17 ವರ್ಷಗಳ ಬಳಿಕ ಮತ್ತೆ RCB ಮತ್ತು KKR ತಂಡಗಳು IPL ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಈ ಬಾರಿ ಯಾರಿಗೆ ಗೆಲುವು? ಉದ್ಘಾಟನಾ ಸಮಾರಂಭದ ವಿಶೇಷತೆಗಳೇನು?
ಕೋಲ್ಕತಾ: ಅದು 2008ರ ಚೊಚ್ಚಲ ಆವೃತ್ತಿ ಐಪಿಎಲ್ ಉದ್ಘಾಟನಾ ಪಂದ್ಯ, ಬ್ರೆಂಡನ್ ಮೆಕಲಮ್ ಸ್ಫೋಟಕ 158 ರನ್ ನೆರವಿನಿಂದ ಆರ್‌ಸಿಬಿ ವಿರುದ್ಧ ಕೋಲ್ಕತಾ 140 ರನ್ ಭರ್ಜರಿ ಗೆಲುವು ಸಾಧಿಸಿತ್ತು. ಅದಾಗಿ 17 ವರ್ಷ ಕಳೆದಿದೆ. ಕೆಕೆಆರ್ 3 ಬಾರಿ ಚಾಂಪಿಯನ್ ಆಗಿದ್ದರೆ, ಆರ್ ಸಿಬಿ ಇನ್ನೂ ಮೊದಲ ಕಪ್‌ಗಾಗಿ ಕನವರಿಸುತ್ತಿದೆ.
ಬರೋಬ್ಬರಿ 17 ವರ್ಷಗಳ ಬಳಿಕ ಮತ್ತೊಮ್ಮೆ ಆರ್‌ಸಿಬಿ ಹಾಗೂ ಕೆಕೆಆರ್ ತಂಡಗಳು ಐಪಿಎಲ್‌ನ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. 18ನೇ ಆವೃತ್ತಿ ಟೂರ್ನಿಯ ಮೊದಲ ಪಂದ್ಯ ಶನಿವಾರ ನಡೆಯಲಿದ್ದು, ಈಡನ್ ಗಾರ್ಡನ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ಈ ಬಾರಿ ಟೂರ್ನಿಯಲ್ಲಿ ಆರ್‌ಸಿಬಿ ಹಾಗೂ ಕೆಕೆಆರ್ ಎರಡೂ ಬಲಿಷ್ಠ ತಂಡಗಳು, ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಕಣಕ್ಕಿಳಿಯಲಿರುವ ಕೆಕೆಆರ್ ತವರಿನ ಕ್ರೀಡಾಂಗಣದ ಲಾಭವೆತ್ತುವ ಜೊತೆಗೆ ಆರ್‌ಸಿಬಿ ವಿರುದ್ಧ ಗೆಲುವಿನ ದಾಖಲೆ ಯನ್ನು ಮತ್ತಷ್ಟು ಉತ್ತಮಗೊಳಿಸುವ ನಿರೀಕ್ಷೆಯಲ್ಲಿದೆ. ಅತ್ತ ಯುವ ಬ್ಯಾಟರ್ ರಜತ್ ಪಾಟೀದಾರ್‌ಗೆ ನಾಯಕತ್ವ ವಹಿಸಿರುವ ಆರ್ ಸಿಬಿ, ಚೊಚ್ಚಲ ಕಪ್ ಗೆಲುವಿನ ವಿಶ್ವಾಸದಲ್ಲಿದೆ.
