ್ಕೆ ಧ್ವನಿಗೂಡಿಸಿದ್ದರು. ಹೀಗಾಗಿ ಭಾರತ-ಪಾಕ್ ನಡುವೆ ಇನ್ನು ಕ್ರಿಕೆಟ್ ನಡೆಯಲಿದೆಯೇ ಎಂಬ ಪ್ರಶ್ನೆ ಎಲ್ಲರಲ್ಲಿತ್ತು. ಆ ಗೊಂದಲಕ್ಕೆ ಸದ್ಯ ತೆರೆ ಬಿದ್ದಿದೆ. ಇನ್ನು, ಆರ್‌ಸಿಬಿ ವಿಜಯೋತ್ಸವ ವೇಳೆ ನಡೆದ ಕಾಲ್ತುಳಿತದಿಂದಾಗಿ ಬೆಂಗಳೂರಿನ ಪಂದ್ಯಗಳು ಬೇರೆಡೆಗೆ ಸ್ಥಳಾಂತರಗೊಳ್ಳುವ ಬಗ್ಗೆಯೂ ಊಹಾಪೋಹಗಳು ಹರಡಿದ್ದವು. ಆದರೆ ಬೆಂಗಳೂರಿನಲ್ಲಿ ನಿಗದಿಯಂತೆ ಪಂದ್ಯಗಳು ನಡೆಯುವುದಾಗಿ ಐಸಿಸಿ, ಬಿಸಿಸಿಐ ತಿಳಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.