ಕೊಹ್ಲಿ ಮೇಲೆ ಕಣ್ಣು: ಆರ್‌ಸಿಬಿ ಈ ಬಾರಿಯೂ ಹೆಚ್ಚಾಗಿ ನೆಚ್ಚಿಕೊಂಡಿದ್ದು ವಿರಾಟ್ ಕೊಹ್ಲಿಯನ್ನು. ಅವರು ಎಷ್ಟು ರನ್ ಕಲೆ ಹಾಕಲಿದ್ದಾರೆ ಅಷ್ಟು ಆರ್‌ಸಿಬಿಗೆ ಪ್ಲಸ್‌ಪಾಯಿಂಟ್. ಆದರೆ ಈ ಬಾರಿಯೂ ತಂಡ ಕೊಹ್ಲಿ ಒಬ್ಬರನ್ನೇ ನಂಬಿಕೂತರೆ ಕಪ್ ಸಿಗುವುದು ಅಸಾಧ್ಯದ ಮಾತು. ಇಂಗ್ಲೆಂಡ್‌ನ ಸ್ಫೋಟಕ ಆಟಗಾರ ಫಿಲ್ ಸಾಲ್ಟ್, ನೂತನ ನಾಯಕ ರಜತ್ ಪಾಟೀದಾರ್, ಕರ್ನಾಟಕದ ದೇವದತ್ ಪಡಿಕ್ಕಲ್ ಬ್ಯಾಟಿಂಗ್ ಆಧಾರಸ್ತಂಭ, ಸಾಲ್ಟ್ ಕಳೆದ ಬಾರಿ ಕೆಕೆಆ ಪರ 185ರ ಸ್ಪೆಕ್‌ರೇಟ್‌ನಲ್ಲಿ 435 ರನ್ ಕಲೆಹಾಕಿದ್ದರು. ಈ ಬಾರಿ ಕೆಕೆಆರ್ ವಿರುದ್ಧ ಅದೇ ರೀತಿ ಆಟವಾಡುವ ಕಾತರದಲ್ಲಿದ್ದಾರೆ.
ಅಬ್ಬರದ ಬ್ಯಾಟಿಂಗ್ ಹಾಗೂ ಉತ್ತಮ ದಾಳಿ ಮಾಡಬಲ್ಲ ಆಲ್ರೌಂಡರ್‌ಗಳಾದ ಲಿಯಾಮ್ ಲಿವಿಂಗ್‌ಸ್ಟೋನ್, ಬೆತ್‌ಹೆಲ್, ಟಿಮ್ ಡೇವಿಡ್ ಯಾವ ಕ್ಷಣದಲ್ಲೂ ಪಂದ್ಯವನ್ನು ಆರ್‌ಸಿಬಿ ಪರ ವಾಲು ವಂತೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಇನ್ನು, ತಂಡದ ಬೌಲಿಂಗ್ ವಿಭಾಗ ಹಿಂದೆಂದಿಗಿಂತ ಹೆಚ್ಚು ಬಲಿಷ್ಠವಾಗಿದ್ದು, ಇದರಿಂದಲೇ ಟ್ರೋಫಿ ಗೆಲುವಿನ ಭರವಸೆ ಹೆಚ್ಚಾಗಿದೆ. ಅನುಭವಿ ವೇಗಿಗಳಾದ ಭುವನೇಶ್ವರ್ ಕುಮಾರ್, ಜೋಶ್ ಹೇಜಲ್ ವುಡ್ ಜೊತೆಗೆ ಯುವ ವೇಗದ ಬೌಲರ್‌ಗಳಾದ ಯಶ್ ದಯಾಳ್, ರಸಿಕ್ ಸಲಾಂ, ಸ್ಪಿನ್ನರ್ ಗಳಾದ ಸುಯಶ್ ಶರ್ಮಾ, ಕೃನಾಲ್ ಪಾಂಡ್ಯ ತಂಡಕ್ಕೆ ಬಲ ಒದಗಿಸಲಿದ್ದಾರೆ.
ಕೆಕೆಆರ್‌ಗೆ ತವರಿನ ಲಾಭ: ಹಾಲಿ ಚಾಂಪಿಯನ್ ಕೆಕೆಆರ್ ಹೆಚ್ಚು ಕಡಿಮೆ ಕಳೆದ ಬಾರಿ ಇದ್ದ ತಂಡವನ್ನೇ ಈ ಬಾರಿಯೂ ಉಳಿಸಿಕೊಂಡಿದೆ. ಆದರೆ ಕಪ್ ಗೆಲ್ಲಿಸಿಕೊಟ್ಟ ಶ್ರೇಯಸ್ ಅಯ್ಯರ್ ತಂಡದಲಿಲ್ಲ. ರಹಾನೆ ನಾಯಕತ್ವದಲ್ಲಿ ಕಣಕ್ಕಿಳಿ ಯಲಿರುವ ತಂಡದಲ್ಲಿ ಟಿ20 ತಜ್ಞ ಆಟಗಾರರೇ ಹೆಚ್ಚಿದ್ದಾರೆ. ಸುನಿಲ್ ನರೈನ್, ಕ್ವಿಂಟನ್ ಡಿ ಕಾಕ್ ಸ್ಫೋಟಕ ಆರಂಭ ಒದಗಿಸಬಲ್ಲರು. ಮಧ್ಯಮ ಕ್ರಮಾಂಕದಲ್ಲಿ ರಹಾನೆ, ಅಂಗ್‌ಕೃಷ್ ರಘುವಂಶಿ, ವೆಂಕಟೇಶ್ ಅಯ್ಯರ್, ರಿಂಕು ಸಿಂಗ್‌ರಂತಹ ಅಪಾಯಕಾರಿ ಬ್ಯಾಟರ್‌ಗಳಿದ್ದಾರೆ. ಯಾವ ಕ್ಷಣದಲ್ಲೂ ಪಂದ್ಯದ ಗತಿ ಬದಲಿಸಬಲ್ಲ ಆ್ಯಂಡ್ರೆ ರಸೆಲ್ ತಂಡದ ಪ್ಲಸ್ ಪಾಯಿಂಟ್. ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ವೈಭವ್ ಅರೋರಾ, ಏನ್ರಿಚ್ ನೋಕಿಯಾ, ಸ್ಪೆನ್ಸರ್ ಜಾನ್ಸನ್ ತಂಡದಲ್ಲಿದ್ದಾರೆ.
ಈಡನ್ ಗಾರ್ಡನ್‌ನಲ್ಲಿ ಕೆಕೆಆರ್‌ಗೆ 52 ಗೆಲುವು!
ಈಡನ್ ಗಾರ್ಡನ್ ಕ್ರೀಡಾಂಗಣ ಕೆಕೆಆರ್ ತವರು ಹಾಗೂ ಭದ್ರಕೋಟೆ. ಇಲ್ಲಿ ಕೆಕೆಆರ್ 88 ಪಂದ್ಯಗಳನ್ನಾಡಿದ್ದು, 52ರಲ್ಲಿ ಗೆಲುವು ಸಾಧಿಸಿದೆ. ತಂಡ 36 ಪಂದ್ಯಗಳಲ್ಲಿ ಸೋಲು ಕಂಡಿದೆ. ಇನ್ನು, ಆರ್‌ಸಿಬಿ ತಂಡ ಈಡನ್ ಗಾರ್ಡನ್‌ನಲ್ಲಿ 13 ಪಂದ್ಯ ಆಡಿದ್ದು, 5ರಲ್ಲಿ ಗೆದ್ದು, 8ರಲ್ಲಿ ಸೋಲನುಭವಿಸಿದೆ. 2019ರ ಬಳಿಕ ಆರ್‌ಸಿಬಿ ಕೋಲ್ಕತಾದಲ್ಲಿ ಕೆಕೆಆರ್ ವಿರುದ್ಧ ಗೆದ್ದಿಲ್ಲ.
ಕೆಕೆಆರ್ ಸ್ಪಿನ್ನರ್ಸ್ vs ಆರ್‌ಸಿಬಿ ಬ್ಯಾಟರ್ಸ್
ಈ ಪಂದ್ಯದಲ್ಲಿ ಕೆಕೆಆರ್ ಸ್ಪಿನ್ನರ್ಸ್ ಹಾಗೂ ಆರ್‌ಸಿಬಿ ಬ್ಯಾಟರ್ಸ್ ನಡುವಿನ ಪೈಪೋಟಿಗೆ ಸಾಕ್ಷಿಯಾಗಲಿದೆ. ಕೆಕೆಆರ್ ವರುಣ್ ಚಕ್ರವರ್ತಿ, ಸುನಿಲ್ ನರೈನ್‌ರ ಸ್ಪಿನ್ ದಾಳಿಯನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ. ಅವರ 8 ಓವರ್‌ಗಳೇ ಪಂದ್ಯವನ್ನು ನಿರ್ಧರಿಸಲಿದೆ. ಮತ್ತೊಂದೆಡೆ ಆರ್‌ಸಿಬಿಯಲ್ಲಿ ಕೊಹ್ಲಿ, ಸಾಲ್ಟ್, ರಜತ್, ಪಡಿಕ್ಕಲ್, ಲಿವಿಂಗ್‌ಸ್ಟೋನ್ ಸೇರಿದಂತೆ ಸ್ಫೋಟಕ ಬ್ಯಾಟರ್‌ಗಳಿದ್ದಾರೆ.
ಇದನ್ನೂ ಓದಿ: IPL 2025: ಈ ಬಾರಿ ಪ್ಲೇ ಆಫ್‌ಗೇರೋ 4 ತಂಡಗಳು ಯಾವುವು? ಅಚ್ಚರಿ ಭವಿಷ್ಯ ನುಡಿದ ಆರ್‌ಸಿಬಿ ಮಾಜಿ ಕೋಚ್!
ಕೊನೆ 4ಪಂದ್ಯದಲ್ಲೂ ಆರ್‌ಸಿಬಿಗೆ ಸೋಲು
ರಾಯಲ್ ಚಾಲೆಂಜರ್ ಬೆಂಗಳೂರು ತಂಡ ಕೆಕೆಆರ್‌ವಿರುದ್ದ ಕಳೆದ 4 ಪಂದ್ಯಗಳಲ್ಲೂ ಸೋಲನುಭವಿಸಿದೆ. 2022ರಲ್ಲಿ ಕೆಕೆಆರ್ ವಿರುದ್ಧ ಆರ್‌ಸಿಬಿ ಗೆದ್ದಿತ್ತು. ಆದರೆ 2023 ಹಾಗೂ 2024ರಲ್ಲಿ ನಡೆದ ಒಟ್ಟು 4 ಮುಖಾಮುಖಿಯಲ್ಲೂ ಕೆಕೆಆರ್ ಗೆದ್ದಿದೆ. ಕಳೆದ ವರ್ಷ ಕೋಲ್ಕತಾದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ 1 ರನ್ ರೋಚಕ ಜಯಗಳಿಸಿತ್ತು.
ಮೊದಲ ಪಂದ್ಯಕ್ಕೇ ಮಳೆ ಕಾಟ ಸಾಧ್ಯತೆ
ಈ ಬಾರಿ ಟೂರ್ನಿಯ ಆರಂಭಿಕ ಪಂದ್ಯಕ್ಕೇ ಮಳೆ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚಿದೆ. ಈಡನ್ ಗಾರ್ಡನ್ ಸುತ್ತಮುತ್ತ ಕೆಲ ದಿನ ಗಳಿಂದ ಮಳೆಯಾಗುತ್ತಿದೆ. ಕೆಕೆಆರ್ ಅಭ್ಯಾಸ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿತ್ತು. ಶನಿವಾರವೂ ಮಳೆ ಸುರಿಯುವ ಸಾಧ್ಯತೆಯಿದೆ. ಒಂದು ವೇಳೆ ತಲಾ 5 ಓವರ್ ಆಟವೂ ಸಾಧ್ಯವಾಗದೆ ಪಂದ್ಯ ರದ್ದುಗೊಂಡರೆ, ಇತ್ತಂಡಗಳೂ ತಲಾ 1 ಅಂಕ ಪಡೆದುಕೊಳ್ಳಲಿದೆ.
ಇಂದು ಅದ್ದೂರಿ ಉದ್ಘಾಟನಾ ಸಮಾರಂಭ
ಕೆಕೆಆರ್ ಹಾಗೂ ಆರ್‌ಸಿಬಿ ನಡುವಿನ ಪಂದ್ಯಕ್ಕೂ ಮುನ್ನ ಈಡನ್ ಗಾರ್ಡನ್‌ನಲ್ಲಿ ಅದ್ದೂರಿ ಉದ್ಘಾಟನಾ ಸಮಾರಂಭ ನೆರವೇರಲಿದೆ. ಕ್ರಿಕೆಟ್ ರಂಗದ ದಿಗ್ಗಜರಲ್ಲದೆ ಮನರಂಜನಾ ಲೋಕದ ಖ್ಯಾತನಾಮ ತಾರೆಯರು ಪ್ರೇಕ್ಷಕರನ್ನು ರಂಜಿಸಲು ಸಿದ್ಧರಾಗಿದ್ದಾರೆ. ಪ್ರಸಿದ್ಧ ಗಾಯಕಿ ಕರಣ್ ಔಜ್ಞಾ ಶ್ರೇಯಾ ಘೋಷಲ್, ಬಾಲಿವುಡ್ ನಟಿ ದಿಶಾ ಪಠಾನಿ ಅವರ ಪ್ರದರ್ಶನ ಐಪಿಎಲ್ ಉದ್ಘಾಟನೆಯ ಮೆರುಗು ಹೆಚ್ಚಿಸಲಿದೆ. ಇನ್ನೂ ಕೆಲ ಸೆಲೆಬ್ರಿಟಿಗಳು ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸಂಜೆ 6 ಗಂಟೆಗೆ ಸಮಾರಂಭ ಆರಂಭಗೊಳ್ಳಲಿದೆ.
ಇದನ್ನೂ ಓದಿ: IPL 2025 ಆರ್‌ಸಿಬಿ-ಕೆಕೆಆರ್ ನಡುವಿನ ಐಪಿಎಲ್ ಉದ್ಘಾಟನಾ ಪಂದ್ಯ ನಡೆಯೋದೇ ಡೌಟ್!
ಸಂಭವನೀಯ ಆಟಗಾರರ ಪಟ್ಟಿ
ಆರ್‌ಸಿಬಿ
ಸಾಲ್ಟ್, ಕೊಹ್ಲಿ, ಪಡಿಕ್ಕಲ್, ರಜತ್ (ನಾಯಕ), ಲಿವಿಂಗ್‌ಸ್ಟೋನ್, ಜಿತೇಶ್, ಡೇವಿಡ್, ಕೃನಾಲ್, ಭುವನೇಶ್ವರ್, ಹೇಜಲ್ ವುಡ್, ದಯಾಳ್, ಸ್ವಪ್ಟಿಲ್ /ರಸಿಕ್.
ಕೆಕೆಆರ್
ನರೈನ್, ಡಿ ಕಾಕ್, ರಹಾನೆ(ನಾಯಕ, ರಘುವಂಶಿ, ವೆಂಟಕೇಶ್, ರಿಂಕು ಸಿಂಗ್, ರಸೆಲ್, ರಮನ್‌ದೀಪ್, ಹರ್ಷಿತ್, ಚಕ್ರವರ್ತಿ, ಸೆನರ್/ ನೋಕಿಯಾ, ವೈಭವ್.
ಆರಂಭ: ರಾತ್ರಿ 7.30, ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್